Advertisement

ಸಾಲಮನ್ನಾಗೆ ರೈತ ಪ್ರತಿನಿಧಿಗಳ ಒಕ್ಕೊರಲ ಆಗ್ರಹ

03:45 AM Feb 17, 2017 | Team Udayavani |

ಬೆಂಗಳೂರು: ಕೇಂದ್ರ ಸರ್ಕಾರ ರೈತರ ಸಾಲಮನ್ನಾ ಮಾಡಲಿ ಬಿಡಲಿ, ರಾಜ್ಯ ಸರ್ಕಾರ ತಕ್ಷಣ ಸಹಕಾರ ಬ್ಯಾಂಕುಗಳಲ್ಲಿ ಮಾಡಿರುವ ಸಾಲವನ್ನು ಸಂಪೂರ್ಣ ಮನ್ನಾ ಮಾಡಬೇಕೆಂದು ರೈತ ಮುಖಂಡರು ಮುಖ್ಯಮಂತ್ರಿಗೆ ಒಕ್ಕೊರಲ ಬೇಡಿಕೆ ಸಲ್ಲಿಸಿದರು. ವಿಧಾನಸೌಧದಲ್ಲಿ ಗುರುವಾರ ಬಜೆಟ್‌ ಪೂರ್ವಭಾವಿ ಸಮಾಲೋಚನಾ ಸಭೆಯಲ್ಲಿ ಪಾಲ್ಗೊಂಡಿದ್ದ ರೈತ ಮುಖಂಡರು, ರಾಜ್ಯದಲ್ಲಿ ಸತತ ಬರದಿಂದ ರೈತ ಸಮುದಾಯ ತೀರಾ ಸಂಕಷ್ಟಕ್ಕೆ ಸಿಲುಕಿದೆ. ಕೇಂದ್ರ ಮಾಡಲಿ ಎಂದು ಕಾಯುವುದಕ್ಕಿಂತ ರಾಜ್ಯ ಸರ್ಕಾರ ರೈತರ ನೆರವಿಗೆ ಬರಬೇಕು. ಸಾಲಮನ್ನಾ ಜತೆಗೆ ಹೊಸ
ಸಾಲದ ವ್ಯವಸ್ಥೆ ಮಾಡಬೇಕು ಎಂದು ಒತ್ತಾಯಿಸಿದರು. ಮುಂದಿನ ಬಜೆಟ್‌ನಲ್ಲಿ ಕೃಷಿ ಮತ್ತು ನೀರಾವರಿ ಕ್ಷೇತ್ರಕ್ಕೆ ಹೆಚ್ಚು
ಒತ್ತು ಕೊಡಬೇಕು. ರೈತರ ಆರ್ಥಿಕ ಸ್ಥಿತಿ ಉತ್ತಮ ಪಡಿಸುವ ನಿಟ್ಟಿನಲ್ಲಿ ವಿಶೇಷ ಪ್ಯಾಕೇಜ್‌ ರೂಪಿಸಬೇಕೆಂದು ಆಗ್ರಹಿಸಿದರು ಎಂದು ಮೂಲಗಳು ತಿಳಿಸಿವೆ.

Advertisement

ರೈತ ಪ್ರತಿನಿಧಿಗಳ ಬೇಡಿಕೆಗಳಿಗೆ ಉತ್ತರಿಸಿದ ಸಿಎಂ ಸಿದ್ದರಾಮಯ್ಯ, ರಾಜ್ಯದ ರೈತರು ವಾಣಿಜ್ಯ ಮತ್ತು ಸಹಕಾರ
ಬ್ಯಾಂಕುಗಳಲ್ಲಿ 52,200 ಕೋಟಿ ರೂ. ಸಾಲ ಮಾಡಿದ್ದಾರೆ. ಸಹಕಾರ ಬ್ಯಾಂಕುಗಳು ಕೊಟ್ಟಿರುವುದು 10 ಸಾವಿರ ಕೋಟಿ ರೂ. ಆದರೆ, ವಾಣಿಜ್ಯ ಬ್ಯಾಂಕುಗಳು 42,200 ಕೋಟಿ ರೂ. ಕೊಟ್ಟಿವೆ. ನಾವು ಮನ್ನಾ ಮಾಡಿದರೆ ಶೇ.19ರಷ್ಟು ರೈತರಿಗೆ ಮಾತ್ರ ಉಪಯೋಗವಾಗುತ್ತದೆ. ಕೇಂದ್ರ ಸರ್ಕಾರವೂ ಅರ್ಧದಷ್ಟಾದರೂ ಮನ್ನಾ ಮಾಡಿದರೆ ಶೇ.100ಕ್ಕೆ 100 ರಷ್ಟು ರೈತರಿಗೆ ಉಪಯೋಗವಾಗುತ್ತದೆ. ಈ ಮೂಲಕ ಎಲ್ಲ ರೈತರಿಗೆ ಒಳ್ಳೆಯದಾಗಲಿ ಎಂಬ ಕಾರಣಕ್ಕೆ ನಾನು ಕೇಂದ್ರದ ಮೇಲೆ ಒತ್ತಡ ತರುತ್ತಿದ್ದೇನೆ ಎಂದರು.

ಕೇಂದ್ರ ಸರ್ಕಾರ ವಾಣಿಜ್ಯ ಬ್ಯಾಂಕುಗಳಲ್ಲಿ ರೈತರು ಪಡೆದಿರುವ ಅರ್ಧದಷ್ಟು ಸಾಲಮನ್ನಾ ಮಾಡಿದರೆ, ರಾಜ್ಯ ಸರ್ಕಾರವು ಅರ್ಧ ಸಾಲ ಮನ್ನಾ ಮಾಡಲಿದೆ. ನಿನ್ನೆಯೂ ಈ ಬಗ್ಗೆ ಪ್ರಧಾನಿಗೆ ಪತ್ರ ಬರೆದಿದ್ದೇನೆ. ಸಾಧ್ಯವಾದರೆ ಮತ್ತೂಮ್ಮೆ ಅವರ ಬಳಿ ಹೋಗಿ ಮನವಿಯೂ ಮಾಡುತ್ತೇನೆ ಎಂದು ಹೇಳಿದರು.

ವಲಸೆ ತಪ್ಪಿಸಲು ಕ್ರಮ: ಸರ್ಕಾರ ರೈತರ ಹಿತ ಕಾಪಾಡಲು ಮತ್ತು ಅವರ ಹಕ್ಕುಗಳ ರಕ್ಷಣೆಗೆ ಬದ್ಧವಾಗಿದೆ. ಆಹಾರ ಪದಾರ್ಥಗಳ ಉತ್ಪಾದನೆ ಪ್ರಮಾಣ ಹೆಚ್ಚಾಗಬೇಕು. ಜತೆಗೆ ರೈತರು ಬೆಳೆದ ಬೆಳೆಗೆ ಸೂಕ್ತ ಬೆಲೆ ಸಿಗಬೇಕೆಂಬುದು ಸರ್ಕಾರದ ಬಯಕೆ. ಇದಕ್ಕಾಗಿಯೇ ಎಪಿಎಂಸಿಗಳಲ್ಲಿ ಆನ್‌ಲೈನ್‌ ಹರಾಜು ಪದ್ಧತಿ ಜಾರಿಗೆ ತರಲಾಗಿದೆ.

ಈ ವ್ಯವಸ್ಥೆ ಈಗ ದೇಶಕ್ಕೇ ಮಾದರಿಯಾಗಿದೆ. ಕೃಷಿ ಉತ್ಪನ್ನಗಳ ಬೆಲೆ ಕುಸಿದಾಗ ಮಾರುಕಟ್ಟೆ ಮಧ್ಯೆ ಪ್ರವೇಶ ಮಾಡಿ ಬೆಂಬಲ ಬೆಲೆ ಘೋಷಣೆ ಮಾಡಲಾಗುತ್ತಿದೆ ಎಂದು ಸಿಎಂ ಹೇಳಿದರು. ಉದ್ಯೋಗ ಅರಸಿ ಗ್ರಾಮೀಣ ಭಾಗದ ಯುವಕರು ನಗರಗಳತ್ತ ವಲಸೆ ಬರುವುದು ತಡೆಗಟ್ಟಿ ಅಲ್ಲೇ ಕೃಷಿ ಮತ್ತು ಕೃಷಿಗೆ ಪೂರಕವಾದ ಪಶುಸಂಗೋಪನೆಯಲ್ಲಿ ತೊಡಗುವಂತೆ ಮಾಡುವ ಉದ್ದೇಶದಿಂದ ಈ ಬಾರಿಯ ಬಜೆಟ್‌ನಲ್ಲಿ ವಿಶೇಷ ಪ್ಯಾಕೇಜ್‌ ರೂಪಿಸಲಾಗುವುದು. ಬರಗಾಲದಿಂದ ಸಂಕಷ್ಟಕ್ಕೀಡಾಗಿರುವ ರೈತರಿಗೆ ಪ್ರೋತ್ಸಾಹ ಸೇರಿ ಯುವ ಸಮೂಹಕ್ಕೆ ಹೆಚ್ಚು ಉದ್ಯೋಗ ಗ್ರಾಮೀಣ ಭಾಗದಲ್ಲೇ ಸಿಗುವಂತೆ ಮಾಡಲಾಗುವುದು ಎಂದು ಹೇಳಿದರು.

Advertisement

ಕೃಷಿ ಮಾಡುವ ಯುವ ಸಮುದಾಯಕ್ಕೆ ಪ್ರೋತ್ಸಾಹ: ಯುವಕರು ಇತ್ತೀಚಿನ ದಿನಗಳಲ್ಲಿ ಉದ್ಯೋಗ ಅರಸಿ ನಗರಗಳತ್ತ ಬರುತ್ತಿದ್ದು, ಹಳ್ಳಿಗಳು ವೃದ್ಧಾಶ್ರಮ ಎಂಬಂತಾಗಿದೆ. ಇದು ತೀವ್ರ ನೋವು ತರುವ ವಿಷಯ. ಹೀಗಾಗಿ, ಹಳ್ಳಿಗಳ ಯುವ ಸಮೂಹಕ್ಕೆ ಉತ್ತೇಜನ ನೀಡಲು ಕೃಷಿ ಹಾಗೂ ಕೃಷಿಗೆ ಪೂರಕವಾದ ಚಟುವಟಿಕೆ ಕೈಗೊಳ್ಳಲು ನೆರವು ಕಲ್ಪಿಸಲಾಗುವುದು. ಒಣ ಭೂಮಿಯಲ್ಲಿ ಬೇಸಾಯ ಮಾಡುತ್ತಿರುವವರಿಗೆ 1 ಲಕ್ಷ ಕೃಷಿ ಹೊಂಡ ನಿರ್ಮಿಸಿದ್ದು
ಇದಕ್ಕೆ ಸಾಕಷ್ಟು ಬೇಡಿಕೆ ಇರುವ ಕಾರಣ ಮಾರ್ಚ್‌ ವೇಳೆಗೆ ಇನ್ನೂ 30 ಸಾವಿರ ಹೊಂಡ ನಿರ್ಮಿಸಲಾಗುವುದು.

ಮುಂದಿನ ಬಜೆಟ್‌ನಲ್ಲಿ ಇದನ್ನು ಹೆಚ್ಚು ಮಾಡಿ ಅದಕ್ಕೆ ಮೀಸಲಿಟ್ಟ ಹಣವನ್ನೂ ಹೆಚ್ಚಿಸಲಾಗುವುದು ಎಂದು ಸಿಎಂ ಭರವಸೆ ನೀಡಿದರು. ಕುರುಬೂರು ಶಾಂತಕುಮಾರ್‌, ಕೋಡಿಹಳ್ಳಿ ಚಂದ್ರಶೇಖರ್‌, ಚುಕ್ಕಿ ನಂಜುಂಡಸ್ವಾಮಿ, ಬಸವರಾಜು ಸೇರಿ ರೈತ ಸಂಘಟನೆಗಳ ನೂರಕ್ಕೂ ಹೆಚ್ಚು ಮುಖಂಡರು ಸಭೆಯಲ್ಲಿ ಭಾಗವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next