Advertisement

ರೈತರ ಸಾಲ ಮನ್ನಾ ಮತ್ತು ಉತ್ತರಿಸಲಾಗದ ಪ್ರಶ್ನೆ

03:50 AM Jul 03, 2017 | Harsha Rao |

ನಮ್ಮ ದೇಶದಲ್ಲಿ ರೈತರ ಆಕ್ರೋಶ ಮುಗಿಲು ಮುಟ್ಟುತ್ತಿದೆ. ರೈತರ ಸಂಘಟಿತ ಪ್ರತಿಭಟನೆ ಹಲವು ರಾಜ್ಯಗಳಿಗೆ ಹಬ್ಬುತ್ತಿದೆ. ಮಧ್ಯಪ್ರದೇಶದ ಮಂಡಾÕರ್ನ್ನಲ್ಲಿ ಪ್ರತಿಭಟಿಸುತ್ತಿದ್ದ ರೈತರ ಮೇಲೆ ಪೊಲೀಸರು ಜೂನ್‌ 6ರಂದು ಗುಂಡು ಹಾರಿಸಿದಾಗ ಆರು ರೈತರು ಸಾವನ್ನಪ್ಪಿದರು. ಅದಾದ ಬೆನ್ನಿಗೇ ರೈತರ ಪ್ರತಿಭಟನೆ ಪಂಜಾಬ್, ಹರಿಯಾಣ, ರಾಜಸ್ಥಾನ, ಗುಜರಾತ್ ಮತ್ತು ಛತ್ತೀಸ್‌ಘಡ ರಾಜ್ಯಗಳಿಗೆ ವ್ಯಾಪಿಸಿದೆ.

Advertisement

ಕಳೆದ 21 ವರುಷಗಳಲ್ಲಿ ಆತ್ಮಹತ್ಯೆ ಮಾಡಿಕೊಂಡ ರೈತರ ಸಂಖ್ಯೆ 3,18,000 ದಾಟಿದೆ. ಈಗಲೂ ಪ್ರತಿದಿನವೂ ರೈತರು ಆತ್ಮಹತ್ಯೆಗೆ ಶರಣಾಗುತ್ತಿ¨ªಾರೆ. ಇದು ಕೃಷಿರಂಗದ ಗರ್ಭದಲ್ಲಿರುವ ತಲ್ಲಣಗಳ ಸೂಚಕ. ಆದರೂ, ಎಲ್ಲ ಸರಕಾರಗಳೂ ಈ ತಲ್ಲಣಗಳನ್ನೂ, ಅಪಾಯ ಸೂಚನೆಗಳನ್ನೂ, ನಿರ್ಲಕ್ಷಿಸಿವೆ. 2015ರಲ್ಲಿ 8,007 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದರೂ ಸರಕಾರಗಳು ಎಚ್ಚೆತ್ತು ಕೊಂಡಿಲ್ಲ.

ಕಳೆದ ಮೂರು ದಶಕಗಳಲ್ಲಿ ಹೀಗೇಕಾಯಿತೆಂದು ಹಿಂತಿರುಗಿ ನೋಡೋಣ. ಆರ್ಥಿಕ ಸುಧಾರಣೆ ನೀತಿ ಜಾರಿ ಆದಾಗಿನಿಂದ ಕೃಷಿರಂಗವು ನಿರ್ಲಕ್ಷ್ಯಕ್ಕೆ ಬಲಿಯಾಗಿದೆ.  ಇದಕ್ಕೆ ಕಾರಣ, ನಮ್ಮ ದೇಶಕ್ಕೆ ಜಾಗತಿಕ ಬ್ಯಾಂಕ್‌ ನೀಡಿದ್ದ ನಿರ್ದೇಶನ: 2015ರ ಹೊತ್ತಿಗೆ 400 ದಶಲಕ್ಷ ಜನರು ಗ್ರಾಮೀಣ ಪ್ರದೇಶಗಳಿಂದ ನಗರ ಪ್ರದೇಶಗಳಿಗೆ ವಲಸೆ ಹೋಗುವಂತೆ ಮಾಡಬೇಕು. ಅದಕ್ಕಾಗಿ ಕಳೆದ ಮೂವತ್ತು ವರುಷಗಳಲ್ಲಿ ಎಲ್ಲ ಸರಕಾರಗಳೂ ಕೃಷಿ ಎಂಬುದು ನಷ್ಟದ ವ್ಯವಹಾರ ಆಗುವಂತೆ ಮಾಡಿವೆ; ಆ ಮೂಲಕ ಹೆಚ್ಚೆಚ್ಚು ರೈತರು ಕೃಷಿಯನ್ನು ತೊರೆದು, ನಗರಗಳಿಗೆ ವಲಸೆ ಹೋಗುವಂತೆ ಮಾಡಿವೆ. ಆಹಾರದ (ಆಹಾರಧಾನ್ಯಗಳೂ ಸೇರಿ) ಹಣದುಬ್ಬರವನ್ನು ನಿಯಂತ್ರಿಸಲಿಕ್ಕಾಗಿ ರೈತರ ಫ‌ಸಲಿಗೆ ಕಡಿಮೆ ಬೆಲೆ ಪಾವತಿಸುವ ವ್ಯವಸ್ಥೆ ಚಾಲ್ತಿಯಲ್ಲಿದೆ; ಅದು ಎಷ್ಟು ಕಡಿಮೆಯೆಂದರೆ, ಫ‌ಸಲಿನ ಉತ್ಪಾದನಾ ವೆಚ್ಚಕ್ಕಿಂತಲೂ ಕಡಿಮೆ. ಹೀಗಿರುವಾಗ ರೈತರು ಹತಾಶರಾಗುವುದು ಖಂಡಿತ.

ವರುಷದಿಂದ ವರುಷಕ್ಕೆ ರೈತರ ಹತಾಶೆ ಹೆಚ್ಚುತ್ತಿದೆ. 2016ರಲ್ಲಿ ನಡೆದಿರುವ ಆರ್ಥಿಕ ಸಮೀಕ್ಷೆ  ಕೃಷಿರಂಗದ ಕಹಿಸತ್ಯಗಳನ್ನು ಬೆಳಕಿಗೆ ತಂದಿದೆ. ಹದಿನೇಳು ರಾಜ್ಯಗಳ ಕೃಷಿಕುಟುಂಬಗಳ ವಾರ್ಷಿಕ ಸರಾಸರಿ ಆದಾಯ ಕೇವಲ ರೂ.20,000. ಅಂದರೆ, ತಿಂಗಳಿಗೆ ರೂ.1,700ಕ್ಕಿಂತ ಕಡಿಮೆ. ಇಂತಹ ಅಲ್ಪ ಆದಾಯಕ್ಕೆ ಕಳೆದ ಮೂವತ್ತು ವರುಷಗಳಲ್ಲಿ ಅನುಸರಿಸಿದ ಆರ್ಥಿಕ ಧೋರಣೆಗಳೇ ಕಾರಣವಲ್ಲವೇ?

ಇಂತಹ ದಾರುಣ ಪರಿಸ್ಥಿತಿಯಲ್ಲಿ ನೀತಿನಿರೂಪಕರು ಮತ್ತು ಆರ್ಥಿಕ ತಜ್ಞರು ಏನು ಮಾಡುತ್ತಿ¨ªಾರೆ? ಪ್ರತಿಯೊಂದು ಬೆಳೆ ಕೊಯ್ಲಿನ ನಂತರ, ಮಾರುಕಟ್ಟೆ ಕುಸಿಯುತ್ತಿದೆ. ಮಧ್ಯಪ್ರದೇಶದಲ್ಲಿ ಈರುಳ್ಳಿ, ಆಲೂಗಡ್ಡೆ, ಬೆಳ್ಳುಳ್ಳಿ ಮತ್ತು ಟೊಮೆಟೊಗಳ ಬೆಲೆ ಕುಸಿದು, ರೈತರು ಅವನ್ನು ರಸ್ತೆಗೆ ಎಸೆಯಬೇಕಾಯಿತು. ಕಳೆದ ವರುಷ ಬೆಳ್ಳುಳ್ಳಿ ಕ್ವಿಂಟಾಲಿಗೆ ರೂ.5,000ದಿಂದ ರೂ.7,000 ದರದಲ್ಲಿ ಮಾರಾಟವಾಗಿತ್ತು. ಈ ವರ್ಷ ವರ್ತಕರು ಬೆಳ್ಳುಳ್ಳಿ ಖರೀದಿಸಿದ ದರ ಕ್ವಿಂಟಾಲಿಗೆ ಕೇವಲ ರೂ.2,000. ಆದರೆ, ರೈತರ ಫ‌ಸಲಿಗೆ ಕನಿಷ್ಠ ಬೆಂಬಲ ಬೆಲೆಯಾದರೂ ಸಿಗುವುದನ್ನು ಖಚಿತಪಡಿಸಲು ಸರಕಾರ ತಯಾರಿಲ್ಲ. ಇದರಿಂದಾಗಿ, ರೈತರು ಸಾಲದ ಸುಳಿಯಲ್ಲಿ ಇನ್ನಷ್ಟು ಆಳಕ್ಕೆ ಇಳಿಯುತ್ತಿದ್ದಾರೆ.

Advertisement

ಸರಕಾರ ನಿಗದಿ ಪಡಿಸುವ ಕನಿಷ್ಠ ಬೆಂಬಲ ಬೆಲೆ ನ್ಯಾಯೋಚಿತವೇ? ಹಲವಾರು ಬೆಳೆಗಳ ಉತ್ಪಾದನಾ ವೆಚ್ಚಕ್ಕಿಂತಲೂ ಕಡಿಮೆ ಅವುಗಳ ಬೆಂಬಲ ಬೆಲೆ! ಉದಾಹರಣೆಗೆ, ಮಹಾರಾಷ್ಟ್ರದಲ್ಲಿ ತೊಗರಿ ಬೇಳೆಯ ಉತ್ಪಾದನಾ ವೆಚ್ಚ ಕ್ವಿಂಟಾಲಿಗೆ ರೂ.6,240 ಎಂದು ಅಂದಾಜಿಸಲಾಗಿದೆ. ಆದರೆ, ಅದರ ಕನಿಷ್ಠ ಬೆಂಬಲ ಬೆಲೆ ಕ್ವಿಂಟಾಲಿಗೆ ರೂ.5,050. ಹಾಗಿದ್ದರೂ, ರೈತರಿಗೆ ತಾವು ಬೆಳೆಸಿದ ತೊಗರಿ ಬೇಳೆ ಮಾರಲು ಸಾಧ್ಯವಾದದ್ದು ಕ್ವಿಂಟಾಲಿಗೆ ರೂ.3,500ರಿಂದ ರೂ.4,200 ದರದಲ್ಲಿ (ಅದೂ ಮಂಡಿಗಳಲ್ಲಿ ಮಾರಲಿಕ್ಕಾಗಿ ಒಂದು ವಾರ ಕಾದು ನಿಂತರು). ಇದೇ ಸರಕಾರ ಷೇರುಪೇಟೆಯಲ್ಲಿ ಕುಸಿತ ಆದಾಗ ಏನು ಮಾಡುತ್ತದೆ? ತಕ್ಷಣವೇ ಕೇಂದ್ರ ವಿತ್ತ ಸಚಿವರು ಷೇರುಪೇಟೆಯನ್ನು ಗಂಟೆಗೊಮ್ಮೆ ಮೇಲುಸ್ತುವಾರಿ ಮಾಡುವುದಾಗಿ ಘೋಷಿಸುತ್ತಾರೆ. ಕೃಷಿ ಮಾರುಕಟ್ಟೆಯಲ್ಲಿ ಬೆಲೆಗಳು ಕುಸಿದಾಗ, ವಿತ್ತ ಸಚಿವರು ಅಥವಾ ಕೃಷಿ ಸಚಿವರು ಹೀಗೆ ಮಾಡಿದ್ದು ಇದೆಯೇ?

ಅಂತೂ, ರೈತರು ಸಾಲದಲ್ಲೇ ಮುಳುಗುವ ವ್ಯವಸ್ಥೆಯನ್ನು ಮುಂದುವರಿಸಿಕೊಂಡು ಬರಲಾಗಿದೆ. ಈಗ, ಮಧ್ಯಪ್ರದೇಶದ ಆರು ರೈತರ ಬಲಿದಾನದ ನಂತರ, ಕೆಲವು ರಾಜ್ಯ ಸರಕಾರಗಳು ರೈತರ ಸಾಲ ಮನ್ನಾ ಮಾಡಲು ಸಜ್ಜಾಗಿವೆ. ಈಗಾಗಲೇ ಉತ್ತರ ಪದೇಶ ಸರಕಾರ ರೂ.36,359 ಕೋಟಿ ಮೊತ್ತದ ರೈತರ ಸಾಲ ಮನ್ನಾ ಮಾಡುವುದಾಗಿ ಘೋಷಿಸಿದೆ. ಇದರಿಂದ 92 ಲಕ್ಷ ಸಣ್ಣ ಮತ್ತು ಅತಿಸಣ್ಣ ರೈತರಿಗೆ ಅನುಕೂಲ ಆಗಲಿದೆ. ಇತ್ತೀಚೆಗೆ ಮಹಾರಾಷ್ಟ್ರ ಸರಕಾರವೂ 1.34 ಕೋಟಿ ರೈತರ ರೂ.33,000 ಕೋಟಿ ಮೊತ್ತದ ಸಾಲ ಮನ್ನಾ ಎಂದು ನಿರ್ಧರಿಸಿದೆ.

ಪಂಜಾಬ್ ರಾಜ್ಯ ಸರಕಾರ ಸುಮಾರು ರೂ.30,000 ಕೋಟಿ ಮೌಲ್ಯದ ರೈತರ ಸಾಲ ಮನ್ನಾ ಆಗಲಿದೆ ಎಂದು ಸೂಚನೆ ನೀಡಿದೆ. ಕರ್ನಾಟಕ ಸರಕಾರವೂ ಸಹಕಾರಿ ಬ್ಯಾಂಕುಗಳಿಂದ ಸಾಲಪಡೆದಿರುವ 22 ಲಕ್ಷ ರೈತರ ತಲಾ ರೂ.50,000 ವರೆಗಿನ ಸಾಲ (ಒಟ್ಟು ರೂ.8,165 ಕೋಟಿ ಸಾಲ) 21.6.2017ರಂದು ಮನ್ನಾ ಮಾಡಿದೆ.
ರೈತರ ಸಾಲ ಮನ್ನಾ ಎಂಬುದು ಕೃಷಿರಂಗದ ತಲ್ಲಣಗಳ ಶಮನಕ್ಕೆ ಒಂದು ತುರ್ತು ಕ್ರಮ, ಅಷ್ಟೇ. ನಮ್ಮ ದೇಶದಲ್ಲಿ ಆರ್ಥಿಕ ಸಂಕಟಕ್ಕೆ ಸಿಲುದಿರುವ ರೈತರ ರೂ.3.1 ಲಕ್ಷ ಕೋಟಿ ಸಾಲವನ್ನು ಮನ್ನಾ ಮಾಡಬೇಕಾದೀತು ಎಂದು ಅಂದಾಜಿಸಲಾಗಿದೆ. ಕಳೆದ ಐದು ವರುಷಗಳಲ್ಲಿ ಬ್ಯಾಂಕುಗಳು ದೊಡ್ಡದೊಡ್ಡ ಕಂಪೆನಿಗಳ ರೂ.2.2 ಕೋಟಿ ಸಾಲ ಮನ್ನಾ ಮಾಡಿದ್ದು, ಅದಕ್ಕೆ ಹೋಲಿಸಿದಾಗ ಇದೇನೂ ದೊಡ್ಡ ಸಂಗತಿಯಲ್ಲ.

ಅದೇನಿದ್ದರೂ, ಕೇವಲ ಸಾಲ ಮನ್ನಾದಿಂದ ರೈತರ ಸಂಕಟಗಳು ಮುಗಿಯೋದಿಲ್ಲ. ಅದರ ಜೊತೆಗೆ, ರೈತರು ಪುನಃ ಸಾಲದ ಸುಳಿಯಲ್ಲಿ ಸಿಲುಕದಂತೆ ಮಾಡಲಿಕ್ಕಾಗಿ ಕೆಲವು ಸುಧಾರಣಾ ಕ್ರಮಗಳನ್ನು ಸರಕಾರ ಕೈಗೆತ್ತಿಕೊಳ್ಳಬೇಕಾಗಿದೆ. ಮೊದಲಾಗಿ, ಪ್ರಧಾನಮಂತ್ರಿಯವರು ಘೋಷಿಸಿದಂತೆ, ಇನ್ನು ನಾಲ್ಕೈದು ವರುಷಗಳಲ್ಲಿ ರೈತರ ಆದಾಯ ಇಮ್ಮಡಿಯಾಗಲು ಅಗತ್ಯವಾದ ಕಾರ್ಯಕ್ರಮಗಳ ಜ್ಯಾರಿ. ಎರಡನೆಯದಾಗಿ, ಕೃಷಿ ವೆಚ್ಚಗಳು ಮತ್ತು ಬೆಳೆಗಳ ಕಮಿಷನಿಗೆ ಸ್ಪಷ್ಟ ನಿರ್ದೇಶನ ನೀಡುವುದು: ರೈತರ ನಾಲ್ಕು ಕೃಷಿಯೇತರ ವೆಚ್ಚಗಳನ್ನೂ ಸೇರಿಸಿ, ರೈತರ ಫ‌ಸಲಿನ ಕನಿಷ್ಠ ಬೆಂಬಲ ಬೆಲೆ ನಿಗದಿಪಡಿಸಬೇಕು. ಅವು: ಕುಟುಂಬ ನಿರ್ವಹಣಾ ವೆಚ್ಚ, ಮಕ್ಕಳ ಶಿಕ್ಷಣಾ ವೆಚ್ಚ, ವೈದ್ಯಕೀಯ ವೆಚ್ಚ ಮತ್ತು ಪ್ರಯಾಣ ವೆಚ್ಚ. ಮೂರನೆಯದಾಗಿ, ಕನಿಷ್ಠ ಬೆಂಬಲ ಬೆಲೆಯಿಂದ ಪ್ರಯೋಜನ ಸಿಗುವುದು ಕೇವಲ ಶೇಕಡಾ 6 ರೈತರಿಗೆ ಮಾತ್ರ; ಆದ್ದರಿಂದ, ಇನ್ನುಳಿದ ರೈತರಿಗೂ ಇಂತಹ ಪ್ರಯೋಜನ ಸಿಗಲಿಕ್ಕಾಗಿ ಸೂಕ್ತ ಕಾರ್ಯಕ್ರಮಗಳನ್ನು ರೂಪಿಸಿ, ಜಾರಿ ಮಾಡಬೇಕು.

ಆದರೆ, ಮಧ್ಯಪ್ರದೇಶದಲ್ಲಿ ಪೊಲೀಸರ ಗುಂಡಿಗೆ ಬಲಿಯಾದ 23 ವರುಷ ವಯಸ್ಸಿನ ಪೂನಂಚಂದ್‌ ಅವರ ಪತ್ನಿ ಅನಿತಾ ಭಾಯಿ ಕೇಳುವ ಈ ಪ್ರಶ್ನೆಗೆ ಏನೆಂದು ಉತ್ತರ ಕೊಡುವುದು? ಅನಿತಾ ಹೇಳಿರುವುದು ಇಷ್ಟು- ಏನೂ ತಪ್ಪು ಮಾಡದ ನನ್ನ ಗಂಡನ ಮರಣಕ್ಕಾಗಿ ಒಂದು ಕೋಟಿ ರೂಪಾಯಿ ಪರಿಹಾರ ಕೊಡುತ್ತಾರಂತೆ. ನಾನೇ ಅವರಿಗೆ ಹತ್ತು ಕೋಟಿ ರೂಪಾಯಿ ಕೊಡುತ್ತೇನೆ. ನನ್ನ ಗಂಡನನ್ನು ಬದುಕಿಸಿ ತರುತ್ತಾರಾ?

– ಅಡ್ಕೂರು ಕೃಷ್ಣರಾವ್

Advertisement

Udayavani is now on Telegram. Click here to join our channel and stay updated with the latest news.

Next