ದಾವಣಗೆರೆ: ತಾವು ಬೆಳೆದಂತಹ ಬೆಳೆಗಳಿಗೆ ರೈತರೇ ಬೆಲೆ ನಿರ್ಧರಿಸುವ ಕಾಲ ಬಂದಾಗ ಮಾತ್ರ ರೈತ ದಿನಾಚರಣೆಗೆ ನಿಜವಾದ ಅರ್ಥ ಬರುತ್ತದೆ ಎಂದು ಜಿಲ್ಲಾ ಕೃಷಿಕ ಸಮಾಜದ ಅಧ್ಯಕ್ಷ ಜಿ. ಹನುಮಂತಪ್ಪ ಕುಂದೂರು ತಿಳಿಸಿದರು.
ಸೋಮವಾರ ರೈತರ ದಿನಾಚರಣೆ ಪ್ರಯುಕ್ತ ಕೃಷಿ ಇಲಾಖೆಯಿಂದ ಆತ್ಮ ಯೋಜನೆಯಡಿ ರೈತ ಶಕ್ತಿ ಗುಂಪುಗಳಿಗೆ ಸಾಮರ್ಥ್ಯ ಮತ್ತು ಕೌಶಲ್ಯಾಭಿವೃದ್ಧಿ ತರಬೇತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿಮಾತನಾಡಿದ ಅವರು, ನಮ್ಮ ದೇಶದಲ್ಲಿ ಶೇ. 60 ರಷ್ಟು ರೈತರು ಸಂಪೂ ರ್ಣವಾಗಿ ಕೃಷಿಯನ್ನೇ ಅವಲಂಬಿಸಿ ಬದುಕುತ್ತಿದ್ದಾರೆ. ದೇಶದ 130 ಕೋಟಿ ಜನತೆಗೆ ಅನ್ನದಾತರಾಗಿದ್ದಾರೆ ಎಂದು ಸಂತಸ ವ್ಯಕ್ತಪಡಿಸಿದರು. ಅನ್ನದಾತರನ್ನು ನೆನಪಿಸಿಕೊಳ್ಳಲು ಡಿ. 23ರಂದು ದಿನಾಚರಣೆಯ ಮೂಲಕ ರೈತರಿಗೆ ಗೌರವ ಸಮರ್ಪಿಸುವ ಕಾರ್ಯಕ್ರಮ ನಿಜಕ್ಕೂ ಸಂತಸದ ವಿಚಾರ. ಇಂದಿನ ವಾತಾವರಣಕ್ಕೆ, ಖರ್ಚಿಗೆ ಅನುಗುಣವಾಗಿ ರೈತರೇ ತಮ್ಮ ಬೆಳೆಗಳಿಗೆ ಬೆಲೆಯನ್ನ ನಿರ್ಧರಿಸುವಂತಾಗಬೇಕು. ಆಗ ರೈತರ ದಿನಾಚರಣೆಗೆ ನಿಜವಾದ ಅರ್ಥ ಬರುತ್ತದೆ ಎಂದು ತಿಳಿಸಿದರು.
ರೈತರ ಕ್ಷೇತ್ರಗಳಲ್ಲಿ ಉತ್ಪಾದನೆ ಹೆಚ್ಚಾಗುತ್ತಿದೆಯೇ ಹೊರತು ಕುಟುಂಬದ ಆದಾಯ ಮಾತ್ರ ಹಾಗೆಯೇ ಇದೆ. ಕೇಂದ್ರ ಸರ್ಕಾರ ಆದಾಯ ದ್ವಿಗುಣಗೊಳಿಸುವ ಯೋಜನೆ ಹಮ್ಮಿಕೊಂಡಿರುವುದು ರೈತರ ಪಾಲಿಗೆ ಆಶಾದಾಯಕ ಬೆಳವಣಿಗೆ ಎಂದು ತಿಳಿಸಿದರು.
ಕೃಷಿ ಇಲಾಖೆ ಜಂಟಿ ನಿರ್ದೇಶಕ ಶರಣಪ್ಪ ಬಿ. ಮುದಗಲ್ ಮಾತನಾಡಿ, ಡಿ. 23 ಮಾಜಿ ಪ್ರಧಾನಿ ಚರಣ್‌ಸಿಂಗ್‌ರವರ ಜನ್ಮದಿನ. ಚರಣ್‌ಸಿಂಗ್‌ರವರು ರೈತರ ಶ್ರೇಯೋಭಿವೃದ್ಧಿ, ಕೃಷಿ ಕ್ಷೇತ್ರದ ಅಭಿವೃದ್ದಿಗಾಗಿ ಸಾಕಷ್ಟು ಯೋಜನೆ, ಕಾರ್ಯಕ್ರಮಗಳನ್ನು ತಂದು ಅನುಷ್ಠಾನ ಮಾಡಿರುವ ಜ್ಞಾಪಕಾರ್ಥವಾಗಿ ಅವರ ಜನ್ಮದಿನವನ್ನು ರೈತರ ದಿನವಾಗಿ ಆಚರಿಸಲಾಗುತ್ತಿದೆ ಎಂದು ತಿಳಿಸಿದರು.
ರೈತರ ದಿನಾಚರಣೆ ಹಸನಾಗಬೇಕಾದರೆ ರೈತರ ಉತ್ಪಾದನೆ, ಆದಾಯ ಜಾಸ್ತಿ ಆಗಬೇಕು. ಆ ನಿಟ್ಟಿನಲ್ಲಿ ರೈತರು ಕೃಷಿಯನ್ನು ಮಾಡಬೇಕಾಗಿದೆ. ರೈತ ಶಕ್ತಿ ಗುಂಪುಗಳು ಎಫ್.ಪಿ.ಓ ರಚಿಸಿಕೊಂಡು, ಸಂಘಟಿತರಾಗುವ ಮೂಲಕ ತಾವು ಬೆಳೆದಂತಹ ಉತ್ಕೃಷ್ಟವಾದ ಧಾನ್ಯಗಳನ್ನು ಹೆಚ್ಚಿನ ಬೆಲೆಗೆ ಮಾರಾಟ ಮಾಡುವ ವಾತಾವರಣವನ್ನು ಸೃಷ್ಟಿಸಿಕೊಳ್ಳಬೇಕು ಎಂದು ತಿಳಿಸಿದರು. ರೈತರು ಮುಂದಿನ ದಿನಗಳಲ್ಲಿ ರಾಸಾಯನಿಕ ಕಡಿಮೆ ಮಾಡಿ, ಕ್ರಮೇಣವಾಗಿ ಸಾವಯವ ಕೃಷಿ ಅಳವಡಿಸುವ ಮೂಲಕ ಖರ್ಚನ್ನು ಕಡಿಮೆ ಮಾಡಿ, ಉತ್ಕೃಷ್ಟವಾದ ಉತ್ಪನ್ನಗಳನ್ನು ಬೆಳೆಯುವ ಮೂಲಕ ಆದಾಯವನ್ನು ಹೆಚ್ಚಿಸಿಕೊಳ್ಳಬೇಕು ಹಾಗೂ ಇಲಾಖೆಯ ಎಲ್ಲಾ ಯೋಜನೆಗಳನ್ನು ಸಮರ್ಪಕವಾಗಿ ಬಳಸಿಕೊಳ್ಳಬೇಕು ಎಂದು ತಿಳಿಸಿದರು.
ತರಳಬಾಳು ಕೃಷಿ ವಿಜ್ಞಾನ ಕೇಂದ್ರದ ಜೆ. ರಘುರಾಜ್ ಸಂಘ ಸಂಸ್ಥೆಗಳ ನಿರ್ವಹಣೆ ಕುರಿತು ಮಾಹಿತಿ ನೀಡಿದರು. ಸಹಾಯಕ ಕೃಷಿ ನಿರ್ದೇಶಕ ಪವನ್ ಪ್ರಾಸ್ತಾವಿಕ ಮಾತುಗಳಾಡಿದರು. ಪ್ರಗತಿ ಪರ ರೈತರಾದ ಇಂದ್ರಮ್ಮ, ಕುಕ್ಕುವಾಡ ರೈತ ಶಕ್ತಿ ಗುಂಪಿನ ಅಧ್ಯಕ್ಷ ಚಂದ್ರಶೇಖರಪ್ಪ ಅನಿಸಿಕೆ ಹಂಚಿಕೊಂಡರು. ಹುಣಸೆಕಟ್ಟೆ, ಆಲೂರು, ಕುಕ್ಕವಾಡ, ಕುರ್ಕಿ, ಹೊನ್ನಮರಡಿ ಗ್ರಾಮಗಳ ರೈತ ಶಕ್ತಿ ಗುಂಪಿನ ಸದಸ್ಯರು, ಆತ್ಮ ಯೋಜನೆ ಉಪಯೋಜನಾ ನಿರ್ದೇಶಕ ಜಿ.ಎಂ. ಚಂದ್ರಶೇಖರಪ್ಪ , ತಾಲೂಕು ತಾಂತ್ರಿಕ ವ್ಯವಸ್ಥಾಪಕ ಬಿ.ಎಸ್. ವೆಂಕಟೇಶ್ ಸಹಾಯಕ ತಾಂತ್ರಿಕ ವ್ಯವಸ್ಥಾಪಕಿ ರೇಷ್ಮಾ ಇತರರು ಇದ್ದರು.