Advertisement

ಸಂಕಷ್ಟದಲ್ಲಿ ಮಣ್ಣೆತ್ತು ತಯಾರಕರು

04:38 PM Jun 28, 2022 | Team Udayavani |

ಕಾರಟಗಿ: ಮುಂಗಾರು ಮಳೆ ಈ ಭಾಗದಲ್ಲಿ ಸಂಪೂರ್ಣವಾಗಿ ಕ್ಷೀಣಿಸಿದ್ದು, ಮುಂಗಾರಿನ ಹುಮ್ಮಸ್ಸಿನ ಹುರುಪು ಕಾಣುತ್ತಿಲ್ಲವಾದರೂ ಗ್ರಾಮೀಣ ಪ್ರದೇಶದಲ್ಲಿ ಸಂಭ್ರಮದಿಂದ ಆಚರಿಸುವ ಮಣ್ಣೆತ್ತಿನ ಅಮವಾಸ್ಯೆಯಂದು ಪೂಜಿಸುವ ಮಣ್ಣಿನ ಎತ್ತುಗಳ ತಯಾರಿ ಮಾತ್ರ ಪಟ್ಟಣ ಸೇರಿದಂತೆ ತಾಲೂಕಿನ ವಿವಿಧ ಗ್ರಾಮಗಳಲ್ಲಿ ಜೋರಾಗಿಯೇ ನಡೆದಿದೆ.

Advertisement

ಜೂ. 29ರಂದು ಬುಧವಾರ ಅಮವಾಸ್ಯೆ ಇದ್ದು, ಗ್ರಾಮೀಣ ಪ್ರದೇಶದಲ್ಲಿ ಹಬ್ಬ-ಹರಿದಿನಗಳನ್ನು ಜನತೆ ಸಂಭ್ರಮದಿಂದಲೇ ಆಚರಿಸುತ್ತಾರೆ. ರೈತಾಪಿ ವರ್ಗಕ್ಕೆ ಹಬ್ಬದ ಸಂಭ್ರಮ ನಿರೀಕ್ಷಿಸುವಂತಿದ್ದರೆ ತಯಾರಕರಿಗೆ ಮಾತ್ರ ಅಮಾವಾಸ್ಯೆಯ ಕತ್ತಲು ಆವರಿಸಿರುತ್ತದೆ. ಮಾರುಕಟ್ಟೆಗಳಲ್ಲಿ ಪರ ಊರಿನ ಮೂರ್ತಿಗಳ ಅಬ್ಬರಕ್ಕೆ ಮೂರ್ತಿಗಳ ತಯಾರಿಸುವ ಸ್ಥಳೀಯ ಕೆಲ ಕುಟುಂಬಗಳು ತಮ್ಮ ಕಾಯಕವನ್ನೇ ಕೈಬಿಟ್ಟಿವೆ.

ಆದರೆ ಇದ್ಯಾವುದನ್ನೂ ಲೆಕ್ಕಿಸದೇ ಹಲವು ಕುಟುಂಬಗಳು ಹಿರಿಯರ ಮಾರ್ಗ ಅನುಸರಿಸಿ ಕುಲಕಸಬು ಮುನ್ನಡೆಸುತ್ತಿವೆ. ಇದಕ್ಕೆ ನಿದರ್ಶನವೆಂಬಂತೆ ಪಟ್ಟಣದ ಕೋಟೆ ಪ್ರದೇಶದ ಅಶೋಕ ಚಿತ್ರಗಾರ ಹಲವು ದಶಕಗಳಿಂದ ಮಣ್ಣಿನ ಮೂರ್ತಿಗಳ ತಯಾರಿಸಿ ಮಾರುಕಟ್ಟೆಯಲ್ಲಿ ಮಾರಾಟ ಮಾಡುವ ಕಾಯಕ ಮಾಡುತ್ತಿದೆ. ಹಬ್ಬದಲ್ಲಿ ಮಣ್ಣಿನ ಎತ್ತುಗಳನ್ನು ಕಡಿಮೆ ಬೆಲೆಗೆ ಕೇಳುತ್ತಾರೆ. ಮಣ್ಣು ಹೊತ್ತು ತಂದು ಮೂರ್ತಿ ಮಾಡಿದಷ್ಟು ಪರಿಶ್ರಮಕ್ಕೆ ತಕ್ಕ ಫಲ ಸಿಗುತ್ತಿಲ್ಲ. ಬೇಡಿಕೆ ಇದೆ ಆದರೆ 40-50 ರೂ. ಗಳಿಗೆ ಒಂದು ಜತೆ ಮಣ್ಣೆತ್ತುಗಳನ್ನು ಕೊಟ್ಟರು ಮಾರುಕಟ್ಟೆಗಳಲ್ಲಿ ಚೌಕಾಸಿ ಮಾಡುವುದನ್ನು ಜನ ಬಿಡಲ್ಲ. ಅಲ್ಲದೇ ಎತ್ತುಗಳನ್ನು ತಯಾರಿಸಲು ಈ ಭಾಗದಲ್ಲಿ ಸೂಕ್ತ ಕೆಂಪು ಮಣ್ಣು ಸಿಗುತ್ತಿಲ್ಲ. ಹರಳು ಮಿಶ್ರಿತ ಮಣ್ಣು ಇರುವುದರಿಂದ ಈ ಬಾರಿ ಕೊಪ್ಪಳ ಜಿಲ್ಲೆಯ ಕಿನ್ನಾಳ ಗ್ರಾಮದಿಂದ ಕೆಂಪುಮಣ್ಣು ತಂದು ಮಣ್ಣಿನ ಎತ್ತುಗಳನ್ನು ತಯಾರಿಸಿದ್ದೇವೆ. ಆದರೂ ಹೊಟ್ಟೆಪಾಡಿಗೆ ಮಾಡಲೇಬೇಕಾದ ಅನಿವಾರ್ಯತೆ ಇದೆ ಎನ್ನುತ್ತಾರೆ ಮಾಲಾ ಅಶೋಕ ಜಿನಗಾರ

„ದಿಗಂಬರ ಎನ್‌ ಕುರ್ಡೆಕರ

Advertisement

Udayavani is now on Telegram. Click here to join our channel and stay updated with the latest news.

Next