ಮೈಸೂರು: ಡಬ್ಲ್ಯೂಟಿಒ ವಿಶ್ವ ವಾಣಿಜ್ಯ ವ್ಯಾಪಾರ ಒಪ್ಪಂದ ರದ್ದು ಗೊಳಿಸುವಂತೆ ಒತ್ತಾಯಿಸಿ ರಾಜ್ಯ ರೈತ ಸಂಘಟನೆಗಳ ಒಕ್ಕೂಟದ ವತಿಯಿಂದ ಭಾನುವಾರ ಪ್ರತಿಭಟನೆ ನಡೆಯಿತು.
ನಗರದ ಕುವೆಂಪು ಉದ್ಯಾನದಲ್ಲಿ ಒಕ್ಕೂಟದ ಅಧ್ಯಕ್ಷ ಕುರುಬೂರು ಶಾಂತ ಕುಮಾರ್ ನೇತೃತ್ವದಲ್ಲಿ ಜಮಾವಣೆಗೊಂಡ ಪ್ರತಿಭಟನಾಕಾರರು, ಕೇಂದ್ರ ಸರ್ಕಾರದ ವಿರುದ್ಧ ಧಿಕ್ಕಾರ ಕೂಗಿ ಪ್ರತಿಭಟನೆ ನಡೆಸಿದರು.
ಜಿನಿವಾದಲ್ಲಿ ಇಂದಿನಿಂದ ನಡೆಯಲಿರುವ 180 ರಾಷ್ಟ್ರಗಳ ವಿಶ್ವ ವಾಣಿಜ್ಯ ವ್ಯಾಪಾರ ಒಪ್ಪಂದ ರದ್ದುಗೊಳಿ ಸಲು ಕೇಂದ್ರ ಸರ್ಕಾರ ಮುಂದಾಗಬೇಕು. ಕಳೆದ 25 ವರ್ಷಗಳ ಹಿಂದೆ ಡಬ್ಲ್ಯುಟಿಒ ಒಪ್ಪಂದಕ್ಕೆ ಸಹಿ ಹಾಕಿದ ಕಾರಣ ದೇಶದ ರೈತರು ಆತ್ಮಹತ್ಯೆ ಹಾದಿ ಹಿಡಿಯುವಂತೆ ಆಯಿತು ಎಂದು ಆರೋಪಿಸಿದರು.
4 ಲಕ್ಷಕ್ಕೂ ಹೆಚ್ಚು ರೈತರು ಆತ್ಮಹತ್ಯೆಗೆ ಶರಣಾಗಿದ್ದಾರೆ. ಬಹುರಾಷ್ಟ್ರೀಯ ಕಂಪನಿಗಳು ರೈತರನ್ನು ಬಗ್ಗುಬಡಿಯಲು ವಾಮಮಾರ್ಗ ಬಳಸುತ್ತಿದ್ದಾರೆ. ಬಡ ರೈತರು ಕೃಷಿಯಿಂದ ಹೊರಗೆ ಹೋಗುತ್ತಿದ್ದಾರೆ. ಕೃಷಿ ಭೂಮಿಯ ಫಲವತ್ತತೆ ನಾಶವಾಗುತ್ತಿದೆ. ಪರಿಸರ ಸಂಪತ್ತು ಹಾಳಾಗುತ್ತಿದೆ. ಮುಂದುವರಿದ ರಾಷ್ಟ್ರಗಳು ಕಡಿಮೆ ಬೆಲೆಗೆ ಕೃಷಿ ಉತ್ಪನ್ನಗಳನ್ನು ಭಾರತ ದೇಶಕ್ಕೆ ರವಾನೆ ಮಾಡುತ್ತಿರುವುದರಿಂದ ನಮ್ಮ ದೇಶದ ಕೃಷಿ ಉತ್ಪನ್ನಗಳ ಬೆಲೆಗಳು ಕುಸಿಯುತ್ತಿವೆ ಎಂದು ದೂರಿದರು.
ದೇಶದ ಕೃಷಿಕರನ್ನು ಉಳಿಸಬೇಕಾದರೆ ಜಿನಿವಾದಲ್ಲಿ ನಡೆಯಲಿರುವ ಸಭೆಯಲ್ಲಿ ಡಬ್ಲ್ಯೂಟಿಒ ಒಪ್ಪಂದ ರದ್ದು ಗೊಳಿಸಬೇಕೆಂದು ಕೇಂದ್ರ ಸರ್ಕಾರ ಒತ್ತಾಯಿಸಬೇಕು ಒತ್ತಾಯಿ ಸಿದರು. ಪ್ರತಿಭಟನೆಯಲ್ಲಿ ಹತ್ತಾರು ರೈತ ಮುಖಂಡರು ಭಾಗವಹಿಸಿದ್ದರು.