Advertisement

ರೈತರಿಗೆ ಸ್ಪಂದಿಸದ ಸರ್ಕಾರ ಬೇಡ: ಹೋರಾಟವೊಂದೇ ದಾರಿ

06:11 PM Feb 28, 2024 | Team Udayavani |

ಉದಯವಾಣಿ ಸಮಾಚಾರ
ಹಾನಗಲ್ಲ: ರೈತರ ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಹಾಗೂ ಸರಕಾರದ ರೈತ ವಿರೋಧಿ  ನೀತಿ ಖಂಡಿಸಿ ಮಂಗಳವಾರ ತಹಶೀಲ್ದಾರ್‌ ಕಚೇರಿ ಆವರಣದಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ತಾಲೂಕು ಘಟಕದ ನೇತೃತ್ವದಲ್ಲಿ ರೈತರು ಪ್ರತಿಭಟನೆ ನಡೆಸಿದರು.

Advertisement

ಈ ವೇಳೆ ಮಾತನಾಡಿದ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಜಿಲ್ಲಾಧ್ಯಕ್ಷ ಆರ್‌.ವಿ. ಕೆಂಚಳ್ಳೇರ, ರೈತರ ನ್ಯಾಯಯುತ
ಬೇಡಿಕೆಗಳಿಗೆ ಸ್ಪಂದಿ ಸದ ಸರಕಾರಗಳ ಅಗತ್ಯ ನಮಗಿಲ್ಲ. ರೈತರ ಸಂಕಷ್ಟಗಳಿಗೆ ಸ್ಪಂದಿಸದ ಜನಪ್ರತಿನಿಧಿಗಳು ನಮಗೆ ಬೇಕಾಗಿಲ್ಲ.

ದೆಹಲಿಯಲ್ಲಿ ನಡೆದಿರುವ ಹೋರಾಟ ಇಡೀ ರೈತ ಸಮುದಾಯದ ಹೋರಾಟ, ಅದನ್ನು ಬೆಂಬಲಿಸುತ್ತೇವೆ ಎಂದು ಸ್ಪಷ್ಟಪಡಿಸಿದರು. ರೈತ ಸಂಘಟನೆಗಳು ನಿರಂತರ ಹೋರಾಟ ಮಾಡುತ್ತಲೇ ಇದ್ದರೂ ಅಧಿಕಾರಿಗಳು ಕಣ್ತೆರೆಯುತ್ತಿಲ್ಲ. ತಾಲೂಕಿನ ಸರಕಾರಿ ಕಚೇರಿಗಳಲ್ಲಿ ರೈತರ ಪ್ರಕರಣಗಳು ಧೂಳು ತಿನ್ನುತ್ತಿವೆ.

ಹೇಳುವವರು, ಕೇಳುವವರು ಇಲ್ಲದ ಈ ಆಡಳಿತದಿಂದಾಗಿ ಜನತೆ ಬೇಸತ್ತಿದ್ದಾರೆ. ರಾಜ್ಯ ಸರಕಾರ ರೈತರನ್ನು ಕಂಗೆಡಿಸಿದ ಬರಕ್ಕೆ
2 ಸಾವಿರ ರೂ. ಪರಿಹಾರ ನೀಡಿರುವುದು ಹಾಸ್ಯಾಸ್ಪದ. ಅದನ್ನು ರೈತ ಮುಖಂಡರು ಸರಕಾರಕ್ಕೆ ಮರಳಿ ನೀಡಿದ್ದೇವೆ. ಕೇಂದ್ರ
ಹಾಗೂ ರಾಜ್ಯ ಸರಕಾರಕ್ಕೆ ರೈತರ ನೋವು ಅರ್ಥವಾಗುತ್ತಿಲ್ಲ. ಈ ಸರಕಾರ ಯಾರಿಗಾಗಿ ಇದೆ ಎಂಬುದೇ ಅರ್ಥವಾಗುತ್ತಿಲ್ಲ. ರೈತರೇ ಎಚ್ಚರಗೊಳ್ಳಿ ನಮ್ಮ ಸಮಸ್ಯೆ ಪರಿಹಾರಕ್ಕೆ ಹೋರಾಟವೊಂದೇ ದಾರಿ.

ಅಧಿಕಾರಿಗಳೇ ಸಬೂಬುಗಳನ್ನು ಹೇಳಿ ದಾಟಿಕೊಳ್ಳುವ ಷಡ್ಯಂತ್ರ ಬೇಡ. ಇದು ಸಂಕಷ್ಟದ ಕಾಲ. ರೈತರು ಬಂಡೆದ್ದರೆ ಕ್ರಾಂತಿಯೇ
ಆದೀತು. ದೆಹಲಿಯಲ್ಲಿ ನಡೆದ ರೈತರ ಹೋರಾಟವನ್ನು ಬೆಂಬಲಿಸಿ ಮಾ. 5ರಂದು ಹಾವೇರಿಯಲ್ಲಿ ಜಿಲ್ಲಾಮಟ್ಟದ ಪ್ರತಿಭಟನೆ
ನಡೆಸಲಾಗುವುದು ಎಂದು ತಿಳಿಸಿದರು.

Advertisement

ತಹಶೀಲ್ದಾರ್‌ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು. ರೈತ ಸಂಘದ ಮುಖಂಡರಾದ ಅಡಿವೆಪ್ಪ ಆಲದಕಟ್ಟಿ, ಮಹೇಶ ವಿರುಪಣ್ಣನವರ, ಮರಿಗೌಡ ಪಾಟೀಲ, ಮಲ್ಲೇಶಪ್ಪ ಪರಪ್ಪನವರ, ಸೋಮಣ್ಣ ಜಡೆಗೊಂಡರ, ಶ್ರೀಕಾಂತ ದುಂಡಣ್ಣನವರ, ರುದ್ರಪ್ಪ ಹಣ್ಣಿ, ವಾಸುದೇವ ಕಮಾಟಿ, ರಾಜೀವ್‌ ದಾನಪ್ಪನವರ, ಮಹಲಿಂಗಪ್ಪ ಅಕ್ಕಿವಳ್ಳಿ, ಶ್ರೀಧರ ಮಲಗುಂದ ಸೇರಿದಂತೆ ರೈತರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು. ಎರಡು ಗಂಟೆಗಳಿಗೂ ಹೆಚ್ಚು ಕಾಲ ರೈತ ಮುಖಂಡರು ರೈತರ ಸಮಸ್ಯೆಗಳಿಗೆ ಸ್ಪಂದಿಸದ ಅಧಿಕಾರಿಗಳ ಕ್ರಮವನ್ನು ಖಂಡಿಸಿದರು. ಹಲವು ರೈತರು ವಿವಿಧ ಇಲಾಖೆಗಳಲ್ಲಿ ಎರಡೆರಡು ವರ್ಷಗಳಾದರೂ ತಮ್ಮ ಕೆಲಸಗಳು ಆಗದೇ ಇರುವ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next