Advertisement

ರೈತರ ಮುಗ್ಧತೆ ಪರೀಕ್ಷಿಸಿದರೆ ಸುಮ್ಮನಿರಲ್ಲ: ಪಾಟೀಲ

03:46 PM Sep 06, 2022 | Team Udayavani |

ಗಜೇಂದ್ರಗಡ: ರೈತರ ಮುಗ್ಧತೆ ಪದೇ ಪದೇ ಸರ್ಕಾರ ಪರೀಕ್ಷಿಸುತ್ತಿದೆ. ಇನ್ಮುಂದೆ ರೈತರು ಸುಮ್ಮನಿರುವುದಿಲ್ಲ. ಮುಂದಾಗುವ ಪರಿಸ್ಥಿತಿಗಳಿಗೆ ಸರ್ಕಾರವೇ ಹೊಣೆ ಎಂದು ಮಾಜಿ ಶಾಸಕ ಜಿ.ಎಸ್‌. ಪಾಟೀಲ ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.

Advertisement

ಪಟ್ಟಣದ ಹೆಸ್ಕಾಂ ಕಚೇರಿ ಎದುರು ನಿರಂತರ ವಿದ್ಯುತ್‌ ಪೂರೈಕೆಗೆ ಆಗ್ರಹಿಸಿ ಉಣಚಗೇರಿ ಹದ್ದಿನ ರೈತರು ನಡೆಸುತ್ತಿರುವ ಅಹೋರಾತ್ರಿ ಧರಣಿ ಸತ್ಯಾಗ್ರಹ 15ನೇ ದಿನಕ್ಕೆ ಕಾಲಿಟ್ಟ ಹಿನ್ನೆಲೆಯಲ್ಲಿ ರೈತರು ಏರ್ಪಡಿಸಿದ್ದ ಬೃಹತ್‌ ಟ್ರ್ಯಾಕ್ಟರ್‌ ರ್ಯಾಲಿಯಲ್ಲಿ ಅವರು ಮಾತನಾಡಿದರು.

ಕಳೆದ 15 ದಿನಗಳಿಂದ ರೈತರು ಮೌನವಾಗಿಯೇ ಪ್ರತಿಭಟನೆ ನಡೆಸುವ ಮೂಲಕ ಹಕ್ಕೊತ್ತಾಯ ಮಂಡಿಸಿದ್ದರು. ಇದನ್ನೇ ದುರುಪಯೋಗ ಪಡಿಸಿಕೊಳ್ಳುತ್ತಿರುವ ಸರ್ಕಾರ ಮತ್ತು ಅಧಿಕಾರಿಗಳು ಅವರ ಬೇಡಿಕೆಗೆ ಮನ್ನಣೆ ನೀಡದೇ ನಿರ್ಲಕ್ಷ ವಹಿಸುತ್ತಿದ್ದಾರೆ. ಅನ್ನದಾತನ ಮುಗ್ಧತೆ ಸರ್ಕಾರ ಕೆಣಕುತ್ತಿದ್ದು, ಇದರ ಪರಿಣಾಮ ತೀವ್ರವಾಗಿರುತ್ತದೆ ಎಂದು ಎಚ್ಚರಿಸಿದರು.

ರೈತರ ಬೇಡಿಕೆಗಳು ಸರ್ಕಾರಕ್ಕೇನು ಹೊರೆಯಲ್ಲ. ನಗರ ಪ್ರದೇಶದ ಜಮೀನುಗಳಿಗೆ ವಿದ್ಯುತ್‌ ನೀಡಲು ನಿಮ್ಮದೇನು ತಕರಾರು, ಇಲ್ಲವಾದರೆ ಉಣಚಗೇರಿಯಲ್ಲಿ ಗ್ರಾಮೀಣ ಭಾಗಕ್ಕೆ ಸೇರ್ಪಡೆ ಮಾಡಿ, ಅಲ್ಲಿನ ನಿಯಮ ಪಾಲನೆ ಮಾಡುತ್ತಾರೆ. ಅತ್ತ ನಗರಕ್ಕೂ ಇಲ್ಲ, ಇತ್ತ ಗ್ರಾಮೀಣಕ್ಕೂ ಇಲ್ಲವಾದರೆ ರೈತರು ಏನು ಮಾಡಬೇಕು? ಎಂದರು.

ರೈತರು ಉಳುಮೆ ಮಾಡೋದು ಅವರ ಹೊಟ್ಟೆ ತುಂಬಿಸಿಕೊಳ್ಳಲು ಅಲ್ಲ. ಬದಲಾಗಿ ನಮ್ಮ, ನಿಮ್ಮೆಲ್ಲರ ಹಸಿವು ನೀಗಿಸಲು. ಅಂಥವರಿಗೆ ನಾವೆಲ್ಲರೂ ತಲೆಬಾಗಬೇಕು. ರೈತ ಜೋಳ ಬೆಳೆದ್ರೆ, ನಿಮ್ಮ ಮನೇಲಿ ರೊಟ್ಟಿ ಬೇಯೋದು. ಇಲ್ಲಾಂದ್ರೆ ಮಣ್ಣು ತಿನ್ನಬೇಕಾಗುತ್ತದೆ ಎಂದು ಸರ್ಕಾರ ಮತ್ತು ಹೆಸ್ಕಾಂ ಅಧಿ ಕಾರಿಗಳಿಗೆ ತರಾಟೆಗೆ ತೆಗೆದುಕೊಂಡರು.

Advertisement

ಸ್ಥಳಕ್ಕೆ ಅಧಿಕಾರಿ ಬರದಿದ್ದಕ್ಕೆ ಕೆಂಡ: ಪಟ್ಟಣದಲ್ಲಿ ರೈತರು ಟ್ರ್ಯಾಕ್ಟರ್‌ ರ್ಯಾಲಿ ನಡೆಸಿ, ಶ್ರೀ ಕಾಲಕಾಲೇಶ್ವರ ವೃತ್ತದಲ್ಲಿ ಪ್ರತಿಭಟನಾ ಸಭೆ ನಡೆಸುತ್ತಿದ್ದ ಸಂದರ್ಭದಲ್ಲಿ ಆಕ್ರೋಶಗೊಂಡ ಮಾಜಿ ಶಾಸಕ ಜಿ.ಎಸ್‌. ಪಾಟೀಲ ಗಂಟೆಗಟ್ಟಲೇ ಪ್ರತಿಭಟನೆ ನಡೆಸುತ್ತಿದ್ದೇವೆ. ಯಾವ ಅಧಿಕಾರಿಗಳು ಬಂದಿಲ್ಲ ಎಂದು ಕೆಂಡವಾಗುತ್ತಿದ್ದಂತೆ, ಸ್ಥಳಕ್ಕೆ ಪ್ರೊಬೇಷನರಿ ಉಪ ವಿಭಾಗಾಧಿಕಾರಿ ಎಂ.ಟಿ. ಹಸನಸಾಬ ಆಗಮಿಸಿ ಪ್ರತಿಭಟನಾಕಾರರೊಂದಿಗೆ ಮಾತುಕತೆಗೆ ಮುಂದಾದರು.

ಜೆಡಿಎಸ್‌ ಬೆಂಬಲ: ರೈತರ ಅಹೋರಾತ್ರಿ ಧರಣಿ ಸತ್ಯಾಗ್ರಹಕ್ಕೆ ಜೆಡಿಎಸ್‌ ಬೆಂಬಲ ಸೂಚಿಸಿ, ಜೆಡಿಎಸ್‌ ತಾಲೂಕು ಅಧ್ಯಕ್ಷ ಎಂ.ವೈ. ಮುಧೋಳ ಟ್ರ್ಯಾಕ್ಟರ್‌ ರ್ಯಾಲಿಯಲ್ಲಿ ಪಾಲ್ಗೊಂಡು, ರೈತರ ಬೇಡಿಕೆ ಈಡೇರುವವರೆಗೂ ನಾವು ಅವರೊಂದಿಗಿದ್ದೇವೆ ಎಂದರು.

ಪ್ರತಿಭಟನೆಯಲ್ಲಿ ರೈತ ಹೋರಾಟ ಸಮಿತಿ ಅಧ್ಯಕ್ಷ ಮುತ್ತಣ್ಣ ಮ್ಯಾಗೇರಿ, ಮಿಥುನ ಪಾಟೀಲ, ಮುರ್ತುಜಾ ಡಾಲಾಯತ್‌, ಇಸ್ಮಾಯಿಲ್‌ ಗೊಲಗೇರಿ, ಶಿವರಾಜ ಘೋರ್ಪಡೆ, ರಾಜು ಸಾಂಗ್ಲಿಕಾರ, ಬಿ.ಎಸ್‌. ಶೀಲವಂತರ, ಶಶಿಧರ ಹೂಗಾರ, ಉಮೇಶ ರಾಠೊಡ, ಮಲ್ಲಿಕಾರ್ಜುನ ಗಾರಗಿ, ಶ್ರೀಧರ ಬಿದರಳ್ಳಿ, ಅಪ್ಪು ಮತ್ತಿಕಟ್ಟಿ, ಶರಣು ಪೂಜಾರ, ಕಳಕಪ್ಪ ಪೋತಾ, ಯಲ್ಲಪ್ಪ ಬಂಕದ, ಬಸವರಾಜ ಪಲ್ಲೇದ, ಸಿದ್ದಪ್ಪ ಹಳ್ಳದ, ಬಸವರಾಜ ನಂದಿಹಾಳ, ಖಾಜೇಸಾಬ ಕಟ್ಟಿಮನಿ, ಸಿದ್ದು ಗೊಂಗಡಶೆಟ್ಟಿಮಠ, ಯಮನೂರ ತಳವಾರ, ಲಚ್ಚಪ್ಪ ಮಾಳ್ಳೋತ್ತರ, ರಾಜಪ್ಪ ದಾರೋಜಿ, ಬಾಬುಸಾಬ ನದಾಫ್‌, ನರಸಿಂಗಸಾ ರಂಗ್ರೇಜಿ, ಫಕ್ಕೀರಪ್ಪ ಕಂಠಿ, ಕಳಕಪ್ಪ ತಳವಾರ, ಭೀಮಪ್ಪ ಅರಗಂಜಿ, ಪುಲಕೇಶಪ್ಪ ವದೆಗೋಳ, ಯಮನಪ್ಪ ಗಡ್ಡದ ಇದ್ದರು.

ಹೆಸ್ಕಾಂ ಕಚೇರಿಗೆ ಬೀಗ-ಆಕ್ರೋಶ ಹೆಸ್ಕಾಂ ಅಧೀಕ್ಷಕ ಅಭಿಯಂತರ ಎಸ್‌.ಎಸ್‌. ಜಂಗಿನ್‌ ಸ್ಥಳಕ್ಕಾಗಮಿಸಿ ರೈತರ ಮನವೊಲಿಕೆಗೆ ಯತ್ನಿಸಿದರು. ಇದಕ್ಕೆ ಜಗ್ಗದ ರೈತರು ವಿದ್ಯುತ್‌ ಕೊಡುವ ಬಗ್ಗೆ ಮಾತನಾಡುವುದಾದರೆ ಮಾತನಾಡಿ ಇಲ್ಲವಾದರೆ ನಮ್ಮ ಹೋರಾಟ ಮುಂದುವರಿಸಿ ಹೆಸ್ಕಾಂ ಕಚೇರಿಗೆ ಬೀಗ ಹಾಕುತ್ತೇನೆ ಎನ್ನುತ್ತಿದ್ದಂತೆ ಹೋರಾಟಗಾರರು ಹೆಸ್ಕಾಂ ಕಚೇರಿಗೆ ದೌಡಾಯಿಸಿ ಕಚೇರಿಯ ಮುಖ್ಯ ಗೇಟ್‌ಗೆ ಬೀಗ ಹಾಕಿ, ರಸ್ತೆ ಬಂದ್‌ ಮಾಡಿ ಆಕ್ರೋಶ ವ್ಯಕ್ತಪಡಿಸಿ ಪ್ರತಿಭಟನೆ ಮುಂದುವರಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next