Advertisement

ಬೆನಕೊಟಗಿ ರೈತರ ಗೋಳು ಕೇಳ್ಳೋರ್ಯಾರು?

12:45 PM Dec 07, 2021 | Shwetha M |

ಸಿಂದಗಿ: ಮೂಲ ನಾಲಾದ ಬದುವಿನಲ್ಲಿ ಬಸಿಗಾಲುವೆ ಕಾಮಗಾರಿ ಕೈಗೊಳ್ಳದೆ ಅವೈಜ್ಞಾನಿಕವಾಗಿ ಬೇರೆ ಕಡೆಗೆ ನಾಲಾವನ್ನು (ಡ್ರೈನೇಜ್‌ ಕಾಮಗಾರಿ) ಅಗೆಯುವ ಮೂಲಕ ನಮಗೆ ಅನ್ಯಾಯವಾಗಿದೆ. ನಮ್ಮ ಗೋಳು ಕೇಳುವವರು ಯಾರೂ ಇಲ್ಲ ಎಂದು ತಾಲೂಕಿನ ಬೆನಕೊಟಗಿ ಗ್ರಾಮದ ರೈತರು ಆರೋಪಿಸುತ್ತಿದ್ದಾರೆ.

Advertisement

ಸರ್ವೇ ನಂ.119ರ ಮಧ್ಯದಲ್ಲಿ ಇರುವ ಹಳ್ಳಕ್ಕೆ ಬಸಿಗಾವಲು ನಿರ್ಮಿಸಲು ರಾಂಪುರ ಗ್ರಾಪಂ ಮತ್ತು ಸಿಂದಗಿ ತಾಪಂ ಕಚೇರಿಯಿಂದ ಟೆಂಡರ್‌ ಕರೆದು ಅಲ್ಲಿ ಈಗಾಗಲೇ ಚೆಕ್‌ ಡ್ಯಾಂ ನಿರ್ಮಿಸಲಾಗಿದೆ. ಯುಕೆಪಿಯವರು ಈ ಹಳ್ಳಕ್ಕೆ ಬಸಿಗಾವಲು ನೀರು ಹರಿಯುವ ರೀತಿಯಲ್ಲಿ ಕಾಮಗಾರಿ ಮಾಡಿದ್ದರೆ ಈ ಭಾಗದ ಸಾಕಷ್ಟು ರೈತರಿಗೆ ನೀರಾವರಿ ಕಲ್ಪಿಸಿದಂತಾಗುತ್ತಿತ್ತು. ಸಿಂದಗಿ ಸರ್ವೇಯಲ್ಲಿ ಬರುವ ಜಮೀನುಗಳಿಂದ ಹರಿಯುವ ಹೆಚ್ಚುವರಿ ನೀರು ಬೆನಕೋಟಗಿಯ ಸರ್ವೇ ನಂ. 119ರ ಮಧ್ಯದಲ್ಲಿರುವ ಹಳ್ಳದ ಮೂಲಕ ಹರಿದು ಹೋಗುತ್ತಿತ್ತು. ಬಸಿಗಾವಲು ನಿರ್ಮಿಸಲು ಕೊಟ್ಯಂತರ ರೂ. ಅನುದಾನದಲ್ಲಿ 2019-20ನೇ ಸಾಲಿನಲ್ಲಿ ಕೃಷ್ಣಾ ಭಾಗ್ಯ ಜಲ ನಿಗಮದ ನಿಯಮಿತದ ಹೊಲಗಾಲುವೆ ಉಪ ವಿಭಾಗ ನಂ. 16ರ ಸಹಾಯಕ ಕಾರ್ಯಪಾಲಕ ಅಭಿಯಂತರು ತಾಲೂಕಿನ ಬೆನಕೋಟಗಿ ಗ್ರಾಮದ ಸರ್ವೇ ನಂ.119ರ ಬಳಿ ಹೊಲದ ಒಡ್ಡು ಒಡೆದು ಅಲ್ಲಿ ಅವೈಜ್ಞಾನಿಕವಾಗಿ ಬೇರೆ ಕಡೆಗೆ ನಾಲಾವನ್ನು ಅಗೆದು ಕಾಮಗಾರಿ ಮಾಡಿದ್ದಾರೆ. ಈ ಕಾಮಗಾರಿಯೂ ಕಳಪೆಯಿಂದ ಕೂಡಿದ್ದು ಪೈಪುಗಳು ಕಿತ್ತಿ ಹೊರಗೆ ಬಂದಿವೆ ಎಂದು ಗ್ರಾಮದ ರೈತರು ಆರೋಪಿಸಿದ್ದಾರೆ.

ಅವೈಜ್ಞಾನಿಕವಾಗಿ ಬೇರೆ ಕಡೆಗೆ ನಾಲಾವನ್ನು ನಿರ್ಮಾಣ ಮಾಡಿದ್ದು ಯಾವ ರೈತರಿಗೂ ಅನಕೂಲವಾಗುತ್ತಿಲ್ಲ. ಆದ್ದರಿಂದ ಈ ನಾಲಾವನ್ನು ಮುಚ್ಚಿ ಮೂಲ ನಾಲಾವಿರುವ ಹಳ್ಳಕ್ಕೆ ಹೆಚ್ಚುವರಿ ನೀರು ಹರಿ ಬಿಡಬೇಕು ಎಂದು ಕಳೆದ 2 ವರ್ಷಗಳಿಂದ ಜಿಲ್ಲಾಧಿಕಾರಿಗಳಿಗೆ, ತಾಲೂಕು ದಂಡಾಧಿಕಾರಿಗಳಿಗೆ, ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ಕೆಬಿಜೆಎನ್‌ಎಲ್‌ ಆಲಮೇಲ, ಸಹಾಯಕ ಕಾರ್ಯಪಾಲಕ ಅಭಿಯಂತರರು ಹೊಲಗಾಲುವೆ ಉಪ ವಿಭಾಗ ಸಂ.16 ಕೆಬಿಜೆಎನ್‌ ಎಲ್‌ ರಾಂಪುರ ಪಿ.ಎ. ಅವರಿಗೂ ಮೌಖೀಕವಾಗಿ, ಲಿಖೀತವಾಗಿ ಅರ್ಜಿ ಸಲ್ಲಿಸಿದರೂ ಯಾವುದೇ ಪ್ರಯೋಜನವಾಗಿಲ್ಲ. ಅವೈಜ್ಞಾನಿಕವಾಗಿ ನಿರ್ಮಿಸಿದ ನಾಲಾದಲ್ಲಿ ಹರಿಯುವ ನೀರು ವ್ಯರ್ಥವಾಗಿ ಬಬಲೇಶ್ವರ ಕೆರೆಗೆ ಸೇರುತ್ತಿದೆ. ಮೊದಲಿದ್ದ ಸರ್ವೇ ನಂ. 119ರ ಮಧ್ಯದಲ್ಲಿರುವ ಹಳ್ಳದಲ್ಲಿ ನೀರು ಬಿಟ್ಟರೆ ಆ ಭಾಗದಲ್ಲಿ ಅಂತರ್ಜಲ ನಿರ್ಮಾಣವಾಗುತ್ತದೆ. ಅಲ್ಲದೇ ಹಳ್ಳದ ಸುತ್ತಲಿನ ಜಮೀನುಗಳಿಗೆ ನೀರು ಉಪಯುಕ್ತವಾಗುತ್ತದೆ ಎಂಬುದು ಅಲ್ಲಿನ ರೈತರ ವಾದವಾಗಿದೆ.

ನಮಗೆ ಯಾರಿಂದ ನ್ಯಾಯ ಸಿಗುತ್ತಿಲ್ಲ. ನಮಗೆ ಆತ್ಮಹತ್ಯೆ ಮಾಡಿಕೊಳ್ಳುವುದು ಒಂದೇ ದಾರಿಯಾಗಿದೆ ಎಂದು ರೈತರಾದ ನಿಂಗಪ್ಪ ಗುತ್ತರಗಿ, ಗೊಲ್ಲಾಳಪ್ಪ ರುಕುಂಪುರ, ಮಲ್ಲಪ್ಪ ಹೂಗಾರ, ಶರಣಪ್ಪ ರೊಟ್ಟಿ, ಮಲ್ಲಪ್ಪ ವಾಲಿ, ಸಂತೋಷ ಹರನಾಳ, ಸಿದ್ದಯ್ಯ ವಸ್ತ್ರದ, ಕರೆಪ್ಪ ಬೆನಕೋಟಗಿ, ಬಾಬು ಪರೀಟ, ಮಮ್ಮು ಇಂಚಗೇರಿ, ಸಂಗಪ್ಪ ಹೂಗಾರ, ಸಾಬು ಬೆನಕೋಟಗಿ, ನಿಂಗಪ್ಪ ಪರೀಟ, ಭೀಮಣ್ಣ ದೊಡಮನಿ, ತುಕ್ಕಪ್ಪ ಡೊಡಮನಿ, ಅನಿಲ ದೊಡಮನಿ ಸೇರಿದಂತೆ ಸಾಕಷ್ಟು ರೈತರು ತಮ್ಮ ಸಂಕಟವನ್ನು ಪತ್ರಿಕೆಗೆ ತಿಳಿಸಿದ್ದಾರೆ.

ರಮೇಶ ಪೂಜಾರ

Advertisement
Advertisement

Udayavani is now on Telegram. Click here to join our channel and stay updated with the latest news.

Next