ಮಂಡ್ಯ: ಕೃಷ್ಣರಾಜಸಾಗರ ಜಲಾಶಯದಿಂದ ರಾತ್ರೋರಾತ್ರಿ ತಮಿಳುನಾಡಿಗೆ ನೀರು ಬಿಟ್ಟಿದ್ದಕ್ಕೆ ಆಕ್ರೋಶ ವ್ಯಕ್ತವಾಗಿದ್ದು, ಕಾವೇರಿ ಕಣಿವೆಯ ಜಿಲ್ಲೆಗಳಲ್ಲಿ ರೈತರ ಪ್ರತಿಭಟನೆ ಜೋರಾಗಿದೆ. ಮಂಡ್ಯ, ಮದ್ದೂರು, ಶ್ರೀರಂಗಪಟ್ಟಣ, ಮೈಸೂರು, ಎಚ್.ಡಿ.ಕೋಟೆ, ನಂಜನಗೂಡು ಸೇರಿ ಕಾವೇರಿ ಕಣಿವೆಯ ಹಲವೆಡೆ ರೈತರು ರಸ್ತೆ ತಡೆ ನಡೆಸಿ, ಆಕ್ರೋಶ ವ್ಯಕ್ತಪಡಿಸಿದರು.
ಜಲಾಶಯದ ಕ್ರಸ್ಟ್ ಗೇಟ್ ತೆರೆಯದೆ, ಸುಭಾಷ್ ಪವರ್ ಕಾರ್ಪೊರೇಷನ್ ಗೇಟ್ ಮೂಲಕ ನದಿಗೆ ನೀರು ಹರಿಸಲಾಗುತ್ತಿದೆ. ಒಣಗುತ್ತಿರುವ ಬೆಳೆಗಳಿಗೆ ನೀರು ಹರಿಸುವಂತೆ ಒಂದು ತಿಂಗಳು ಸತತ ಹೋರಾಟ ನಡೆ ಸಿದ ಪರಿ ಣಾಮ ಜು.16ರಿಂದ ಹತ್ತು ದಿನಗಳ ಕಾಲ ನಾಲೆಗಳಿಗೆ ನೀರು ಬಿಡುಗಡೆ ಮಾಡುವ ನಿರ್ಧಾರ ಕೈಗೊಂಡ ಬೆನ್ನ ಹಿಂದೆಯೇ ರಾಜ್ಯ ಸರ್ಕಾರ ತಮಿಳುನಾಡಿಗೆ ನೀರನ್ನು ಹರಿಯಬಿಟ್ಟು ಕಾವೇರಿ ಕಣಿವೆ ಪ್ರದೇ ಶದ ರೈತರ ಹಿತವನ್ನು ಕಡೆಗಣಿಸಿದೆ ಎಂದು ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕಪಿಲಾ ನದಿಗಿಳಿದು ರೈತರ ಪ್ರತಿಭಟನೆ: ನಂಜನಗೂಡಿನಲ್ಲಿ ರೈತರು ಶನಿವಾರ ಕಪಿಲಾ ನದಿಗಿಳಿದು ಪ್ರತಿಭಟನೆ ನಡೆಸಿದರು. ರೈತ ಸಂಘದ ಜಿಲ್ಲಾಧ್ಯಕ್ಷ ವಿದ್ಯಾಸಾಗರ್ ನೇತೃತ್ವದಲ್ಲಿ ಪ್ರತಿಭಟನೆ ನಡೆಯಿತು. ಒಂದು ಗಂಟೆಗೂ ಹೆಚ್ಚು ಕಾಲ ನೀರಿನಲ್ಲಿ ನಿಂತು ಪ್ರತಿಭಟನೆ ನಡೆಸಿದ ರೈತ ನಾಯಕರು, ಇದು ಸಾಂಕೇತಿಕ ಹೋರಾಟವಷ್ಟೇ. ತಮಿಳುನಾಡಿಗೆ ನೀರು ಹರಿಸುವುದನ್ನು ನಿಲ್ಲಿಸದಿದ್ದರೆ ಮುಂದೆ ಉಗ್ರ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಸಿದರು.
ದೋಣಿ ವಿಹಾರ ಸ್ಥಗಿತ: ಕೆಆರ್‌ಎಸ್ ಜಲಾಶಯದಿಂದ ತಮಿಳುನಾಡಿಗೆ ಕಾವೇರಿ ನೀರು ಹರಿದ ಪರಿಣಾಮ ಪ್ರಸಿದ್ಧ ಪ್ರವಾಸಿ ತಾಣ ರಂಗನತಿಟ್ಟು ಪಕ್ಷಿಧಾಮದಲ್ಲಿ ದೋಣಿ ವಿಹಾರ ಸ್ಥಗಿತಗೊಳಿಸಲಾಗಿದೆ. ಹೀಗಾಗಿ, ದೂರದ ಊರುಗಳಿಂದ ಬಂದ ಪ್ರವಾಸಿಗರಿಗೆ ನಿರಾಸೆಯಾಗಿದೆ. ಪಕ್ಷಿಧಾಮಕ್ಕೆ ಮಾತ್ರ ಪ್ರವೇಶ ನೀಡಲಾಗಿದ್ದು, ದೋಣಿವಿಹಾರ ನಡೆಸಲಾಗುತ್ತಿಲ್ಲ.
ನೀರು 89 ಅಡಿಗೆ ಕುಸಿತ: ಶುಕ್ರವಾರ ಬೆಳಗ್ಗೆ 2,908 ಕ್ಯೂಸೆಕ್ ಇದ್ದ ಹೊರಹರಿವಿನ ಪ್ರಮಾಣವನ್ನು ಸಂಜೆ 6 ಗಂಟೆಯ ಬಳಿಕ 5,064 ಕ್ಯೂಸೆಕ್‌ಗೆ ಹೆಚ್ಚಿಸಲಾಗಿದೆ. ಇದ ರಲ್ಲಿ 2,453 ಕ್ಯೂಸೆಕ್ ನದಿಗೆ ಹಾಗೂ 2,611 ಕ್ಯೂಸೆಕ್ ನೀರನ್ನು ನಾಲೆಗಳಿಗೆ ಹರಿ ಸಲಾಗುತ್ತಿದೆ. ಇದರೊಂದಿಗೆ ಜಲಾಶಯದ ನೀರಿನ ಮಟ್ಟ 90.53 ಅಡಿ ಯಿಂದ 89 ಅಡಿಗೆ ಕುಸಿದಿದೆ. ಇದೇ ವೇಳೆ, ಕಬಿನಿ ಜಲಾಶಯ ಭರ್ತಿಯಾಗುವ ಮುನ್ನವೇ ಜಲಾಶಯದಿಂದ ತಮಿಳುನಾಡಿಗೆ 3,000 ಸಾವಿರ ಕ್ಯೂಸೆಕ್ ನೀರು ಬಿಡಲಾಗುತ್ತಿದ್ದು, ರೈತರಿಂದ ಆಕ್ರೋಶ ವ್ಯಕ್ತವಾಗಿದೆ.
ಕೇರಳದ ವೈನಾಡು ಭಾಗದಲ್ಲಿ ಈಗ ಸ್ವಲ್ಪಮಟ್ಟಿಗೆ ಮಳೆ ಬರುತ್ತಿರುವ ಹಿನ್ನೆಲೆಯಲ್ಲಿ ಕಬಿನಿ ಜಲಾಶಯಕ್ಕೆ 4,700 ಕ್ಯೂಸೆಕ್ ನೀರು ಹರಿದು ಬರುತ್ತಿದ್ದು, ಕೇವಲ 69 ಅಡಿ ಮಾತ್ರ ತುಂಬಿರುವಾಗ ಒಳಹರಿವಿನ ಪ್ರಮಾಣದಲ್ಲಿ ತಮಿಳುನಾಡಿಗೆ ನದಿ ಮೂಲಕ 3000 ಕ್ಯೂಸೆಕ್ ನೀರು ಹರಿಸುತ್ತಿರುವುದು ಅಚ್ಚುಕಟ್ಟು ರೈತರಿಗೆ ದ್ರೋಹವೆಸಗಿದಂತೆ. ರಾಜ್ಯ ಸರ್ಕಾರ ತಮಿಳುನಾಡಿಗೆ ನೀರು ಬಿಡುವ ನೀರು ಗಂಟಿ ಕೆಲಸ ಮಾಡುತ್ತಿದೆ.
-ಕುರುಬೂರು ಶಾಂತಕುಮಾರ್, ಕಬಿನಿ ರೈತ ಹಿತರಕ್ಷಣಾ ಸಮಿತಿ ಅಧ್ಯಕ್ಷ