Advertisement

ಭತ್ತ ಖರೀದಿ ಕೇಂದ್ರ ಶೀಘ ಆರಂಭಿಸಿ

04:23 PM Nov 11, 2020 | Suhan S |

ಕೆ.ಆರ್‌.ನಗರ: ಭತ್ತ ಖರೀದಿ ಕೇಂದ್ರತೆರೆಯುವಂತೆ ಸರ್ಕಾರವನ್ನು ಒತ್ತಾಯಿಸಿ ತಾಲೂಕು ರೈತ ಸಂಘ ಮತ್ತು ಹಸಿರು ಸೇನೆ ಸಂಯುಕ್ತಾಶ್ರಯದಲ್ಲಿ ಮಂಗಳವಾರ ಪ್ರತಿಭಟನೆ ನಡೆಸಲಾಯಿತು.

Advertisement

ಪಟ್ಟಣದ ಮಿನಿ ವಿಧಾನಸೌಧದ ಮುಂಭಾಗ ಮಂಗಳವಾರ ನಡೆದ ಪ್ರತಿಭಟನೆಯಲ್ಲಿ ಮಾತನಾಡಿದ ರೈತ ಮುಖಂಡರು, ರಾಜ್ಯದಲ್ಲೇ ಹೆಚ್ಚು ಭತ್ತ ಬೆಳೆಯುವ ಮೂಲಕ ಭತ್ತದ ಕಣಜ ಎನಿಸಿದ ಕೃಷ್ಣರಾಜನಗರ ತಾಲೂಕಿನಲ್ಲಿ ಈಗಾಗಲೇ ರೈತರು ಬೆಳೆದ ಭತ್ತದ ಬೆಳೆ ಕಟಾವಿನ ಹಂತಕ್ಕೆ ಬಂದಿದ್ದರೂ ಸರ್ಕಾರ ಇನ್ನೂ ಭತ್ತ ಖರೀದಿ ಕೇಂದ್ರ ತೆರೆಯುವ ಬಗ್ಗೆ ಯಾವುದೇ ಆಲೋಚನೆ ಮಾಡಿಲ್ಲ. ಇದರಿಂದ ನಷ್ಟ ಎದುರಿಸುತ್ತಿರುವ ನಡುವೆ ರೈತರು ಮಧ್ಯವರ್ತಿಗಳ ಹಾವಳಿಯಿಂದ ನಷ್ಟ ಅನುಭವಿಸಬೇಕಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಪ್ರತಿ ವರ್ಷ ರೈತರ ಒತ್ತಾಯಕ್ಕೆ ಮಣಿದು ರೈತರು ಬೆಳೆದ ಭತ್ತ ಮಾರಾಟ ಮಾಡಿದ ನಂತರ ಖರೀದಿ ಕೇಂದ್ರ ತೆರೆಯಲು ಮುಂದಾಗುವ ಸರ್ಕಾರ ನಂತರ ನಿಯಮಗಳನ್ನು ರೂಪಿಸಿ ರೈತರು ನಷ್ಟ ಅನುಭವಿಸುವಂತೆ ಮಾಡುತ್ತಿದೆ. ಈ ಬಾರಿಯಾದರೂ ತ್ವರಿತವಾಗಿ ಖರೀದಿ ಕೇಂದ್ರ ತೆರೆದು ಬೆಂಬಲ ಬೆಲೆ ಘೋಷಿಸಬೇಕು ಎಂದು ಆಗ್ರಹಿಸಿದರು.

ಕಳಪೆ ಬೀಜ ಬಿತ್ತನೆ: ಕೃಷಿ ಇಲಾಖೆ ವತಿಯಿಂದ ವಿತರಣೆಯಾದ ಜ್ಯೋತಿ ಹಾಗೂ ಎನ್‌.ಆರ್‌.ಬೀಜದ ಭತ್ತವು ಕಳಪೆ ಬೀಜವಾಗಿರುವುದರಿಂದ ಜೊಳ್ಳು ಹೊಡೆ ಬಂದಿರುತ್ತದೆ. ಇದರಿಂದ ರೈತರು ಸಂಕಷ್ಟಕ್ಕೆ ಸಿಲುಕಿದ್ದು ಕೃಷಿ ಅಧಿಕಾರಿಗಳು ಹಾಗೂ ತಾಲೂಕು ಆಡಳಿತ ಪರಿಶೀಲಿಸಿ ನಷ್ಟಕ್ಕೊಳಗಾದ ರೈತರಿಗೆ ಸೂಕ್ತವಾದ ಪರಿಹಾರ ಕೊಡಿಸಿ ಕೊಡುವಂತೆ ಪ್ರತಿಭಟನಾಕಾರರು ಆಗ್ರಹಿಸಿದರು.

ದರ ಏರಿಸಿದರೆ ಹೋರಾಟ: ವಿದ್ಯುತ್‌ ದರವನ್ನು ಯೂನಿಟ್‌ಗೆ 40 ಪೈಸೆ ಏರಿಕೆ ಮಾಡಿರುವುದನ್ನು ಹಿಂಪಡೆಯಬೇಕೆಂದು ಒತ್ತಾಯಿಸಿದ ರೈತರು, ತಪ್ಪಿದಲ್ಲಿ ವಿದ್ಯುತ್‌ ಕಚೇರಿಯ ಮುಂದೆ ರಾಜ್ಯಾದ್ಯಂತ ಉಗ್ರ ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ಎಚ್ಚರಿಸಿದರು. ಇದೇ ವೇಳೆ ತಹಸೀಲ್ದಾರ್‌ ಮಂಜುಳಾ ಅವರಿಗೆ ಮನವಿ ಸಲ್ಲಿಸಲಾಯಿತು.

Advertisement

ಪ್ರತಿಭಟನೆಯಲ್ಲಿ ರೈತ ಸಂಘದ ತಾಲೂಕು ಅಧ್ಯಕ್ಷ ಎಂ.ಜೆ.ಮಲ್ಲೇಶ್‌, ಜಿಲ್ಲಾಧ್ಯಕ್ಷ ಹೊಸೂರು ಕುಮಾರ್‌, ಮಹಿಳಾ ಘಟಕದ ಜಿಲ್ಲಾ ಅಧ್ಯಕ್ಷೆ ನೇತ್ರಾವತಿ, ವಿಭಾಗೀಯ ಸಂಚಾಲಕ ಸರಗೂರು ನಟರಾಜ್‌, ಕಬ್ಬು ಬೆಳೆಗಾರರ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಸುನಯ್‌ಗೌಡ, ರೈತ ಮುಖಂಡರಾದ ಶ್ರೀನಿವಾಸ್‌, ಕುಬೇರ, ಎ.ಎಸ್‌.ನಟರಾಜ್‌, ಮಲ್ಲೇಶ್‌, ವಿಜೇಂದ್ರ, ಲೋಕೇಶ್‌, ಸುರೇಶ್‌, ಬಸಪ್ಪ, ಕಾಳೇಗೌಡ, ರಾಮೇಗೌಡ, ಮಂಜುನಾಥ್‌, ಚಂದ್ರು, ಮೂರ್ತಿ ಮತ್ತಿತರರು ಪಾಲ್ಗೊಂಡಿದ್ದರು.

ವಿಷಯಾಂತರ ಮಾಡಬೇಡಿ: ತಹಶೀಲ್ದಾರ್‌ :  ಪಟ್ಟಣದ ಮಿನಿ ವಿಧಾನಸೌಧದ ಮುಂಭಾಗ ರೈತರು ಪ್ರತಿಭಟನೆ ನಡೆಸಿ ಮಾತನಾಡುವಾಗ ಮನವಿ ಸ್ವೀಕರಿಸಲು ಆಗಮಿಸಿದ ತಹಶೀಲ್ದಾರ್‌ ವಿರುದ್ಧ ಹರಿಹಾಯ್ದ ರೈತ ಮುಖಂಡರು, ನೀವು ರೈತರು ಮತ್ತು ರೈತ ಮುಖಂಡರು ಕಚೇರಿಗೆ ಆಗಮಿಸಿದಾಗ ಸ್ಪಂದಿಸಿ ಸಮರ್ಪಕ ಉತ್ತರ ನೀಡುವುದಿಲ್ಲ ಎಂಬ ಆರೋಪವಿದೆ. ಮುಂದೆಯಾದರೂ ರೈತರಿಗೆ ಗೌರವ ಕೊಟ್ಟು ನಡೆದುಕೊಳ್ಳಿ ಎಂದು ಕಿಡಿಕಾರಿದರು.

ಇದರಿಂದ ಸಿಡಿಮಿಡಿಗೊಂಡ ತಹಶೀಲ್ದಾರ್‌ ಎಂ.ಮಂಜುಳಾ, ನೀವು ಪ್ರತಿಭಟನೆ ವಿಚಾರ ಬಿಟ್ಟು ವಿಷಯಾಂತರ ಮಾಡಬೇಡಿ. ನಾನೆಂದೂ ಆ ರೀತಿ ರೈತರು ಹಾಗೂ ಜನ ಸಾಮಾನ್ಯರೊಂದಿಗೆ ನಡೆದುಕೊಂಡಿಲ್ಲ ಎಂದು ತಿರುಗೇಟು ನೀಡಿದರು.ಈ ವೇಳೆ ಪ್ರತಿಕ್ರಿಯಿಸಿದ ರೈತ ಸಂಘದ ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ನೇತ್ರಾವತಿ “ನೀವು ನಮ್ಮ ಸಂಘದ ತಾಲೂಕು ಅಧ್ಯಕ್ಷರು ಹಾಗೂ ಮುಖಂಡರು ಕಚೇರಿಗೆ ಆಗಮಿಸಿದಾಗ ಸೌಜನ್ಯದಿಂದ ನಡೆದುಕೊಂಡಿಲ್ಲ. ನಮ್ಮ ನಾಯಕರು ಮಾಡುತ್ತಿರುವ ಆರೋಪ ಸರಿಯಾಗಿಯೇ ಇದೆ’ ಎಂದು ದೂರಿದರು. ಈ ಸಂದರ್ಭದಲ್ಲಿ ರೈತ ಮುಖಂಡರು ಹಾಗೂ ತಹಶೀಲ್ದಾರ್‌ ನಡುವೆ ಮಾತಿನ ಚಕಮಕಿ ನಡೆಯಿತು.

Advertisement

Udayavani is now on Telegram. Click here to join our channel and stay updated with the latest news.

Next