ರಬಕವಿ-ಬನಹಟ್ಟಿ: ಕೇಂದ್ರ ಮತ್ತು ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಬಿಜೆಪಿ ಸರ್ಕಾರ ಇದು ಡಬಲ್ ನಾಲಿಗೆಯ ಸರ್ಕಾರವಾಗಿದೆ. ರೈತರಿಗೆ ಸೂಕ್ತ ಕಬ್ಬಿನ ಬೆಲೆಯನ್ನು ನಿಗದಿ ಮಾಡದೆ ರೈತರಿಗೆ ಅನ್ಯಾಯ ಮಾಡುತ್ತಿದ್ದಾರೆ ಎಂದು ರಬಕವಿ ಬನಹಟ್ಟಿ ತಾಲೂಕು ರೈತ ಸಂಘದ ಅಧ್ಯಕ್ಷ ಶ್ರೀಕಾಂತ ಘೂಳನ್ನವರ ತಿಳಿಸಿದರು.
ಗುರುವಾರ ರಬಕವಿಯ ಭಗೀರಥ ಸರ್ಕಲ್ ಬಳಿ ಹಮ್ಮಿಕೊಂಡ ಪ್ರತಿಭಟನೆಯ ಸಂದರ್ಭದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ರೈತರು ಸಂಕಷ್ಟದ ಸ್ಥಿತಿಯಲ್ಲಿದ್ದಾರೆ. ಗೊಬ್ಬರ ಸೇರಿದಂತೆ ಕೃಷಿ ಚಟುವಟಿಕೆಗಳಿಗೆ ಬೇಕಾಗುವ ಸೌಲಭ್ಯಗಳ ದರಗಳು ಬಹಳಷ್ಟು ಪ್ರಮಾಣದಲ್ಲಿ ಹೆಚ್ಚಾಗಿವೆ. ನಾವು ಸಕ್ಕರೆ ಕಾರ್ಖಾನೆಯ ಮಾಲೀಕರಿಂದ ಪ್ರತಿ ವರ್ಷಕ್ಕಿಂತ ಕೇವಲ ರೂ. 200 ಮಾತ್ರ ಹೆಚ್ಚಿಗೆ ಕೇಳಿದ್ದೆವು ಎಂದರು.
ಬಿಜೆಪಿ ಸರ್ಕಾರ ಮತ್ತು ಸಕ್ಕರೆ ಕಾರ್ಖಾನೆಯ ಮಾಲೀಕರು ರೈತರು ಬೆಳೆದ ಕಬ್ಬಿಗೆ ನ್ಯಾಯಯುತವಾದ ಬೆಲೆಯನ್ನು ನೀಡದೆ ಅನ್ಯಾಯ ಮಾಡುತ್ತಿದ್ದಾರೆ. ಆದಷ್ಟು ಬೇಗ ಕಬ್ಬಿಗೆ ದರ ನಿಗದಿ ಮಾಡಬೇಕು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಇನ್ನಷ್ಟು ಉಗ್ರ ಹೋರಾಟ ಮಾಡಲಾಗುವುದು ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ಮತ್ತೋರ್ವ ರೈತ ಮುಖಂಡ ಸಿದ್ದು ಉಳ್ಳಾಗಡ್ಡಿ ಮಾತನಾಡಿ, ಬಿಜೆಪಿ ಸರ್ಕಾರಕ್ಕೆ ರೈತರ ಕುರಿತು ಯಾವುದೆ ರೀತಿಯ ಕಾಳಜಿ ಇಲ್ಲ. ಕಬ್ಬಿಗೆ ಸೂಕ್ತ ದರ ನಿಗದಿ ಮಾಡುವಲ್ಲಿ ವಿಫಲರಾಗಿದ್ದಾರೆ. ಇದು ಕೇವಲ ರೈತರ ಮಾತ್ರ ಹೋರಾಟವಾಗದೆ, ಸಾರ್ವಜನಿಕರು ಮತ್ತು ಸಂಘ ಸಂಸ್ಥೆಗಳು ಕೂಡಾ ರೈತರ ಈ ಬೇಡಿಕೆಗೆ ಬೆಂಬಲ ನೀಡಬೇಕು ಎಂದರು.
Related Articles
ರಬಕವಿ ನಗರದ ಭಗೀರಥ ವೃತ್ತದ ಬಳಿ ಪ್ರತಿಭಟನೆಯನ್ನು ಕೈಗೊಂಡ ನಿಮಿತ್ತ ಜಮಖಂಡಿಯಿಂದ ರಬಕವಿ ಮಾರ್ಗವಾಗಿ ಗೋಕಾಕ, ಬೆಳಗಾವಿ ಮತ್ತು ಮಹಾರಾಷ್ಟ್ರಕ್ಕೆ ಹೋಗುವ ಸಂಚಾರ ಸಂಪೂರ್ಣ ಸ್ಥಗಿತಗೊಂಡಿತು. ಖಾಸಗಿ ವಾಹನಗಳಿಗೂ ಕೂಡಾ ಪ್ರತಿಭಟನೆಯ ಬಿಸಿ ತಟ್ಟಿತು. ಪ್ರತಿಭಟನಾಕಾರರು ರಸ್ತೆಯ ಮೇಲೆ ಕಲ್ಲು, ಮುಳ್ಳಿನ ಗಿಡಗಳನ್ನು ಮತ್ತು ತಮ್ಮ ವಾಹನಗಳನ್ನು ಹತ್ತಿ ಪ್ರತಿಭಟನೆ ನಡೆಸಿದರು.
ಕಾಡು ಪಾಟೀಲ, ಭೀಮಶಿ ಕರಿಗೌಡರ, ಹನಮಂತ ಪಾಟೀಲ, ರಾಜು ಲೋಕನ್ನವರ, ಮಹಾದೇವ ಕರಿಗಾರ, ಚನ್ನಪ್ಪ ಲೋಕನ್ನವರ, ಮಲ್ಲಪ್ಪ ಪೂಜಾರಿ ಸೇರಿದಂತೆ ಅನೇಕರು ಇದ್ದರು.