ನವದೆಹಲಿ: ಲೋಕಸಭೆ ಚುನಾವಣೆ ಫಲಿತಾಂಶದ ಬಳಿಕ ಸಂಸತ್‌ನಲ್ಲಿ ಗುರುವಾರ ಮೊದಲ ಬಾರಿಗೆ ಮಾತನಾಡಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ತಮ್ಮ ಕ್ಷೇತ್ರವಾದ ಕೇರಳದ ವಯನಾಡ್‌ನ ರೈತರ ಸಂಕಷ್ಟಗಳ ಕುರಿತು ಪ್ರಸ್ತಾಪಿಸಿ ಸದನದ ಗಮನ ಸೆಳೆದರು.
ತೀವ್ರ ಸಂಕಷ್ಟದಲ್ಲಿರುವ ಅನ್ನದಾತರಿಗೆ ಕೇಂದ್ರ ಸರ್ಕಾರ ಯಾವುದೇ ರಿಲೀಫ್ ಕೊಟ್ಟಿಲ್ಲ. ದೊಡ್ಡ ದೊಡ್ಡ ಉದ್ಯಮಿಗಳಿಗೆ ರಿಯಾಯ್ತಿ ಹಾಗೂ ಕೋಟಿಗಟ್ಟಲೆ ಸಾಲ ಮನ್ನಾ ಮಾಡುವ ಸರ್ಕಾರ, ರೈತರನ್ನು ಕೀಳಾಗಿ ಕಾಣುತ್ತಿದೆ ಎಂದು ರಾಹುಲ್ ಆರೋಪಿಸಿದರು.
ರಾಜನಾಥ್ ತಿರುಗೇಟು: ರಾಹುಲ್ ಆರೋಪಕ್ಕೆ ಸಂಬಂಧಿಸಿ ಲೋಕಸಭೆಯಲ್ಲೇ ತಿರುಗೇಟು ನೀಡಿದ ಸಚಿವ ರಾಜನಾಥ್ ಸಿಂಗ್, ‘ಹಲವು ದಶಕಗಳ ಕಾಲ ದೇಶದ ಆಡಳಿತದ ಚುಕ್ಕಾಣಿ ಹಿಡಿದಿದ್ದವರೇ ರೈತರ ಇಂದಿನ ಸ್ಥಿತಿಗೆ ಕಾರಣ. ನರೇಂದ್ರ ಮೋದಿಯವರು ರೈತರಿಗಾಗಿ ನೀಡಿದಷ್ಟು ಅನುಕೂಲವನ್ನು ಬೇರೆ ಯಾವ ಪ್ರಧಾನಿಯೂ ಈವರೆಗೂ ನೀಡಿಲ್ಲ’ ಎಂದರು. ಜತೆಗೆ, ಕೇಂದ್ರ ಸರ್ಕಾರ ಘೋಷಿಸಿರುವ 6 ಸಾವಿರ ರೂ.ಗಳ ನೆರವು ರೈತರ ಆದಾಯವನ್ನು ಶೇ.20-25ರಷ್ಟು ವೃದ್ಧಿಸಲಿದೆ. ಬಿಜೆಪಿ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬರುವ ಮೊದಲು ರೈತರ ಆತ್ಮಹತ್ಯೆಗಳು ಹೆಚ್ಚಿದ್ದವು ಎಂದೂ ಸಿಂಗ್ ತಿಳಿಸಿದರು.
ಕೇಂದ್ರದ ವಿರುದ್ಧ ಆರೋಪ: ಕೇಂದ್ರ ಸರ್ಕಾರವು ರೈಲ್ವೆ ಆಸ್ತಿಪಾಸ್ತಿಗಳನ್ನು ಮಾರಾಟ ಮಾಡಲು ಯತ್ನಿಸಿದ್ದು, ಮುಂದೊಂದು ದಿನ ದೇಶವನ್ನೇ ಮಾರಾಟ ಮಾಡಲಿದೆ ಎಂದು ಲೋಕಸಭೆ ಕಾಂಗ್ರೆಸ್ ನಾಯಕ ಅಧೀರ್ ರಂಜನ್ ಚೌಧರಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕಡ್ಡಾಯ ಮತದಾನದ ಪ್ರಸ್ತಾಪವಿಲ್ಲ: ಈ ನಡುವೆ, ದೇಶದಲ್ಲಿ ಮತದಾನವನ್ನು ಕಡ್ಡಾಯಗೊಳಿಸುವ ಯಾವುದೇ ಪ್ರಸ್ತಾಪ ವಿಲ್ಲ ಎಂದು ರಾಜ್ಯಸಭೆಗೆ ಸರ್ಕಾರ ಮಾಹಿತಿ ನೀಡಿದೆ.
ನ್ಯೂಸ್‌ಪ್ರಿಂಟ್ ಮೇಲಿನ ಶುಲ್ಕ ರದ್ದು ಮಾಡಿ
ನ್ಯೂಸ್‌ಪ್ರಿಂಟ್ ಮೇಲೆ ಹೇರಲಾಗಿರುವ ಶೇ.10 ಕಸ್ಟಮ್ಸ್ ಶುಲ್ಕವನ್ನು ರದ್ದು ಮಾಡಬೇಕು ಎಂದು ರಾಜ್ಯಸಭೆಯಲ್ಲಿ ಕೇರಳದ ಪಕ್ಷೇತರ ಸಂಸದ ವೀರೇಂದ್ರ ಕುಮಾರ್ ಮನವಿ ಮಾಡಿದ್ದಾರೆ. ಈ ಶುಲ್ಕವು ಈಗಾಗಲೇ ಬಿಕ್ಕಟ್ಟಿನಲ್ಲಿರುವ ಮುದ್ರಣ ಮಾಧ್ಯಮಗಳ ಮೇಲೆ ಮತ್ತಷ್ಟು ಹೊರೆ ಉಂಟುಮಾಡಲಿದೆ. ಹಿಂದೆಂದಿಗಿಂತಲೂ ಅತಿ ಹೆಚ್ಚು ಶುಲ್ಕವನ್ನು ಈ ಬಾರಿ ವಿಧಿಸಲಾಗಿದೆ. ಇದರಿಂದಾಗಿ ಸಣ್ಣ ಪತ್ರಿಕೆಗಳಂತೂ ಮುಚ್ಚುವಂಥ ಸ್ಥಿತಿಗೆ ತಲುಪಲಿವೆ. ಹೀಗಾಗಿ, ಸರ್ಕಾರ ಕಸ್ಟಮ್ಸ್ ಶುಲ್ಕ ಕೂಡಲೇ ರದ್ದು ಮಾಡಬೇಕು ಎಂದು ಅವರು ಕೋರಿದ್ದಾರೆ.