Advertisement
ಕಳೆದ ಜನವರಿಯಿಂದ ಮೇ ಅಂತ್ಯದವರೆಗೆ ಜಿಲ್ಲೆಯಲ್ಲಿ ಶೇ. 78ರಷ್ಟು ಮಳೆಯ ಕೊರತೆ ಕಂಡುಬಂದಿತ್ತು, ಇದೇ ಕಾರಣದಿಂದ ಕೃಷಿ ಚಟುವಟಿಕೆಗಳು ಸಹ ಬಹುತೇಕ ಸ್ಥಗಿತಗೊಂಡಿದ್ದವು. ಅಡ್ಡ ಮಳೆಯ ಕೊರತೆಯಿಂದಾಗಿ ಬಿತ್ತನೆಗೆ ಹೊಲಗಳನ್ನು ಹದ ಮಾಡಿಕೊಳ್ಳುವ ಕಾರ್ಯ ಸಹ ನಡೆದಿರಲಿಲ್ಲ. ಜಿಲ್ಲೆಯಲ್ಲಿ ವಾಡಿಕೆ ಪ್ರಕಾರ ಜೂನ್ ಮೊದಲ ವಾರ ಮುಂಗಾರು ಪ್ರವೇಶವಾಗಿ ಬಿತ್ತನೆ ಕಾರ್ಯ ಭರದಿಂದ ನಡೆದಿರುತ್ತಿದ್ದವು. ಜಿಲ್ಲೆಯಲ್ಲಿ ಇದುವರೆಗೆ ವಾಡಿಕೆಯ 111 ಮಿಮೀ ಪೈಕಿ 74.4 ಮಿಮೀ ಮಳೆಯಾಗಿದೆ. ಅತಿ ಹೆಚ್ಚು ಮಳೆಯಾಗಬೇಕಿರುವ ಬೆಳಗಾವಿ ಹಾಗೂ ಖಾನಾಪುರ ತಾಲೂಕುಗಳಲ್ಲಿ ಅರ್ಧದಷ್ಟು ಸಹ ಮಳೆಯಾಗಿಲ್ಲ. ಆದರೆ ಈಗ ಬಿದ್ದ ತುಂತುರು ಮಳೆಯಿಂದ ಬಿತ್ತನೆ ಕಾರ್ಯ ಆರಂಭಗೊಂಡಿದೆ. ಈ ಬಾರಿ ಮುಂಗಾರು ಮಳೆ ಉತ್ತಮವಾಗಿರಲಿದೆ ಎಂಬ ವಿಶ್ವಾಸದಿಂದ ಕೃಷಿ ಇಲಾಖೆ ಈಗಾಗಲೇ ಎಲ್ಲ ಸಿದ್ಧತೆಗಳನ್ನು ಮಾಡಿಕೊಂಡಿದೆ. ಕಳೆದ ಒಂದೆರಡು ದಿನಗಳಿಂದ ಅಲ್ಲಲ್ಲಿ ಜಿಟಿ ಜಿಟಿ ಮಳೆ ಆರಂಭವಾಗಿದೆ. ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ಬೀಳಬೇಕು. ಮುಖ್ಯವಾಗಿ ಖಾನಾಪುರ, ಬೈಲಹೊಂಗಲ, ಬೆಳಗಾವಿ ತಾಲೂಕುಗಳಲ್ಲಿ ಇನ್ನೂ ಮಳೆ ಕಾಣುತ್ತಿಲ್ಲ. ಒಂದೆರಡು ದಿನಗಳಲ್ಲಿ ಒಳ್ಳೆಯ ಮಳೆ ಆರಂಭವಾಗಬಹುದು ಎಂಬ ನಿರೀಕ್ಷೆ ಇದೆ. ಯಾವುದೇ ಕಾರಣಕ್ಕೂ ರೈತರಿಗೆ ಬೀಜ ಮತ್ತು ಗೊಬ್ಬರದ ಅಭಾವ ಉಂಟಾಗಬಾರದು ಎಂಬ ಹಿನ್ನೆಲೆಯಲ್ಲಿ ಸಾಕಷ್ಟು ಮುಂಜಾಗ್ರತೆ ವಹಿಸಿ 122 ರೈತ ಸಂಪರ್ಕ ಕೇಂದ್ರಗಳ ಮೂಲಕ ವಿತರಣೆಗೆ ಕ್ರಮ ಕೈಗೊಳ್ಳಲಾಗಿದೆ ಎಂದು ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಜಿಲಾನಿ ಎಚ್. ಮೊಕಾಸಿ ಹೇಳಿದರು.
ಜಿಲ್ಲೆಯಲ್ಲಿ 7,18 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಕಾರ್ಯ ಮಾಡಲಾಗುತ್ತಿದ್ದು ಇದರಲ್ಲಿ ಎರಡು ಲಕ್ಷ ಹೆಕ್ಟೇರ್‌ದಲ್ಲಿ ಕಬ್ಬು ಬೆಳೆಯಲಾಗುತ್ತಿದೆ. 1.30 ಲಕ್ಷ ಹೆ. ಪ್ರದೇಶದಲ್ಲಿ ಸೋಯಾಬಿನ್, ಸುಮಾರು 1.40 ಲಕ್ಷ ಹೆಕ್ಟೇರ್‌ದಲ್ಲಿ ಮುಸುಕಿನ ಜೋಳ, 70 ಸಾವಿರ ಹೆಕ್ಟೇರ್‌ನಲ್ಲಿ ಭತ್ತ, 31500 ಹೆಕ್ಟೇರ್‌ನಲ್ಲಿ ಶೇಂಗಾ, ಸುಮಾರು 48 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ದ್ವಿದಳ ಧಾನ್ಯ ಬೆಳೆ ಬೆಳೆಯಲಾಗುತ್ತಿದೆ. ಈಗಾಗಲೇ ಬಹುತೇಕ ಪ್ರದೇಶಗಳಲ್ಲಿ ಸೋಯಾಬಿನ್, ಮುಸುಕಿನ ಜೋಳ, ಭತ್ತ ಮೊದಲಾದ ಬೀಜ ಹಾಗೂ ಗೊಬ್ಬರ ವಿತರಿಸುವ ಪ್ರಕ್ರಿಯೆ ಆರಂಭಿಸಲಾಗಿದೆ ಎಂಬುದು ಕೃಷಿ ಅಧಿಕಾರಿಗಳ ಹೇಳಿಕೆ ಈಗಿನ ಮಾಹಿತಿಯ ಪ್ರಕಾರ ಜಿಲ್ಲೆಯಲ್ಲಿ ಭತ್ತ, ಸೋಯಾ, ಹೆಸರು, ಉದ್ದು ಸೇರಿದಂತೆ ಸುಮಾರು 2,28 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಕಾರ್ಯ ನಡೆದಿದೆ. ಯಾವ ಭಾಗದಲ್ಲಿ ಮಳೆಯಾಗಿದೆಯೋ ಅಲ್ಲಿ ಬಿತ್ತನೆ ಕಾರ್ಯ ಚುರುಕು ಪಡೆದಿದೆ. ನಮ್ಮ ನಿರೀಕ್ಷೆಯಂತೆ ಇದೇ ರೀತಿಯ ಮಳೆ ಎಲ್ಲ ಕಡೆ ಆಗುತ್ತಿಲ್ಲ. ಈ ವಾರದಲ್ಲಿ ಎಲ್ಲ ಕಡೆ ಬಿತ್ತನೆಗೆ ಚಾಲನೆ ಸಿಗಲಿದೆ ಎಂಬ ವಿಶ್ವಾಸ ಇದೆ ಎಂದು ಮೊಕಾಸಿ ಹೇಳಿದರು. ಜಿಲ್ಲೆಯಲ್ಲಿ ಜೋಳ, ಭತ್ತ, ಸಜ್ಜೆ, ಮೆಕ್ಕೆಜೋಳ, ಶೇಂಗಾ, ಸೋಯಾಬಿನ್, ಸೂರ್ಯಕಾಂತಿ, ಹೀಗೆ ಹಲವು ಬೆಳೆಗಳ ಜತೆಗೆ ಸಾವೆ, ನವಣೆ, ಬರಗುಗಳಂತಹ ಸಿರಿಧಾನ್ಯ ಬೆಳೆಯಲು ಒತ್ತು ನೀಡಲಾಗಿದೆ. ಕೃಷಿ ಅಭಿಯಾನದಲ್ಲೂ ಕಡಿಮೆ ನೀರಿನ ಬಳಕೆಗೆ ಒತ್ತು ನೀಡುವುದು ಮತ್ತು ಲಭ್ಯವಾದ ನೀರಿನಲ್ಲೇ ಸಮರ್ಥವಾದ ಉತ್ತಮ ಫಸಲು ಪಡೆಯಲು ರೈತರನ್ನು ಅಣಿಗೊಳಿಸುವ ಕೆಲಸಕ್ಕೆ ಕೃಷಿ ಇಲಾಖೆ ಮುಂದಾಗಿದೆ.
•ಕೇಶವ ಆದಿ