ವಿಜಯಪುರ: ಜಿಲ್ಲೆಯಲ್ಲಿ ಭೀಕರ ಬರ ಆವರಿಸಿದ್ದರೂ ಜಿಲ್ಲೆಯಲ್ಲಿ ಬರ ಗಂಭೀರ ಪರಿಸ್ಥಿತಿ ನಿರ್ವಹಣೆಯಲ್ಲಿ ಆಡಳಿತಗಾರರು ಸಭೆ, ಮಾತಿನಲ್ಲಿ ಕಾಲಹರಣ ಮಾಡುತ್ತಿದ್ದಾರೆ. ಕೂಡಲೇ ಜಿಲ್ಲೆಯಾದ್ಯಂತ ಅಗತ್ಯ ಅನುದಾನ ಬಿಡುಗಡೆ ಮಾಡಿ ಸರ್ಕಾರ ಬರ ಕಾಮಗಾರಿ ಆರಂಭಿಸಬೇಕು ಎಂದು ಆಗ್ರಹಿಸಿ ರೈತ ಕಾರ್ಮಿಕರ ಸಂಘಟನೆ ನಗರದಲ್ಲಿ ಪ್ರತಿಭಟನೆ ನಡೆಸಿತು.
ಶನಿವಾರ ನಗರದಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿ ಜಿಲ್ಲಾಡಳಿತದ ಮೂಲಕ ಸರ್ಕಾರಕ್ಕೆ ಮನವ ಸಲ್ಲಿಸಿದ ಪ್ರತಿಭಟನಾಕಾರರು, ಜಿಲ್ಲೆಯಲ್ಲಿ ಬರ ಪರಿಸ್ಥಿತಿ ಅತ್ಯಂತ ಗಂಭೀರ ಸ್ಥಿತಿಯಲ್ಲಿದೆ. ಬರ ಕಾಮಗಾರಿ ಆರಂಭಕ್ಕೆ ಸರ್ಕಾರ ತಕ್ಷಣ ಕ್ರಮ ಕೈಗೊಳ್ಳಬೇಕು. ಇದಕ್ಕಾಗಿ ಅಗತ್ಯ ಇರುವ ಅನುದಾನ ಬೇಗ ಬಿಡುಗಡೆ ಮಾಡಬೇಕು. ಕೇವಲ ಸಭೆ, ಸಮಾರಂಭ, ಚರ್ಚೆ, ಮಾತು, ಸಮೀಕ್ಷೆ ಅಂತೆಲ್ಲ ಕಾಲಹರಣ ಮಾಡಬಾರದು ಎಂದು ದೂರಿದರು.
ಸಂಘಟನೆಯ ಬಿ.ಭಗವಾನ್‌ರೆಡ್ಡಿ ಮಾತನಾಡಿ, ಬರಗಾಲದಿಂದ ತತ್ತರಿಸಿದ ರೈತರಿಗೆ, ಕೃಷಿ ಕಾರ್ಮಿಕರಿಗೆ ಯಾವುದೇ ಸಹಾಯ, ಸಹಕಾರ, ಬೆಳೆ ಪರಿಹಾರ, ಬರಗಾಲ ಕಾಮಗಾರಿ ಆರಂಭಿಸದ ಕಾರಣ ಕಳೆದ ನಾಲ್ಕು ವರ್ಷಗಳಿಂದ ಭೀಕರ ಬರ ಕಾಡುತ್ತಿದೆ. ಉತ್ತರ ಕರ್ನಾಟಕ ಸೇರಿದಂತೆ ರಾಜ್ಯದ 24 ಜಿಲ್ಲೆಗಳಲ್ಲಿ ಮುಂಗಾರು ವೈಫಲ್ಯದಿಂದ ರೈತರು ಕಂಗಾಲಾಗಿದ್ದಾರೆ. ರಾಜ್ಯದ ನೂರಕ್ಕೂ ಹೆಚ್ಚು ತಾಲೂಕುಗಳು ಭೀಕರ ಬರಗಾಲ ಪೀಡಿತ ಎಂದು ಸರ್ಕಾರವೇ ಘೋಷಿಸಿದೆ. ಇದಲ್ಲದೆ ಹಿಂಗಾರು ಮಳೆ ಸಹ ಆಗದೇ ಇರುವುದು ರೈತನ್ನು ಮತ್ತಷ್ಟು ಸಂಕಷ್ಟಕ್ಕೆ ದೂಡಿದೆ ಎಂದು ಆತಂಕ ತೋಡಿಕೊಂಡರು.
ಈಗಾಗಲೇ ಹತ್ತಾರು ಸಮಸ್ಯೆಗಳಿಂದ ಬಳಲುತ್ತಿದ್ದ ರೈತರು ಈ ವರ್ಷ ಬೆಳೆ ಬೆಳೆಯಲು ಮಾಡಿದ ಸಾಲ ತೀರಿಸಲಾಗದೇ ಕಂಗಾಲಾಗಿದ್ದಾರೆ. ಸಾಲಗಾರರ ಕಾಟದಿಂದ ಮರ್ಯಾದೆಗೆ ಹೆದರಿ ರೈತರು ಆತ್ಮಹತ್ಯೆ ಹಾದಿ ಹಿಡಿದ್ದಾರೆ. ಸರಕಾರ ಸಾಲಮನ್ನಾ ಮಾಡುವುದಾಗ ಘೋಷಿಸಿದ್ದರೂ ಕೆಲ ಬ್ಯಾಂಕ್‌ಗಳು ರೈತರಿಗೆ ನೋಟಿಸ್ ನೀಡಿ ಕಿರುಕುಳ ನೀಡುತ್ತಿವೆ. ಮತ್ತೂಂದೆಡೆ ರೈತರಿಗೆ ಬರುವ ಅತ್ಯಲ್ಪ ಬೆಳೆನಷ್ಟ ಪರಿಹಾರ, ಬೆಳೆ ಮಾರಾಟದಿಂದ ಬರುವ ಹಣವನ್ನೂ ಬ್ಯಾಂಕ್‌ಗಳು ರೈತರ ಸಾಲಕ್ಕೆ ಜಮೆ ಮಾಡಿಕೊಂಡು ಆರ್ಥಿಕ ಸಂಕಷ್ಟಕ್ಕೆ ದೂರುತ್ತಿವೆ ಎಂದು ಕಿಡಿ ಕಾರಿದರು.
ಸಂಘಟನೆ ಜಿಲ್ಲಾ ಸಂಚಾಲಕ ಬಾಳು ಜೇವೂರ ಮಾತನಾಡಿ, ಸರ್ಕಾರ ವಿಜಯಪುರ ಜಿಲ್ಲೆ ಎಲ್ಲ ತಾಲೂಕುಗಳು ಬರಪೀಡಿತ ಎಂದು ಘೋಷಿಸಿ ಎರಡು ತಿಂಗಳು ಕಳೆದಿವೆ. ಹೀಗಿದ್ದರೂ ಈಗಲೂ ಜಲ್ಲೆಯಲ್ಲಿ ಬರ ಕಾಮಗಾರ ಆರಂಭಿಸಿಲ್ಲ. ರೈತರ ವಿಷಯದಲ್ಲಿ ಸರ್ಕಾರ ಅತ್ಯಂತ ನಿಷ್ಕಾಳಜಿ ಹೊಂದಿದೆ ಎಂಬುದಕ್ಕೆ ಇದು ನಿದರ್ಶನವಾಗಿದೆ. ಸರ್ಕಾರ ಈಗಲಾದರೂ ರೈತರ-ಕೃಷಿ ಕಾರ್ಮಿಕರ ಬೇಡಿಕೆಗಳಿಗೆ ಸ್ಪಂದಿಸಿ ಸರಕಾರ ಕೂಡಲೇ ಎಲ್ಲ ರೀತಿಯ ಪರಿಹಾರ ಕಾಮಗಾರಿ ಆರಂಭಿಸಬೇಕು. ರೈತರು, ಕೃಷಿ ಕಾರ್ಮಿಕರಿಗೆ ಆತ್ಮಸ್ಥೈರ್ಯ ತುಂಬಬೇಕು ಎಂದು ಆಗ್ರಹಿಸಿದರು.
ಭೀಕರ ಬರ ಆವರಿಸಿರುವ ಕಾರಣ ಕೃಷಿಯನ್ನೇ ನಂಬಿದ್ದ ರೈತರು ಮಾತ್ರವಲ್ಲ ಕೃಷಿ ಕಾರ್ಮಿಕರ ಜೀವನ ನಿರ್ವಹಣೆ ಕಷ್ಟವಾಗಿದೆ. ಪರಿಣಾಮ ಕುಟುಂಬ ನಿರ್ವಹಣೆಗೆ ನಗರ ಪ್ರದೇಶಗಳಿಗೆ ಗ್ರಾಮೀಣ ಜನರು ಗುಳೆ ಹೋಗಿದ್ದಾರೆ. ಸರ್ಕಾರ ಇದೇ ರೀತಿ ನಿರ್ಲಕ್ಷé ತಾಳಿದಲ್ಲಿ ಭವಿಷ್ಯದಲ್ಲಿ ಕೃಷಿ
ಕಾರ್ಮಿಕರೇ ಸಿಗದಂತಾಗುತ್ತದೆ. ಸರ್ಕಾರ ಕೂಡಲೇ ಜಿಲ್ಲೆಯಲ್ಲಿರುವ ಎಲ್ಲ ಕೆರೆಗಳ ಹೂಳೆತ್ತುವ ಕಾಮಗಾರಿ ಆರಂಭಿಸಿ ಕಾರ್ಮಿಕರಿಗೆ ಸ್ಥಳೀಯವಾಗಿಯೇ ಉದ್ಯೋಗ ನೀಡಬೇಕು. ಕೆರೆಗಳಿಗೆ ನೀರು ತುಂಬಿಸಿ ಅಂತರ್ಜಲ ಹೆಚ್ಚಿಸಿ ರೈತರಿಗೆ ಅನುಕೂಲ ಮಾಡಿಕೊಡಬೇಕು ಎಂದು ಆಗ್ರಹಿಸಿದರು.
ಮಹಾದೇವ ಲಿಗಾಡೆ, ಶ್ರೀಶೈಲ ನಿಮಂಗ್ರೆ, ತಿಪರಾಯ ಹತ್ತರಕಿ, ಯಲ್ಲಪ್ಪ ರತ್ನಾಪುರ, ಹುಸೇನಸಾಬ ದಳವಾಯಿ, ಸುನೀಲಗೌಡ ಬಿರಾದಾರ, ಧರೆಪ್ಪ ನಿಮಂಗ್ರೆ, ಧರೆಪ್ಪ ಗೋಗ್ರೆ, ಕಲ್ಲಪ್ಪ ನಿಮಂಗ್ರೆ, ಭೀಮಪ್ಪ ಅಗಸರ, ಸುಂದ್ರವ್ವ ಬಳೂತಿ, ಮಲ್ಲಪ್ಪ ಕಲೂಡಿ, ನಿಂಗಯ್ಯ ನಾಗರದಿನ್ನಿಮಠ,
ಶಿವಗಂಗಾ ಕಟ್ಟಿಮನಿ, ಕುರ್ಷಿದ್‌ಬಾನು ಕೂಡಗಿ, ಬೌರವ್ವ ದಳವಾಯಿ, ಶಾಂತಾ ಹಿರೇಮಠ, ಆಸಿಂ ಸಂಗಾಪುರ, ಬಾಳಾಸಾಬ ಕದಂ ಸೇರಿದಂತೆ ಇತರರು ಭಾಗವಹಿಸಿದ್ದರು.