ನಂಜನಗೂಡು: ರೈತರು ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿ ಮಾಡಿರುವ ಬೆಳೆ ಸಾಲಮನ್ನಾ ಸೇರಿದಂತೆ ವಿವಿಧ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ರೈತಸಂಘ ಹಾಗೂ ಹಸಿರು ಸೇನೆಯ ಕಾರ್ಯಕರ್ತರು ಪ್ರತಿಭಟನಾ ರ್ಯಾಲಿ ನಡೆಸಿ, ಮಿನಿವಿಧಾನಸೌಧಕ್ಕೆ ಮುತ್ತಿಗೆ ಹಾಕಿ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಇಲ್ಲಿನ ಅಂಬೇಡ್ಕರ್ ವೃತ್ತದಲ್ಲಿ ತಾಲೂಕಿನ ವಿವಿಧ ಭಾಗಗಳಿಂದ ಆಗಮಿಸಿದ ರೈತರು ಮೆರವಣಿಗೆಯಲ್ಲಿ ಸಾಲಮನ್ನಾ ಮಾಡಿ ಮಾತು ಉಳಿಸಿಕೊಳ್ಳಿ ಎಂದು ಘೋಷಣೆ ಕೂಗಿದರು. ಮಿನಿವಿಧಾನಸೌಧದ ಮುಂಭಾಗ ಸಮಾವೇಶಗೊಂಡು ಪ್ರತಿಭಟನೆ ನಡೆಸಿದರು. ಈ ವೇಳೆ ವಿದ್ಯಾರ್ಥಿಗಳು ಪ್ರತಿಭಟನೆಗೆ ಬೆಂಬಲ ಸೂಚಿಸಿದರು.
ರೈತಸಂಘದ ರಾಜ್ಯ ಕಾರ್ಯಾಧ್ಯಕ್ಷೆ ಚುಕ್ಕಿ ನಂಜುಂಡಸ್ವಾಮಿ ಮಾತನಾಡಿ, ಸಿಎಂ ಆಗಿ ಆಯ್ಕೆಯಾದ 24 ಗಂಟೆಯೊಳಗೆ ರೈತರ ಸಾಲಮನ್ನಾ ಎಂದು ಹೇಳಿ, ಅಧಿಕಾರಕ್ಕೆ ಬಂದ ಕುಮಾರಸ್ವಾಮಿ ಈಗ ರಾಗ ಬದಲಾಯಿಸುವ ಮೂಲಕ ಉದ್ಧಟತನ ಪ್ರದರ್ಶಿಸಿದ್ದಾರೆ.
ತಮ್ಮ ಪಕ್ಷದ ಚಿಹ್ನೆಯಾಗಿರುವ ತೆನೆಹೊತ್ತ ಮಹಿಳೆ ಬಗ್ಗೆ ಕಿಂಚಿತ್ತಾದರೂ ಕಾಳಜಿಯಿದ್ದರೆ ಸಾಲಮನ್ನಾಕ್ಕೆ ಪ್ರಧಾನಿ ಮೊರೆ ಹೋಗುತ್ತಿರಲಿಲ್ಲ. ಓಟ್‌ಬ್ಯಾಂಕ್ ರಾಜಕಾರಣ ಬಿಡಿ ಕೊಟ್ಟ ಮಾತನ್ನು ಉಳಿಸಿಕೊಳ್ಳಿ. ಸಾಲಮನ್ನಾ ಆಗದಿದ್ದರೆ ರೈತ ಸಂಘ ಹೋರಾಟವನ್ನು ತೀವ್ರಗೊಳಿಸುವುದಾಗಿ ಎಂದು ಎಚ್ಚರಿಸಿದರು.
ವಿವಿಧ ಬೇಡಿಕೆ ಈಡೇರಿಕೆಗೆ ಸರ್ಕಾರವನ್ನು ಒತ್ತಾಯಿಸಿ ತಹಸೀಲ್ದಾರ್ ಅಶ್ವತ್ಥನಾರಾಯಣ ಅವರಿಗೆ ಮನವಿ ಸಲ್ಲಿಸಿದರು. ಪ್ರತಿಭಟನೆಯಲ್ಲಿ ರೈತಸಂಘದ ರಾಜ್ಯ ವರಿಷ್ಠ ಅಶ್ವತ್‌ನಾರಾಯಣ ರಾಜೇಅರಸ್, ಜಿಲ್ಲಾಧ್ಯಕ್ಷ ಹೊಸೂರು ಕುಮಾರ್,
ಜಿಲ್ಲಾ ಪ್ರಧಾನ ಕಾರ್ಯದರ್ಶಿ ಹೊಸಕೋಟೆ ಬಸವರಾಜು, ತಾಲೂಕು ಅಧ್ಯಕ್ಷ ತಾ.ರಾ.ವಿದ್ಯಾಸಾಗರ್, ಹಸಿರು ಸೇನೆ ಜಿಲ್ಲಾಧ್ಯಕ್ಷ ಎಚ್.ಆರ್.ಬಂಗಾರಸ್ವಾಮಿ, ಗುರುಲಿಂಗೇಗೌಡ, ಮಹದೇವಪ್ಪ, ಬೊಕ್ಕಳ್ಳಿ ನಂಜುಂಡಸ್ವಾಮಿ, ಶಿರಮಳ್ಳಿ ಸಿದ್ದಪ್ಪ, ಸತೀಶ್ ರಾವ್, ಇಮ್ಮಾವು ರಘು ಹಾಜರಿದ್ದರು.