Advertisement

ಹೊಲ ಮಾರಿಯಾದ್ರೂ ಹಣ ಕೊಡ್ತೀದ್ವಿ, ಚಿತ್ರಹಿಂಸೆ ಕೊಟ್ರಾ

02:38 PM Aug 02, 2017 | Team Udayavani |

ಕಲಬುರಗಿ: ಮೈ ಮೇಲೆ ಬಾಸುಂಡೆ ಬರುವ ಹಾಗೆ ಹೊಡೆದಿದ್ದಲ್ಲದೇ ಕಾಲಿನ ಉಗುರು ಕಿತ್ತಿದ್ದಾರೆ. ಸಾಕಷ್ಟು ಚಿತ್ರಹಿಂಸೆ ನೀಡಿದ್ದಾರೆ. ಹೊಲ ಮಾರಿಯಾದರೂ  ಅಪಹರಣಕಾರರಿಗೆ ಹಣ ಕೊಡಲು ಮುಂದಾಗಿದ್ದೆವು. ಈ ಮಾತು ಹೇಳಿದ್ದು, ಅಪಹರಣಕ್ಕೆ ಒಳಗಾಗಿ ಪೊಲೀಸರ
ಕಾರ್ಯಾಚರಣೆ ಮೂಲಕ ಸೋಮವಾರ ಬಿಡುಗಡೆಯಾಗಿ ಬಂದು ಬಸವೇಶ್ವರ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ  ಚಿತ್ತಾಪುರ ತಾಲೂಕಿನ ಸಾವತಖೇಡ ಗ್ರಾಮದ ಶ್ರೀನಾಥ ಮುಚ್ಚಖೇಡ ಹಾಗೂ ಆತನ ಪತ್ನಿ ಮಂಗಳವಾರ ಆರೋಗ್ಯ ವಿಚಾರಿಸಲು ಆಸ್ಪತ್ರೆಗೆ ಬಂದಿದ್ದ ವೈದ್ಯಕೀಯ ಶಿಕ್ಷಣ ಹಾಗೂ ಉಸ್ತುವಾರಿ ಸಚಿವರ ಎದುರು. 

Advertisement

ಬಸನಾಳ ಗ್ರಾಮದಲ್ಲಿ ಪೊಲೀಸರು ಕಾರ್ಯಾಚರಣೆ ಕೈಗೊಂಡು ಫೈರಿಂಗ್‌ ನಡೆಸಿ ಅಪಹರಣಕಾರರಿಂದ ತಮ್ಮನ್ನು ಬಿಡುಗಡೆ ಮಾಡಿಕೊಂಡು ಬಾರದಿದ್ದಲ್ಲಿ ತಮ್ಮ ಜೀವ ಉಳಿಯುತ್ತಿರಲಿಲ್ಲ ಎಂದು ದುಃಖೀಸಿದರು. ಚಿತ್ತಾಪುರ ತಾಲೂಕಿನ ಸಾವತಖೇಡ ಗ್ರಾಮದ 28 ವರ್ಷದ ಶ್ರೀನಾಥ ಮುಚ್ಚಖೇಡ ಎನ್ನುವನನ್ನು ಜು.28 ರಂದು ಬೆಳಗ್ಗೆ ಬಹಿರ್ದೆಸೆಗೆ ಹೋದಾಗ ಬೈಕ್‌ ಹಾಗೂ ಕಾರಿನಲ್ಲಿ ಬಂದ ಎಂಟತ್ತು ಜನ ಅಪಹರಣಕಾರರು ಅಪಹರಿಸಿಕೊಂಡು ಹೋಗಿದ್ದರು. ಶ್ರೀನಾಥನ ಮೊಬೈಲ್‌ನಿಂದ ಕರೆ ಮಾಡಿದ ಅಪಹರಣಕಾರರು 15 ಲಕ್ಷ ರೂ.ಗಳ ಡಿಮ್ಯಾಂಡ್‌ ಇಟ್ಟಿದ್ದರು.
ಈ ವಿಷಯವನ್ನು ಶ್ರೀನಾಥನ ಪತ್ನಿ ಮಾಡಬೂಳ ಠಾಣೆಗೆ ದೂರು ನೀಡಿದ ಹಿನ್ನೆಲೆಯಲ್ಲಿ ಪೊಲೀಸರು ಅಪಹೃತನನ್ನು ರಕ್ಷಿಸಬೇಕೆಂಬ ಒಂದೇ ಉದ್ದೇಶವಿಟ್ಟುಕೊಂಡು ಮೊಬೈಲ್‌ನ್ನು ಸರ್ವೇಲನ್ಸ್‌ಗೆ ಹಾಕಿ ಮೊಬೈಲ್‌ ಸಿಗ್ನಲ್‌ನ್ನು ಪತ್ತೆಹಚ್ಚುವಲ್ಲಿ ಯಶಸ್ವಿಯಾಗಿದ್ದರು.

ಅಪಹರಣಕಾರರು ಪೊಲೀಸರ ಮೇಲೆಯೇ ಮಾರಕಾಸ್ತ್ರಗಳಿಮದ ದಾಳಿ ನಡೆಸಿದ್ದರಿಂದ ಕಾಳಗಿ ಸಿಪಿಐ ಕಟ್ಟಿಮನಿ, ಮಾಡಬೂಳ ಪಿಎಸ್‌ಐ ಹುಸೇನ ಬಾಷಾ ಹಾಗೂ ಎಸ್‌ಪಿ ಅಂಗರಕ್ಷಕ ಪ್ರಕಾಶ ಪಾಟೀಲ ಎನ್ನವವರ ಮೇಲೆ ಹಲ್ಲೆ ನಡೆಸಿದ್ದರು. ಪೊಲೀಸರು ಅಪಹರಣಕಾರರ ಮೇಲೆ ಎರಡು ಸುತ್ತು ಗುಂಡು ಹಾರಿಸಿದ್ದರಿಂದ ಅಪಹರಣಕಾರರಾದ ದೀಪಕ ಹಾಗೂ ಕಿರಣಕುಮಾರ ಎನ್ನುವವರ ಕಾಲಿಗೆ ಗುಂಡೇಟು ತಗುಲಿವೆ.

Advertisement

Udayavani is now on Telegram. Click here to join our channel and stay updated with the latest news.

Next