ಬೆಳಗಾವಿ: ಭೂಸ್ವಾಧೀನ ಕಾಯ್ದೆ ತಿದ್ದುಪಡಿ ರದ್ದುಪಡಿಸಬೇಕು, ರೈತರಿಗೆ ಬ್ಯಾಂಕುಗಳ ನೋಟಿಸ್‌ದಿಂದ ಆಗುವ ಕಿರುಕುಳ ತಡೆಯಬೇಕು ಸೇರಿದಂತೆ ವಿವಿಧ ಬೇಡಿಕೆ ಈಡೇರಿಸಬೇಕು ಎಂದು ಆಗ್ರಹಿಸಿ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ವತಿಯಿಂದ ಗುರುವಾರ ಪ್ರತಿಭಟನೆ ನಡೆಸಲಾಯಿತು.
2013ರ ಭೂಸ್ವಾಧೀನ ಕಾಯ್ದೆಯನ್ನು ರಾಜ್ಯ ಸರ್ಕಾರ 2019ರಲ್ಲಿ ತಿದ್ದುಪಡಿ ಮಾಡಿದ್ದು, ಇದು ರೈತರ ಪಾಲಿಗೆ ಮರಣ ಶಾಸನವಾಗಿದೆ. ತಕ್ಷಣ ಇದನ್ನು ರದ್ದು ಪಡಿಸದಿದ್ದರೆ ಜೂ. 10ರಂದು ರಾಷ್ಟ್ರೀಯ ಹೆದ್ದಾರಿ ತಡೆದು ಪ್ರತಿಭಟನೆ ನಡೆಸಲಾಗುವುದು. ರಾಷ್ಟ್ರೀಕೃತ ಬ್ಯಾಂಕ್ ಹಾಗೂ ಖಾಸಗಿ ಫೈನಾನ್ಸ್‌ಗಳಿಂದ ರೈತರಿಗೆ ನಿರಂತರ ನೋಟಿಸ್ ಬರುತ್ತಿದ್ದು, ಇದರಿಂದ ರೈತರು ಕಿರುಕುಳ ಅನುಭವಿಸುತ್ತಿದ್ದಾರೆ. ಕೂಡಲೇ ಬ್ಯಾಂಕು ಹಾಗೂ ಖಾಸಗಿ ಫೈನಾನ್ಸ್‌ಗಳಿಗೆ ನೋಟಿಸ್ ನೀಡದಂತೆ ಸೂಚಿಸುವಂತೆ ಆಗ್ರಹಿಸಿದರು.
ಬಳ್ಳಾರಿ ನಾಲಾ ಯೋಜನೆ 2003ರಲ್ಲಿ ಅನುಮೋದನೆಗೊಂಡಿದೆ. ಇಲ್ಲಿಯವರೆಗೆ 143 ಕೋಟಿ ರೂ. ವೆಚ್ಚ ಮಾಡಿದರೂ ಇನ್ನೂ ರೈತರಿಗೆ ತಲುಪಿಲ್ಲ. ಸಾಲಾಪುರ ಬಸವೇಶ್ವರ ಏತ ನೀರಾವರಿಯ 560 ಕೋಟಿ ರೂ. ಯೋಜನೆ ಬಜೆಟ್‌ನಲ್ಲಿ ಘೋಷಣೆ ಆಗಿದ್ದರೂ ಇನ್ನೂವರೆಗೆ ಕಾಮಗಾರಿ ಆರಂಭವಾಗಿಲ್ಲ ಎಂದು ಆರೋಪಿಸಿದರು.
ಕಬ್ಬು ಬೆಳೆಗಾರರು ಸಕ್ಕರೆ ಕಾರ್ಖಾನೆಗಳಿಗೆ ಸಾಗಿಸಿದ ಕಬ್ಬಿನ ಬಾಕಿ ಬಿಲ್ ಇನ್ನೂ ಪಾವತಿ ಆಗಿಲ್ಲ. ಮೆ 8ರಂದು ಜಿಲ್ಲಾಧಿಕಾರಿಗಳು ಕಬ್ಬಿನ ಬಾಕಿ ಪಾವತಿಸುವಂತೆ ಸೂಚಿಸಿದ್ದರೂ ಇನ್ನೂವರೆಗೆ ಪಾವತಿ ಆಗಿಲ್ಲ. ಈ ಬಗ್ಗೆ ಜಿಲ್ಲಾಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಪದಾಧಿಕಾರಿಗಳಾದ ಮಲ್ಲಿಕಾರ್ಜುನ ರಾಮದುರ್ಗ. ಸತ್ಯಪ್ಪ ಮಲ್ಲಾಪುರೆ, ಯಲ್ಲಪ್ಪ ದೊಡಮನಿ, ಗುರು ಸೋಮಣ್ಣವರ, ಮಲ್ಲಿಕಾರ್ಜುನ ದೇಸಾಯಿ, ಗುರುನಾಥ ಹೆಗಡೆ, ದ್ಯಾಮಣ್ಣ ಪೂಜೇರಿ, ಪ್ರಕಾಶ ಪಾಟೀಲ, ರಮೇಶ ಮಡಿವಾಳ, ಶಿವಾಜಿ ಪಾಟೀಲ ಸೇರಿದಂತೆ ಇತರರು ಇದ್ದರು.