Advertisement

ಭೂ ಕಬಳಿಕೆದಾರರ ವಿರುದ ಕ್ರಮಕ್ಕೆ ಆಗ್ರಹ

05:50 PM Sep 17, 2022 | Team Udayavani |

ಬಂಗಾರಪೇಟೆ: ಗಡಿಭಾಗದ ಗ್ರಾಮೀಣ ಪ್ರದೇಶದ ಭೂ ರಹಿತ ಹಾಗೂ ಜಾನುವಾರುಗಳಿಗೆ ಮೀಸಲಿಡಬೇಕಾದ ಸರ್ಕಾರಿ ಗೋಮಾಳ ಜಮೀನು ಕಂದಾಯ ಅಧಿಕಾರಿಗಳ ನಿರ್ಲಕ್ಷ್ಯದಿಂದ ಪ್ರಭಾವಿ ರಾಜಕಾರಣಿಗಳು ಅಕ್ರಮವಾಗಿ ನೂರಾರು ಎಕರೆ ಒತ್ತುವರಿ ಮಾಡಿಕೊಂಡಿರುವವರ ವಿರುದ್ಧ ದಾಖಲೆ ಸಮೇತ ದೂರು ನೀಡಿದರೂ ಅಧಿಕಾರಿಗಳು ಯಾವುದೇ ಕ್ರಮಕೈಗೊಂಡಿಲ್ಲ ಎಂದು ರಾಜ್ಯ ರೈತ ಸಂಘದ ಉಪಾಧ್ಯಕ್ಷ ಕೆ.ನಾರಾಯಣಗೌಡ ಆರೋಪಿಸಿದರು.

Advertisement

ತಾಲೂಕಿನ ತೊಪ್ಪನಹಳ್ಳಿಯಿಂದ ಕಾಮಸಮುದ್ರದವರೆಗೆ ಬೈಕ್‌ರ್ಯಾಲಿ ನಡೆಸಿ, ರಾಜಸ್ವ ನಿರೀಕ್ಷಕ ಸುರೇಶ್‌ ಅವರಿಗೆ ಮನವಿ ನೀಡಿ ಮಾತನಾಡಿದರು. ಹತ್ತಾರು ವರ್ಷಗಳಿಂದ ಗಡಿಭಾಗದ ಜೀವ ಹಿಂಡುತ್ತಿರುವ ಕಾಡಾನೆಗಳ ಹಾವಳಿಗೆ ಶಾಶ್ವತ ಪರಿಹಾರ ಕೊಡಿಸುವಲ್ಲಿ ಅರಣ್ಯ ಇಲಾಖೆ ವಿಫ‌ಲವಾಗಿದೆ. ನೆಪ ಮಾತ್ರಕ್ಕೆ ಕೋಟ್ಯಾಂತರ ರೂ. ವೆಚ್ಚದಲ್ಲಿಅಳವಡಿಸಿರುವ ಸೋಲಾರ್‌ ಪೆನ್ಸಿಂಗ್‌ ಸಮರ್ಪಕವಾಗಿ ನಿರ್ವಹಣೆ ಮಾಡುವಲ್ಲಿ ಅಧಿಕಾರಿಗಳು ವಿಫ‌ಲವಾಗಿದ್ದಾರೆ ಎಂದು ಅಸಮಧಾನ ವ್ಯಕ್ತಪಡಿಸಿದರು.

ಕಾಡಾನೆ ಹಾವಳಿಗೆ ಪರಿಹಾರ ಅಗತ್ಯ: ಕಾಡಾನೆಗಳ ಹಾವಳಿಯಿಂದ ರಾತ್ರಿ ಹಗಲು ಕಣ್ಣಿಗೆ ನಿದ್ದೆ ಇಲ್ಲದೆ ರಕ್ಷಣೆ ಮಾಡಿದ ಬೆಳೆ ಕಣ್ಣ ಮುಂದೆಯೇ ಕಾಡಾನೆಗಳ ದಾಳಿಯಿಂದ ನಾಶವಾಗಿ ಕಣ್ಣೀರಿನಿಂದ ರೈತರು ಗೋಳಾಡುತ್ತಿದ್ದರೂ ಮನಸ್ಸು ಕರಗದ ಅಧಿಕಾರಿಗಳ ಧೋರಣೆಗೆ ರೈತರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಗಡಿಭಾಗಗಳಲ್ಲಿ ಹದಗೆಟ್ಟಿರುವ ರಸ್ತೆ, ಸೇತುವೆ ಸರಿಪಡಿಸಿ ಒತ್ತುವರಿಯಾಗಿರುವ ಗೋಮಾಳ ತೆರವುಗೊಳಿಸಿ ಕಾಡಾನೆಗಳ ಹಾವಳಿಗೆ ಶಾಶ್ವತ ಪರಿಹಾರ ಕಲ್ಪಿಸ ಬೇಕೆಂದು ಆಗ್ರಹಿಸಿದರು.

ಕಾಮಸಮುದ್ರ ಹೋಬಳಿ ಅಧ್ಯಕ್ಷ ಮುನಿಕೃಷ್ಣ ಮಾತನಾಡಿ, ಚುನಾವಣೆ ಸಮಯದಲ್ಲಿ ಗಡಿಭಾಗದ ಗ್ರಾಮೀಣ ಪ್ರದೇಶದ ಸಮಸ್ಯೆಗಳು ಜ್ಞಾಪಕಕ್ಕೆ ಬರುವ ಜನಪ್ರತಿನಿಧಿಗಳಿಗೆ ಜ್ವಲಂತ ಸಮಸ್ಯೆಗಳ ಬಗ್ಗೆ ತಿಳಿವಳಿಗೆ ಇಲ್ಲದ ಹಳ್ಳಿಗಳ ಗಂಜಲ, ಸಗಣಿ, ವಾಸನೆ ಗೊತ್ತಿಲ್ಲದ ಜನಪ್ರತಿನಿಧಿಗಳಿಗೆ ಗಡಿ ಭಾಗದ ಜನ ಮೂಲ ಸೌಕರ್ಯಗಳಿಂದ ವಂಚಿತರಾಗಿ ಕುಗ್ರಾಮಗಳಾಗಿ ಮಾರ್ಪಡುತ್ತಿ ರುವುದಕ್ಕೆ ಜನಪ್ರತಿನಿಧಿಗಳ ನಿರ್ಲಕ್ಷ್ಯವೇ ಕಾರಣವಾಗುತ್ತಿದೆ ಎಂದು ಅವ್ಯವಸ್ಥೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಹೋರಾಟದಲ್ಲಿ ರೈತ ಸಂಘದ ಜಿಲ್ಲಾಧ್ಯಕ್ಷ ಈಕಂಬಳ್ಳಿ ಮಂಜುನಾಥ್‌, ಮಹಿಳಾ ಜಿಲ್ಲಾಧ್ಯಕ್ಷೆ ಎ.ನಳಿನಿಗೌಡ, ಬೂದಿಕೋಟೆಹೋಬಳಿ ಅಧ್ಯಕ್ಷ ನಾಗಯ್ಯ, ವಿಶ್ವ, ನಾರಾಯಣಸ್ವಾಮಿ, ಗುರುಮೂರ್ತಿರೆಡ್ಡಿ, ಪ್ರಶಾಂತರೆಡ್ಡಿ, ಶ್ರೀನಿವಾಸರೆಡ್ಡಿ, ಸುರೇಶಬಾಬು, ಮುನಿರಾಜು, ಮಾಲೂರು ಯಲ್ಲಣ್ಣ, ಹರೀಶ್‌, ಕದಿರಿನತ್ತ ಅಪ್ಪೋಜಿರಾವ್‌, ಲಕ್ಷ್ಮಣ್‌, ಗೋವಿಂದಪ್ಪ, ಸಂದೀಪರೆಡ್ಡಿ, ಯಲುವಳ್ಳಿ ಪ್ರಭಾಕರ್‌, ಹೆಬ್ಬಣಿ ಆನಂದರೆಡ್ಡಿ, ಆಂಜಿನಪ್ಪ, ಕೋಟೆ ಶ್ರೀನಿವಾಸ್‌, ವಕ್ಕಲೇರಿ ಹನುಮಯ್ಯ ಇತರರಿದ್ದರು.

Advertisement

ಗಡಿಭಾಗದ ರಸ್ತೆಗಳ ಅವ್ಯವಸ್ಥೆ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳ ಜೊತೆ ಚರ್ಚೆ ಮಾಡಿ ಸಮಸ್ಯೆ ಬಗೆಹರಿಸುವ ಜೊತೆಗೆ ಒತ್ತುವರಿ, ಕಾಡಾನೆಗಳ ಸಮಸ್ಯೆ ಬಗ್ಗೆ ಜಿಲ್ಲಾಧಿಕಾರಿಗಳ ಗಮನಕ್ಕೆ ತಂದು ಸಮಸ್ಯೆಗೆ ಸೂಕ್ತ ಪರಿಹಾರ ಕಂಡುಕೊಳ್ಳಲಾಗುವುದು. -ಸುರೇಶ್‌, ರಾಜಸ್ವ ನಿರೀಕ್ಷಕ

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next