ರಾಣಿಬೆನ್ನೂರ: ತಾಲೂಕಿನಾದ್ಯಂತ ಕಳೆದವಾರ ಸುರಿದ ಮಳೆಯಿಂದ ಭೂಮಿ ಹಸಿಯಾಗಿದೆ. ಪ್ರಸ್ತುತ ಕಳೆದ ಮೂರು ದಿನಗಳಿಂದ ಮಳೆ ಬಿಡುವು ನೀಡಿದ ಕಾರಣ ರೈತರು ಜಮೀನು ಹಸನಗೊಳಿಸುವಲ್ಲಿ ಮುಂದಾಗಿದ್ದಾರೆ.
ರೈತರು ವಾರದೊಳಗೆ ಕೃಷಿ ಭೂಮಿಯನ್ನು ಸಂಪೂರ್ಣ ಹಸನುಗೊಳಿಸಿದ ನಂತರ ಮುಂಗಾರು ಹಂಗಾಮು ಆರಂಭವಾಗುತ್ತಿದ್ದಂತೆ ಬಿತ್ತನೆಯ ಚಟುವಟಿಕೆಗಳು ಗರಿಗೆದರಲಿವೆ. ಈಗಾಗಲೆ ರೈತರು ನಗರಕ್ಕೆ ಆಗಮಿಸಿ ಬಿತ್ತನೆಯ ಬೀಜ ಹಾಗೂ ರಸಗೊಬ್ಬರಗಳ ಖರೀದಿಸಲು ಮುಂದಾಗಿದ್ದಾರೆ.
ವಾಡಿಕೆಗಿಂತ ಹೆಚ್ಚು ಮಳೆ: ತಾಲೂಕಿನ ಮೇ ತಿಂಗಳ ವಾಡಿಕೆ ಮಳೆ 88 ಮಿಮೀ ಇದ್ದು, ಮೇ ತಿಂಗಳ ಅಂತ್ಯದವರೆಗೆ 225 ಮಿಮೀ ಮಳೆಯಾಗಿದೆ. ವಾಡಿಕೆಗಿಂತ ಈ ಬಾರಿ 137 ಮಿಮೀ ಹೆಚ್ಚು ಮಳೆಯಾಗಿದೆ. ಈ ಮಳೆಯು ಭೂಮಿಯನ್ನು ಸಿದ್ಧಪಡಿಸಲು ಪೂರಕವಾಗಿದೆ.
ಸಾಗುವಳಿ ಕೃಷಿ ಭೂಮಿ 68900 ಹೆಕ್ಟೇರ್: ತಾಲೂಕಿನಲ್ಲಿ 90475 ಹೆಕ್ಟೇರ್ಗಳಷ್ಟು ಭೌಗೋಳಿಕ ಕ್ಷೇತ್ರ ಹೊಂದಿದ್ದು, ಇದರಲ್ಲಿ 68900 ಹೆಕ್ಟೇರ್ ಸಾಗುವಳಿ ಕ್ಷೇತ್ರ ಇರುತ್ತದೆ. 2021-22ನೇ ಸಾಲಿನ ಮುಂಗಾರು ಹಂಗಾಮಿಗೆ 53930 ಹೆಕ್ಟೇರ್ ಪ್ರದೇಶದಷ್ಟು ಬಿತ್ತನೆಗೆ ಕೃಷಿ ಇಲಾಖೆ ಗುರಿ ನಿಗ ದಿಪಡಿಸಿದೆ. ಇದರಲ್ಲಿ ಪ್ರಮುಖವಾಗಿ ಮೆಕ್ಕಜೋಳ-39000 ಹೆಕ್ಟೇರ್, ಜೋಳ-800 ಹೆಕ್ಟೇರ್, ಭತ್ತ-7600 ಹೆಕ್ಟೇರ್, ಹತ್ತಿ 3500 ಹೆಕ್ಟೇರ್, ತೊಗರಿ, ಹೆಸರು, ಹಲಸಂದಿ, ಶೇಂಗಾ, ಸೂರ್ಯಕಾಂತಿ, ಸೋಯಾಬಿನ್, ಉದ್ದು ಸೇರಿದಂತೆ 830 ಹೆಕ್ಟೇರ್ ಬಿತ್ತನೆಗೆ ಕೃಷಿ ಇಲಾಖೆ ಗುರಿ ಹೊಂದಲಾಗಿದೆ. ಮುಂಗಾರು ಹಂಗಾಮ ಮಳೆ ಸಕಾಲಕ್ಕೆ ಆಗಮಿಸಿದರೆ ಸುಮಾರು 68900 ಹೆಕ್ಟೇರ್ ಭೂಮಿಯಲ್ಲಿ ರೈತರು ಬಿತ್ತನೆಯ ಕಾರ್ಯ ಮುಗಿಸಲಿದ್ದಾರೆ. ಒಂದು ವೇಳೆ ಮುಂಗಾರು ತಡವಾದಲ್ಲಿ ಬಿತ್ತನೆಗೆ ಹಿನ್ನಡೆಯಾಗಲಿದೆ.
Related Articles
9 ಬಿತ್ತನೆ ಬೀಜಗಳ ವಿತರಣಾ ಕೇಂದ್ರ: ತಾಲೂಕಿನಲ್ಲಿ ಬಿತ್ತನೆ ಬೀಜಗಳನ್ನು ವಿತರಿಸುವ ಸಲುವಾಗಿ 9 ಬೀಜ ವಿತರಣಾ ಕೇಂದ್ರ ಸ್ಥಾಪಿಸಲಾಗಿದೆ. ಈ ಬೀಜ ವಿತರಣಾ ಕೇಂದ್ರಗಳಲ್ಲಿ ಬೇಡಿಕೆಗೆ ಅನುಗುಣವಾಗಿ ಬಿತ್ತನೆ ಬೀಜಗಳಾದ ಮೆಕ್ಕೆಜೋಳ, ಭತ್ತ, ಜೋಳ, ತೊಗರಿ, ಹೆಸರು, ಶೇಂಗಾ, ಸೂರ್ಯಕಾಂತಿ, ಸೋಯಾ ಅವರೆ ಬೇಡಿಕೆಗಳಿಗೆ ಅನುಗುಣವಾಗಿ ಬೀಜ ವಿತರಣಾ ಕೇಂದ್ರಗಳಲ್ಲಿ ದಾಸ್ತಾನಿಕರಿಸಲಾಗಿದ್ದು, ಉಳಿದಂತೆ ಪರಿಕರ ಮಾರಾಟಗಾರರಲ್ಲಿ ದಾಸ್ತಾನು ಲಭ್ಯವಿದೆ.
ಯೂರಿಯಾ, ಡಿಎಪಿ, ಎಂಓಪಿ, ಕಾಂಪ್ಲೆಕ್Ò ಗೊಬ್ಬರವನ್ನು ಈಗಾಗಲೇ ಪರಿಕರ ಮಾರಾಟಗಾರರು ಮತ್ತು ಸೊಸೈಟಿಗಳಲ್ಲಿ ದಾಸ್ತಾನಿಕರಿಸಲಾಗಿದೆ. ತಾಲೂಕಿನಲ್ಲಿ ಬೀಜ ಮತ್ತು ರಸಗೊಬ್ಬರದ ಯಾವುದೇ ಕೊರತೆ ಇರುವುದಿಲ್ಲ ಎಂದು ಇಲಾಖೆ ಸ್ಪಷ್ಟಡಿಸಿದೆ.
ರೈತ ಬಾಂಧವರು ಯಾವ ಕಾರಣಕ್ಕೂ ಪ್ಯಾಕೇಟ್ಗಳಲ್ಲದೆ ಬೇರೆ ಯಾವುದೇ ಖುಲ್ಲಾ ಬೀಜಗಳನ್ನು ಬಿತ್ತನೆಗೆ ಉಪಯೋಗಿಸಬಾರದು. ಅಧಿಕೃತ ಕಂಪನಿಗಳ ಪ್ಯಾಕೇಟ್ ಬೀಜಗಳನ್ನು ಉಪಯೋಗಿಸಬೇಕು. ಖರೀದಿಸಿದ ಬೀಜದ ಪ್ಯಾಕೇಟ್ ಹಾಗೂ ಬಿಲ್ ತಮ್ಮ ತಾಬಾದಲ್ಲಿ ಇಟ್ಟುಕೊಳ್ಳಬೇಕು ಎಂದು ತಿಳಿಸಿದ್ದಾರೆ.
ರೈತರು ಯಾವ ಕಾರಣಕ್ಕೂ ಪ್ಯಾಕೇಟ್ಗಳಲ್ಲದೆ ಬೇರೆ ಯಾವುದೇ ಖುಲ್ಲಾ ಬೀಜಗಳನ್ನು ಬಿತ್ತನೆಗೆ ಉಪಯೋಗಿಸಬಾರದು. ಅಧಿಕೃತ ಕಂಪನಿಗಳ ಪ್ಯಾಕೇಟ್ ಬೀಜಗಳನ್ನು ಉಪಯೋಗಿಸಬೇಕು. ಖರೀದಿಸಿದ ಬೀಜದ ಪ್ಯಾಕೇಟ್ ಹಾಗೂ ಬಿಲ್ ತಮ್ಮ ತಾಬಾದಲ್ಲಿ ಇಟ್ಟುಕೊಳ್ಳಬೇಕು. ಕಾರಣ ರೈತರು ಕಡ್ಡಾಯವಾಗಿ ಅಧಿಕೃತ ಕಂಪನಿಯ ಪ್ಯಾಕೇಟ್ ಬೀಜಗಳನ್ನು ಬಿತ್ತನೆಗೆ ಉಪಯೋಗಿಸಬೇಕು. ಇದನ್ನು ಹೊರತುಪಡಿಸಿ ಖುಲ್ಲಾ ಬೀಜಗಳನ್ನು ಬಳಸಬಾರದು. ಎಚ್.ಬಿ. ಗೌಡಪ್ಪಳವರ, ಸಹಾಯಕ ಕೃಷಿ ನಿರ್ದೇಶಕ ರಾಣಿಬೆನ್ನೂರ
–ಮಂಜುನಾಥ ಎಚ್ ಕುಂಬಳುರ