Advertisement

ಜೋಳದ ಬೆಳೆ ನಷ್ಟ: ಪರಿಹಾರಕ್ಕೆ  ಒತ್ತಾಯ

03:33 PM Nov 21, 2021 | Suhan S |

ಸಾಗರ: ತಾಲೂಕಿನಾದ್ಯಂತ ಅಕಾಲಿಕ ಮಳೆಯಿಂದಾಗಿ ನೂರಾರು ಹೆಕ್ಟೇರ್‌ನಲ್ಲಿ ಕಟಾವ್‌ ಮಾಡಿದ ಭತ್ತ ನಷ್ಟವಾಗಿದ್ದರೆ ಅನೇಕ ಕಡೆಗಳಲ್ಲಿ ಜೋಳ ಸಹ ನೀರಿಗೆ ಸಿಲುಕಿ ಹಾಳಾಗಿದ್ದು, ಸರ್ಕಾರ ತಕ್ಷಣ ರೈತರ ನೆರವಿಗೆ ಧಾವಿಸಬೇಕು ಎಂದು ತಾಲೂಕಿನ ರೈತರು ಒತ್ತಾಯಿಸಿದ್ದಾರೆ.

Advertisement

ತಾಲೂಕಿನ ತಾಳಗುಪ್ಪ ಹೋಬಳಿಯ ಸೈದೂರು ಗ್ರಾಪಂ ವ್ಯಾಪ್ತಿಯಲ್ಲಿ ಶನಿವಾರ ರೈತಸಂಘದ ಸದಸ್ಯರು ಮಳೆಯಿಂದ ಹಾಳಾದ ಭತ್ತದ ಗದ್ದೆಗಳಿಗೆ ಭೇಟಿ ನೀಡಿ ಪರಿಶೀಲಿಸಿ, ರೈತರಿಗೆ ಸುಗ್ಗಿ ಸಂದರ್ಭದಲ್ಲಿ ಬಂದ ಅಕಾಲಿಕ ಮಳೆ ಶಾಪವಾಗಿ ಪರಿಣಮಿಸಿದೆ. ಸರ್ಕಾರ ರೈತರ ನೆರವಿಗೆ ಬರದೆ ಹೋದಲ್ಲಿ ರೈತಸಂಘ ಪ್ರತಿಭಟನೆ ನಡೆಸುವುದು ಅನಿವಾರ್ಯವಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ತಾಳಗುಪ್ಪ ಹೋಬಳಿ ಸೇರಿದಂತೆ ತಾಲೂಕಿನ ನಾಲ್ಕು ಹೋಬಳಿಗಳಲ್ಲೂ ಭತ್ತ, ಅಡಕೆ, ಮೆಕ್ಕೆಜೋಳ ಮಳೆಗೆ ಸಿಲುಕಿ ನಾಶವಾಗಿದೆ. ತಾಲೂಕಿನಲ್ಲಿ 13 ಸಾವಿರ ಹೆಕ್ಟೇರ್‌ ಪ್ರದೇಶದಲ್ಲಿ ಭತ್ತ ಹಾಗೂ 3 ಸಾವಿರ ಹೆಕ್ಟೇರ್‌ಗೂ ಹೆಚ್ಚು ಪ್ರದೇಶದಲ್ಲಿ ಮೆಕ್ಕೆಜೋಳ ಬೆಳೆದಿದ್ದಾರೆ. ಎಲ್ಲವೂ ಕಟಾವಿಗೆ ಬಂದ ಸಂದರ್ಭದಲ್ಲಿ ಮಳೆಗೆ ಸಿಕ್ಕಿದೆ. ಕೆಲವು ಗದ್ದೆಗಳಲ್ಲಿ ಭತ್ತವನ್ನು ಕಟಾವು ಮಾಡಿ ಗದ್ದೆಯಲ್ಲಿ ಹಾಕಲಾಗಿತ್ತು. ಅದೆಲ್ಲವೂ ಮುಗ್ಗಲು ಬಂದಿದ್ದು, ಉಪಯೋಗಿಸಲು ಬಾರದ ಸ್ಥಿತಿಯಲ್ಲಿದೆ. ಹವಾಮಾನ ವೈಪರೀತ್ಯದಿಂದಾಗಿ ರೈತರು ವರ್ಷಪೂರ್ತಿ ಕೃಷಿ ಮಾಡಿದ್ದನ್ನು ಕಳೆದುಕೊಂಡಿದ್ದು, ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿ ಸರ್ಕಾರಕ್ಕೆ ವರದಿ ಸಲ್ಲಿಸಬೇಕು. ಸರ್ಕಾರ ಹಿಂದೆ ನಿಗದಿಪಡಿಸಿದ ಪರಿಹಾರ ದರ ಅವೈಜ್ಞಾನಿಕವಾಗಿದ್ದು, ಪರಿಹಾರ ಧನವನ್ನು ಹೆಚ್ಚು ಮಾಡಬೇಕು ಎಂದು ಒತ್ತಾಯಿಸಿದರು.

ರೈತಸಂಘದ ಸಂಚಾಲಕ ರಮೇಶ್‌ ಕೆಳದಿ ಮಾತನಾಡಿ, ಅಕಾಲಿಕ ಮಳೆಯಿಂದಾಗಿ ರೈತರು ವರ್ಷಪೂರ್ತಿ ಬೆವರು ಸುರಿಸಿ ಬೆಳೆದ ತಮ್ಮ ಬೆಳೆಯನ್ನು ಕಳೆದುಕೊಂಡಿದ್ದಾರೆ. ಚುನಾವಣೆ ಸಂದರ್ಭದಲ್ಲಿ ಮತ ಕೇಳಲು ಬರುವ ಜನಪ್ರತಿನಿಧಿ ಗಳು ಕನಿಷ್ಠ ಪಕ್ಷ ಸ್ಥಳಕ್ಕೆ ಭೇಟಿ ನೀಡಿ ರೈತರ ಕಷ್ಟವನ್ನು ಕೇಳದೆ ಇರುವುದು ದುರದೃಷ್ಟಕರ ಸಂಗತಿ. ತಕ್ಷಣ ಜನಪ್ರತಿನಿಧಿ ಗಳು ಅಧಿಕಾರಿಗಳ ಜೊತೆ ಹಾಳಾದ ಜಮೀನಿಗೆ ಭೇಟಿ ನೀಡಿ ಪರಿಶೀಲಿಸಿ ರೈತರಲ್ಲಿ ಆತ್ಮಸ್ಥೈರ್ಯ ತುಂಬುವ ಕೆಲಸ ಮಾಡಬೇಕು ಎಂದು ಒತ್ತಾಯಿಸಿದರು.

ರೈತಸಂಘದ ಸೂರಜ್‌, ಗಿರೀಶ್‌ ಕಾಗೋಡು, ಲಕ್ಷ್ಮಣ್‌, ಸುರೇಶ್‌, ಉಮೇಶ್‌, ಗುರುಮೂರ್ತಿ ಮಂಡಗಳಲೆ, ಸುರೇಶ್‌ ಬಾವಿಕಟ್ಟೆ, ಲಕ್ಷ್ಮಮ್ಮ ಇನ್ನಿತರರು ಇದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next