ಲಿಂಗಸುಗೂರು: ತಾಲೂಕಿನ ಮರಗಂಟನಾಳ ಗ್ರಾಮ ವ್ಯಾಪ್ತಿಯ ಸರ್ಕಾರಿ ಗೈರಾಣಿ ಭೂಮಿಯಲ್ಲಿ ಸಾಗುವಳಿ ಮಾಡುವ ಬಡ ರೈತರ ಜಮೀನುಗಳಲ್ಲಿ ಅರಣ್ಯ ಇಲಾಖೆ ಸಸಿ ನೆಡಲು ಗುಂಡಿ ತೋಡುವ ಮೂಲಕ ತಮ್ಮನ್ನು ಒಕ್ಕಲೆಬ್ಬಿಸುತ್ತಿದೆ ಎಂದು ಸಂತ್ರಸ್ತ ರೈತರು ಅಳಲು ತೋಡಿಕೊಂಡರು.
ಪಟ್ಟಣದ ಸಹಾಯಕ ಆಯುಕ್ತರ ಕಚೇರಿಗೆ ಮನವಿ ಸಲ್ಲಿಸಲು ಆಗಮಿಸಿದ್ದ ಮರಗಂಟನಾಳ ಗ್ರಾಮದ ಸಂತ್ರಸ್ತ ರೈತ ಕುಟುಂಬಗಳು ಸುದ್ದಿಗಾರರೊಂದಿಗೆ ತಮ್ಮ ನೋವು ತೋಡಿಕೊಂಡರು. ಮರಗಂಟನಾಳ ಗ್ರಾಮದ ಸರ್ವೇ ಸಂಖ್ಯೆ 46ರ 48 ಎಕರೆ ವಿಸ್ತೀರ್ಣದಲ್ಲಿ ಒಟ್ಟು 7 ರೈತ ಕುಟುಂಬಗಳು ಮೂರ್‍ನಾಲ್ಕು ದಶಕಗಳಿಂದ ಗೈರಾಣಿ ಭೂಮಿಯಲ್ಲಿ ಸಾಗುವಳಿ ಮಾಡಿ ಜೀವನ ಸಾಗಿಸುತ್ತಿದ್ದೇವೆ. ಆದರೆ ಕಳೆದೆರಡು ದಿನಗಳಿಂದ ಅರಣ್ಯ ಇಲಾಖೆ ಅಧಿಕಾರಿಗಳು ಯಾವುದೇ ಮುನ್ಸೂಚನೆ ನೀಡದೇ ಈ ಜಮೀನಿನಲ್ಲಿ ಜೆಸಿಬಿ ಯಂತ್ರಗಳಿಂದ ಸಸಿ ನೆಡಲು ಗುಂಡಿ ತೋಡುತ್ತಿದ್ದಾರೆ. ಭೂಮಿ ಸಾಗುವಳಿ ಮಾಡುವ ಬಹುತೇಕರು ಅನಕ್ಷರಸ್ಥರಾಗಿದ್ದೇವೆ.
ಪಹಣಿಯಲ್ಲಿ ಮೊದಲು ಗೈರಾಣಿ ಎಂದು ಇತ್ತು. ಆದರೆ ರಾಜ್ಯ ಸರ್ಕಾರ ತನ್ನ ಸ್ವಾಧೀನದಲ್ಲಿದ್ದ ಕೆಲ ಜಮೀನುಗಳನ್ನು ಅರಣ್ಯ ಇಲಾಖೆ ಸುಪರ್ದಿಗೆ ವಹಿಸಿದೆ. ಈ ಕುರಿತು ಜಿಲ್ಲಾ ಧಿಕಾರಿಗಳು 2009ರಲ್ಲಿ ಆದೇಶ ಮಾಡಿದ್ದಾರೆ. ಆದರೆ ಮರಗಂಟನಾಳದಲ್ಲಿನ ಜಮೀನುಗಳನ್ನು ಸಾಗುವಳಿ ಮಾಡುತ್ತಿದ್ದರೂ ಅರಣ್ಯ ಇಲಾಖೆಗೆ ನೀಡಿರುವುದು ದಂಗುಬಡಿಸಿದೆ. ಬರದಲ್ಲೂ ಸಜ್ಜೆ, ಎಳ್ಳು, ಹೆಸರು ಬೆಳೆದು ಬದುಕು ಸಾಗಿಸುತ್ತಿದ್ದೇವು. ಇದೀಗ ಅರಣ್ಯ ಇಲಾಖೆ ಕ್ರಮದಿಂದ ಜಂಘಾಬಲವೇ ಕುಸಿಯುವಂತಾಗಿದೆ ಎಂದು ಸಂತ್ರಸ್ತ ರೈತರು ಹೇಳಿದರು.
ಗೈಣಿ ಭೂಮಿ ಸಾಗುವಳಿ ಮಾಡುವ ರೈತರು ಅಕ್ರಮ ಸಕ್ರಮ ಯೋಜನೆಯಡಿ ಅರ್ಜಿ ಸಲ್ಲಿಸಿದರೂ ಸರ್ಕಾರ ಸ್ಪಂದಿಸಿಲ್ಲ. ಈಗ ಲೋಕಸಭೆ ಚುನಾವಣೆ ನೀತಿ ಸಂಹಿತೆ ಜಾರಿ ಇದ್ದು, ಈ ಮಧ್ಯೆ ಜೆಸಿಬಿ ಯಂತ್ರಗಳ ಮೂಲಕ ಜಮೀನಿನಲ್ಲಿ ಗುಂಡಿ ತೋಡಿ ರೈತರನ್ನು ಒಕ್ಕಲೆಬ್ಬಿಸುತ್ತಿದ್ದಾರೆ. ಗುಂಡಿ ತೋಡದಂತೆ ಅರಣ್ಯ ಇಲಾಖೆ ಅಧಿಕಾರಿಗೆ ಬೇಡಿಕೊಂಡರು ಸ್ಪಂದಿಸಿಲ್ಲ ಎಂದು ರೈತ ಹಸನಸಾಬ್ ಅಳಲು ತೋಡಿಕೊಂಡರು.
ಕೂಡಲೇ ಕಂದಾಯ ಇಲಾಖೆ ಅಧಿಕಾರಿಗಳು ಮಧ್ಯ ಪ್ರವೇಶಿಸಿ ರೈತರಿಗೆ ಭೂಮಿ ಸಾಗುವಳಿಗೆ ಅವಕಾಶ ನೀಡಬೇಕು. ಗುಂಡಿ ತೋಡುತ್ತಿರುವ ಅರಣ್ಯ ಇಲಾಖೆ ಅಧಿಕಾರಿಗಳ ಮೇಲೆ ಕ್ರಮ ಜರುಗಿಸಬೇಕೆಂದು ರೈತರಾದ ಬಹದ್ದೂರ ಹುಸೇನಸಾಬ್, ರಸೂಲಸಾಬ್, ಹನುಮಂತಪ್ಪ, ಖಾಸಿಂಸಾಬ, ಮಹಿಬೂಬಸಾಬ್ ಆಗ್ರಹಿಸಿದರು.
ಸರ್ಕಾರದ ಗೈರಾಣಿ ಭೂಮಿ ಸಾಗುವಳಿ ಮಾಡುವ ರೈತರ ಜಮೀನಿನಲ್ಲಿ ಅರಣ್ಯ ಇಲಾಖೆ ಗುಂಡಿ ತೋಡುವ ಕಾರ್ಯ
ಕೈಬಿಡಬೇಕು, ಇಲ್ಲದಿದ್ದರೆ ಸಾಗುವಳಿ ರೈತರೊಂದಿಗೆ ಸಹಾಯಕ ಆಯುಕ್ತ ಕಚೇರಿ ಎದುರು ಪ್ರತಿಭಟನೆ ನಡೆಸಲಾಗುವುದು.
ಜಿಲಾನಿ ಪಾಷಾ, ಕರವೇ ಅಧ್ಯಕ್ಷ, ಲಿಂಗಸುಗೂರು