ಬಾಗಲಕೋಟೆ: ಪ್ರವಾಹ, ಅತಿಯಾದ ಮಳೆಯಿಂದ ಸಂಕಷ್ಟದಲ್ಲಿರುವ ರೈತರ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಜಿಲ್ಲೆಯ ರೈತರು ಶುಕ್ರವಾರ ಜಿಲ್ಲಾಡಳಿತ ಭವನಕ್ಕೆ ಮುತ್ತಿಗೆ ಹಾಕಿ ಪ್ರತಿಭಟಿಸಲು ಯತ್ನಿಸಿದರು.
ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ನೇತೃತ್ವದಲ್ಲಿ ಜಿಲ್ಲೆಯ ನೂರಾರು ರೈತರು ಡಿಸಿ ಕಚೇರಿಗೆ ಆಗಮಿಸಿ ಮುತ್ತಿಗೆ ಹಾಕಲು ಯತ್ನಿಸಿದರು. ಜಿಲ್ಲಾಡಳಿತ ಭವನಕ್ಕೆ ಪೊಲೀಸ್ ಸರ್ಪಗಾವಲು ಏರ್ಪಡಿಸಿ, ಪ್ರತಿಭಟನೆ ನಡೆಸಿ ಮನವಿ ಕೊಡಲು ತಿಳಿಸಿದರು. ಹೀಗಾಗಿ ಸುಮಾರು ಮೂರು ಗಂಟೆಗಳ ಕಾಲ ಪ್ರತಿಭಟನೆ ನಡೆಸಿದ ರೈತರು, ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.
ಬಾದಾಮಿ ತಾಲೂಕಿನ ಕೇದಾರನಾಥ ಮತ್ತು ತೇರದಾಳದ ಸಾವರಿನ ಸಕ್ಕರೆ ಕಾರ್ಖಾನೆಯಿಂದ ಕಬ್ಬು ಬೆಳೆಗಾರರ ಬಾಕಿ ಮತ್ತು ಶೇರುದಾರರ ಹಣ ಪಾವತಿಸಬೇಕು, 2019-20 ಹಾಗೂ 2020-21 ಜಿಲ್ಲೆಯ ಅತಿವೃಷ್ಟಿಯಿಂದ ಆದ ಬೆಳೆ ಹಾನಿ ಮತ್ತುಮನೆ ಹಾನಿ ಪರಿಹಾರ ನೀಡಬೇಕು. ಬಾಗಲಕೋಟೆ ತಾಲೂಕಿನ ಇಐಡಿ ಪ್ಯಾರಿ ಸಕ್ಕರೆ ಕಾರ್ಖಾನೆ ಹಾಗೂ ಜಿಲ್ಲೆಯ ಎಲ್ಲಾ ಸಕ್ಕರೆ ಕಾರ್ಖಾನೆಗಳು ಬಾಕಿ ಉಳಿಸಿಕೊಂಡ ರೈತರ ಹಣ ತಕ್ಷಣ ನೀಡಬೇಕು. ಮುಧೋಳ ತಾಲೂಕು ತಿಮ್ಮಾಪುರದ ಸಹಕಾರಿ ರನ್ನ ಸಕ್ಕರೆ ಕಾರ್ಖಾನೆಯ ಪ್ರಸ್ತುತ ಸ್ಥಿತಿಗತಿ ರೈತರಿಗೆ ಬಹಿರಂಗಪಡಿಸಬೇಕು ಎಂದು ಮನವಿಯಲ್ಲಿ ಆಗ್ರಹಿಸಿದರು.
16 ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆ ಘೋಷಣೆ ಮಾಡಲಾಗಿದೆ. ಆದರೆ, ಖರೀದಿ ಕೇಂದ್ರ ಇಲ್ಲದ ಕಾರಣ ಮಾರುಕಟ್ಟೆಯಲ್ಲಿ ಬೆಲೆ ಬಿದ್ದಿದೆ. ತಕ್ಷಣ ಖರೀದಿ ಕೇಂದ್ರ ಪ್ರಾರಂಭಿಸಬೇಕು. ಜಿಲ್ಲೆಯ ಎಲ್ಲಾ ಕಾರ್ಖಾನೆಗಳಲ್ಲಿ ರೈತರಿಗೆ ಬಾಕಿ ಕೊಡಿಸಬೇಕು ಎಂದು ಒತ್ತಾಯಿಸಿದರು.
ಜಿಪಂ ಉಪಾಧ್ಯಕ್ಷರೂ ಆಗಿರುವ ರೈತ ಮುಖಂಡ ಮುತ್ತಪ್ಪ ಕೋಮಾರ, ಜನ ಸಾಮಾನ್ಯರ ಪಕ್ಷದ ರಾಜ್ಯಾಧ್ಯಕ್ಷ ಯಲ್ಲಪ್ಪ ಹೆಗಡೆ, ಮುಖಂಡರಾದ ಶ್ರೀಶೈಲ ನಾಯಕ, ಈರಪ್ಪ ಹಂಚಿನಾಳ, ನದಾಫ, ತುಕಾರಾಮ ಮ್ಯಾಗಿನಮನಿ, ರಾಮಣ್ಣ ಸುನಗದ ಪಾಲ್ಗೊಂಡಿದ್ದರು.