Advertisement
“”ಎತ್ತು ಬಿತ್ತಿತ್ತು ಒಕ್ಕಲಿಗನಿಗಿಂತ ಉತ್ತಮರಿಲ್ಲೆಂದು ಎತ್ತಾಗಿ ಬಿತ್ತಿದ ನಮ್ಮ ಬಸವಣ್ಣ ”. ಇದೊಂದು ಜಾನಪದ ರೂಪಕ. ಒಕ್ಕಲಿಗ ಉತ್ತಮ ವ್ಯಕ್ತಿ. ಸದ್ವಿನಯಿ ಸದಾಚಾರವುಳ್ಳವನು. ಸಮಾಜದಲ್ಲಿ ಒಕ್ಕಲಿಗರಿಗಿಂತ ಉತ್ತಮರ್ಯಾರೂ ಇಲ್ಲ. ಒಕ್ಕಲಿಗನ ಗುಣಕ್ಕೆ ಮೆಚ್ಚಿ ಎತ್ತುಗಳು ನೊಗಕ್ಕೆ ಹೆಗಲು ಕೊಟ್ಟು ಅವನ ಹೊಲವನ್ನು ಉತ್ತಿಬಿತ್ತಿ ಬೆಳೆ ಮಾಡಲು ಕಾರಣವಾದ ಬಗೆ ಇಲ್ಲಿ ಸೊಗಸಾಗಿ ಮೂಡಿ ಬಂದಿದೆ. ಹಿಂದೆ ಪ್ರಕೃತಿಯಲ್ಲಿ ದೈವೀ ಸ್ವರೂಪ ಕಂಡ ರೈತರು ಭೂಮಿ ಬೆಳೆ, ಮಳೆ, ಬೀಜ ಎತ್ತು ಮತ್ತು ಗಾಳಿ ಎಲ್ಲವೂ ದೈವದತ್ತವಾದ ದೇಣಿಗೆ ಎಂದು ನಂಬಿದ್ದರು. ಕೃಷಿಕರಿಗೆ ಸಮಾಜದಲ್ಲಿ ಅನ್ನದಾತ ಎಂಬ ಮನ್ನಣೆ ಇತ್ತು. ಕಠಿಣ ಪರಿಶ್ರಮ, ಕಷ್ಟ-ನಷ್ಟ ಸಹಿಷ್ಣುತೆ, ಮನಮುಟ್ಟಿ ಮೈಮುರಿದು ದುಡಿಯುವ ಪ್ರವೃತ್ತಿ ರೈತರಲ್ಲಿತ್ತು. ರೈತರ ಬದುಕಿನಲ್ಲಿ ಆರೋಗ್ಯ ಇತ್ತು. ನೆಮ್ಮದಿ ಇತ್ತು, ಸಮೃದ್ಧಿಯೂ ಇತ್ತು. ಆಶೆ ಆಕಾಂಕ್ಷೆ ಮತ್ತು ತವಕ ತಲ್ಲಣಗಳು ರೈತರಲ್ಲಿದ್ದರೂ ಸಂಯಮದ ಗಡಿ ದಾಟುತ್ತಿರಲಿಲ್ಲ. ರೈತರ ಸಂಸ್ಕೃತಿ ಕೃಷಿ ಸಂಸ್ಕೃತಿ ಈ ನೆಲದ ಈ ಮಣ್ಣಿನ ಸಂಸ್ಕೃತಿ ಆಗಿತ್ತು.
Related Articles
ಅಕ್ಕರವ ಕಲಿತಾತ ಒಕ್ಕಲನು ತಿನಗಲಿತ: ಸ್ವಾವಲಂಬಿ (ಪರಂಪರಾಗತ) ಮತ್ತು ಪರಾವಲಂಬಿ (ಆಧುನಿಕ ವೈಜ್ಞಾನಿಕ) ಕೃಷಿಯ ನಡುವೆ ರೈತರು ಪರತಂತ್ರ ಆಗಿದ್ದಾರೆ. ಇದು ತೀರ್ಮಾನದ ಮಾತಲ್ಲ. ಕೃಷಿಕನಿಗೆ ಕೃಷಿಯು ಅಂತರಂಗ ಮತ್ತು ಬಹಿರಂಗದ ಬದುಕನ್ನು ತುಂಬಿಕೊಡುವ ಜೀವನದರ್ಶನ ಆಗಿದ್ದುದು ಈಗಿಲ್ಲ. ಬದುಕಿನ ವಿಧಾನ ಆಗಿದ್ದ ಜೀವನೋಪಾಯದ ಕೃಷಿಯನ್ನು ಅಪ್ರಸ್ತುತವಾಗಿರಿಸಿದ್ದು ಆರ್ಥಿಕ ಆಯಾಮ. ಹಸಿರು ಕ್ರಾಂತಿ ಮತ್ತು ಜಾಗತೀಕರಣದ ಮೂಲಕ ಜನಕೇಂದ್ರಿತವಾಗಿದ್ದ ಪವಿತ್ರ ಕೃಷಿಗೆ ವಿಜ್ಞಾನ ತಂತ್ರಜ್ಞಾನ ಕೇಂದ್ರಿತವಾದ ಚೌಕಟ್ಟನ್ನು ಹಾಕಿಕೊಟ್ಟಿತು. ಇಂದಿನ ಕೃಷಿಯ ಸಾರ್ಥಕತೆ ಹಣದ ರೂಪದಲ್ಲಿದೆ “”ಮಾರುದ್ದ ಪೈರಾಗಲಿ ಮೊಳವುದ್ದ ತೆನಿಯಾಗಲಿ, ಬಡವನ ಮನಿಗೆ ಸಿರಿಬರಲಿ| ಭೂಮಿತಾಯಿ ಕಂದಯ್ಯ ಹಸಿವು ಇಂಗೋಗ್ಲಿ ||”
ಬೆಳೆಯುವ ಜನಸಂಖ್ಯೆಯ ಹೊಟ್ಟೆ ತುಂಬಿಸಲು ರೈತರು ಹೈಬ್ರಿಡ್ ಬೀಜಗಳನ್ನು ಬಳಸಿದರು. ಹಸಿವು ಇಂಗಿ ಹೋಯ್ತು. ಆದರೆ ಬಡವನ ಮನೆಗೆ ರೈತರ ಪಾಲಿಗೆ ಸಿರಿತನ ಮಾತ್ರ ಬರಲೇ ಇಲ್ಲ. ಜನಪದ ಕವಿಯ ಆಶಯ ಬರೀ ಕನಸಾಗಿ ಉಳಿದಿದೆ. ಕಳೆದ 50 ವರ್ಷಗಳಲ್ಲಿ ರೈತರ ಬದುಕು ಪಲ್ಲಟ ಆಗಿದೆ. ಸಮಸ್ಯೆಗಳು ಮತ್ತು ಸವಾಲುಗಳ ನಡುವೆಯೇ ರೈತರು ಬದುಕಬೇಕೆಂಬ ಹಂಬಲ ಹಠವಾಗಿದೆ. ಬದುಕು ಮೂರೇ ದಿನದ್ದಾದರೂ ಸಂತೋಷ ಮತ್ತು ನೆಮ್ಮದಿಯಿಂದ ಬದುಕಬೇಕೆಂಬುದು ಸಹಜ ಬಯಕೆ ಆಗಿದೆ. ಆಳುವವರು, ಅಧಿಕಾರಿಗಳು, ಉದ್ಯಮಿಗಳು, ನೌಕರಸ್ಥರು ಮತ್ತು
ವ್ಯಾಪಾರಿ ವರ್ಗ ಕೈಕೈ ಹಿಡಿದು ರೈತರನ್ನು ಉತ್ಪಾದನಾ ಜೀತದಾಳುಗಳಾಗಿಸಿ, ಅವರ ಉತ್ಪಾದನೆಯನ್ನು ಅತಿ ಕಡಿಮೆ ಬೆಲೆಗೆ ಖರೀದಿಸು (ದೋಚು)ವ ಬೆಲೆ ಹೆಣೆಯಲಾಗಿದೆ. ಆ ಬಲೆಯಲ್ಲಿ ರೈತರೆಂಬ ಮೀನುಗಳು ಸಿಲುಕಿ ವಿಲವಿಲನೆ ಒದ್ದಾಡುತ್ತಿವೆ.
“ಅಕ್ಕರವಕಲಿತಾತ ಒಕ್ಕಲನುತಿನಗಲಿತ’. ಓದು ಬರಹ ಬಲ್ಲವನು ಜಾಣನಾಗಿ ಮುಗ್ಧ ಹಾಗೂ ಅಕ್ಷರ ಕಲಿಯದ ರೈತರನ್ನು ನುಂಗಿ ಹಾಳು ಮಾಡುತ್ತಾನೆಂದು ಸರ್ವಜ್ಞ ಕವಿ ಹೇಳಿದಂತೆ ಕೃಷಿ ವಿಜ್ಞಾನ ಕೃಷಿ ಸಂಶೋಧನೆಗಳು ಮತ್ತು ತಂತ್ರಜ್ಞಾನ ಹಾಗೂ ಯಂತ್ರಗಳು ರೈತರನ್ನು ಮತ್ತು ಕೃಷಿಯನ್ನು ಹಾಳು ಮಾಡಿದ ಸಂಗತಿ ಅಲ್ಲಗಳೆಯಲಾಗದು. “ಒಕ್ಕಲನುನಲುಗಿಸದೆ | ಲೆಕ್ಕವನು ಸಿಕ್ಕಿಸದೆ ಕಕ್ಕುಲತೆಯಿಂದ ನಡೆಸುವಾ ಅರಸು ತಾ | ಚಕ್ಕಂದವಿರುವ ಸರ್ವಜ್ಞ||’
Advertisement
ರೈತರನ್ನು ಕೊರಗದಂತೆ ಕೃಷಿಯನ್ನು ಪ್ರೋತ್ಸಾಹಿಸುತ್ತ ರೈತರನ್ನು ಹಿಂಸಿಸದೆ ಇರುವ ಸರಕಾರ (ಅರಸು) ನೆಮ್ಮದಿಯಿಂದ ರಾಜ್ಯವಾಳಬಲ್ಲದು. ಸರ್ವಜ್ಞ ಕವಿಯ ಈ ತ್ರಿಪದಿ ರೈತರ ಬಗೆಗಿನ ಇಂದಿನ ಸರಕಾರಗಳ ಧೋರಣೆಯನ್ನು ಅವಲೋಕಿಸುವಂತೆ ಮಾಡಿದೆ. ರೈತರನ್ನು ಸಾಲದಲ್ಲಿ ಸಿಲುಕಿಸಿ, ರೈತರಿಗೆ ಏನೆಲ್ಲಾ ತೊಂದರೆ ಕೊಡುತ್ತಲೇ ಸಂಕಟದಲ್ಲಿ ಸಿಲುಕಿಸುತ್ತಿರುವ ಸರಕಾರಗಳು ಅದ್ಹೇಗೆ ನೆಮ್ಮದಿಯಿಂದ ರಾಜ್ಯಭಾರ ಮಾಡುತ್ತಿವೆ ಎಂಬುದು ಗಮನಾರ್ಹ ಸಂಗತಿ ಆಗಿದೆ. ರಾಜ್ಯದ ಭಂಡಾರ ತುಂಬಲು ರೈತರು ಹೆಚ್ಚು ಉತ್ಪಾದಿಸಿದ್ದರಿಂದ ಸಾಧ್ಯವಾಗಿರುವುದನ್ನು ಗಮನಿಸಿ ರೈತರನ್ನು ಕೊಂಡಾಡುವ ಸರಕಾರ ಇಂದಿಲ್ಲ. ದೇಶವನ್ನು ಸ್ವಾವಲಂಬಿಯಾಗಿಸಿದ ರೈತರ ಉಪಕಾರ ಸ್ಮರಣೆಯ ಮಾತುಗಳೂ ಕೇಳಿಬರಲಿಲ್ಲ.
ಆಹಾರ ಧಾನ್ಯ, ತರಕಾರಿ, ಹಣ್ಣು ಹಂಪಲು, ರೇಷ್ಮೆ, ಕಬ್ಬು, ಹತ್ತಿ ಮತ್ತು ಬೇಳೆಕಾಳು ಏನೆಲ್ಲಾ ಬೆಳೆಯುವ ಭೂಮಿಯಲ್ಲಿ ಪ್ರಳಯದ ಕಸ ಯಥೇತ್ಛವಾಗಿ ಬೆಳೆಯುತ್ತಿದೆ. ಇದು ವೈಜ್ಞಾನಿಕ ಅಥವಾ ಪರಾವಲಂಬಿಯ ಕೃಷಿಯ ಕೊಡುಗೆ. 2015ರಿಂದ ರೈತರು ದಾಖಲೆ ಪ್ರಮಾಣದಲ್ಲಿ ಆತ್ಮಹತ್ಯೆಗೆ ಮುಂದಾಗಿರುವುದು. ಸಮಾಜದ ಮುಖ್ಯ ಪ್ರವಾಹದ ಆಗು-ಹೋಗುಗಳತ್ತ ಬೆನ್ನು ತೋರಿಸಿರುವ ಸರಕಾರದ ನಡೆ ಎತ್ತ? ಜನಪದರ ರೂಪಕವೆತ್ತ? “ಹೆಚ್ಚು ಖರ್ಚು ಮಾಡಿರಿ. ಹೆಚ್ಚು ಉತ್ಪಾದಿಸಿರಿ. ಕಡಿಮೆ ಬೆಲೆಗೆ ಕೃಷಿ ಉತ್ಪನ್ನಗಳನ್ನು ಮಾರಿ, ಸಾಲಗಾರರಾಗಿರಿ ಎಂಬುದು ಇಂದಿನ ಘೋಷವಾಕ್ಯ. ಅಭಿವೃದ್ಧಿಯ ಸರಳ ವ್ಯಾಖ್ಯಾನ ಇದೇ ಇರಬೇಕು.
ಗಾಣದಲ್ಲಿ ಸಿಕ್ಕ ಕಬ್ಬಿನಂತಾದ ರೈತರು: ತಮ್ಮ ಸುತ್ತಮುತ್ತ ಆವರಿಸಿರುವ ಅಲ್ಪಶ್ರಮಕ್ಕೆ ಅಧಿಕ ಆದಾಯ ಪಡೆಯುವವರನ್ನು ಕಂಡು ರೈತರ ಕಣ್ಣು ಕುಕ್ಕದೇ ಇರದು. ತಮಗ್ಯಾಕೆ ಇಂಥ ಸ್ಥಿತಿ ಎಂದು ರೈತರು ಕೊರಗುತ್ತಿದ್ದಾರೆ. ತಾಳಿಕೆ ಬಾಳಿಕೆಯ ಕೃಷಿ ಇಂದಿಲ್ಲ. ಆಗುವ ಲಕ್ಷಣಗಳೂ ಇಲ್ಲ. ನಿಸರ್ಗವೂ ರೈತರನ್ನು ಕಾಡುತ್ತಲೇ ಇದೆ. ಯಾರನ್ನು ಹೊಣೆಗಾರರನ್ನು ಮಾಡಬೇಕೆನ್ನುವ ಗೊಂದಲದಲ್ಲಿ ರೈತರಿದ್ದಾರೆ. ನಾವೂ ಸಾವಕಾರ ಆಗೂದ ಬ್ಯಾಡೇನ? ಬದುಕುವ ಹಕ್ಕು ನಮಗೆ ಇಲ್ಲೇನ? ಈ ಪ್ರಶ್ನೆಗಳು ರೈತರ ಗೊಣಗಾಟದಂತೆ ಕೇಳಿ ಬರುತ್ತಿವೆ. ಕೇಳಿಸಿಕೊಳ್ಳುವವರು ಯಾರಾದರೂ ಇದ್ದಾರೋ? ರೈತ ಸಮುದಾಯದ ಕೂಗು ಇದು. ರೈತರು ಆಹಾರಧಾನ್ಯ ಬೆಳೆದು ಕಣಜ ತುಂಬಿಸಿದರೂ ಹಸಿದಿದ್ದಾರೆ. ಹಾಲು ಹಯನ ಉತ್ಪಾದಿಸಿದರೂ ಮಕ್ಕಳಿಗೆ ಹಾಲಿಲ್ಲ. ಉತ್ತಮ ತರಕಾರಿ ಸತ್ವಯುತ ಹಣ್ಣು ಹಾಗೂ ತಪ್ಪಲು ಪಲ್ಯ ಬೆಳೆದರೂ ರೈತರು ಅಪೌಷ್ಟಿಕತೆಯಿಂದ ರೋಗಿಷ್ಟ ಆಗಿದ್ದಾರೆ. ಇದು ನಾಚಿಕೆಗೇಡಿನ ಸಂಗತಿ. ಈ ಮಾತನ್ನು ಹೇಳಿದವರು ಯಾರೂ ಅಲ್ಲ. ರೈತರ ಕಲ್ಯಾಣ ಮಾಡುವ ನಾಟಕದ ಮಾತುಗಳಲ್ಲ. ಮಹಾತ್ಮಾ ಗಾಂಧೀಜಿಯವರ ಮಾತುಗಳಿವು! “ಆರಂಭವ ಮಾಡಿ ಸಂಸಾರ ಸ್ಥಿತಿ ಕಳೆಯದಿದ್ದರೆ ಆ ಆರಂಭವೇ ಕೇಡು’. ಕೃಷಿ ಮಾಡಿ ಸಂಸಾರ ಸ್ಥಿತಿ ಸುಧಾರಿಸದಿದ್ದರೆ ಅಂಥ ಕೃಷಿ ಕೆಲಸ ವ್ಯರ್ಥ. ವ್ಯವಸಾಯವ ಮಾಡಿ ಮನೆಯ ಬೀಯಕ್ಕೆ ಭತ್ತ ಇಲ್ಲದಿದ್ದರೆ ಆ ಬೆವಸಾಯದ ಘೋರವೇತಕ್ಕಯ್ನಾ’, ಭತ್ತ ಮತ್ತು ನವಧಾನ್ಯಗಳನ್ನು ಬಿತ್ತಿ ಬೆಳೆಯುವ ರೈತನ ಮನೆಯಲ್ಲಿ ಉಣ್ಣಲು ಭತ್ತ ಇರದಿದ್ದರೆ. ಅಂಥ ಘೋರವಾದ ವ್ಯವಸಾಯ ಯಾತಕ್ಕೆಂದು ಶರಣರು ವ್ಯವಸಾಯದ ಸಾರ್ಥಕತೆ ಕುರಿತು ಚೆನ್ನಾಗಿ ಹೇಳಿದ್ದಾರೆ. ವಾಣಿಜ್ಯ ಬೆಳೆ ಮಾಡಲು ಸಾಕಷ್ಟು ಬಂಡವಾಳ ಹಾಕಿ, ಅವುಗಳ ಬೆಲೆ ಕುಸಿತದಿಂದ ಹಾನಿಗೊಳಗಾಗುವ ರೈತರು ತಿಂದುಣ್ಣಲು ತಮ್ಮ ಮನೆಗೆ ಬೇಕಾದ ದವಸಧಾನ್ಯ ಬೆಳೆಯುವುದನ್ನು ನಿಲ್ಲಿಸಿ ವಾಣಿಜ್ಯ ಉತ್ಪನ್ನ ಉತ್ಪಾದಿಸಿ ಮಾರಿ ಮನೆಗೆ ಬೇಕಾದ ಧಾನ್ಯಗಳನ್ನು ಖರೀದಿಸಲು ಹೊರಟಿದ್ದಾರೆ. ಹೊಲಮೂಲದ ಸಮಸ್ಯೆಗಳಿಗೆ ಹೊಲಮೂಲದಲ್ಲೇ ಪರಿಹಾರಗಳು ಕೈ ಅಳತೆಯಲ್ಲೇ ಸಿಗಬಲ್ಲವು. ಅದರ ಬದಲಾಗಿ ಯಾವ್ಯಾವುದೋ ಸಂಶೋಧಕರು. ವಿಜ್ಞಾನಿಗಳು ಕೃಷಿ ವಿಶ್ವವಿದ್ಯಾಲಯಗಳು, ಹೊರದೇಶದ ತಂತ್ರಜ್ಞಾನ ಮತ್ತು ಸಂಶೋಧನೆಗಳು ಪರಿಹಾರ ಒದಗಿಸುವಂತಾಗಿದೆ. ಅದೆಲ್ಲ ರೈತರ ಋಣಭಾರ ಹೆಚ್ಚಿಸುವ ಮೂಲ ಉದ್ದೇಶ ಹೊಂದಿರುವದು ಒಂದು ದುರಂತ. ಆದರೆ ಅವರು ಕೊಡುವ ಪರಿಹಾರಗಳೇ ಸಮಸ್ಯೆಗಳಾಗಿ ರೈತರನ್ನು ಕಾಡುವಂತಾಗಿರುವುದು ದೊಡ್ಡ ದುರಂತ. ಒಕ್ಕಲುತನದ ಭವಿಷ್ಯ ಕುರಿತಂತೆ ಕರಪಲ್ಲದವರು ಹೇಳಿದ ಕಾಲಜ್ಞಾನದ ವಚನವೊಂದು ಹೀಗಿದೆ. “ಒಕ್ಕಲಿಗರು ನೋಡಿಕೊಳ್ಳಿರಿ ಲೆಕ್ಕವಿಲ್ಲದ ತೆರಿಗೆ ಬರುವದು|
ಹಕ್ಕಲಾದ ಮನೆಗೆಲ್ಲ ಇಕ್ಕುವರು ಮುದ್ರೆ|
ಕಾಲದೂತರ ತೆರದಿ ಮನುಜರ ಮೂಲದ್ರವ್ಯವನ್ನು
ತೆಗೆದುಕೊಂಬುವರು ಆಲಿಗಿಕ್ಕಿದ ಕಬ್ಬಿನಂದದಿ
ಅಗೆದು ಬಿಸಾಡುವರು ! ಸುವ್ವಿ ಬಾ ಚೆನ್ನಯ್ಯ…..’
ಖರ್ಚಿಲ್ಲದೇ ಮಾಡುತ್ತಿದ್ದ ಒಕ್ಕಲುತನವನ್ನು ದುಬಾರಿ ಖರ್ಚುಮಾಡಿ ಒಕ್ಕಲುತನ ಮಾಡುವುದನ್ನು ಅನಿವಾರ್ಯ ಆಗಿಸಿದ ಇಂದಿನ ವ್ಯವಸ್ಥೆಯ ಬಗ್ಗೆ ಗಾಣದಲ್ಲಿ ಸಿಕ್ಕ ಕಬ್ಬಿನಂತೆ ರೈತರು ಸಿಲುಕಿದ್ದಾರೆಂದು ಹೇಳಿದ ಭವಿಷ್ಯ ನಿಜವೇ ಆದ ಹಾಗಿದೆ ಅದನ್ನು ಸುಳ್ಳಾಗಿಸುವ ರೈತಪರ ಕಾಳಜಿ ಉಳ್ಳವರು ಅವತರಿಸಿ ಬರಬೇಕಷ್ಟೇ! ಚಿಂತನೆ ಈರಯ್ಯ ಕಿಲ್ಲೇದಾರ