ನಾಂದೇಡ್: ತೆಲಂಗಾಣದ ಹೊರಗೆ ಮೊದಲ ಬಾರಿಗೆ ಕೆ.ಚಂದ್ರಶೇಖರ್ ರಾವ್ ನೇತೃತ್ವದ ಭಾರತ್ ರಾಷ್ಟ್ರ ಸಮಿತಿ
(ಬಿಆರ್‌ಎಸ್) ರವಿವಾರ ರ್‍ಯಾಲಿ ನಡೆಸಿತು.
ಮಹಾರಾಷ್ಟ್ರದ ನಾಂದೇಡ್‌ನಲ್ಲಿ ನಡೆದ ರ್ಯಾಲಿಯಲ್ಲಿ ಮಾತನಾಡಿದ ಬಿಆರ್‌ಎಸ್ ಮುಖ್ಯಸ್ಥ ಕೆಸಿಆರ್, “ಮುಂದಿನ ಬಾರಿ ಕೇಂದ್ರದಲ್ಲಿ ರೈತರ ಸರಕಾರವು ಅಧಿಕಾರಕ್ಕೆ ಬರಲಿದೆ. ಬಿಆರ್‌ಎಸ್ ಪಕ್ಷದ ಘೋಷವಾಕ್ಯವು “ಅಬ್ ಕೀ ಬಾರ್ ಕಿಸಾನ್ ಸರಕಾರ್'(ಈ ಬಾರಿ ರೈತರ ಸರಕಾರ) ಆಗಿದೆ,’ ಎಂದು ಹೇಳಿದರು.
ಕೇಂದ್ರದಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್‌ಯೇತರ ಸರಕಾರ ರಚಿಸುವ ಪ್ರಯತ್ನದಲ್ಲಿರುವ ಕೆಸಿಆರ್, “50-60 ನಿವೃತ್ತ ಐಎಎಸ್ ಅಧಿಕಾರಿಗಳು ಹಾಗೂ ವಿವಿಧ ಕ್ಷೇತ್ರಗಳ ತಜ್ಞರ ಸಲಹೆ ಮೇರೆಗೆ ಬಿಆರ್‌ಎಸ್ ಪಕ್ಷದ ನೀತಿಗಳನ್ನು ರಚಿಸಲಾಗುತ್ತಿದೆ. ಶೀಘ್ರದಲ್ಲಿ ಇವುಗಳನ್ನು ಪ್ರಕಟಿಸಲಾಗುವುದು. ಮುಂದಿನ ನನ್ನ ಪತ್ರಿಕಾಗೋಷ್ಠಿ ದಿಲ್ಲಿಯಲ್ಲಿ ನಡೆಯಲಿದೆ,’ ಎಂದರು.
“ರಾಜ್ಯಗಳ ನಡುವೆ ನದಿ ನೀರು ಹಂಚಿಕೆಗಾಗಿ ಸೂಕ್ತವಾದ ನೀತಿಯನ್ನು ರೂಪಿಸಲಾಗುತ್ತದೆ. ಇದರಿಂದ ರಾಜ್ಯಗಳ ನಡುವಿನ ಸಂಘರ್ಷ ಕೊನೆಗೊಳ್ಳಲಿದೆ,’ ಎಂದು ಹೇಳಿದರು.
Related Articles
“ಜನರ ಸಂಕಷ್ಟಕ್ಕೆ ಕಾಂಗ್ರೆಸ್ ಮತ್ತು ಬಿಜೆಪಿ ಕಾರಣ. ಎರಡೂ ಪಕ್ಷಗಳು ಒಂದೇ ಆಗಿವೆ. ಕೇವಲ ವಾಕ್ಚಾತುರ್ಯ. “ತೇರೆ ಅಂಬಾನಿ ತೋ ಮೇರೆ ಅದಾನಿ'(ಅಂಬಾನಿ ನಿಮ್ಮವರಾದರೆ, ಅದಾನಿ ನಮ್ಮವರು) ಎನ್ನುವ ಮನಃಸ್ಥಿತಿಯಾಗಿದೆ,’ ಎಂದು ದೂರಿದರು.