Advertisement

ರೈತರಿಗೆ ಮತ್ತೆ ಆಘಾತ; ಹೆಸರು ಖರೀದಿ ಸ್ಥಗಿತ

06:55 AM Oct 07, 2018 | Team Udayavani |

ಹುಬ್ಬಳ್ಳಿ: ಕೇಂದ್ರ ಸರ್ಕಾರ ಘೋಷಿಸಿದ ಬೆಂಬಲ ಬೆಲೆಯಲ್ಲಿ ಹೆಸರು ಕಾಳು ಖರೀದಿ ಕುರಿತಾಗಿ ನಾಫೆಡ್‌ ಸಂಸ್ಥೆ ವಿಧಿಸಿರುವ ಷರತ್ತುಗಳನ್ನು ಪೂರೈಸಲು ಸಾಧ್ಯವಾಗದ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಹೆಸರು ಕಾಳು ಖರೀದಿ ಸ್ಥಗಿತಕ್ಕೆ ರಾಜ್ಯ ಸಹಕಾರ ಮಾರಾಟ ಮಹಾಮಂಡಳ ನಿರ್ಧರಿಸಿದೆ.

Advertisement

ಸರ್ಕಾರದ ಆದೇಶದಂತೆ ಮಂಡಳ ನಾಫೆಡ್‌ ಸಂಸ್ಥೆ ಪರವಾಗಿ ರೈತರಿಂದ ಎಫ್ಎಕ್ಯೂ ಗುಣಮಟ್ಟದ ಹೆಸರು ಕಾಳನ್ನು ಸಹಕಾರ ಸಂಘಗಳ ಮೂಲಕ ಖರೀದಿಸುತ್ತಿತ್ತು. ಖರೀದಿ ಒಪ್ಪಂದದಲ್ಲಿ ರೈತರಿಂದ ಎಫ್ಎಕ್ಯೂ ಗುಣಮಟ್ಟದ ಹೆಸರು ಕಾಳನ್ನು ಮಾತ್ರ ಖರೀದಿಸಬೇಕು. ಬಳಿಕ ದಾಸ್ತಾನು ಮಾಡಬೇಕು. ನಾಫೆಡ್‌ ಸಂಸ್ಥೆ  ಗ್ರೇಡರ್‌ಗಳು ದಾಸ್ತಾನು ಗ್ರೇಡಿಂಗ್‌ ಮಾಡಿದ ನಂತರವಷ್ಟೇ ಖರೀದಿ ಮಾಡಿದ ಹೆಸರು ಕಾಳು ಸ್ವೀಕರಿಸಲಾಗುವುದು. ಗುಣಮಟ್ಟದಲ್ಲಿ ವ್ಯತ್ಯಾಸವಾದರೆ, ಕಾಳು ಹಾಳಾಗಿದ್ದರೆ ಆಗುವ ಆರ್ಥಿಕ ನಷ್ಟಕ್ಕೆ ಸಹಕಾರ ಮಾರಾಟ ಮಹಾಮಂಡಳವನ್ನೇ ಜವಾಬ್ದಾರಿಯನ್ನಾಗಿ ಮಾಡಲಾಗುವುದು ಎಂದು ಷರತ್ತು ವಿಧಿಸಿದ್ದರಿಂದ ಮಹಾಮಂಡಳ ಖರೀದಿ ಪ್ರಕ್ರಿಯೆಯಿಂದ ಹಿಂದೆ ಸರಿದಿದೆ ಎನ್ನಲಾಗಿದೆ.

ಖರೀದಿ ಅಸಾಧ್ಯ:
ಅ.6ರಂದು ಬೆಂಗಳೂರಿನಲ್ಲಿ ಮಹಾಮಂಡಳದ ಆಡಳಿತ ಮಂಡಳಿ ಸಭೆ ನಡೆದಿದ್ದು, ನಾಫೆಡ್‌ ಸಂಸ್ಥೆಯ ಷರತ್ತುಗಳನ್ನು ಒಪ್ಪಿಕೊಂಡಲ್ಲಿ ಮಂಡಳ ನಷ್ಟ ಅನುಭವಿಸಬೇಕಾಗುತ್ತದೆ. ಈ ಹಿನ್ನೆಲೆಯಲ್ಲಿ ಹೆಸರು ಕಾಳು ಖರೀದಿ ಮುಂದುವರಿಸಲು ಸಾಧ್ಯವಿಲ್ಲ ಎಂದು ಸಂಬಂಧಿಸಿದ ಜಿಲ್ಲೆಗಳ ಜಿಲ್ಲಾಡಳಿತದ ಗಮನಕ್ಕೆ ತರಲು ತೀರ್ಮಾನಿಸಿದೆ.

ಕೇಂದ್ರ ಸರ್ಕಾರ ಹೆಸರು ಕಾಳಿಗೆ ಪ್ರತಿ ಕ್ವಿಂಟಲ್‌ಗೆ 6,975 ರೂ.ನಂತೆ ಬೆಂಬಲ ಬೆಲೆಯಡಿ ಖರೀದಿಗೆ ಸೂಚಿಸಿತ್ತಾದರೂ ರಾಜ್ಯ ಸರ್ಕಾರ ಖರೀದಿ ಕೇಂದ್ರ ಆರಂಭಿಸಿ ಪ್ರತಿ ರೈತರಿಂದ 10 ಕ್ವಿಂಟಲ್‌ ಖರೀದಿ ಎಂದು ಹೇಳಿ ನಂತರ ಅದನ್ನು 4 ಕ್ವಿಂಟಲ್‌ಗೆ ಇಳಿಸಿತ್ತು. ಇದೀಗ ಅದಕ್ಕು ಕುತ್ತಾಗಿದೆ.

ಹೆಸರು ಕಾಳು ಖರೀದಿ ಪ್ರಕ್ರಿಯೆ ಸ್ಥಗಿತಗೊಳಿಸಲು ರಾಜ್ಯ ಸಹಕಾರ ಮಾರಾಟ ಮಹಾಮಂಡಳ ನಿರ್ಧರಿಸಿದ್ದು, ರೈತರಿಗೆ ಆಘಾತ ಉಂಟು ಮಾಡಿದೆ. ಕೂಡಲೇ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಮಧ್ಯ ಪ್ರವೇಶಿಸಿ ಹೆಸರು ಕಾಳು ಖರೀದಿ ಆರಂಭ ಹಾಗೂ ಪ್ರತಿ ರೈತರಿಂದ 10 ಕ್ವಿಂಟಲ್‌ ಖರೀದಿಗೆ ಕ್ರಮ ಕೈಗೊಳ್ಳಬೇಕು.
– ಶ್ರೀಧರ ರಡ್ಡೇರ, ರೈತ ಮುಖಂಡ

Advertisement
Advertisement

Udayavani is now on Telegram. Click here to join our channel and stay updated with the latest news.

Next