ವಾಡಿ: ಕೋಲಿ ಸಮಾಜಕ್ಕೆ ಸೇರಿದ ರೈತ ಮಹಿಳೆಯೊಬ್ಬರು ತನ್ನ 33 ಗೋವುಗಳನ್ನು ರಸ್ತೆ ಮೂಲಕ ಮಗಳ ಊರಿಗೆ ಕೊಂಡೊಯ್ಯುತ್ತಿದ್ದ ವೇಳೆ ಹಿಂದೂ ಸಂಘಟಕರ ದಾಳಿಗೊಳಗಾಗಿ ಇಡೀ ದಿನ ಠಾಣೆಯಲ್ಲಿ ಗೋಳಾಡಿದ ಪ್ರಸಂಗ ರವಿವಾರ ಪಟ್ಟಣದಲ್ಲಿ ನಡೆದಿದೆ.
ಯಾದಗಿರಿ ಹಾಗೂ ಕಲಬುರಗಿ ಜಿಲ್ಲೆಗಳ ಗಡಿ ಗ್ರಾಮ ಯರಗೋಳದಿಂದ ರಾಷ್ಟ್ರೀಯ ಹೆದ್ದಾರಿ-150 ಮಾರ್ಗವಾಗಿ ಜಾನುವಾರುಗಳೊಂದಿಗೆ ಶಹಾಬಾದ ನಗರಕ್ಕೆ ಬರುತ್ತಿದ್ದ ಕಾಂತಮ್ಮ ದುರ್ಗಪ್ಪ ಹತ್ತಿಕುಣಿ ಎಂಬ ರೈತ ಮಹಿಳೆಯೇ ಕಣ್ಣೀರು ಹಾಕಿ ಪರದಾಡಿದ ಮಹಿಳೆಯಾಗಿದ್ದಾಳೆ.
ಯರಗೋಳದಲ್ಲಿ ವಾಸವಿದ್ದು, ಪತಿಯ ಸಾವಿನ ನಂತರ ಕಂಗೆಟ್ಟ ಕಾಂತಮ್ಮ, ಮಗಳು ಸಾವಿತ್ರಿಬಾಯಿ ವಾಸವಿರುವ ಶಹಾಬಾದ ನಗರಕ್ಕೆ ತನ್ನೆಲ್ಲ ಗೋವುಗಳನ್ನು ಸ್ಥಾಳಂತರಕ್ಕೆ ಮುಂದಾಗಿದ್ದಳು ಎನ್ನಲಾಗಿದೆ. ಮಾರ್ಗ ಮಧ್ಯೆ ವಾಡಿ ಪಟ್ಟಣದ ಹೊರ ವಲಯದ ಬಳಿರಾಮ ಚೌಕ್ ಮೂಲಕ ಹೋಗುತ್ತಿದ್ದಾಗ ಶ್ರೀರಾಮ ಸೇನೆಯ ಅಧ್ಯಕ್ಷ ವಿನೋದ ಹಿಂದೂ, ಕಾರ್ಯದರ್ಶಿ ವಿಶ್ವ ತಳವಾರ, ಕಾರ್ಯಕರ್ತರಾದ ಕರಣ ರಾಠೋಡ ಅವರು ಅಕ್ರಮವಾಗಿ ಗೋವುಗಳನ್ನು ಕಸಾಯಿ ಖಾನೆಗೆ ಸ್ಥಳಾಂತರಿಸುತ್ತಿದ್ದಾರೆ ಎಂಬ ಅನುಮಾನದಡಿ ತಡೆದು ಪೊಲೀಸರಿಗೆ ದೂರು ನೀಡಿದ್ದಾರೆ.
ತಕ್ಷಣಕ್ಕೆ ಸ್ಥಳಕ್ಕಾಗಮಿಸಿದ ಪೊಲೀಸರು,17 ಹಸು, 8 ಕರು, 4 ಹೊರಿ, 4 ಮಣಕಾ ಸೇರಿದಂತೆ ಒಟ್ಟು33 ಗೋವುಗಳನ್ನು ವಶಕ್ಕೆ ಪಡೆದುಕೊಂಡು ಠಾಣೆಗೆ ತಂದಿದ್ದಾರೆ. ಆಕಳನ್ನು ಕಟುಕರಿಗೆ ಮಾರಲು ತಂದಿಲ್ರೀ.. ನನ್ನ ಮಗಳ ಊರಿಗೆ ಬಿಡಲು ತಂದಿದ್ದೇನೆ. ಸಾಕುವ ಜಾನುವಾರಗಳನ್ನು ನಾನು ಕಟುಕರಿಗೆ ಮಾರಲ್ರೀ ಸಾಹೇಬರಾ ನನಗ ಬಿಟ್ಟುಬಿಡ್ರೀ ಎಂದು ಮಹಿಳೆ ಕಾಂತಮ್ಮ ಪೊಲೀಸರಿಗೆ ಪರಿಪರಿಯಾಗಿ ಮನವಿ ಮಾಡಿದರು.
ಸಾರ್ವಜನಿಕರ ದೂರಿನ ಮೇರೆಗೆ ಗೋವುಗಳನ್ನು ವಶಕ್ಕೆ ಪಡೆದು ಸಾಗಾಣಿಕೆ ಪರವಾನಿಗೆ ಇಲ್ಲದ ತಪ್ಪಿನಡಿ ಪ್ರಕರಣ ದಾಖಲಿಸಿಕೊಂಡು ಜಾನುವಾರುಗಳನ್ನು ಕೊಂಚೂರು ಪುಣ್ಯಕೋಟಿ ಗೋಶಾಲೆಗೆ ಕಳುಹಿಸಲಾಗಿದೆ ಎಂದು ಪಿಎಸ್‌ಐ ಮಹಾಂತೇಶ ಜಿ.ಪಾಟೀಲ ತಿಳಿಸಿದ್ದಾರೆ.
ಕ್ರಮಕ್ಕೆ ಆಗ್ರಹ
ಬಕ್ರೀದ್ ಸಮೀಪಿಸುತ್ತಿದ್ದಂತೆ ಅಕ್ರಮವಾಗಿ ಗೋವುಗಳ ಸಾಗಾಟ ಹೆಚ್ಚಾಗಿ ಕಂಡುಬರುತ್ತದೆ. ಗೋವು ಮತ್ತು ಒಂಟೆಗಳನ್ನು ಕಸಾಯಿ ಖಾನೆಗೆ ಸಾಗಿಸುವ ಜಾಲ ಕ್ರೀಯಶೀಲವಾಗುತ್ತದೆ. ರವಿವಾರದ ಪ್ರಕರಣದಲ್ಲಿ ಹಿಂದೂ ಮಹಿಳೆಯ ಮೂಲಕ ೩೩ ಗೋವುಗಳನ್ನು ಕಸಾಯಿ ಖಾನೆಗೆ ಸಾಗಿಸಲು ಕಟುಕರು ತಂತ್ರ ರೂಪಿಸಿರುವ ಸಾಧ್ಯತೆಯಿದೆ. ಗೋಹತ್ಯೆ ನಿಷೇಧದ ನಡುವೆಯೂ ಜಾನುವಾರುಗಳ ಮಾಂಸ ದಂಧೆ ವ್ಯಾಪಕವಾಗಿ ನಡೆಯುತ್ತಿದೆ. ಇದನ್ನು ಸೂಕ್ತ ತನಿಖೆಯಿಂದ ಪತ್ತೆ ಹಚ್ಚಿ ಪೊಲೀಸರು ಆರೋಪಿಗಳ ವಿರುದ್ಧ ಕಾನೂನು ಕ್ರಮಕೈಗೊಳ್ಳಬೇಕು ಎಂದು ಹಿಂದೂ ಪರ ಸಂಘಟನೆಗಳ ಮುಖಂಡರಾದ ವೀರಣ್ಣ ಯಾರಿ, ರವಿ ಕಾರಬಾರಿ, ಜಗತ್‌ಸಿಂಗ್ ರಾಠೋಡ, ದೌಲತರಾವ ಚಿತ್ತಾಪುರಕರ, ಕುಮಾರ ಚವ್ಹಾಣ, ಉಮೇಶ ರಾಠೋಡ ಆಗ್ರಹಿಸಿದ್ದಾರೆ.