Advertisement
ಗುರುವಾರ ಮುಖ್ಯಮಂತ್ರಿ ಕುಮಾರಸ್ವಾಮಿ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಸಾಲ ಮನ್ನಾ ಕುರಿತ ಮಾರ್ಗಸೂಚಿಗೆ ಒಪ್ಪಿಗೆ ನೀಡಿದ್ದು, ಅದರಂತೆ ಸರ್ಕಾರಿ ಆದೇಶ ಹೊರಡಿಸಲಾಗಿದೆ. 2018ರ ಜುಲೈ 10ರವರೆಗೆ ರೈತರು ಸಹಕಾರ ಬ್ಯಾಂಕ್‌ಗಳಲ್ಲಿ ಮಾಡಿರುವ ಸಾಲಗಳಿಗೆ ಇದು ಅನ್ವಯವಾಗಲಿದೆ. ಅದರಂತೆ ರಾಜ್ಯದಲ್ಲಿ ಸುಮಾರು 22 ಲಕ್ಷ ರೈತರು ಸಹಕಾರ ಬ್ಯಾಂಕ್‌ಗಳಲ್ಲಿ ಒಟ್ಟಾರೆ 10,734 ಕೋಟಿ ರೂ. ಸಾಲ ಪಡೆದಿದ್ದು, ಈ ಪೈಕಿ 20.38 ಲಕ್ಷ ರೈತರ 9448 ಕೋಟಿ ರೂ. ಸಾಲ ಮನ್ನಾ ಆಗಲಿದೆ.
Related Articles
Advertisement
ಸಾಲ ಮನ್ನಾದ ಎಲ್ಲಾ ಮೊತ್ತವನ್ನು ಏಕಕಾಲದಲ್ಲಿ ನೀಡುವುದಿಲ್ಲ. ಸಹಕಾರ ಬ್ಯಾಂಕ್‌ಗಳು ರೈತರ ಸಾಲದ ಅವಧಿ ಮುಗಿಯುತ್ತಿದ್ದಂತೆ ಆ ಕುರಿತು ಹಣಕಾಸು ಇಲಾಖೆಗೆ ಮಾಹಿತಿ ನೀಡಬೇಕು. ನಂತರ ಈ ಮೊತ್ತವನ್ನು ಸಹಕಾರ ಬ್ಯಾಂಕ್‌ಗಳಿಗೆ ಪಾವತಿಸಲಾಗುತ್ತದೆ ಎಂದು ಹೇಳಿದರು.
ಮಾರ್ಗಸೂಚಿಗಳು– ರಾಜ್ಯದ ಸಹಕಾರ ಸಂಸ್ಥೆಗಳು 2018ರ ಜುಲೈ 10ರವರೆಗೆ ವಿತರಿಸಿದ ಅಲ್ಪಾವಧಿ ಬೆಳೆ ಸಾಲದ ಪೈಕಿ ಇರುವ ಹೊರ ಬಾಕಿಯಲ್ಲಿ ರೈತನ ಗರಿಷ್ಠ 1 ಲಕ್ಷ ರೂ.ವರೆಗೆ ಸಾಲ ಮನ್ನಾ ಆಗಲಿದೆ. ಈ ಅವಧಿಯಲ್ಲಿ ಸಾಲ ಪಡೆದ ರೈತರು ಮೃತಪಟ್ಟಿದ್ದಲ್ಲಿ ಅವರ ವಾರಸುದಾರರಿಗೂ ಈ ಸೌಲಭ್ಯ ದೊರೆಯುತ್ತದೆ. ಸಾಲ ಮನ್ನಾ ಯೋಜನೆಯಡಿ ಮನ್ನಾ ಮಾಡುವ ಸಾಲವು ರೈತರು ಸಾಲ ಮರುಪಾವತಿ ಮಾಡುವ ಗಡುವು ದಿನಾಂಕದಿಂದ ಜಾರಿಗೆ ಬರುತ್ತದೆ.
– 2018ರ ಜುಲೈ 10ಕ್ಕೆ ಇದ್ದ ಸಾಲದ ಹೊರ ಬಾಕಿ ಇರುವ ಮೊತ್ತವನ್ನು ಸರ್ಕಾರದ ಆದೇಶ ಜಾರಿಯಾಗುವ ದಿನಾಂಕಕ್ಕೆ ಪೂರ್ಣವಾಗಿ ಅಥವಾ ಕಂತುಗಳ ಮೂಲಕ ಮರುಪಾವತಿಸಿದ್ದಲ್ಲಿ ಮನ್ನಾ ಆಗಬೇಕಾದ ಮೊತ್ತವನ್ನು ರೈತರ ಉಳಿತಾಯ ಖಾತೆಗೆ ಜಮಾ ಮಾಡಲಾಗುವುದು.
– ಸಾಲ ಮನ್ನಾ ಆಗುವ ಅನುದಾದವನ್ನು ಡಿಬಿಟಿ ಮೂಲಕ ರೈತರ ಉಳಿತಾಯ ಖಾತೆಗೆ ಬಿಡುಗಡೆ ಮಾಡಲಾಗುವುದು. ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳು, ಲ್ಯಾಂಪ್ಸ್, ಡಿಸಿಸಿ ಬ್ಯಾಂಕುಗಳು ಮತ್ತು ಪಿಕಾರ್ಡ್ ಬ್ಯಾಂಕುಗಳು ವಿತರಿಸಿದ ಅಲ್ಪಾವಧಿ ಬೆಳೆ ಸಾಲಗಳಿಗೆ ಇದು ಅನ್ವಯವಾಗಲಿದೆ.
– ಯಾವುದೇ ರೈತರು ಒಂದಕ್ಕಿಂತ ಹೆಚ್ಚಿನ ಸಹಕಾರ ಸಂಘ/ಸಹಕಾರ ಬ್ಯಾಂಕುಗಳಲ್ಲಿ ಸಾಲ ಪಡೆದಿದ್ದಲ್ಲಿ ಒಂದು ಸಂಸ್ಥೆಯಿಂದ ಮಾತ್ರ ಸಾಲ ಮನ್ನಾ ಸೌಲಭ್ಯ ದೊರೆಯಲಿದೆ. ಯಾರಿಗೆ ಅನ್ವಯ ಆಗದು?
– ಬೆಳೆ ಸಾಲ ಪಡೆದ ರೈತರು ಸರ್ಕಾರಿ, ಸಹಕಾರಿ ಮತ್ತು ಇತರೆ ಕ್ಷೇತ್ರದ ನೌಕರರಾಗಿದ್ದು ಪ್ರತಿ ತಿಂಗಳು ಒಟ್ಟಾರೆ 20 ಸಾವಿರ ರೂ.ಗಿಂತ ಹೆಚ್ಚಿನ ವೇತನ ಅಥವಾ ಪಿಂಚಣಿ ಪಡೆಯುತ್ತಿರುವ ರೈತರು.
– ಕಳೆದ ಮೂರು ವರ್ಷಗಳಲ್ಲಿ ಯಾವುದಾದರೂ ಒಂದು ವರ್ಷದಲ್ಲಿ ಆದಾಯ ತೆರಿಗೆ ಪಾವತಿಸಿದ್ದಲ್ಲಿ ಅಂತಹ ರೈತರು.
– ರೈತರಿಗೆ ತಮ್ಮ ಕೃಷಿ ಉತ್ಪನ್ನಗಳನ್ನು ಒತ್ತೆ ಇಟ್ಟುಕೊಂಡು ನೀಡುವ ಅಡುವು ಸಾಲ, ಚಿನ್ನಾಭರಣ ಅಡವಿಟ್ಟುಕೊಂಡು ನೀಡುವ ಸಾಲ, ವಾಹನ ಖರೀದಿಸಲು ನೀಡುವ ಸಾಲ, ಪಶು ಭಾಗ್ಯ ಯೋಜನೆಯಲ್ಲಿ ಪಶು ಆಹಾರ ಕೊಳ್ಳಲು ನೀಡಲು ಸಾಲ, ಮೀನುಗಾರಿಕೆ ಉದ್ದೇಶಗಳಿಗೆ ನೀಡುವ ಸಾಲ , ಸ್ವಸಹಾಯ ಗುಂಪುಗಳಿಗೆ ಮತ್ತು ಜಂಟಿ ಬಾದ್ಯತಾ ಗುಂಪುಗಳಿಗೆ ನೀಡುವ ಸಾಲ. ಸುಸ್ತಿದಾರರಿಗೆ ಷರತ್ತು
– ರೈತರ ಹೆಸರಿನಲ್ಲಿ 2018ರ ಜುಲೈ 10ಕ್ಕೆ ಡಿಸಿಸಿ ಬ್ಯಾಂಕ್ ಅಥವಾ ಪ್ಯಾಕ್ಸ್‌ನಲ್ಲಿ ಮುದ್ದತ್ತು ಠೇವಣಿ ಇದ್ದಲ್ಲಿ ಅಂತಹ ಮೊತ್ತವನ್ನು ಹೊರ ಬಾಕಿಯಲ್ಲಿ ಕಳೆಯತಕ್ಕದ್ದು.
– ಈ ಯೋಜನೆಯಲ್ಲಿ ಅರ್ಹ ಇರುವ 1 ಲಕ್ಷ ರೂ. ಅಸಲು ಮತ್ತು ಸಂಪೂರ್ಣ ಚಾಲ್ತಿ ಸಾಲಕ್ಕೆ ಸಂಬಂಧಿಸಿದಂತೆ ಬಡ್ಡಿಯನ್ನು ಜಾರಿಯಲ್ಲಿರುವ ಬಡ್ಡಿ ಸಹಾಯಧನ ಯೋಜನೆಯಡಿ ಭರಿಸಲಾಗುವುದು. ಸುಸ್ತಿಯಾದ ಪ್ರಕರಣಗಳಲ್ಲಿ ಬಡ್ಡಿಯನ್ನು ರೈತರು ಭರಿಸಬೇಕು. ರಾಷ್ಟ್ರೀಕೃತ ಬ್ಯಾಂಕ್ ಸಾಲ ಮನ್ನಾ ಮುಂದಿನ ಸಂಪುಟ ಸಭೆಯಲ್ಲಿ ಆದೇಶ
ಬಜೆಟ್‌ನಲ್ಲಿ ಘೋಷಿಸಿದಂತೆ ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿ ರೈತರು ಮಾಡಿರುವ ಬೆಳೆ ಸಾಲವೂ ಮನ್ನಾ ಆಗಲಿದ್ದು, ಮುಂದಿನ ಸಚಿವ ಸಂಪುಟ ಸಭೆಯಲ್ಲಿ ಈ ಕುರಿತು ನಿರ್ಧಾರ ಕೈಗೊಂಡು ಆದೇಶ ಹೊರಡಿಸಲಾಗುವುದು ಎಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ. ರೈತರ ಸಾಲ ಮನ್ನಾಕ್ಕೆ ರಾಷ್ಟ್ರೀಕೃ ಬ್ಯಾಂಕ್‌ಗಳು ಒಪ್ಪುತ್ತಿಲ್ಲ ಎಂದು ಪ್ರತಿಪಕ್ಷಗಳು ಸುಳ್ಳು ಮಾಹಿತಿ ನೀಡಿ ರೈತರನ್ನು ದಾರಿತಪ್ಪಿಸುತ್ತಿವೆ. ದೆಹಲಿಯಲ್ಲಿ ಕುಳಿತು ಬ್ಯಾಂಕ್‌ಗಳು ಸಾಲ ಮನ್ನಾಕ್ಕೆ ಒಪ್ಪದಂತೆ ಪ್ರಯತ್ನ ಮಾಡುವವರು ಈ ರೀತಿ ಹೇಳುತ್ತಿದ್ದಾರೆ. ರೈತರ ಸಾಲ ಮನ್ನಾದ ಮೊತ್ತವನ್ನು ನಾಲ್ಕು ಕಂತುಗಳಲ್ಲಿ ಸರ್ಕಾರದಿಂದ ಪಡೆಯಲು ಬ್ಯಾಂಕ್‌ಗಳು ಈಗಾಗಲೇ ಒಪ್ಪಿಗೆ ನೀಡಿವೆ. ಈ ಕುರಿತಂತೆ ಕೆಲವೊಂದು ಸ್ಪಷ್ಟೀಕರಣಗಳ ಕಾರಣದಿಂದಾಗಿ ಆದೇಶ ಹೊರಡಿಸುವುದು ವಿಳಂಬವಾಗಿದೆ. ಮುಂದಿನ ಸಂಪುಟ ಸಭೆಯಲ್ಲಿ ಚರ್ಚಿಸಿ ಆದೇಶ ಹೊರಡಿಸಲಾಗುವುದು. ರೈತರನ್ನು ಉಳಿಸಿಕೊಳ್ಳಲು ಬೇಕಾದ ಎಲ್ಲಾ ಕೆಲಸವನ್ನು ಸರ್ಕಾರ ಮಾಡಲಿದ್ದು, ರೈತರು ಆತ್ಮಹತ್ಯೆಗೆ ಶರಣಾಗಬಾರದು ಎಂದು ಅವರು ಮನವಿ ಮಾಡಿದರು. ರಾಜ್ಯದ ರೈತರು ಮತ್ತು ಜನ ಸಾಮಾನ್ಯರಿಗಾಗಿ ಸರ್ಕಾರ ಮತ್ತಷ್ಟು ಹೊಸ ಯೋಜನೆಗಳನ್ನು ಪ್ರಕಟಿಸಲಿದೆ. ಸಚಿವ ಸಂಪುಟ ಸಭೆಯಲ್ಲಿ ಈ ಕುರಿತು ನಿರ್ಧಾರ ಕೈಗೊಂಡು ಸ್ವಾತಂತ್ರ್ಯ ದಿನ ಅಥವಾ ಗಣೇಶ ಚತುರ್ಥಿ ಸಂದರ್ಭದಲ್ಲಿ ಈ ಕುರಿತು ಘೋಷಣೆ ಮಾಡಲಾಗುವುದು.
– ಎಚ್.ಡಿ.ಕುಮಾರಸ್ವಾಮಿ, ಮುಖ್ಯಮಂತ್ರಿ ನಾನೇನು ದುಡ್ಡಿನ ಗಿಡ ಹಾಕಿಲ್ಲ
ಸಾಲ ಮನ್ನಾ ಘೋಷಣೆ ಮಾಡಿದ ತಕ್ಷಣ ಆದೇಶ ಹೊಡಿಸಲು ನಾನೇನು ದುಡ್ಡಿನ ಗಿಡ ಹಾಕಿದ್ದೀನಾ? ಅಧಿಕಾರಿಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕೆಲಸ ಮಾಡಬೇಕು. ಅದಕ್ಕೆ ಸ್ವಲ್ಪ ವಿಳಂಬವಾಗಿದೆ ಎಂದು ಮುಖ್ಯಮಂತ್ರಿ ಕುಮಾರಸ್ವಾಮಿ ಬೇಸರ ವ್ಯಕ್ತಪಡಿಸಿದ್ದಾರೆ. ಬೆಂಗಳೂರಿನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, ಸಾಲ ಮನ್ನಾ ಯೋಜನೆ ಆದೇಶ ಪ್ರಕಟವಾಗದಿರುವ ಬಗ್ಗೆ ಎದುರಾಗಿರುವ ಟೀಕೆಗಳಿಗೆ ಬೇಸರ ವ್ಯಕ್ತಪಡಿಸಿದ ಅವರು, 49 ಸಾವಿರ ಕೋಟಿ ಸಾಲ ಮನ್ನಾ ಮಾಡಿ ರೈತರೊಂದಿಗೆ ಹುಡುಗಾಟಿಕೆ ಆಡುತ್ತಿಲ್ಲ. ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕೆಲಸ ನಡೆಸುವುದು ಎಷ್ಟು ಕಷ್ಟ ಎಂದು ನನಗೆ ಗೊತ್ತಿದೆ. ನನ್ನ ನೋವನ್ನು ಯಾರಿಗೆ ಹೇಳಲಿ ಎಂದು ಪ್ರಶ್ನಿಸಿದರು.