ಅಫಜಲಪುರ: ಸಾಲಬಾಧೆಯಿಂದ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ತಾಲೂಕಿನ ಬಡದಾಳ ಗ್ರಾಮದ ಸಾಯಬಣ್ಣ ಮಂಗಳೂರ ಮನೆಗೆ ಜಿಲ್ಲಾಧಿಕಾರಿ ಉಜ್ವಲಕುಮಾರ ಘೋಷ ಭೇಟಿ ನೀಡಿ ಸಾಂತ್ವನ ಹೇಳಿದರು. ನಂತರ ಮಾತನಾಡಿದ ಅವರು, ಯಾವುದೇ ರೈತರಿಗೆ ಒತ್ತಡ ಹಾಕಿ ಸಾಲ ವಸೂಲಿ ಮಾಡುವಂತಿಲ್ಲ ಎಂದು ಬ್ಯಾಂಕ್‌ಗಳಿಗೆ ನಾನು ಖಡಕ್ ಎಚ್ಚರಿಕೆ ನೀಡುತ್ತಿದ್ದೇನೆ.
ಒಂದು ವೇಳೆ ಯಾವುದಾದರೂ ಬ್ಯಾಂಕ್‌ನವರು ಒತ್ತಡ ಹಾಕಿ ಸಾಲ ವಸೂಲಿ ಮಾಡುತ್ತಿರುವುದು ಕಂಡು ಬಂದರೆ ಕ್ರಮ ಕೈಗೊಳ್ಳಲಾಗುತ್ತದೆ. ಮೃತ ರೈತನ ಕುಟುಂಬಕ್ಕೆ ಸರ್ಕಾರದಿಂದ ಸಿಗಬೇಕಾದ ಸೌಲಭ್ಯಗಳನ್ನು ಒಂದು ವಾರದೊಳಗಡೆ ತಲುಪಿಸುವ ಕೆಲಸ ಮಾಡಲಾಗುತ್ತದೆ ಎಂದು ಹೇಳಿದರು.
ಆತ್ಮಹತ್ಯೆ ಮಾಡಿಕೊಂಡ ರೈತನ ಕುಟುಂಬಕ್ಕೆ ಸರ್ಕಾರ 5 ಲಕ್ಷ ರೂ. ಪರಿಹಾರ ಧನ ನೀಡುತ್ತಿದೆ. ಅಲ್ಲದೆ ಅವರ ಮನೆಯಲ್ಲಿ ಎಷ್ಟು ಜನ ಮಕ್ಕಳು ವ್ಯಾಸಂಗ ಮಾಡುತ್ತಾರೆ ಅವರಿಗೆ ಉಚಿತ ಶಿಕ್ಷಣ, ವಸತಿ, ಆರೋಗ್ಯ ಸೇವೆ ನೀಡುತ್ತಿದೆ. ಈ ಎಲ್ಲ ಸೌಲಭ್ಯಗಳನ್ನು ಮೃತ ಸಾಯಬಣ್ಣ ಕುಟುಂಬಕ್ಕೆ ಒದಗಿಸಲಾಗುವುದು.
ಅಲ್ಲದೆ ಬುದ್ದಿಮಾಂಧ್ಯ ಅಂಗವಿಕಲ ಮಗನ ಹೆಸರಿನಲ್ಲಿ ಗ್ರಾಪಂ ವತಿಯಿಂದ ವಸತಿ ಯೋಜನೆಯಲ್ಲಿ ಮನೆ ಮಂಜೂರು ಮಾಡುವಂತೆ ಅಭಿವೃದ್ಧಿ ಅಧಿಕಾರಿ ಮಹಮದ್ ವಸೀಮ್ ಮಣೂರ ಅವರಿಗೆ ಸೂಚಿಸಿದರು. ಕೃಷಿ ಇಲಾಖೆ ಸಹಾಯಕ ಕೃಷಿ ನಿರ್ದೇಶಕ ಶರಣಗೌಡ ಪಾಟೀಲ ಮಾತನಾಡಿ, ಜಿಲ್ಲಾಧಿಕಾರಿಗಳ ಆದೇಶದ ಮೇರೆಗೆ ಮೃತನ ಹೊಲದಲ್ಲಿ ಕೃಷಿ ಹೊಂಡ ಮಾಡಿಕೊಡಲಾಗುವುದು ಎಂದು ಹೇಳಿದರು.
ಗ್ರಾಪಂ ಸದಸ್ಯರಾದ ಸುಭಾಷ ಪಾಟೀಲ, ಶರಣಬಸಪ್ಪ ಅತನೂರೆ, ಶಿವಾನಂದ ಗೊಬ್ಬೂರ, ಚಂದ್ರಕಾಂತ ಶಿರೂರ, ಗ್ರೇಡ್ 2 ತಹಶೀಲ್ದಾರ ಪಿ.ಜಿ. ಪವಾರ, ಮಡಿವಾಳ ಹೋಳ್ಕರ ಇದ್ದರು.