Advertisement

ನಮ್ ಹೆಣದ್ ಮ್ಯಾಲ್ ಕಾರ್ಖಾನೆ ಕಟ್ರಿ : ಶ್ರೀಸಿಮೆಂಟ್ ಕಾರ್ಖಾನೆ ವಿರುದ್ಧ ರೈತರ ಆಕ್ರೋಶ

04:02 PM Mar 30, 2022 | Team Udayavani |

ಸೇಡಂ : ನಮ್ಮೂರಿಗಿ ಬರ ನಲ್ಲಿ ನೀರಾಗ ವಿಷ ಹಾಕ್ರಿ. ಎಲ್ಲೋರ್ ಕುಡ್ದು ಸಾಯ್ತೀವಿ. ನಮ್ ಹೆಣದ್ ಮ್ಯಾಲ್ ಸಿಮೆಂಟ್ ಫ್ಯಾಕ್ಟ್ರಿ ಕಟ್ರಿ… ಇದು ಶ್ರೀ ಸಿಮೆಂಟ್ ಕಾರ್ಖಾನೆ ವಿರುದ್ಧ ರೈತರು ದಂಗೆ ಎದ್ದು ಆಕ್ರೋಶ ವ್ಯಕ್ತಪಡಿಸಿದ ಪರಿ.

Advertisement

ಕೆಲ ವರ್ಷಗಳ ಹಿಂದಷ್ಟೇ ತಾಲೂಕಿನ ಕೋಡ್ಲಾ-ಬೆನಕನಹಳ್ಳಿ ಸಿವಾರದಲ್ಲಿ ಶ್ರೀಸಿಮೆಂಟ್ ಕಾರ್ಖಾನೆ ಸ್ಥಾಪಿಸಲಾಗಿ, ಈಗ ಅದಕ್ಕೆ ಹೆಚ್ಚುವರಿ ಕಲ್ಲು ಗಣಿಗಾರಿಕೆ ಪರವಾನಿಗೆ ಸಂಬಂಧ ಬುಧವಾರ ಜಿಲ್ಲಾಧಿಕಾರಿ ಯಶವಂತ ಗುರುಕರ್ ಅಧ್ಯಕ್ಷತೆಯಲ್ಲಿ ಮಾಲಿನ್ಯ ನಿಯಂತ್ರಣ ಮಂಡಳಿ ಕರೆದ ಸಾರ್ವಜನಿಕ ಸಭೆಯಲ್ಲಿ ರೈತರು ಕಾರ್ಖಾನೆ ವಿರುದ್ಧ ಟೀಕಾಪ್ರಹಾರ ನಡೆಸಿದ್ದಾರೆ.

ಕೆಲ ವರ್ಷಗಳ‌ ಹಿಂದೆ ಬಂದ ಶ್ರೀಸಿಮೆಂಟ್ ಈಗಾಗಲೇ ಅನೇಕ ಅವಾಂತರಗಳನ್ನು ಸೃಷ್ಟಿಸಿದೆ. ಈಗಾಗಲೇ ಸುತ್ತಮುತ್ತಲಿನ ಗ್ರಾಮಸ್ಥರು ಉಸಿರಾಟ, ಹೃದಯ ಸಂಬಂಧಿ ಖಾಯಿಲೆಗಳಿಂದ ಬಳಲುತ್ತಿದ್ದಾರೆ. ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿಗಳು ಹಾಗೂ ಕಾರ್ಖಾನೆಯ ಆಡಳಿತ ಮಂಡಳಿ ಒಂದಾಗಿ ಜನರ ಜೀವದ ಜೊತೆ ಚಲ್ಲಾಟವಾಡುತ್ತಿದ್ದಾರೆ ಎಂದು ರೈತರು ಆಕ್ರೋಶ ಹೊರಹಾಕಿದ್ದಾರೆ.

ಇದರಿಂದ ಕೆಲಹೊತ್ತು ಸಭೆಯಲ್ಲಿ ಗೊಂದಲದ ವಾತಾವರಣ ನಿರ್ಮಾಣವಾಗಿತ್ತು.

Advertisement

ಕಾರ್ಖಾನೆಯು ಪರಿಸರ ಮಾಲಿನ್ಯ ನಿಯಂತ್ರಿಸುವಲ್ಲಿ ವಿಫಲವಾಗಿದೆ. ನೀರು, ಗಾಳಿ ಕಲುಷಿತವಾಗುತ್ತಿದೆ. ರೋಗ ರುಜಿನಗಳು ಗ್ರಾಮಗಳಲ್ಲಿ ತಲೆದೋರಿವೆ. ಭಾರಿ ಪ್ರಮಾಣದ ರಾಸಾಯನಿಕ ಮಿಶ್ರಿತ ಧೂಳು ಹೊರಹಾಕಲಾಗುತ್ತಿದೆ. ರೈತರ ಜಮೀನುಗಳು ಹಾಳಾಗಿದ್ದು, ಬೆಳೆ ನಾಶವಾಗಿವೆ. ಯಾವುದೇ ಕಾರಣಕ್ಕೂ ಹೆಚ್ಚುವರಿ ಗಡಿಗಾರಿಕೆಗೆ ಅವಕಾಶ ನೀಡಬಾರದು ಎಂದು ರೈತರು ಎಚ್ಚರಿಸಿದ್ದಾರೆ.

ಇದನ್ನೂ ಓದಿ : ಜಮ್ಮು-ಕಾಶ್ಮೀರ: ಸಿಸಿಟಿವಿಯಲ್ಲಿ ಸೆರೆ-ಸಿಆರ್ ಪಿಎಫ್ ಕ್ಯಾಂಪ್ ಮೇಲೆ ಬಾಂಬ್ ಎಸೆದ ಮಹಿಳೆ

ಕೆಪಿಸಿಸಿ ವಕ್ತಾರ ಹಾಗೂ ಮಾಜಿ ಸಚಿವ ಡಾ. ಶರಣಪ್ರಕಾಶ ಪಾಟೀಲ ಮಾತನಾಡಿ ಜಮೀನು ಕಳೆದು ಕೊಂಡವರಿಗೆ ಸರಿಯಾದ ನೌಕರಿ ನೀಡಿಲ್ಲ. ನೀಡಿದವರಿಗೆ ಸರಿಯಾದ ಸಂಬಳವಿಲ್ಲ. ಸರೋಜಿನಿ ಮಹಿಷಿ ವರದಿ ಪ್ರಕಾರ ನೌಕರಿ ನೀಡದೆ ಕಾನೂನು ಪಾಲಿಸುತ್ತಿಲ್ಲ. ಸಿಎಸ್ಆರ್ ಅಡಿ ಸಣ್ಣ ಪುಣ್ಣ ಕೆಲಸ ಮಾಡಲಾಗಿದೆ. ಕುಡಿವ ನೀರಿನ ಸಮಸ್ಯೆ ಕಂಪನಿ ಪೂರೈಸುತ್ತಿಲ್ಲ ಎಂದು ದೂರಿದರು.

ಮುಖಂಡ ಮುಕ್ರಂಖಾನ್ ಮಾತನಾಡಿ ಪರಿಸರ ಹಾನಿಯಾದರೂ ಸಹ ಮಾಲಿನ್ಯ ನಿಯಂತ್ರಣ ಮಂಡಳಿ ಎಂದೂ ಸಹ ಬಂದಿಲ್ಲ ಎಂದು ಆಕ್ರೋಶಗೊಂಡರು.

ಜೆಡಿಎಸ್ ಮುಖಂಡ ಬಾಲರಾಜ ಗುತ್ತೇದಾರ ಮಾತನಾಡಿ, ಇಲ್ಲಿನ ಸಿಮೆಂಟ್ ಕಾರ್ಖಾನೆಗಳಿಂದ ಪ್ರತಿ‌ನಿತ್ಯ ನೂರಾರು ಜನ ಅಸ್ತಮಾ, ಅಲರ್ಜಿ, ಹೃದಯರೋಗಕ್ಕೆ ತುತ್ತಾಗುತ್ತಿದ್ದಾರೆ. ಈ ಬಗ್ಗೆ ಆರೋಗ್ಯ ಇಲಾಖೆಗೂ ಗೊತ್ತಿದೆ. ಕಾರ್ಖಾನೆ ಸ್ಥಾಪಿಸುವುದೇ ಆದಲ್ಲಿ ಹೊರದೇಶಗಳಲ್ಲಿ ಇರುವಂತೆ ಶೆಡ್ ನಲ್ಲಿ ಕಾರ್ಖಾನೆ ನಡೆಸಬೇಕು ಎಂದು ಒತ್ತಾಯಿಸಿದರು.

ನಂತರ ಮಾತಮಾಡಿದ ಜಿಲ್ಲಾಧಿಕಾರಿ ಯಶವಂತ ಗುರುಕರ್ ಸರೋಜಿನಿ ಮಹಿಷಿ ವರದಿ ಪ್ರಕಾರ ನೌಕರಿ ಪಡೆಯಬೇಕು. ಜಾಬಕಾರ್ಡ್ ವಾಪಸ್ ಕೊಟ್ಟರೆ ಕಠಿಣ ಕ್ರಮ ಕೈಗೊಳ್ಳುವೆ. ಕಂಪನಿ ಕೊಡುವ ಪಿಪಿಟಿ ನೋಡಿ ಬಕ್ರಾ ಆಗಲ್ಲ. ಪ್ರತಿಯೊಂದು ಜನರ ದೂರು, ಕರಾರುಗಳನ್ನು ವಾಟ್ಸಪನಲ್ಲಿ ಕೊಡ್ತೀನಿ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next