ಸಿಂಧನೂರು: ತಾಲೂಕಿನ ಜವಳಗೇರಾ ಗ್ರಾಮದ ಪಬ್ಲಿಕ್ ಶಾಲೆಗೆ ಶಿಕ್ಷಕರನ್ನು ನಿಯೋಜಿಸುವಂತೆ ಒತ್ತಾಯಿಸಿ ಕರ್ನಾಟಕ ರಾಜ್ಯ ರೈತ ಸಂಘದಿಂದ ಬುಧವಾರ ಬಿಇಒಗೆ ಮನವಿ ಸಲ್ಲಿಸಲಾಯಿತು.
ಸಂಘದ ಜಿಲ್ಲಾಧ್ಯಕ್ಷ ಶರಣಪ್ಪ ಮಳ್ಳಿ ಮಾತನಾಡಿ, ಸರಕಾರಿ ಪಬ್ಲಿಕ್ ಶಾಲೆಯಲ್ಲಿ 8, 9, 10 ನೇ ತರಗತಿ ನಡೆಯುತ್ತಿದ್ದು, ಪ್ರತಿಯೊಂದು ತರಗತಿಯಲ್ಲಿ 175ಕ್ಕೂ ಹೆಚ್ಚು ವಿದ್ಯಾರ್ಥಿಗಳಿದ್ದಾರೆ. ಒಂದೊಂದು ತರಗತಿಯನ್ನು ಒಗ್ಗೂಡಿಸಿ ಪಾಠಬೇಕಾಗಿದ್ದು, ಶಿಕ್ಷಕರ ಕೊರತೆಯಿದೆ. ನಾಲ್ಕು ಜನ ಶಿಕ್ಷಕರು ಇರುವುದರಿಂದ ಈ ಸಮಸ್ಯೆ ಎದುರಾಗಿದೆ.
175ಕ್ಕೂ ಹೆಚ್ಚು ಮಕ್ಕಳನ್ನು ಒಂದೆಡೆ ಸೇರಿಸಿದಾಗ, ಅವರನ್ನು ನಿಭಾಯಿಸುವುದು ಕಷ್ಟವಾಗುತ್ತಿದೆ. ವಿಜ್ಞಾನ, ಗಣಿತ, ಸಮಾಜ ವಿಭಾಗಕ್ಕೆ ಶಿಕ್ಷಕರೇ ಇಲ್ಲವಾಗಿದೆ. ಕೂಡಲೇ ಸರಕಾರ ಈ ಬಗ್ಗೆ ಗಮನಹರಿಸಬೇಕು ಎಂದು ಒತ್ತಾಯಿಸಿದರು.
ಸಂಘದ ತಾಲೂಕು ಅಧ್ಯಕ್ಷ ಶಿವರಾಜ್ ಸಾಸಲಮರಿ, ಪ್ರಧಾನ ಕಾರ್ಯದರ್ಶಿ ಪಿ.ಹುಲುಗಯ್ಯ, ಮುಖಂಡರಾದ ನಿರುಪಾದೆಪ್ಪ ಅಡ್ಡಿ, ಶಿವಮೂರ್ತೆಪ್ಪ ಪೂಜಾರಿ, ಮಾನಯ್ಯ ಅಂಕುಶದೊಡ್ಡಿ ಸೇರಿದಂತೆ ಇತರರು ಇದ್ದರು.