Advertisement

ಜಮೀನು ಹದಗೊಳಿಸಲು ಸಜ್ಜಾದ ಅನ್ನದಾತ; ಉತ್ತಮ ಮುಂಗಾರು ಆರಂಭದ ನಿರೀಕ್ಷೆಯಲ್ಲಿ ರೈತ|

03:44 PM May 21, 2023 | Team Udayavani |

ಹಾವೇರಿ: ಈ ಬಾರಿ ಉತ್ತಮ ಮುಂಗಾರು ಆರಂಭದ ನಿರೀಕ್ಷೆಯೊಂದಿಗೆ ರೈತರು ಬಿತ್ತನೆಗೆ ಜಮೀನು ಸಿದ್ಧಪಡಿಸಿಕೊಳ್ಳುತ್ತಿದ್ದಾರೆ. ಜಿಲ್ಲೆಯಲ್ಲಿ ಉತ್ತಮ ಮಳೆ ಬಿದ್ದರೆ ಬಿತ್ತನೆ ಬೀಜ ಮತ್ತು ರಸಗೊಬ್ಬರಕ್ಕೆ ಹೆಚ್ಚಿನ ಬೇಡಿಕೆ ಬರುವ ಸಾಧ್ಯತೆಯಿರುವ ಹಿನ್ನೆಲೆಯಲ್ಲಿ, ಮುಂಗಾರು ಹಂಗಾಮಿಗೆ ಕೃಷಿ ಇಲಾಖೆ ಅಗತ್ಯ ಬಿತ್ತನೆ ಬೀಜ ಮತ್ತು ರಸಗೊಬ್ಬರ ಪೂರೈಕೆಗೆ ವ್ಯವಸ್ಥೆ ಮಾಡಿಕೊಳ್ಳುತ್ತಿದೆ.

Advertisement

ಪ್ರಸಕ್ತ ವರ್ಷ ಮುಂಗಾರು ಹಂಗಾಮು ಸಕಾಲದಲ್ಲಿ ಆರಂಭಗೊಳ್ಳುವ ನಿರೀಕ್ಷೆಯಿದೆ. ಅದಕ್ಕಾಗಿ ರೈತರು ಈಗಿನಿಂದಲೇ ಅಗತ್ಯ ಪೂರ್ವಸಿದ್ಧತೆಯಲ್ಲಿ ತೊಡಗಿದ್ದಾರೆ. ಎತ್ತುಗಳು, ಟ್ರ್ಯಾಕ್ಟರ್ ಇತ್ಯಾದಿ ಖರೀದಿಯಲ್ಲಿ ತೊಡಗಿದ್ದಾರೆ. ಅದೇ ರೀತಿ, ಇನ್ನು ಎರಡು ವಾರಗಳಲ್ಲಿ ಮುಂಗಾರು ಹಂಗಾಮು ಆರಂಭಗೊಳ್ಳಲಿದ್ದು, ಅಷ್ಟರೊಳಗಾಗಿ ಕೃಷಿ ಜಮೀನು ಹದಗೊಳಿಸುವ ಕಾರ್ಯವನ್ನು ರೈತರು ಮಾಡುತ್ತಿದ್ದಾರೆ. ಭೂಮಿ ತಂಪಾಗುವಷ್ಟು ಮಳೆ ಬಂದರೆ ಜಿಲ್ಲೆಯ ರೈತರು ಬಿತ್ತನೆ ಆರಂಭಿಸುತ್ತಾರೆ. ಕಳೆದ ವರ್ಷ ಮುಂಗಾರು ಪೂರ್ವದಲ್ಲಿ ಮಳೆ ಬಿದ್ದಾಗಲೇ ಬಿತ್ತನೆ ಮಾಡಿ ನಂತರ ಮಳೆ ಕೈಕೊಟ್ಟಿದ್ದರಿಂದ

ಎಚ್ಚೆತ್ತುಕೊಂಡಿರುವ ರೈತರು ಕಾದು ನೋಡುವ ತಂತ್ರಕ್ಕೆ ಮುಂದಾಗಿದ್ದಾರೆ. ಆದರೆ, ಮಳೆ ಬಿದ್ದ ತಕ್ಷಣವೇ ಬಿತ್ತನೆ ಬೀಜ ಹಾಗೂ ಗೊಬ್ಬರಕ್ಕೆ ಬೇಡಿಕೆ ಹೆಚ್ಚುವ ಸಾಧ್ಯತೆ ಇರುವುದರಿಂದ ಕೃಷಿ ಇಲಾಖೆ ಸಮರ್ಪಕವಾಗಿ ಬಿತ್ತನೆ ಬೀಜ, ಗೊಬ್ಬರ ಪೂರೈಕೆಗೆ ಸಿದ್ಧತೆ ಮಾಡಿಕೊಂಡಿದೆ.

25 ಸಾವಿರ ಮೆ.ಟನ್‌ ಗೊಬ್ಬರ ದಾಸ್ತಾನು: ಜಿಲ್ಲೆಯಲ್ಲಿ ಪ್ರಸಕ್ತ ಮುಂಗಾರು ಹಂಗಾವಿನಲ್ಲಿ 3.30 ಲಕ್ಷ ಹೆಕ್ಟೇರ್‌ ಬಿತ್ತನೆ ಗುರಿ ಹಾಕಿಕೊಳ್ಳಲಾಗಿದೆ. ಇದರಲ್ಲಿ ಮೆಕ್ಕೆಜೋಳ 2.04 ಲಕ್ಷ ಹೆಕ್ಟೇರ್‌, ಹತ್ತಿ 46,702 ಹೆಕ್ಟೇರ್‌, ಭತ್ತ 33,715 ಹೆಕ್ಟೇರ್‌, ಶೇಂಗಾ 19,519 ಹೆಕ್ಟೇರ್‌, ಸೋಯಾಬೀನ್‌ 14,401 ಹೆಕ್ಟೇರ್‌, ತೊಗರಿ 802 ಹೆಕ್ಟೇರ್‌, ಹೆಸರು 567 ಹೆಕ್ಟೇರ್‌
ಹಾಗೂ ಇತರೆ 10,052 ಹೆಕ್ಟೇರ್‌ ಪ್ರದೇಶದಲ್ಲಿ ಬಿತ್ತನೆ ಗುರಿ ಹೊಂದಲಾಗಿದೆ. ಇದಕ್ಕಾಗಿ ಅಗತ್ಯ ಗೊಬ್ಬರ ದಾಸ್ತಾನು ಮಾಡಿಕೊಳ್ಳಲಾಗುತ್ತಿದೆ. ಸದ್ಯಕ್ಕೆ 12845 ಟನ್‌ ಯೂರಿಯಾ, 115 ಟನ್‌ ಎಂಒಪಿ, 7625 ಟನ್‌ ಕಾಂಪ್ಲೆಕ್ಸ್‌, 354 ಟನ್‌ ಎಸ್‌ಎಸ್‌ಪಿ ಸೇರಿದಂತೆ ಒಟ್ಟು 25698 ಮೆ. ಟನ್‌ ರಸಗೊಬ್ಬರ ದಾಸ್ತಾನು ಮಾಡಲಾಗಿದೆ. ರೈತರ ಬೇಡಿಕೆಗೆ ತಕ್ಕಂತೆ ಗೊಬ್ಬರ ಪೂರೈಕೆಗೆ ಕೃಷಿ ಇಲಾಖೆ ವ್ಯವಸ್ಥೆ ಮಾಡಿಕೊಂಡಿದೆ.

ಬಿತ್ತನೆ ಬೀಜಕ್ಕೆ ಬೇಡಿಕೆ: ಜಿಲ್ಲೆಯಲ್ಲಿ ಮೆಕ್ಕೆಜೋಳ 12000 ಕ್ವಿಂಟಲ್‌, ಶೇಂಗಾ 3200 ಕ್ವಿಂಟಲ್‌, ಭತ್ತ 5 ಸಾವಿರ ಕ್ವಿಂಟಲ್‌, ಸೋಯಾಬಿನ್‌ 1400 ಕ್ವಿಂಟಲ್‌, ಜೋಳ 100 ಕ್ವಿಂಟಲ್‌, ತೊಗರಿ 900 ಕ್ವಿಂಟಲ್‌, ಹೆಸರು, ಸೂರ್ಯಕಾಂತಿ ಸೇರಿದಂತೆ 35,660 ಕ್ವಿಂಟಲ್‌ ಬಿತ್ತನೆ ಬೀಜ ಪೂರೈಕೆಗೆ ಕೃಷಿ ಇಲಾಖೆ ಬೇಡಿಕೆ ಸಲ್ಲಿಸಿದೆ. ಜಿಲ್ಲೆಯ 19 ರೈತ ಸಂಪರ್ಕ ಕೇಂದ್ರಗಳು ಹಾಗೂ 22 ಇಲಾಖಾ ಹೆಚ್ಚುವರಿ ಕೇಂದ್ರಗಳು ಹಾಗೂ 12 ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘಗಳ ಮೂಲಕ ಒಟ್ಟಾರೆ 52 ಕೇಂದ್ರಗಳಲ್ಲಿ ಬಿತ್ತನೆ ಬೀಜ ವಿತರಣೆಗೆ ವ್ಯವಸ್ಥೆ ಮಾಡಿಕೊಳ್ಳಲಾಗಿದೆ.

Advertisement

ಆತುರದ ನಿರ್ಧಾರ ಬೇಡ
ಜಿಲ್ಲೆಯಲ್ಲಿ ಮುಂಗಾರು ಪೂರ್ವದಲ್ಲಿ ಸಾಧಾರಣ ಮಳೆಯಾಗುತ್ತಿದ್ದಂತೆ ಸೋಯಾಬಿನ್‌ ಬಿತ್ತನೆಗೆ ರೈತರು ಮುಂದಾಗುತ್ತಿದ್ದಾರೆ. ಆದರೆ, ಈ ರೀತಿ ಆತುರ ಮಾಡದೇ ಮಳೆ ನೋಡಿಕೊಂಡು ಬಿತ್ತನೆ ಮಾಡಬೇಕಿದೆ. ಒಂದು ವೇಳೆ ಬಿತ್ತನೆ ನಂತರ ಮಳೆ ವಿಳಂಬವಾದರೆ ಬಿತ್ತಿದ ಬೀಜ ಒಣಗಿ ನಷ್ಟವಾಗುವ ಸಾಧ್ಯತೆಯಿರುತ್ತದೆ. ಅದಕ್ಕಾಗಿ ಮಳೆಯಾದ ಮೇಲೆಯೇ ಬಿತ್ತನೆ ಆರಂಭಿಸಬೇಕು ಎಂಬುದು ಕೃಷಿ ಇಲಾಖೆ ಅಧಿಕಾರಿಗಳ ಸಲಹೆ.

ಕ್ಯೂ ಆರ್‌ ಕೋಡ್‌ ವ್ಯವಸ್ಥೆ
ರೈತ ಸಂಪರ್ಕ ಕೇಂದ್ರಗಳಲ್ಲಿ ಈ ಬಾರಿ ಕ್ಯೂ ಆರ್‌ ಕೋಡ್‌ ಇರುವ ಬಿತ್ತನೆ ಬೀಜದ ಪ್ಯಾಕೆಟ್‌ ದಾಸ್ತಾನು ಮಾಡಲಾಗುತ್ತಿದೆ. ಬೀಜ ವಿತರಣೆ ಸಂದರ್ಭದಲ್ಲಿ ಕ್ಯೂ ಆರ್‌ ಕೋಡ್‌ ಸ್ಕ್ಯಾನ್ ಮಾಡಿ ಸೀಡ್‌ ಎಂಐಎಸ್‌ನಲ್ಲಿ ಅಗತ್ಯ ಮಾಹಿತಿ ಭರ್ತಿ ಮಾಡಿದ ನಂತರವೇ ಬಿಲ್‌ ಜನರೇಟ್‌ ಆಗುತ್ತದೆ. ಆಧಾರ್‌ ಕಾರ್ಡ್‌ ಕೂಡ ಅಗತ್ಯವಿದ್ದು, ಯಾರದೋ ಹೆಸರಲ್ಲಿ ಇನ್ನಾರೋ ಬೀಜ, ಗೊಬ್ಬರ ಖರೀದಿ ಮಾಡುವುದನ್ನು ತಡೆಯಲು ಈ ವ್ಯವಸ್ಥೆ ಮಾಡಲಾಗುತ್ತಿದೆ. ಒಂದು ವೇಳೆ ಬೇರೆ ರೈತರ ಹೆಸರಲ್ಲಿ ಬೀಜ, ಗೊಬ್ಬರ ಖರೀದಿಸಿದರೆ ಸಂಬಂಧಪಟ್ಟವರ ಆಧಾರ್‌ ಸಂಖ್ಯೆ ಸೀಡ್‌ ಇರುವ ಮೊಬೈಲ್‌ ಸಂಖ್ಯೆಗೆ ಸಂದೇಶ ರವಾನೆಯಾಗುವ ವ್ಯವಸ್ಥೆ ಮಾಡಲಾಗಿದೆ.

ರೈತರಿಗೆ ಗುಣಮಟ್ಟದ ಬಿತ್ತನೆ ಬೀಜ, ರಸಗೊಬ್ಬರ ಮತ್ತು ಕೀಟನಾಶಕಗಳನ್ನು ಮಾರಾಟ ಮಾಡಬೇಕು. ಕೃತಕ ಅಭಾವ ಸೃಷ್ಠಿಸಿ ಹೆಚ್ಚಿನ ಬೆಲೆಗೆ ಮಾರಾಟ ಮಾಡುವುದು, ಅವಧಿ ಮುಗಿದ ಕೃಷಿ ಪರಿಕರಗಳನ್ನು ಮಾರಾಟ
ಮಾಡುವುದು ಹಾಗೂ ಅನ ಧಿಕೃತವಾಗಿ ಬೀಜ ಮತ್ತು ರಸಗೊಬ್ಬರ, ಪರಿಕರಗಳನ್ನು ದಾಸ್ತಾನು ಮಾಡುವುದು ಕಂಡುಬಂದಲ್ಲಿ ಮಾರಾಟಗಾರರ ಮೇಲೆ ಕಾನೂನು ಕ್ರಮ ಕೈಗೊಳ್ಳಲಾಗುವುದು.
-ಚೇತನಾ ಪಾಟೀಲ, ಜಂಟಿ ಕೃಷಿ
ನಿರ್ದೇಶಕರು, ಹಾವೇರಿ

-ವೀರೇಶ ಮಡ್ಲೂರ

Advertisement

Udayavani is now on Telegram. Click here to join our channel and stay updated with the latest news.

Next