ಗದಗ: ಕಳೆದ ನಾಲ್ಕೈದು ವರ್ಷಗಳಿಂದ ಭೀಕರ ಬರಗಾಲದಿಂದ ಕಂಗೆಟ್ಟಿದ್ದ ಜಿಲ್ಲೆಯ ರೈತರನ್ನು ಈ ಬಾರಿ ಬಿಳಿ ಜೋಳ ಕೈಹಿಡಿದಿದೆ. ಈಗಾಗಲೇ ಬುಹುತೇಕ ಬೆಳೆ ಕಟಾವಿಗೆ ಸಿದ್ಧಗೊಂಡಿದ್ದು, ರೈತರಲ್ಲಿ ಮಂದಹಾಸ ಮೂಡಿಸಿದೆ.
ಕಳೆದ ನಾಲ್ಕೈದು ವರ್ಷಗಳಿಂದ ಸತತವಾಗಿ ಬರಗಾಲ ಆವರಿಸಿದ್ದರಿಂದ ಜಿಲ್ಲೆಯ ಜನ, ಜಾನುವಾರುಗಳಿಗೆ ನೀರು, ಮೇವಿಗೂ ಸಮಸ್ಯೆಯಾಗಿ ಪರಿಣಮಿಸಿತ್ತು. ಆದರೆ, ಬಾರಿ ಜಿಲ್ಲೆಯಲ್ಲಿ ಬಿಳಿ ಜೋಳ ಸಮೃದ್ಧವಾಗಿ ಬೆಳೆದಿದ್ದು, ಮೇವಿನ ಸಮಸ್ಯೆಯನ್ನು ನಿವಾರಿಸಿದೆ. ಜೊತೆಗೆ ಕಳೆದ ಅಕ್ಟೋಬರ್‌ನಲ್ಲಿ ಸುರಿದ ಉತ್ತಮ ಮಳೆಯಾಗಿರುವುದು ಹಾಗೂ ಆನಂತರವೂ ಭೂಮಿಯಲ್ಲಿ ತೇವಾಂಶ ಮುಂದುವರಿದಿದ್ದರಿಂದ ಜಿಲ್ಲೆಯಲ್ಲಿ ಬಿಳಿಜೋಳ ಸಂಪಾಗಿ ಬೆಳೆದು ನಿಂತಿವೆ. ಈಗಾಗಲೇ ಎಲ್ಲಡೆ ಜೋಳ ಕಾಳು ಕಟ್ಟಿದೆ. ತೆನೆ ಕಟಾವಿಗೆ ಬಂದಿದೆ.
70 ಸಾವಿರ ಹೆಕ್ಟೇರ್ ಬೆಳೆ: ಜಿಲ್ಲೆಯಲ್ಲಿ ಮುಂಗಾರಿನಲ್ಲಿ ಹೆಸರು, ಶೇಂಗಾ ಬೆಳೆದವರು, ಹಿಂಗಾರಿನಲ್ಲಿ ಬಿಳಿ ಜೋಳ ಬಿತ್ತನೆ ಮಾಡುತ್ತಾರೆ. ಆದರೆ, ಇತ್ತೀಚಿನ ವರ್ಷಗಳಲ್ಲಿ ಕಾಡಿದ ಸತತ ಬರದಿಂದ ಬಹುತೇಕ ಎಲ್ಲ ಬೆಳೆಗಳು ಹಾನಿಯಾದರೆ, 2018ರ ಹಿಂಗಾರಿನಲ್ಲಿ ಅಲ್ಪ ಸ್ವಲ್ಪ ಮಳೆಯಾಗಿ, ಅಲ್ಲಲ್ಲಿ ಜೋಳ ತೆನೆ ಕಟ್ಟಿದ್ದು, ಬಿಟ್ಟರೆ ಇನ್ನಳಿದಂತೆ ಮೇವಿಗೆ ಸೀಮಿತ ಎನ್ನುವಂತಾಗಿತ್ತು. ಈ ಬಾರಿ ಹಿಂಗಾರು ಹಂಗಾಮು ಕೈಹಿಡಿದಿದ್ದರಿಂದ ಬೆಳೆ ಸಮೃದ್ಧವಾಗಿದೆ. ಆ ಪೈಕಿ ಗದಗ ತಾಲೂಕಿನಲ್ಲಿ ಅಂದಾಜು 12 ಸಾವಿರ, ಮುಂಡರಗಿಯಲ್ಲಿ 11 ಸಾವಿರ, ರೋಣದಲ್ಲಿ 18 ಸಾವಿರ, ಶಿರಹಟ್ಟಿ ತಾಲೂಕಿನಲ್ಲಿ 16 ಹಾಗೂ ನರಗುಂದ ತಾಲೂ ಕಿನ 6 ಸಾವಿರ ಸೇರಿದಂತೆ ಜಿಲ್ಲೆಯಲ್ಲಿ ಒಟ್ಟು 70 ಸಾವಿರ ಹೆಕ್ಟೇರ್ ಭೂ ಪ್ರದೇಶದಲ್ಲಿ ಜೋಳ ಬೆಳೆಯಲಾಗಿದೆ. ಕೆಲವರು ವಿಳಂಬವಾಗಿ ಬಿತ್ತನೆ ಮಾಡಿದ್ದರಿಂದ ಕಾಳು ಕಟ್ಟುವ ಹಂತದಲ್ಲಿದ್ದು, ಇನ್ನುಳಿದಂತೆ ಶೇ.80 ರಷ್ಟು ಜೋಳ ಕಟಾವಿಗೆ ಬಂದಿದೆ ಎನ್ನುತ್ತಾರೆ ಕೃಷಿ ಇಲಾಖೆ ಅಧಿಕಾರಿಗಳು.
ಮೇವಿನ ಸಮಸ್ಯೆಯೂ ದೂರ: ಕಳೆದ ವರ್ಷ ಬರಗಾಲದಿಂದಾಗಿ ಮೇವಿನ ಕೊರತೆಯಾಗಿ ಜಾನುವಾರುಗಳ ಅನುಕೂಲಕ್ಕಾಗಿ ವಿವಿಧೆಡೆ ಗೋಶಾಲೆಗಳನ್ನು ತೆರೆದು, ಮೇವು ಬ್ಯಾಂಕ್‌ಗಳನ್ನು ಸ್ಥಾಪಿಸಿತ್ತು. ಮೇವು ದಾಸ್ತಾನು ಇಲ್ಲದ ರೈತರು ಜಾನುವಾರುಗಳನ್ನು ಗೋಶಾಲೆಗೆ ದೂಡಿದರೆ, ಸ್ಥಿತಿವಂತರು ಮೇವು ಖರೀದಿಸುವ ಅನಿವಾರ್ಯತೆ ಸೃಷ್ಟಿಸಿತ್ತು. ಈ ಬಾರಿ ಜೋಳದ ಬೆಳೆ ಉತ್ತಮವಾಗಿದ್ದರಿಂದ ಜೋಳ ರೊಟ್ಟಿಗೆ ಮಾತ್ರವಲ್ಲ, ಜಾನುವಾರು ಗಳ ಒಣ ಮೇವಿನ ಸಮಸ್ಯೆಯನ್ನೂ ನಿವಾರಿಸಿದೆ. ಈ ಬಾರಿ ಕಪ್ಪು ಭೂಮಿಯೊಂದಿಗೆ ಶಿಹರಟ್ಟಿ ಹಾಗೂ ಲಕ್ಷ್ಮೇಶ್ವರ ಭಾಗದ ಕೆಂಪು ಮಣ್ಣಿನಲ್ಲೂ ಜಾನುವಾರುಗಳ ಮೇವಿಗಾಗಿ ಜೋಳ ಬೆಳೆಯಲಾಗಿದೆ. ಜಿಲ್ಲೆಯಲ್ಲಿ ಈ ಬಾರಿ 70 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಜೋಳ ಬೆಳೆದಿದ್ದರಿಂದ ಸುಮಾರು 2 ಸಾವಿರ ಟನ್‌ನಷ್ಟು ಜೋಳದ ಮೇವು ಉತ್ಪಾದನೆಯಾಗುತ್ತಿದ್ದು, ಮುಂದಿನ ಏಳೆಂಟು ತಿಂಗಳ ಕಾಲ ಈ ಭಾಗದ ಜಾನುವಾರುಗಳಿಗೆ ಮೇವಿನ ಕೊರತೆ ಕಾಡುವುದಿಲ್ಲ ಎನ್ನುತ್ತಾರೆ ರೈತರು.
ಹಿಂದಿನ ವರ್ಷಗಳಿಗೆ ಹೋಲಿಸಿದರೆ, ಈ ಬಾರಿ ಈರುಳ್ಳಿ, ಬಿಳಿ ಜೋಳ ಬೆಳೆಗಳು ಕೈಹಿಡಿದಿವೆ. ಜೊತೆಗೆ ಮೇವಿನ ಚಿಂತೆಯನ್ನೂ ದೂರಾಗಿಸಿವೆ. ಸದ್ಯ ಕೃಷಿ ಉತ್ಪನ್ನ ಮಾರುಕಟ್ಟೆಗಳಲ್ಲಿ 2,500 ರೂ.ದಿಂದ 4 ಸಾವಿರ ರೂ.ದರದಲ್ಲಿ ಮಾರಾಟವಾಗುತ್ತಿದ್ದು, ಬೆಲೆ ಸಾಧಾರಣವಾಗಿದೆ. ಫಸಲು ಮಾರುಕಟ್ಟೆಗೆ ಬಂದಾಗ ಬೆಲೆ ಕುಸಿಯದಿದ್ದರೆ ಸಾಕು.
–ಮಾರುತಿ ಮಲ್ಲಿಗವಾಡ, ನೀಲಗುಂದ ರೈತ.
ಜಿಲ್ಲೆಯಲ್ಲಿ ಸುಮಾರು 70 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆಯಾಗಿದ್ದು, ಶೇ.80ರಷ್ಟು ಬೆಳೆ ಉತ್ತಮವಾಗಿದೆ. ಯಾವುದೇ ರೋಗ ಭಾದೆಯಿಲ್ಲದೇ, ಬೆಳೆ ಸಮೃದ್ಧವಾಗಿದೆ.
–ರುದ್ರೇಶ, ಕೃಷಿ ಇಲಾಖೆ ಜಂಟಿ ನಿರ್ದೇಶಕ.
-ವೀರೇಂದ್ರ ನಾಗಲದಿನ್ನಿ