ಹುಬ್ಬಳ್ಳಿ: ಅಮರಗೋಳದ ಎಪಿಎಂಸಿಯಲ್ಲಿ ಈರುಳ್ಳಿ ಬೆಲೆ ಕುಸಿದಿದೆ ಎಂದು ಆರೋಪಿಸಿದ ರೈತರು ಮಂಗಳವಾರವೂ ರಸ್ತೆತಡೆ ನಡೆಸಿದರು.
ಅಮರಗೋಳದ ಎಪಿಎಂಸಿಯಲ್ಲಿ ಸೋಮವಾರ ರಸ್ತೆತಡೆ ನಡೆಸುತ್ತಿದ್ದ ರೈತರನ್ನು ಸಮಾಧಾನ ಪಡಿಸಿ ಸಭೆ ನಡೆಸಿ ಟೆಂಡರ್ ಆರಂಭಿಸಲಾಗಿತ್ತು. ಆದರೆ ಮಂಗಳವಾರ ಈರುಳ್ಳಿಗೆ ಗುಣಮಟ್ಟಕ್ಕೆ ತಕ್ಕಂತೆ ಬೆಲೆ ನೀಡುತ್ತಿಲ್ಲವೆಂದು ಆರೋಪಿಸಿದ ರೈತರು ಟೆಂಡರ್ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳದೇ ರಸ್ತೆ ಬಂದ್ ಮಾಡಿದರು. ಬ್ಯಾರಿಕೇಡ್ ರಸ್ತೆಗೆ ಅಡ್ಡವಾಗಿಟ್ಟು ಪ್ರತಿಭಟನೆ ನಡೆಸಿದರು. ಇದರಿಂದ ಕೆಲ ಹೊತ್ತು ರಸ್ತೆ ಸಂಚಾರ ಅಸ್ತವ್ಯಸ್ತಗೊಂಡಿತು. ರೈತರು ನಿನ್ನೆ ಟೆಂಡರ್ ಆದ ಈರುಳ್ಳಿ ಸಾಗಾಣಿಕೆಗೂ ವಿರೋಧ ವ್ಯಕ್ತಪಡಿಸಿ ಸಾಗಣೆ ಮಾಡುವ ಟ್ರಕ್‌ಗಳನ್ನು ನಿಲ್ಲಿಸಿ ಆಕ್ರೋಶ ವ್ಯಕ್ತಪಡಿಸಿದರು.
ಮಾಜಿ ಶಾಸಕ ಎನ್.ಎಚ್.ಕೋನರೆಡ್ಡಿ ಪ್ರತಿಭಟನೆಗೆ ಬೆಂಬಲಿಸಿದರು. ಎಪಿಎಂಸಿ ಮಾಜಿ ಅಧ್ಯಕ್ಷ ಬಸವರಾಜ ಕಿತ್ತೂರ ಕೂಡ ರಸ್ತೆ ತಡೆಯಲ್ಲಿ ಪಾಲ್ಗೊಂಡರು. ರೈತರಿಗೆ ನಿರಂತರ ಅನ್ಯಾಯವಾಗುತ್ತಿದ್ದು, ಎಪಿಎಂಸಿಯಲ್ಲಿ ರೈತರ ಉತ್ಪನ್ನಗಳಿಗೆ ಯೋಗ್ಯ ಬೆಲೆ ಸಿಗುವಂತೆ ಅಗತ್ಯ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು. ನಂತರ ರೈತರ ಮನವೊಲಿಸಿ ರಸ್ತೆ ಬಂದ್ ತೆರವುಗೊಳಿಸಿ ಎಪಿಎಂಸಿ ಕಚೇರಿ ಸಭಾಂಗಣದಲ್ಲಿ ರೈತರೊಂದಿಗೆ ಸಭೆ ನಡೆಸಲಾಯಿತು. ಸಭೆಯಲ್ಲಿ ಈರುಳ್ಳಿ ವ್ಯಾಪಾರಿಗಳು ಕೂಡ ಪಾಲ್ಗೊಂಡರು.
ಸಭೆಯಲ್ಲಿ ಮಾತನಾಡಿದ ಕೋನರೆಡ್ಡಿ, ಏಕಾಏಕಿ ಈರುಳ್ಳಿ ದರ ಕಡಿಮೆ ಮಾಡಿದರೆ ರೈತರು ಹೇಗೆ ಬದುಕಬೇಕು. ಮಾರ್ಕೆಟ್‌ನಲ್ಲಿ ಈರುಳ್ಳಿಗೆ ಕೆಜಿಗೆ 50ರೂ. ಇಲ್ಲಿ ಕ್ವಿಂಟಲ್‌ಗೆ 500ರೂ. ಇಷ್ಟು ವ್ಯತ್ಯಾಸವಾದರೆ ಹೇಗೆ? ನಮ್ಮ ರೈತರು ಸಂಕಷ್ಟದಲ್ಲಿದ್ದಾರೆ. ರೈತರ ಹಿತ ಕಾಯುವ ಉದ್ದೇಶ ಇರಬೇಕು. ಬೇರೆ ಮಾರುಕಟ್ಟೆಗಳಲ್ಲಿ ಸೋಮವಾರ ಕನಿಷ್ಟ 3000ರೂ. ಟೆಂಡರ್ ಆಗಿದೆ. ಗರಿಷ್ಠ 5000ರೂ. ವರೆಗೆ ಆಗಿದೆ. ಹುಬ್ಬಳ್ಳಿಯಲ್ಲಿ ಕನಿಷ್ಟ 500 ರೂ. ಗರಿಷ್ಠ 4800ರೂ. ಆಗಿದೆ. ಬೇರೆ ಮಾರುಕಟ್ಟೆಗಳಲ್ಲಿ ಮತ್ತು ಇಲ್ಲಿ ವ್ಯತ್ಯಾಸ ಯಾಕೆ ಎಂದು ಪ್ರಶ್ನಿಸಿದರು. ರಫ್ತು ನಿಷೇಧ ಮಾಡಲಾಗಿದೆ. ಇಂಥ ಸಂದರ್ಭದಲ್ಲಿ ರೈತರು ಏನು ಮಾಡಬೇಕು. ಎಪಿಎಂಸಿ ಸದಸ್ಯರು, ವ್ಯಾಪಾರಸ್ಥರು ಹಾಗೂ ರೈತರಿಗೆ ಎಲ್ಲರಿಗೂ ಒಳಿತಾಗಬೇಕು ಎಂದರು. ಕನಿಷ್ಟ ಕ್ವಿಂಟಲ್‌ಗೆ 1000ರೂ. ನಿಗದಿ ಮಾಡಿ ಎಂದು ಒತ್ತಾಯಿಸಿದರು.
ವ್ಯಾಪಾರಸ್ಥರ ಪ್ರತಿನಿಧಿಗಳು ಮಾತನಾಡಿ, ಗುಣಮಟ್ಟದ ಗಡ್ಡಿಗೆ ದರವಿದೆ. ಒಳ್ಳೆ ಮಾಲಿಗೆ 1500 ರೂ. 1600ರೂ. ಆಗೇ ಆಗುತ್ತದೆ. 4000ರೂ. 4500ರೂ. ಮಾರಾಟವಾಗುತ್ತದೆ. ವ್ಯಾಪಾರ ಇವತ್ತೇ ಮುಗಿಸಿ, ಟೆಂಡರ್ ಮುಂದುವರಿಯಲು ಸಹಕಾರ ನೀಡಿ ಎಂದರು.
ಉಪವಿಭಾಗಾಧಿಕಾರಿ ಮೊಹಮ್ಮದ್ ಜುಬೇರ್ ಮಾತನಾಡಿ, ಈ ರೀತಿ ಆಗಬಾರದು, ಎಪಿಎಂಸಿ ಇರೋದೆ ರೈತರಿಗಾಗಿ. ರೈತರ ಉತ್ಪನ್ನಗಳಿಗೆ ಯೋಗ್ಯ ಬೆಲೆ ಸಿಗಬೇಕು. ರೈತರ ಸ್ಥಿತಿ ಕಷ್ಟದಲ್ಲಿದೆ. ನಿರಂತರ ಬರಗಾಲ ನಂತರ ಈ ಬಾರಿ ನೆರೆಪ್ರವಾಹದಿಂದ ತೊಂದರೆಯಾಗಿದೆ. ಸರಕಾರ ರೈತರ ಪರ ಇದ್ದು, ವ್ಯಾಪಾರಿಗಳು ಯೋಗ್ಯ ಬೆಲೆ ನೀಡಬೇಕು ಎಂದರು.