Advertisement

ಜನ ವಿರೋಧಿ ಕಾಯ್ದೆ ಹಿಂಪಡೆಯಲು ಆಗ್ರಹ

07:50 PM Nov 06, 2020 | Suhan S |

ದಾವಣಗೆರೆ: ಕೇಂದ್ರ ಸರಕಾರದ ರೈತ, ಕಾರ್ಮಿಕ, ಜನವಿರೋಧಿ ನೀತಿಗಳನ್ನು ಖಂಡಿಸಿ ಅಖೀಲ ಭಾರತ ರೈತ ಸಂಘರ್ಷ ಸಮನ್ವಯ ಸಮಿತಿ ವತಿಯಿಂದ ಕೆಲ ಕಾಲ ರಾಷ್ಟ್ರೀಯ ಹೆದ್ದಾರಿ ತಡೆ ನಡೆಸಲಾಯಿತು.

Advertisement

ಗುರುವಾರ ಜಿಲ್ಲಾ ಪಂಚಾಯತಿ ಮುಂಭಾಗದಲ್ಲಿನ ಜೆ.ಎಚ್‌. ಪಟೇಲ್‌ ಪ್ರತಿಮೆಗೆ ಮಾಲಾರ್ಪಣೆ ಮಾಡಿದ ಬಳಿಕ ಕೆಲ ಹೊತ್ತು ರಾಷ್ಟ್ರೀಯ ಹೆದ್ದಾರಿ ತಡೆ ನಡೆಸಿ ಜನ ವಿರೋಧಿ ಕಾಯ್ದೆಗಳನ್ನು ಹಿಂಪಡೆಯುವಂತೆ ರಾಜ್ಯ ಮತ್ತು ಕೇಂದ್ರ ಸರ್ಕಾರಗಳನ್ನು ಆಗ್ರಹಿಸಲಾಯಿತು.

ಈ ವೇಳೆ ಮಾತನಾಡಿದ ಎಐಕೆಎಸ್‌ ಜಿಲ್ಲಾಧ್ಯಕ್ಷ ಆವರಗೆರೆ ಎಚ್‌.ಜಿ. ಉಮೇಶ್‌, ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಆಳುವಿಕೆಯ ನೇತಾರರಾದ ಮೋದಿಜೀ ಹಾಗೂ ಯಡಿಯೂರಪ್ಪ ಇವರು ಸರ್ಕಾರದ ಲಾಭದಾಯಕ ಅಂಗ ಸಂಸ್ಥೆಗಳನ್ನು ನಿರ್ವಹಣೆ ಮಾಡದ ಹೇಡಿಗಳಾಗಿದ್ದಾರೆ. ಸರ್ಕಾರದ ಬೊಕ್ಕಸಕ್ಕೆ ಹಣಕಾಸಿನ ಲಾಭವಾಗಲಿ ಎನ್ನವ ಉದ್ದೇಶದಿಂದ ಹಿಂದಿನ ರಾಜಕೀಯ ಮುತ್ಸದ್ಧಿಗಳು ದೇಶಕ್ಕೆ ಆರ್ಥಿಕತೆ ಒದಗಿಸುವ ಉದ್ದಿಮೆಗಳಾದ ಬಿಎಸ್‌ಎನ್‌ಎಲ್‌, ಎಲ್‌ ಐಸಿ, ರೈಲ್ವೆ, ಹಡಗು ಬಂದರು, ಕೇಂದ್ರ ಸರ್ಕಾರ ಸ್ವಾಮ್ಯದ ವಿಮಾನಯಾನ, ಹೆಚ್‌.ಎ.ಎಲ್‌. ವಿದ್ಯುತ್‌ ಪ್ರಸರಣ ನಿಗಮಸೇರಿದಂತೆ ಮುಂತಾದ ಸಂಸ್ಥೆಗಳನ್ನು ಹುಟ್ಟುಹಾಕಿದ್ದರು. ಆದರೆ ಇಂದಿನ ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರಗಳನ್ನು ಆಳುವ ರಾಜಕಾರಣಿಗಳು ಬಹುರಾಷ್ಟ್ರೀಯ ಕಂಪನಿಗಳಿಗೆ ಏಜೆಂಟ್‌ಗಿರಿ ನೇತೃತ್ವ ವಹಿಸಿ ಈ ಸಂಸ್ಥೆಗಳನ್ನು ಖಾಸಗಿಯವರಿಗೆ ಮಾರಾಟ ಮಾಡಿ ದೇಶವನ್ನು ಆರ್ಥಿಕ ದಿವಾಳಿಯತ್ತ ಕೊಂಡೊಯ್ಯತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತ ಪಡಿಸಿದರು.

ಕಬ್ಬು ಬೆಳೆಗಾರರ ಸಂಘದ ಮುಖಂಡ, ಜಿಪಂ ಸದಸ್ಯ ತೇಜಸ್ವಿ ಪಟೇಲ್‌ ಮಾತನಾಡಿ,  ಸರಕಾರದ ಸಹಭಾಗಿತ್ವದ ಸಂಸ್ಥೆಗಳನ್ನು ಸಮಗ್ರವಾಗಿ ನಡೆಸಿಕೊಂಡು ಹೋಗಲಾರದೆ ಖಾಸಗಿಯವರ ಜೇಬು ತುಂಬಿಸುವ ಹಲವಾರು ಯೋಜನೆಗಳನ್ನು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಜಾರಿ ಮಾಡುತ್ತಿವೆ. ಚುನಾವಣೆ ಪ್ರನಾಳಿಕೆಯ ಯಾವೊಂದು ಹೇಳಿಕೆಗಳನ್ನು ಜಾರಿಗೆ ತಂದಿಲ್ಲ ಎಂದರು.

ಮತ್ತೂಬ್ಬ ರೈತ ಮುಖಂಡ ಹೊನ್ನೂರು ಮುನಿಯಪ್ಪ ಮಾತನಾಡಿ, ಈ ದೇಶದ ರೈತರ ಬೆಳೆದ ಬೆಳೆಗೆ ಕನಿಷ್ಠ ಬೆಂಬಲ ಬೆಲೆ ಕೊಡುವ ಜೊತೆಗೆ ರೈತರು ಮತ್ತು ಕೂಲಿಕಾರರ ಬದುಕನ್ನು ಹಸನು ಮಾಡುತ್ತೇನೆ ಎಂದು ಭರವಸೆ ನೀಡಿದ ಮೋದಿ, ಯಡಿಯೂರಪ್ಪನವರು ಇಂದು ರೈತ ಮತ್ತು ಕಾರ್ಮಿಕರ ಬೆನ್ನು ಮೂಳೆಯನ್ನು ಮುರಿದು ಅವರು ತಮ್ಮ ಆಡಳಿತಕ್ಕೆ ಊರುಗೋಲನ್ನಾಗಿ ಮಾಡಿಕೊಂಡಿದ್ದಾರೆ ಎಂದು ದೂರಿದರು. ರೈತ ಮುಖಂಡ ಹುಚ್ಚವ್ವನಹಳ್ಳಿ ಮಂಜುನಾಥ್‌ ಮಾತನಾಡಿ, ಕಾಯ್ದೆಗಳನ್ನು ಜಾರಿಗೆ ಮಾಡಿರುವರು, ರೈತರಿಗೆ ಮತ್ತು ಕಾರ್ಮಿಕರಿಗೆ ಅದರಿಂದಾಗುವ ಅನುಕೂಲ ಮತ್ತು ಅನಾನುಕೂಲಗಳ ಬಗ್ಗೆ ಸ್ಪಷ್ಟಪಡಿಸಬೇಕು ಎಂದು ಒತ್ತಾಯಿಸಿದರು.

Advertisement

ಬಲ್ಲೂರು ರವಿಕುಮಾರ್‌, ನಿಟುವಳ್ಳಿ ಅಂಜಿನಪ್ಪ, ಐರಣಿ ಚಂದ್ರು, ಕೆ. ಬಾನಪ್ಪ ಅವರಗೆರೆ, ಹನುಮಂತಪ್ಪ.ಕೆ.ಎಚ್‌., ಸಿದ್ದೇಶ್‌ ಆನೆಕಲ್ಲು, ಪ್ರಸಾದ್‌, ಮಲ್ಲಶೆಟ್ಟಹಳ್ಳಿ ಚನ್ನಬಸಪ್ಪ, ಶೇಖರ ನಾಯ್ಕ, ತಿಪ್ಪೇಸ್ವಾಮಿ, ಅನಿಲ್‌ಕುಮಾರ್‌, ಶಿವಕುಮಾರ್‌, ಚಂದ್ರು, ಹನುಮಂತಪ್ಪ, ಭೀಮಾ ರೆಡ್ಡಿ, ಬಸವರಾಜ ರಾಮಪುರ ಮಾತನಾಡಿದರು. ರೈತ ಮತ್ತು ಕಾರ್ಮಿಕ ಮುಖಂಡರು ಹೆದ್ದಾರಿ ತಡೆಯಲ್ಲಿ ಪಾಲ್ಗೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next