Advertisement

ರೈತರ ಸಭೆ ಕರೆದು ಚರ್ಚಿಸಲು ಆಗ್ರಹ

05:51 PM Nov 05, 2019 | Suhan S |

ರಾಯಚೂರು: ಕೇಂದ್ರ ಸರ್ಕಾರ ಪ್ರಾದೇಶಿಕ ಸಮಗ್ರ ಆರ್ಥಿಕ ಸಹಭಾಗಿತ್ವ(ಆರ್‌ಸಿಇಪಿ) ಒಪ್ಪಂದವನ್ನು ಕೂಡಲೇ ಕೈ ಬಿಡಬೇಕು. ಇಂಥ ಮಹತ್ವದನಿರ್ಣಯಗಳನ್ನು ಕೈಗೊಳ್ಳುವ ಮುನ್ನ ರೈತ ಸಂಘದ ನಾಯಕರ ಜತೆ ವಿಶೇಷ ಸಭೆ ನಡೆಸಿ ಸಾಧಕ ಬಾಧಕಗಳ ಕುರಿತು ಚರ್ಚಿಸಬೇಕು ಎಂದು ಆಗ್ರಹಿಸಿ ಸ್ವರಾಜ್‌ ಇಂಡಿಯಾ ಪಕ್ಷ, ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ, ಜನಾಂದೋಲನಗಳ ಮಹಾಮೈತ್ರಿ ನೇತೃತ್ವದಲ್ಲಿ ಸೋಮವಾರ ಧರಣಿ ನಡೆಸಲಾಯಿತು.

Advertisement

ಜಿಲ್ಲಾಧಿಕಾರಿ ಕಚೇರಿ ಎದುರಿನ ಉದ್ಯಾನವನದಲ್ಲಿ ನೂರಾರು ರೈತರು ಧರಣಿ ನಡೆಸಿ, ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಬಳಿಕ ಅಪರ ಜಿಲ್ಲಾ ಧಿಕಾರಿ ಮೂಲಕ ಪ್ರಧಾನಮಂತ್ರಿಗೆ ಮನವಿ ಸಲ್ಲಿಸಲಾಯಿತು. ಆರ್‌ಸಿಇಪಿ ಒಪ್ಪಂದ ರೈತ ವಿರೋಧಿಯಾಗಿದ್ದು, ಇದರಿಂದ ದೇಶದ ಹೈನುಗಾರಿಕೆ ವಲಯವೇ ನಿಸ್ತೇಜಗೊಳ್ಳಲಿದೆ. ಕೋಟ್ಯಂತರ ರೈತರ ಬದುಕು ಅಕ್ಷರಶಃ ಬೀದಿಗೆ ಬರಲಿದೆ. ಕೇಂದ್ರ ಸರ್ಕಾರ ಆಯಾ ಜಿಲ್ಲಾ ಮಟ್ಟದಲ್ಲಿ ರೈತರ ಸಭೆ ನಡೆಸಿ ಅಭಿಪ್ರಾಯ ಸಂಗ್ರಹಿಸಲಿ. ಬಳಿಕ ಸೂಕ್ತ ನಿರ್ಧಾರ ಕೈಗೊಳ್ಳಲಿ ಎಂದು  ತಾಕೀತು ಮಾಡಿದರು.

ಆರ್‌ಸಿಇಪಿ ಒಪ್ಪಂದದಿಂದ ರಾಜ್ಯದಲ್ಲಿ 30 ಲಕ್ಷಕ್ಕೂ ಅಧಿ ಕ ಕುಟುಂಬಗಳು ಅತಂತ್ರಗೊಳ್ಳಲಿವೆ. ದೇಶದಲ್ಲಿ ಕೋಟ್ಯಂತರ ಜನ ಹಾಲು ಉತ್ಪಾದಕರು, ರೈತರು, ಮಹಿಳೆಯರು, ಕೃಷಿ ಕೂಲಿಕಾರ್ಮಿಕರು ಹಾಗೂ ಮಾರಾಟಗಾರರು ಮತ್ತು ನೌಕರರ ಕುಟುಂಬಗಳು ಸಂಕಷ್ಟ ಅನುಭವಿಸಲಿವೆ. ಸರ್ಕಾರ ಬಂಡವಾಳ ಶಾಹಿಗಳೊಂದಿಗೆ ಒಗ್ಗೂಡಿ ಇಂಥ ಕೃತ್ಯಕ್ಕೆ ಮುಂದಾಗಿದೆ ಎಂದರು. ಜಿಲ್ಲೆ ಸತತ ಬರ, ನೆರೆಗೆ ತುತ್ತಾಗಿ ರೈತರು ತತ್ತರಿಸಿ ಹೋಗಿದ್ದಾರೆ. ನೆರೆಹಾವಳಿಯಿಂದ ರೈತರು ಅಪಾರ ನಷ್ಟದಲ್ಲಿದ್ದಾರೆ. ನೀರಾವರಿ ವಲಯದಲ್ಲೇ ನೀರಿಲ್ಲದ ಸ್ಥಿತಿ ಇದೆ. ಸಕಾಲಕ್ಕೆ ವಿದ್ಯುತ್‌ ನೀಡದೆ ಬೆಳೆ ಹಾಳಾಗುತ್ತಿವೆ. ಮಾರುಕಟ್ಟೆ ವ್ಯವಸ್ಥೆ ರೈತ ಸ್ನೇಹಿಯಾಗಿಲ್ಲ. ಇಷ್ಟೆಲ್ಲ ಜ್ವಲಂತ ಸಮಸ್ಯೆಗಳಿದ್ದರೂ ಕಿವಿಗೊಡದ ಸರ್ಕಾರ ರೈತರ ಬದುಕನ್ನೇ ನಾಶ ಮಾಡಲು ಮುಂದಾಗಿದೆ ಎಂದು ಆಕ್ರೋಶ ಹೊರ ಹಾಕಿದರು.

ಫಸಲ್‌ ಬಿಮಾ ಯೋಜನೆಯಡಿ ಹಣ ಕಟ್ಟಿದ ಸಾಕಷ್ಟು ರೈತರಿಗೆ ಪರಿಹಾರ ಸಿಕ್ಕಿಲ್ಲ. ಬರ ಪರಿಹಾರ ಸಮರ್ಪಕವಾಗಿ ವಿತರಣೆ ಆಗಿಲ್ಲ. ರೈತರಿಗೆ 12 ಗಂಟೆಗಳ ಕಾಲ ತ್ರಿಪೇಸ್‌ ವಿದ್ಯುತ್‌ ನೀಡಬೇಕು. ನಾರಾಯಣಪುರ ಬಲದಂಡೆ ನಾಲೆಯ 9ಎ ಕಾಲುವೆ ಕಾಮಗಾರಿ ಸ್ಥಗಿತಗೊಂಡಿದ್ದು ಕೂಡಲೇ ಪೂರ್ಣಗೊಳಿಸಬೇಕು. ಬಲದಂಡೆ ನಾಲೆಗಾಗಿ ಭೂಮಿ ನೀಡಿದ ರೈತರಿಗೆ ಪರಿಹಾರ ನೀಡಬೇಕು. ರೈತರಿಗೆ ಸುಲಭಕ್ಕೆ ಸಾಲ ಸಿಗುವಂತೆ ಮಾಡಬೇಕು ಎಂಬಿತ್ಯಾದಿ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿದರು.

ಸಂಘದ ಗೌರವಾಧ್ಯಕ್ಷ ಚಾಮರಸ ಮಾಲಿಪಾಟೀಲ, ರಾಜ್ಯ ಕಾಯಂ ಸದಸ್ಯ ಅಮರಣ್ಣ ಗುಡಿಹಾಳ, ಸದಸ್ಯರಾದ ರಾಘವೇಂದ್ರ ಕುಷ್ಟಗಿ, ದೊಡ್ಡಬಸನಗೌಡ ಬಲ್ಲಟಗಿ, ಸೂಗೂರಯ್ಯ ಆರ್‌.ಎಸ್‌.ಹಿರೇಮಠ, ಲಕ್ಣಗೌಡ ಕಡಗಂದೊಡ್ಡಿ, ಜಾನ್‌ವೆಸ್ಲಿ, ಭೀಮೇಶ್ವರರಾವ್‌, ಯಂಕಪ್ಪ ಕಾರಬಾರಿ, ಮಲ್ಲಣ್ಣ ದಿನ್ನಿ, ಬಸವರಾಜ, ವೆಂಕಟರೆಡ್ಡಿ ಸೇರಿ ಅನೇಕರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next