Advertisement

ಹೆಸರು ಖರೀದಿಗೆ ಒತ್ತಾಯಿಸಿ ಪ್ರತಿಭಟನೆ

05:12 PM Sep 01, 2020 | Suhan S |

ನರೇಗಲ್ಲ: ಬೆಳೆವಿಮೆ ಕಂಪನಿಗಳು ನಿಯಮಗಾಳಿಗೆ ತೂರಿ ಬೇಜವಾಬ್ದಾರಿಯಿಂದ ವರ್ತಿಸಿವೆ ಎಂದು ಆರೋಪಿಸಿ ಹಾಗೂ ಬೆಂಬಲ ಬೆಲೆ ಯೋಜನೆಯಡಿ ಹೆಸರು ಬೆಳೆ ಖರೀದಿ ಕೇಂದ್ರ ಸ್ಥಾಪಿಸುವಂತೆ ಆಗ್ರಹಿಸಿ ರೈತ ಸೇನಾ ಕಾರ್ಯಕರ್ತರು ಸೋಮವಾರ ಪಟ್ಟಣದ ರೈತ ಸಂಪರ್ಕ ಕೇಂದ್ರದ ಎದುರು ಪ್ರತಿಭಟನೆ ನಡೆಸಿ, ಮನವಿ ಸಲ್ಲಿಸಿದರು.

Advertisement

ಈ ವೇಳೆ ರೈತ ಸೇನಾ ಮುಖಂಡ ಶರಣಪ್ಪ ಧರ್ಮಾಯತ ಮಾತನಾಡಿ, 2017-18 ಹಾಗೂ 2019-20ನೇ ಸಾಲಿನ ಮುಂಗಾರು ಹಂಗಾಮಿನ ಬೆಳೆವಿಮೆ ಜಮೆಯಾಗಿಲ್ಲ. ಬೆಳೆವಿಮೆಯಲ್ಲಿ ರೈತರ ವಂತಿಕೆಯನ್ನು ಖಾಸಗಿ ವಿಮಾ ಕಂಪನಿಗಳು ಪಡೆದುಕೊಳ್ಳುತ್ತವೆ. ಆದರೆ ಬೆಳೆವಿಮೆ ಯೋಜನೆಯಲ್ಲಿ ರೈತರು ಭಾಗವಹಿಸುವಂತೆ ಕೃಷಿ ಇಲಾಖೆ ಪ್ರಚಾರ ಕೈಗೊಳ್ಳುತ್ತದೆ. ಆದ್ದರಿಂದ ಕೂಡಲೇ ಕೃಷಿ ಇಲಾಖೆ ಮಧ್ಯಸ್ಥಿಕೆ ವಹಿಸಿ ಸಕಾಲದಲ್ಲಿ ವಿಮೆ ಮೊತ್ತ ರೈತರ ಕೈ ಸೇರುವಂತೆ ಮಾಡಬೇಕು ಎಂದು ಒತ್ತಾಯಿಸಿದರು.

ರೈತ ಚಂದ್ರು ಹೊನವಾಡ ಮಾತನಾಡಿ, ಪ್ರಸಕ್ತ ಸಾಲಿನ ಮುಂಗಾರಿನಲ್ಲಿ ಇಲಿ, ಮಿಡತೆ ಹಾಗೂ ಜಿಂಕೆ ಹಾವಳಿಯಿಂದ ಅಲ್ಪಸ್ವಲ್ಪ ಹೆಸರು ಬೆಳೆ ಕೈ ಸೇರಿದ್ದು, ಮಾರುಕಟ್ಟೆಯಲ್ಲಿ ದರ ಕುಸಿತ ಕಂಡಿದೆ. ಆದ್ದರಿಂದ, ಕೇಂದ್ರ ಸರ್ಕಾರದ ಬೆಂಬಲ ಬೆಲೆ ಯೋಜನೆಯಡಿ ಖರೀದಿ ಕೇಂದ್ರ ಸ್ಥಾಪಿಸಬೇಕು. ಬೆಳೆವಿಮೆ, ಹೆಸರು ಖರೀದಿ ಕೇಂದ್ರ ಸ್ಥಾಪನೆಗೆ 15 ದಿನಗಳಲ್ಲಿ ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದರೆ ಉಪವಾಸ ಸತ್ಯಾಗ್ರಹಕ್ಕೆ ರೈತ ಸೇನೆ ಮುಂದಾಗಲಿದೆ ಎಂದು ಎಚ್ಚರಿಸಿದರು. ಮನವಿ ಸ್ವೀಕರಿಸಿ ಮಾತನಾಡಿದ ರೈತ ಸಂಪರ್ಕ ಕೇಂದ್ರದ ಕೃಷಿ ಅಧಿಕಾರಿ ವೀರಣ್ಣ ಗಡಾದ, ಇನ್ನೊಂದು ತಿಂಗಳು ಅಥವಾ ಎರಡು ತಿಂಗಳಲ್ಲಿ ವಿಮೆ ಜಮೆಯಾಗಲಿದೆ. ಜಮೆಯಾಗದ ರೈತರ ಯಾದಿ ನೀಡಿದಲ್ಲಿ ಪರಿಶೀಲನೆ ಕೈಗೊಳ್ಳಲಾಗುವುದು ಎಂದರು.

ರೈತಸೇನಾ ಅಧ್ಯಕ್ಷ ಆನಂದ ಕೋಟಗಿ, ವೀರಪ್ಪ ಹತ್ತಿಕಟಗಿ, ಕಳಕಪ್ಪ ಮುಗಳಿ, ವೀರೇಶ ಹಿರೇಮಠ, ಹಾಲಪ್ಪ ಹಲಗೇರಿ, ಕಲ್ಲಪ್ಪ ಗೊಸಗೊಂಡ, ಮೂಯುದ್ದೀನ್‌ ಬಾಳಿಕಾಯಿ, ರೆಹಮಾನಸಾಬ್‌ ಬಾಳಿಕಾಯಿ, ಗಂಗಯ್ಯ ಹಿರೇಮಠ, ಶಶಿಧರ ಓದಿಸೋಮಠ, ಸಂಗಯ್ಯ ಶಾಂತಯ್ಯನಮಠ ಸೇರಿದಂತೆ ಇತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next