Advertisement

ಮದ್ಯದಂಗಡಿ ಪರವಾನಗಿ ರದ್ದತಿಗೆ ರೈತ ಸಂಘ ಧರಣಿ

07:26 AM Feb 12, 2019 | |

ಮೈಸೂರು: ನಂಜನಗೂಡು ತಾಲೂಕು ಹುಣಸನಾಳು ಗ್ರಾಮದಲ್ಲಿ ಮದ್ಯದ ಅಂಗಡಿಗೆ ಪರವಾನಗಿ ನೀಡಿರುವುದನ್ನು ರದ್ದುಪಡಿಸುವಂತೆ ಒತ್ತಾಯಿಸಿ ರಾಜ್ಯ ರೈತಸಂಘ ಹಾಗೂ ಹಸಿರುಸೇನೆ ವತಿಯಿಂದ ಜಿಲ್ಲಾಧಿಕಾರಿ ಕಚೇರಿ ಬಳಿ ಪ್ರತಿಭಟನೆ ನಡೆಸಲಾಯಿತು.

Advertisement

ಪ್ರತಿಭಟನಾ ಸಭೆಯಲ್ಲಿ ಮಾತನಾಡಿದ ರೈತಸಂಘದ ರಾಜ್ಯಾಧ್ಯಕ್ಷ ಬಡಗಲಪುರ ನಾಗೇಂದ್ರ, ಹುಣಸನಾಳು ಗ್ರಾಮದಲ್ಲಿ ಮದ್ಯದ ಅಂಗಡಿ ತೆರೆಯಲು ನೀಡಿರುವ ಪರವಾನಗಿಯನ್ನು ರದ್ದುಪಡಿಸುವಂತೆ ಕಳೆೆದ ಮೂರು ತಿಂಗಳಿಂದಲೂ ಗ್ರಾಮಸ್ಥರು ಹಂತ ಹಂತವಾಗಿ ತಾಲೂಕು, ಜಿಲ್ಲಾಮಟ್ಟದ ಅಧಿಕಾರಿಗಳಿಗೆ ಮನವಿ ಸಲ್ಲಿಸುತ್ತಾ ಬಂದರೂ ಯಾವುದೇ ಪ್ರಯೋಜನವಾಗಿಲ್ಲ. ಇನ್ನಾದರೂ ಪರವಾನಗಿ ರದ್ದುಪಡಿಸಬೇಕು ಎಂದು ಒತ್ತಾಯಿಸಿದರು.

ಪ್ರತಿಭಟನೆಯಲ್ಲಿ ಸಂಘದ ಜಿಲ್ಲಾಧ್ಯಕ್ಷ ಹೊಸೂರು ಕುಮಾರ್‌, ಪ್ರಧಾನ ಕಾರ್ಯದರ್ಶಿ ಹೊಸಕೋಟೆ ಬಸವರಾಜ್‌, ನಂಜನಗೂಡು ತಾಲೂಕು ರೈತಸಂಘದ ಅಧ್ಯಕ್ಷ ಬಕ್ಕಳ್ಳಿ ನಂಜುಂಡಸ್ವಾಮಿ, ಪ್ರಧಾನ ಕಾರ್ಯದರ್ಶಿ ಶಿರಮಳ್ಳಿ ಸಿದ್ದಪ್ಪ,ಯಜಮಾನ್‌ ಸಿದ್ದರಾಜು, ಸಿದ್ದಪ್ಪಶೆಟ್ಟಿ ಇತರರು ಉಪಸ್ಥಿತರಿದ್ದರು.

ಪ್ರೊ.ಎಂಡಿಎನ್‌ ನೆನಪಿಗೆ ವೈಚಾರಿಕ ಸಮಾವೇಶ
ಮೈಸೂರು:
ರೈತ ಚಳವಳಿಯನ್ನು ಅಂತಾರಾಷ್ಟ್ರೀಯ ಮಟ್ಟಕ್ಕೆ ವಿಸ್ತರಿಸಿದ ದೂರದೃಷ್ಟಿಯ ನಾಯಕ ಪ್ರೊ.ಎಂ.ಡಿ.ನಂಜುಂಡಸ್ವಾಮಿ ಅವರ 83ನೇ ಜನ್ಮ ದಿನಾಚರಣೆ ಅಂಗವಾಗಿ ರಾಜ್ಯ ರೈತಸಂಘ ಹಾಗೂ ಹಸಿರು ಸೇನೆ ಮತ್ತು ಕರ್ನಾಟಕ ದಲಿತ ಸಂಘರ್ಷ ಸಮಿತಿಗಳ ಆಶ್ರಯದಲ್ಲಿ ಫೆ.13ರಂದು ಬೆಂಗಳೂರಿನಲ್ಲಿ ಕೃಷಿ ಬಿಕ್ಕಟ್ಟು ಹಾಗೂ ಯುವಜನರ ತಲ್ಲಣಗಳು ಮತ್ತು 2019ರ ಚುನಾವಣೆಗೆ ಗ್ರಾಮೀಣ ಜನರ ಅಜೆಂಡಾ ಕುರಿತು ವೈಚಾರಿಕ ಸಮಾವೇಶ ಮತ್ತು ಪುಸ್ತಕ ಬಿಡುಗಡೆ ಕಾರ್ಯಕ್ರಮ ಏರ್ಪಡಿಸಲಾಗಿದೆ ಎಂದು ರೈತಸಂಘದ ರಾಜ್ಯಾಧ್ಯಕ್ಷ ಬಡಗಲಪುರ ನಾಗೇಂದ್ರ ತಿಳಿಸಿದರು.

ನಗರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬೆಂಗಳೂರಿನ ವಸಂತನಗರದಲ್ಲಿರುವ ಅಂಬೇಡ್ಕರ್‌ ಭವನದಲ್ಲಿ ನಡೆಯುವ ಕಾರ್ಯಕ್ರಮವನ್ನು ಉತ್ತರ ಪ್ರದೇಶದ ರೈತ ನಾಯಕ ಯದುವೀರ್‌ ಸಿಂಗ್‌ ಉದ್ಘಾಟಿಸಲಿದ್ದು, ರಾಜ್ಯ ರೈತಸಂಘದ ವರಿಷ್ಠರಾದ ಸುನೀತಾ ಪುಟ್ಟಣ್ಣಯ್ಯ ಅಧ್ಯಕ್ಷತೆವಹಿಸಲಿದ್ದಾರೆ.

Advertisement

ಬದಲಾಗುತ್ತಿರುವ ಕೃಷಿ ಬಿಕ್ಕಟ್ಟಿನ ಪರಿಸ್ಥಿತಿ ಹಾಗೂ ಪ್ರೊ.ಎಂಡಿಎನ್‌ ಚಿಂತನೆಗಳ ಪ್ರಸ್ತುತತೆ ಕುರಿತು ರಾಜ್ಯ ಕೃಷಿ ಬೆಲೆ ಆಯೋಗದ ಅಧ್ಯಕ್ಷ ಪ್ರೊ.ಪ್ರಕಾಶ್‌ ಕಮ್ಮರಡಿ ಮಾತನಾಡಲಿದ್ದಾರೆ. ಪ್ರೊ.ಕೆ.ಸಿ.ಬಸವರಾಜ್‌ ಬರೆದಿರುವ ವಿಶ್ವ ರೈತ ಸಂತ ಪ್ರೊ.ಎಂ.ಸಿ.ನಂಜುಂಡಸ್ವಾಮಿ ಪುಸ್ತಕವನ್ನು ಚುಕ್ಕಿ ನಂಜುಂಡಸ್ವಾಮಿ ಬಿಡುಗಡೆ ಮಾಡಲಿದ್ದಾರೆ.

ಸಾಹಿತಿ ದೇವನೂರ ಮಹಾದೇವ, ರೈತ ಮುಖಂಡರಾದ ಕೆ.ಟಿ.ಗಂಗಾಧರ್‌, ಪ್ರೊ.ಕೆ.ಸಿ.ಬಸವರಾಜ್‌, ಚಾಮರಸ ಮಾಲೀಪಾಟೀಲ, ಸಿದ್ದಲಿಂಗಯ್ಯ ಅವರು ಪ್ರೊ.ಎಂಡಿಎನ್‌ ಅವರಿಗೆ ನುಡಿ ನಮನ ಸಲ್ಲಿಸಲಿದ್ದಾರೆ. ಉದ್ಘಾಟನಾ ಸಮಾರಂಭದ ನಂತರ ಮೊದಲ ಗೋಷ್ಠಿಯಲ್ಲಿ 2019ರ ಚುನಾವಣೆಗೆ ಗ್ರಾಮೀಣ ಜನರ ಅಜೆಂಡಾ ಏನು? ಎಂಬ ಕುರಿತು ಸ್ವರಾಜ್‌ ಇಂಡಿಯಾದ ಪ್ರೊ.ಯೋಗೇಂದ್ರ ಯಾದವ್‌ ಮತ್ತು ದರ್ಶನ್‌ ಪುಟ್ಟಣ್ಣಯ್ಯ ವಿಷಯ ಮಂಡಿಸಲಿದ್ದು, ಸಾಮಾಜಿಕ ಹೋರಾಟಗಾರ ಎಸ್‌.ಆರ್‌.ಹಿರೇಮs್ ಅಧ್ಯಕ್ಷತೆವಹಿಸಲಿದ್ದಾರೆ.

ಎರಡನೇ ಗೋಷ್ಠಿಯಲ್ಲಿ ಕೃಷಿ ಬಿಕ್ಕಟ್ಟು-ಯುವ ಜನರ ತಲ್ಲಣಗಳು ಮತ್ತು ಪರಿಹಾರಗಳು ಕುರಿತು ಮಹೇಶ್‌ ದೇಶಪಾಂಡೆ, ಶ್ರೀನಿವಾಸ್‌, ನಳಿನಿ ಗೌಡ, ಹರೀಶ್‌,ಪ್ರಜ್ವಲಾ, ಗಾಯತ್ರಿ ವಿಷಯ ಮಂಡನೆ ಮಾಡಲಿದ್ದಾರೆ. ಪ್ರತಿಸ್ಪಂದನೆ ಮತ್ತು ಗ್ರಾಮೀಣ ಉದ್ಯೋಗ ಸೃಷ್ಟಿಯ ಕುರಿತು ಡಾ.ಎಚ್.ವಿ.ವಾಸು ವಿಷಯ ಮಂಡಿಸಲಿದ್ದು, ನಂದಿನಿ ಜಯರಾಂ ಅಧ್ಯಕ್ಷತೆವಹಿಸಲಿದ್ದಾರೆ.

ರಾಜಕಾರಣ ಮತ್ತು ರೈತ ಚಳವಳಿ ಕುರಿತು ಬಡಗಲಪುರ ನಾಗೇಂದ್ರ ವಿಷಯ ಮಂಡಿಸಲಿದ್ದು, ಜೆ.ಎಂ.ವೀರಸಂಗಯ್ಯ ಅಧ್ಯಕ್ಷತೆವಹಿಸಲಿದ್ದಾರೆ. ಈ ಕಾರ್ಯಕ್ರಮದಲ್ಲಿ ರಾಜ್ಯದ ನೂರು ತಾಲೂಕುಗಳಿಂದ ತಲಾ 5ಜನ ಆಯ್ದ ಯುವಕರು ಭಾಗವಹಿಸಲಿದ್ದಾರೆ. ಜೊತೆಗೆ ರೈತಸಂಘದ ಜಿಲ್ಲಾಧ್ಯಕ್ಷರು, ಪ್ರಧಾನ ಕಾರ್ಯದರ್ಶಿಗಳು ಹಾಗೂ ಪದಾಧಿಕಾರಿಗಳು ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next