ಚಂಡೀಗಢ: ರೈತ ಹೋರಾಟದ ವೇಳೆ ಮೃತ ಪಟ್ಟಿರುವ ಯುವ ರೈತ ಶುಭಕರನ್ ಸಾವಿನ ಕುರಿತು ಚಳವಳಿಕಾರರು ವ್ಯಾಪಕ ಆಕ್ರೋಶ ಹೊರ ಹಾಕುತ್ತಿರುವ ವೇಳೆ ಆತನ ತಾಯಿ ತೀರಿಕೊಂಡಿದ್ದು, ತಂದೆ ಮಾನಸಿಕ ಖಾಯಿಲೆಯಿಂದ ಬಳಲುತ್ತಿದ್ದಾರೆ ಎಂದು ತಿಳಿದು ಬಂದಿದೆ.
ಸಾವಿಗೆ ನಿಖರ ಕಾರಣ ಇನ್ನೂ ತಿಳಿದು ಬಂದಿಲ್ಲವಾದರೂ, ಶುಭಕರನ್ ಕುಟುಂಬಕ್ಕೆ ಸುಮಾರು 2 ಎಕರೆ ಜಮೀನಿದೆ. ಇಬ್ಬರು ಸಹೋದರಿಯರಿದ್ದು ಒಬ್ಬಳಿಗೆ ವಿವಾಹವಾಗಿದ್ದು ಇನ್ನೊಬ್ಬಳು ವಿದ್ಯಾರ್ಥಿಯಾಗಿದ್ದಾಳೆ. ಯುವ ರೈತ, ತನ್ನ ಸಹೋದರಿಯ ಮದುವೆಗೆ ಸಾಲ ಮಾಡಿದ್ದು, ಕುಟುಂಬವನ್ನು ಬಡತನ ಅನುಭವಿಸುತ್ತಿತ್ತು ಎಂದು ನೆರೆಹೊರೆಯವರು ತಿಳಿಸಿದ್ದಾರೆ.
ಶುಭಕರನ್ ಕುಟುಂಬಕ್ಕೆ ಸರಕಾರ ಪರಿಹಾರ ಘೋಷಿಸಬೇಕು ಎಂದು ಆಗ್ರಹಿಸಿ ಮರಣೋತ್ತರ ಪರೀಕ್ಷೆಗೆ ರೈತರು ತಡೆ ಒಡ್ಡಿದ್ದಾರೆ. ಪರಿಹಾರದ ಭಾಗವಾಗಿ ಕೇಂದ್ರ ಸರಕಾರಿ ನೌಕರಿ ನೀಡುವಂತೆ ಒತ್ತಾಯಿಸುತ್ತಿದ್ದಾರೆ.
ಫೆಬ್ರವರಿ 13 ರಂದು, 21 ವರ್ಷದ ಶುಭಕರನ್ ಸಿಂಗ್ ಪಂಜಾಬ್‌ನ ಬಟಿಂಡಾ ಜಿಲ್ಲೆಯ ಬಲೋಕೆ ಗ್ರಾಮದ ತನ್ನ ಮನೆಯಿಂದ ದೆಹಲಿಗೆ ರೈತರ ಮೆರವಣಿಗೆಯಲ್ಲಿ ಸೇರಲು ಬಂದಿದ್ದ. ಎಂಟು ದಿನಗಳ ನಂತರ, ಪಂಜಾಬ್ ಮತ್ತು ಹರಿಯಾಣವನ್ನು ಬೇರ್ಪಡಿಸುವ ಖಾನೌರಿ ಗಡಿಯ ಬಳಿ ರೈತರು ಮತ್ತು ಪೊಲೀಸರ ನಡುವಿನ ಘರ್ಷಣೆಯಲ್ಲಿ ಸಾವನ್ನಪ್ಪಿದ್ದ.
ಯುವ ರೈತನ ಸಾವು ಭಾರೀ ರಾಜಕೀಯ ಬಿರುಗಾಳಿ ಎಬ್ಬಿಸಿದ್ದು, ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ಹೇಳಿದ್ದಾರೆ.