Advertisement

ಉತ್ತಮ ಇಳುವರಿಗಾಗಿ ಕೊಟ್ಟಿಗೆ ಗೊಬ್ಬರದತ್ತ ರೈತರ ಚಿತ್ತ

03:52 PM Jun 20, 2022 | Team Udayavani |

ದೇವನಹಳ್ಳಿ: ಮಣ್ಣಿನಲ್ಲಿ ಫ‌ಲವತ್ತತೆ ಕಾಪಾಡುವುದು, ಉತ್ತಮ ಇಳುವರಿಯ ಬೆಳೆ ಬೆಳೆಯಲು ತೋಟಗಳಿಗೆ ರಾಸಾಯನಿಕ ಗೊಬ್ಬರಗಳನ್ನು ಬಳಕೆ ಮಾಡುವುದು ಕಡಿಮೆ ಮಾಡಿ, ಕೊಟ್ಟಿಗೆ ಗೊಬ್ಬರವನ್ನು ಕೊಟ್ಟು ಉತ್ತಮ ಇಳುವರಿ ಪಡೆಯಲು ರೈತರು ಮುಂದಾಗಿದ್ದಾರೆ.ಹಳ್ಳಿಗಳಲ್ಲಿ ರಾಸುಗಳು, ಎಮ್ಮೆಗಳು, ಕುರಿ, ಮೇಕೆಗಳನ್ನು ಸಾಕುವವರು ಗೊಬ್ಬರವನ್ನು ತಿಪ್ಪೆಗಳಲ್ಲಿ ಶೇಖರಣೆ ಮಾಡುತ್ತಾರೆ.

Advertisement

ಆರು ತಿಂಗಳಿಗೊಮ್ಮೆ ಮಾರಾಟ ಮಾಡುತ್ತಾರೆ. ತೋಟಗಳಿರುವ ರೈತರು, ತಮಗೆ ಗೊಬ್ಬರ ಬೇಕಾದಾಗ, ಸಣ್ಣ ರೈತರ ಬಳಿ ಖರೀದಿ ಮಾಡಿಕೊಳ್ಳುತ್ತಾರೆ. ಕೆಲವರು ಹಣ ಕೊಡ್ತಾರೆ. ಇನ್ನು ಕೆಲವರು ರಾಗಿ, ಹುಲ್ಲು, ಕೊಟ್ಟು ಖರೀದಿ ಮಾಡಿಕೊಳ್ಳುತ್ತಾರೆ.

ಇನ್ನೂ ಕೆಲವು ರೈತರು, ಸಣ್ಣ ರೈತರ ಕುಟುಂಬಗಳಿಗೆ ಕಷ್ಟ ಅಂತ ಬಂದಾಗ, ವೈದ್ಯಕೀಯ ಚಿಕಿತ್ಸೆಗೆ, ಮನೆಗಳಲ್ಲಿ ಪಡೆಯುವಂತಹ ಶುಭ ಕಾರ್ಯಗಳು ಹೀಗೆ ಪ್ರತಿಯೊಂದು ಸಮಯದಲ್ಲೂ ಹಣಕಾಸಿನ ನೆರವು ನೀಡುತ್ತಾರೆ. ಇದರಿಂದ ತೋಟಗಳಿಗೆ ಒಳ್ಳೆಯ ಗೊಬ್ಬರದ ಜೊತೆಗೆ ಉತ್ತಮ ಬಾಂಧವ್ಯ ಕೂಡಾ ವೃದ್ಧಿಯಾಗುತ್ತಿದೆ.

ರಸಗೊಬ್ಬರ ಖರೀದಿ ಸಾಧ್ಯವಾಗದ ಪರಿಸ್ಥಿತಿ: ಕೊರೊನಾ ಕಾರಣದಿಂದಾಗಿ ಎರಡು ವರ್ಷ ರೈತರು, ತಾವು ಬೆಳೆದ ಬೆಳೆಗಳಿಗೆ ಸೂಕ್ತವಾದ ಬೆಲೆ ಸಿಗದೆ ಕಂಗಾಲಾಗಿದ್ದಾರೆ. ಆರ್ಥಿಕವಾಗಿ ತುಂಬಾ ತೊಂದರೆಗೆ ಸಿಲುಕಿದ್ದಾರೆ. ರಸಗೊಬ್ಬರಗಳ ಬೆಲೆಯನ್ನು ಏರಿಕೆ ಮಾಡಿರುವ ಸರ್ಕಾರದ ನೀತಿಯಿಂದಾಗಿ ದುಬಾರಿ ಹಣ ನೀಡಿ, ರೈತರು ರಸಗೊಬ್ಬರಗಳನ್ನು ಖರೀದಿ ಮಾಡುವುದಕ್ಕೆ ಸಾಧ್ಯವಾಗದ ಪರಿಸ್ಥಿತಿಯಲ್ಲಿದ್ದಾರೆ. ಇಂತಹ ಸಂದರ್ಭದಲ್ಲಿ ರಸಗೊಬ್ಬರದ ಬದಲಿಗೆ ತೋಟಗಳಿಗೆ ಕೊಟ್ಟಿಗೆ ಗೊಬ್ಬರ ಹಾಕಿದರೆ, ಭೂಮಿ ಫ‌ಲವತ್ತತೆಯಿಂದ ಕೂಡಿರುವುದರ ಜೊತೆಗೆ, ಉತ್ತಮ ಇಳುವರಿಯನ್ನು ಪಡೆಯಬಹುದು. ನೀರಿನ ನಿರ್ವಹಣೆಯನ್ನೂ ಮಾಡಿಕೊಳ್ಳಬಹುದು ಎಂಬ ಲೆಕ್ಕಾಚಾರ ಹಾಕಿಕೊಂಡಿದ್ದಾರೆ.

ಮಣ್ಣಿನ ಫ‌ಲವತ್ತತೆ ಹೆಚ್ಚಳ: ತೋಟಗಳ ಬಳಿ ಕೊಟ್ಟಿಗೆ ಗೊಬ್ಬರ ಲಾಟು ಮಾಡಿಕೊಂಡು, ಮಿನಿ ಟ್ರ್ಯಾಕ್ಟರ್‌ಗಳ ಮೂಲಕ ತೋಟಗಳಲ್ಲಿ ಪಾತಿ (ಹಳ್ಳ)ಮಾಡಿ, ಅದರಲ್ಲಿ ಗೊಬ್ಬರ ತುಂಬಿಸಿ, ಮಣ್ಣು ಮುಚ್ಚುತ್ತಿದ್ದಾರೆ. ತೋಟಗಳಿಗೆ ಕೊಟ್ಟಿಗೆ ಗೊಬ್ಬರ ತುಂಬಿಸುವುದರಿಂದ ತೋಟಗಳಲ್ಲಿ ಮಣ್ಣಿನ ಫ‌ಲವತ್ತತೆ ಹೆಚ್ಚಾಗುವುದರ ಜೊತೆಗೆ ಮಣ್ಣಿನಲ್ಲಿ ಎರೆಹುಳುಗಳು ಉತ್ಪತ್ತಿಯಾಗುತ್ತವೆ. ಇದರಿಂದ ಉತ್ತಮ ಇಳುವರಿ ಪಡೆಯಲು ಸಾಧ್ಯವಿದೆ ಎನ್ನುತ್ತಾರೆ ರೈತರು.

Advertisement

ಒಂದು ಟ್ರ್ಯಾಕ್ಟರ್‌ ಲೋಡು ಗೊಬ್ಬರಕ್ಕೆ 4,500 ರೂ.
ಒಂದು ಟ್ರ್ಯಾಕ್ಟರ್‌ ಲೋಡು ಗೊಬ್ಬರಕ್ಕೆ 4,500 ರೂ., ಕೊಡಬೇಕು. ಆದರೂ, ತೋಟಗಳು ಸಮೃದ್ಧಿಯಾಗಿರುತ್ತವೆ. ನೀರು ಕೂಡಾ ಉಳಿತಾಯವಾಗುತ್ತದೆ. ಇತ್ತೀಚೆಗೆ ಕೇಂದ್ರದ ಕೃಷಿ ಮಂತ್ರಿ ರಸಗೊಬ್ಬರಗಳ ಕೊರತೆಯಿದೆ ಎನ್ನುತ್ತಾರೆ. ರಾಜ್ಯದ ಕೃಷಿ ಮಂತ್ರಿ ರಸಗೊಬ್ಬರದ ಕೊರತೆಯಿಲ್ಲ ಎನ್ನುತ್ತಾರೆ. ಇಲ್ಲಿ ರಸಗೊಬ್ಬರಗಳು ಸಿಗುತ್ತಿಲ್ಲ. ನಮಗೆ ಅನಿವಾರ್ಯವಾಗಿ ಬೇಕಾದಾಗ ಎಲ್ಲಿ ಸಿಗುತ್ತೆ ಎಂದು ಸುತ್ತಾಡಬೇಕು. ಅದ್ದರಿಂದ ಇಂತಹ ಪರಿಸ್ಥಿತಿಯಿಂದ ಹೊರ
ಬರಬೇಕಾದರೆ ಮೊದಲು ನಮ್ಮ ತಾತ, ತಂದೆಯವರು ಕೊಟ್ಟಿಗೆ ಗೊಬ್ಬರ ಹಾಕಿದಂತೆ ನಾವು ರೂಡಿಸಿಕೊಳ್ಳಬೇಕಾಗಿದೆ ಎಂದು ರೈತ ನಾರಾಯಣಸ್ವಾಮಿ ತಿಳಿಸಿದ್ದಾರೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next