Advertisement

ಮೀಸಲು ಅರಣ್ಯದ ಹೆಸರಿನಲ್ಲಿ ರೈತರ ಜಮೀನು ವಶಕ್ಕೆ ಅವಕಾಶ ಕೊಡುವುದಿಲ್ಲ; ಹಾಲಪ್ಪ

05:33 PM Jan 13, 2022 | Vishnudas Patil |

ಸಾಗರ: ಮೀಸಲು ಅರಣ್ಯದ ಹೆಸರಿನಲ್ಲಿ ರೈತರು ಉಳುಮೆ ಮಾಡಿಕೊಂಡು ಬರುತ್ತಿರುವ ಜಮೀನು ಅರಣ್ಯ ಇಲಾಖೆ ವ್ಯಾಪ್ತಿಗೆ ಒಯ್ಯಲು ಯಾವುದೇ ಕಾರಣಕ್ಕೂ ಬಿಡುವುದಿಲ್ಲ. ರೈತರನ್ನು ಒಕ್ಕಲೆಬ್ಬಿಸುವ ಅರಣ್ಯ ಇಲಾಖೆಯ ನಿರ್ಧಾರಕ್ಕೆ ನನ್ನ ವಿರೋಧವಿದೆ ಎಂದು ಶಾಸಕ, ಎಂಎಸ್‌ಐಎಲ್ ಅಧ್ಯಕ್ಷ ಎಚ್.ಹಾಲಪ್ಪ ಹರತಾಳು ತಿಳಿಸಿದರು.

Advertisement

ತಾಲೂಕಿನ ಚಿಕ್ಕನೆಲ್ಲೂರು ಗ್ರಾಮದಲ್ಲಿ ಗುರುವಾರ ಅರಣ್ಯ ವ್ಯವಸ್ಥಾಪನಾ ಸಮಿತಿಯಿಂದ ರೈತರ ಅರ್ಜಿಗಳನ್ನು ಪರಿಶೀಲನೆ ನಡೆಸುತ್ತಿದ್ದ ಸ್ಥಳಕ್ಕೆ ಭೇಟಿ ನೀಡಿ ರೈತರ ಅಹವಾಲು ಆಲಿಸಿ ಮಾತನಾಡಿದ ಅವರು, ನಮ್ಮ ತಾಲೂಕಿನ ಕಾಗೋಡು ಗ್ರಾಮದಲ್ಲಿ ಉಳುವವನೇ ಹೊಲದೊಡೆಯ ಜಾರಿಗೆ ಬಂದಿದ್ದು. ಅಂತಹ ಭೂಮಿಯಲ್ಲಿ ಯಾರು ಉಳುಮೆ ಮಾಡುತ್ತಿದ್ದಾರೋ ಅವರೇ ಭೂಮಿ ಒಡೆಯ ಎನ್ನುವ ಘೋಷವಾಕ್ಯ ಅನುಷ್ಠಾನಕ್ಕೆ ನಾನು ಬದ್ದನಿದ್ದೇನೆ ಎಂದು ಹೇಳಿದರು.

ನಾನು ಕಾಗೋಡು ತಿಮ್ಮಪ್ಪ ಅವರ ಹೋರಾಟ ನೋಡುತ್ತಾ ಬೆಳೆದವನು. ಜೊತೆಗೆ ಅವರ ಮಾರ್ಗದರ್ಶನ ಪಡೆದವನು. ಯಾವುದೇ ಕಾರಣಕ್ಕೂ ಒಕ್ಕಲೆಬ್ಬಿಸುವ ಪ್ರಶ್ನೆಯಿಲ್ಲ. ಹೊಸದಾಗಿ ಭೂಮಿ ಒತ್ತುವರಿ ಮಾಡುವುದಕ್ಕೆ ನನ್ನ ಬೆಂಬಲವಿಲ್ಲ.1991 ರಿಂದ 1996 ರಲ್ಲಿ ತಿದ್ದುಪಡಿಯಾಗಿದೆ. ಅದು ಈಗ ಅನುಷ್ಠಾನಕ್ಕೆ ತರುವ ಪ್ರಯತ್ನ ನಡೆಯುತ್ತಿದೆ. ಯಾರೂ ಆತಂಕಪಡುವ ಅಗತ್ಯವಿಲ್ಲ. ಯಾರು ನಿಮ್ಮ ಭೂಮಿಯಲ್ಲಿದ್ದಿರೋ ಅದು ನಿಮ್ಮದು. ನಿಮ್ಮ ಪರವಾಗಿ ವಿಧಾನಸೌಧದ ಒಳಗೆ ಮತ್ತು ಹೊರಗೆ ಧ್ವನಿ ಎತ್ತುತ್ತೇನೆ ಎಂದು ಭರವಸೆ ನೀಡಿದರು.

ಮೀಸಲು ಅರಣ್ಯ ಹೆಸರಿನಲ್ಲಿ ರೈತರಿಗೆ ತಾಲೂಕಿನಾದ್ಯಂತ ನೋಟಿಸ್ ನೀಡುತ್ತಿರುವುದನ್ನು ಗಂಭೀರವಾಗಿ ಪರಿಗಣಿಸಲಾಗಿದೆ. ನೋಟಿಸ್ ನೀಡಿದ ಮಾತ್ರಕ್ಕೆ ನಿಮ್ಮನ್ನು ಒಕ್ಕಲೆಬ್ಬಿಸುತ್ತಾರೆ ಎಂದು ಭಾವಿಸುವುದು ಬೇಡ. ಇನ್ನೆರಡು ದಿನದಲ್ಲಿ ಜಿಲ್ಲಾಧಿಕಾರಿ, ಜಿಲ್ಲಾ ಮಟ್ಟದ ಹಿರಿಯ ಅರಣ್ಯಾಧಿಕಾರಿಗಳನ್ನು ಕರೆದು ನೋಟಿಸ್ ನೀಡುತ್ತಿರುವ ಬಗ್ಗೆ ಚರ್ಚೆ ನಡೆಸಲಾಗುತ್ತದೆ. ಮೀಸಲು ಅರಣ್ಯಕ್ಕೆ ಸಂಬಂಧಪಟ್ಟಂತೆ ಕೇಂದ್ರ ಸರ್ಕಾರದಲ್ಲಿ ತಿದ್ದುಪಡಿ ಆಗಬೇಕಾಗಿದೆ. ಈ ಬಗ್ಗೆ ಸಹ ಸರ್ಕಾರದ ಗಮನ ಸೆಳೆಯಲಾಗುತ್ತದೆ. ಜನರ ಜೊತೆ ನಾನು ಸದಾ ಇರುತ್ತೇನೆ ಎಂದು ಹೇಳಿದರು.

ಮಾಜಿ ಸಚಿವ ಕಾಗೋಡು ತಿಮ್ಮಪ್ಪ ಮಾತನಾಡಿ, ಮಲೆನಾಡು ಭಾಗದ ರೈತರಿಗೆ ಮೀಸಲು ಅರಣ್ಯ ಹೆಸರಿನಲ್ಲಿ ನೋಟಿಸ್ ನೀಡುತ್ತಿರುವುದರ ವಿರುದ್ಧ ಒಂದು ವಾರದಲ್ಲಿ ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ ಮನವಿ ಸಲ್ಲಿಸಲಾಗುತ್ತದೆ. ಪರಿಸ್ಥಿತಿ ಗಂಭೀರವಾಗಿದ್ದು, ನಾವು ಸುಮ್ಮನೆ ಕುಳಿತರೆ ಮುಂದೆ ಸಮಸ್ಯೆಯಾಗುತ್ತದೆ. ಈ ನೆಲ ಭೂಹೋರಾಟದ ಮೂಲಕ ಪ್ರಸಿದ್ಧಿಗೆ ಬಂದದ್ದು. ಇಂತಹ ನೆಲದಲ್ಲಿ ಅಸ್ತಿತ್ವ ಕಂಡುಕೊಂಡವರಿಗೆ ಈಗ ಮೀಸಲು ಅರಣ್ಯ ಹೆಸರಿನಲ್ಲಿ ಒಕ್ಕಲೆಬ್ಬಿಸಲು ಮುಂದಾಗಿರುವ ಕ್ರಮ ಸಹಿಸಲು ಸಾಧ್ಯವಿಲ್ಲ. ಶಾಸಕರು ಸಭೆಯಲ್ಲಿ ಇರುವುದರಿಂದ ವಿಷಯದ ಗಂಭೀರತೆಯನ್ನು ಮುಖ್ಯಮಂತ್ರಿಗಳಿಗೆ ತಿಳಿಸಿ ತಕ್ಷಣ ನೋಟಿಸ್ ನೀಡುವುದನ್ನು ಕೈಬಿಡುವಂತೆ ನೋಡಿಕೊಳ್ಳಬೇಕು. ಶಾಸನ ಸಭೆಯಲ್ಲಿ ವಿಷಯ ಮಂಡಿಸಿ ಯೋಜನೆಯನ್ನು ಕೈಬಿಡುವಂತೆ ಒತ್ತಾಯ ಮಾಡಬೇಕು ಎಂದು ಮನವಿ ಮಾಡಿದರು.

Advertisement

ಸಭೆಯಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಿ.ಆರ್.ಜಯಂತ್, ಎಪಿಎಂಸಿ ಸದಸ್ಯ ಕೆ.ಹೊಳೆಯಪ್ಪ, ಮಹಾಬಲ ಮನೆಘಟ್ಟ, ವೆಂಕಟೇಶ್ ಬೆಳೆಯೂರು, ದೇವೇಂದ್ರಪ್ಪ ಯಲಕುಂದ್ಲಿ, ದೇವರಾಜ್, ಲಕ್ಷ್ಮಣ್, ವಲಯ ಅರಣ್ಯಾಧಿಕಾರಿ ಪ್ರಮೋದ್ ಡಿ.ಆರ್., ಉಪ ವಲಯ ಅರಣ್ಯಾಧಿಕಾರಿ ಚೇತನ್, ಸರ್ವೇಯರ್ ಉಮೇಶ್, ಅರಣ್ಯ ವ್ಯವಸ್ಥಾಪನಾ ಸಮಿತಿಯ ಅಧಿಕಾರಿ ಸುಬ್ರಾಯ್ ಕಾಮತ್ ಹಾಜರಿದ್ದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next