ತರೀಕೆರೆ: ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ವತಿಯಿಂದ ನಿರ್ಮಾಣವಾಗುತ್ತಿರುವ ತುಮಕೂರು ಮತ್ತು ಹೊನ್ನಾವರ ರಸ್ತೆ ಅಗಲೀಕರಣ ಕಾಮಗಾರಿಯಲ್ಲಿ ಪಟ್ಟಣದ ದಳವಾಯಿ ಕೆರೆ ಕೋಡಿ ಮುಂಭಾಗದ ಬೈಪಾಸ್ ರಸ್ತೆಯಲ್ಲಿ ಅಂಡರ್‌ಪಾಸ್ ರಸ್ತೆ ನಿರ್ಮಿಸಬೇಕೆಂದು ಒತ್ತಾಯಿಸಿ ರೈತ ಹಿತರಕ್ಷಣಾ ಸಮಿತಿ, ತಾಲೂಕು ನಾಗರಿಕರ ವೇದಿಕೆ ಮುಖಂಡರು ಮತ್ತು ಆ ಭಾಗದ ರೈತರು ಶನಿವಾರ ಕಾಮಗಾರಿ ಸ್ಥಳದಲ್ಲಿ ವಾಹನಗಳನ್ನು ತಡೆದು ಪ್ರತಿಭಟನೆ ನಡೆಸಿದರು.
ರಸ್ತೆ ಕಾಮಗಾರಿಗೆ ಅಡ್ಡಿಪಡಿಸಬೇಕೆನ್ನುವುದು ನಮ್ಮ ಉದ್ದೇಶವಲ್ಲ. ಅಂಡರ್‌ಪಾಸ್ ರಸ್ತೆ ನಿರ್ಮಾಣವಾಗದಿದ್ದರೆ ಈ ಭಾಗದಲ್ಲಿ ಜಮೀನು, ತೋಟ ಹೊಂದಿರುವ ಸಾವಿರಾರು ರೈತರು ಓಡಾಡಲು ರಸ್ತೆ ಸಂಪರ್ಕವೇ ಇಲ್ಲದಂತಾಗುತ್ತದೆ. ತರೀಕೆರೆ, ಇಂದಾವರ, ಜೋಡಿಗೋವಿಂದಪುರ, ಅಮ್ಮಣ್ಣಿಕಾವಲು, ಅತ್ತಿಗನಾಳು ಸೇರಿದಂತೆ ಹತ್ತಾರು ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ದಾರಿ ಕಡಿತಗೊಳ್ಳಲಿದೆ. ಅಂಡರ್‌ಪಾಸ್ ರಸ್ತೆ ನಿರ್ಮಾಣವಾದರೆ ರೈತರಿಗೆ ಅನುಕೂಲವಾಗಲಿದೆ ಎಂದರು.
ಅಶೋಕ್ ಬಿಲ್ಡ್‌ಖಾನ್ ಕಂಟ್ರಾಕ್ಟ್‌ನ ಪ್ರಾಜೆಕ್ಟ್ ಮ್ಯಾನೇಜರ್ ಎಂ.ಎಸ್.ಎನ್. ರಾಜು ಮಾತನಾಡಿ, ರೈತರ ಬೇಡಿಕೆಯನ್ನು ಕಾಮಗಾರಿ ನಿರ್ವಹಣೆಯ ಉನ್ನತಾ ಧಿಕಾರಿಗಳ ಗಮನಕ್ಕೆ ತರಲಾಗುವುದು. ರೈತರು ಕೇಳುತ್ತಿರುವುದು ಸಮಂಜಸ ವಿಚಾರವಾಗಿದ್ದು, ಭಾರೀ ವಾಹನಗಳು ಓಡಾಡಿ ಈಗಾಗಲೇ ಹಾಳಾಗಿರುವ ರಸ್ತೆಯನ್ನು ಸರಿಪಡಿಸಲು ಮುಂದಾಗುತ್ತೇವೆ. ಅಂಡರ್‌ಪಾಸ್ ರಸ್ತೆ ನಿರ್ಮಿಸುವ ವಿಚಾರ ತೀರ್ಮಾನವಾಗಬೇಕಿದೆ ಎಂದು ತಿಳಿಸಿದರು.
ಮ್ಯಾಮ್ಕೊಸ್ ನಿರ್ದೇಶಕ ಆರ್. ದೇವಾನಂದ್, ಸಿಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಟಿ.ಎಲ್. ರಮೇಶ್, ಪುರಸಭೆ ಮಾಜಿ ಅಧ್ಯಕ್ಷರಾದ ಗೊಲ್ಲರಹಳ್ಳಿ ಬಸವರಾಜ್, ಬೈಟು ರಮೇಶ್, ಸದಸ್ಯ ಚೇತನ್, ರೈತರಾದ ಟಿ.ಎಚ್. ಸತ್ಯಣ್ಣ, ಗಂಗಾಧರ್, ಬಸವರಾಜು ಇತರರು ಇದ್ದರು