Advertisement

ಮಳೆ ನಿರೀಕ್ಷೆಯಲ್ಲಿ ರೈತ: 7000 ಹೆಕ್ಟೇರ್‌ ಹತ್ತಿ ಬಿತ್ತನೆ ಗುರಿ

03:10 PM Jun 17, 2022 | Team Udayavani |

ವಾಡಿ: ಅಕಾಲಿಕ ಮಳೆಯ ಹೊಡೆತಕ್ಕೆ ಹಸಿಯಾದ ನೆಲವನ್ನೇ ಆಶ್ರಯಿಸಿ ಬಿತ್ತನೆಗೆ ಮುಂದಾಗಿರುವ ನಾಲವಾರ ಹಾಗೂ ವಾಡಿ ಹೋಬಳಿ ವಲಯದ ರೈತರು, ಮುಂಗಾರು ನಿರೀಕ್ಷೆಯಲ್ಲಿ ಬೀಜ ಖರೀದಿಸಿ ಮುಗಿಲು ನೋಡುತ್ತಿದ್ದಾರೆ.

Advertisement

ಚಿತ್ತಾಪುರ ವ್ಯಾಪ್ತಿಯಲ್ಲಿರುವ ನಾಲವಾರ ರೈತ ಸಂಪರ್ಕ ಕೇಂದ್ರ ಬೇಡಿಕೆಗೆ ತಕ್ಕಷ್ಟು ಬೀಜ ಮತ್ತು ಗೊಬ್ಬರ ಶೇಖರಿಸಿಟ್ಟುಕೊಂಡಿದ್ದು, ಮುಂಗಾರು ಮುನಿಸಿಕೊಂಡ ಪರಿಣಾಮ ನಿರೀಕ್ಷೆಯಂತೆ ಪೈಪೋಟಿ ಉಂಟಾಗಿಲ್ಲ. ಮಂಜುಗಟ್ಟಿದ ಮೋಡಗಳು ಕರಗಿ ಮುಂಗಾರು ಮಳೆಯಾಗಿ ಮಣ್ಣಿಗೆ ಸೇರುವಂತಾದರೆ ಕೃಷಿ ಚಟುವಟಿಕೆ ಗರಿಗೆದರಲು ಸಾಧ್ಯವಾಗುತ್ತದೆ. ಆದರೆ ಸಕಾಲದಲ್ಲಿ ಮುಂಗಾರು ಸುರಿಯದ ಕಾರಣ ಬೀಜ ಹೊತ್ತು ನಿಂತ ನಾಲವಾರ, ವಾಡಿ, ಸನ್ನತಿ, ಕೊಲ್ಲೂರ, ಕಮರವಾಡಿ, ಹಳಕರ್ಟಿ, ಲಾಡ್ಲಾಪುರ, ಮಳಗ, ಮಾರಡಗಿ, ರಾವೂರ, ಇಂಗಳಗಿ ಭಾಗದ ರೈತರು ತೀವ್ರ ನಿರಾಸೆಗೊಳ್ಳುವಂತಾಗಿದೆ.

ಸದ್ಯ ನಾಲವಾರ ರೈತ ಸಂಪರ್ಕ ಕೇಂದ್ರದಲ್ಲಿ ಒಟ್ಟು 90 ಟನ್‌ ಡಿಎಪಿ ರಸಗೊಬ್ಬರ ಸ್ಟಾಕ್‌ ಇಡಲಾಗಿದೆ. ಹೆಸರು, ಉದ್ದು, ತೊಗರಿ, ಇತರೆ ಬೀಜಗಳು ರೈತರಿಗೆ ಬೇಕಾಗುಷ್ಟು ಸಂಗ್ರಹವಿದೆ. ಸುಮಾರು 150 ಕ್ವಿಂಟಲ್‌ ಬೀಜಗಳನ್ನು ರೈತರಿಗಾಗಿ ತರಿಸಿಡಲಾಗಿದ್ದು, ಮಳೆ ಕೊರತೆಯಿಂದ ಬೀಜಗಳ ಬೇಡಿಕೆ ಕುಸಿದಿದೆ ಎನ್ನಲಾಗಿದೆ.

ಲಾಡ್ಲಾಪುರ, ಬೆಳಗೇರಾ, ಸನ್ನತಿ ಹಾಗೂ ಯಾಗಾಪುರ ಗುಡ್ಡಗಾಡು ಪ್ರದೇಶಗಳಲ್ಲಿ ಬೋರ್‌ ವೆಲ್‌ ಮತ್ತು ಬಾವಿಗಳ ಸೌಲಭ್ಯ ಇರುವುದರಿಂದ ಮುಂಗಾರು ಬಿತ್ತನೆಗೆ ಚಾಲನೆ ದೊರೆತಿದೆ. ಸ್ಪಿಂಕ್ಲರ್‌ ಸಹಾಯದಿಂದ ಕೃತಕ ಮಳೆಯ ಸೌಕರ್ಯ ಪಡೆಯುತ್ತಿರುವುದರಿಂದ ಕೃಷಿ ಕಾಯಕ ಚುರುಕುಗೊಂಡಿದೆ.

ಕಳೆದೆರಡು ವರ್ಷ ಪ್ರವಾಹ ಸಂಕಷ್ಟಕ್ಕೆ ಸಿಲುಕಿ ಹಸಿ ಬರ ಮತ್ತು ಒಣ ಬರ ರೈತರ ಬದುಕಿಗೆ ನಷ್ಟದ ಬರೆ ಎಳೆದಿತ್ತು. ಇದರೊಟ್ಟಿಗೆ ಕೊರೊನಾ ಬಡವರ ಬದುಕು ಮತ್ತಷ್ಟು ತತ್ತರಿಸುವಂತೆ ಮಾಡಿತ್ತು. ಕೃಷಿಯನ್ನೇ ನಂಬಿ ಜೀವನ ಸಾಗಿಸುತ್ತಿದ್ದ ಅಸಂಖ್ಯಾತ ಸಣ್ಣ ರೈತರು ಭಯಾನಕ ಸಂಕಷ್ಟದ ದಿನಗಳನ್ನು ಎದುರಿಸಿದ್ದರು. ಆದರೆ ಈ ವರ್ಷವೂ ನಿರೀಕ್ಷೆಯಂತೆ ಮುಂಗಾರು ಶುಭಾರಂಭ ನೀಡದಿರುವುದು ಕೃಷಿಕರಲ್ಲಿ ಆತಂಕದ ಛಾಯೆ ಮೂಡಿಸಿದೆ. ಬಿತ್ತನೆಗಾಗಿ ಹೊಲ ಹಸನು ಮಾಡಿಕೊಂಡಿರುವ ಬಹುತೇಕ ರೈತರು ವರ್ಷಧಾರೆಯ ಆಗಮನಕ್ಕೆ ಕಾಯುತ್ತಿದ್ದಾರೆ.

Advertisement

ನಾಲವಾರ ಹೋಬಳಿ ವಲಯದಲ್ಲಿ ಕಳೆದ ವರ್ಷ 15000 ಹೆಕ್ಟೇರ್‌ ಪ್ರದೇಶದಲ್ಲಿ ತೊಗರಿ ಬಿತ್ತನೆಯಾಗಿತ್ತು. ಈ ವರ್ಷ 12000-13000 ಹೆಕ್ಟೇರ್‌ ಮಾತ್ರ ಬೇಡಿಕೆಯಿದೆ. ಆದರೆ ಸದ್ಯ 6000ದಿಂದ 7000 ಹೆಕ್ಟೇರ್‌ ಪ್ರದೇಶದಲ್ಲಿ ಹತ್ತಿ ಬಿತ್ತನೆಯಾಗುತ್ತಿದೆ. ಹೆಸರು ಮತ್ತು ಉದ್ದಿಗೂ ನಿರೀಕ್ಷೆಯಷ್ಟು ಬೇಡಿಕೆಯಿಲ್ಲ. ಆದರೂ ರೈತರ ಬೇಡಿಕೆಗೆ ತಕ್ಕಷ್ಟು (90 ಟನ್‌) ರಸಗೊಬ್ಬರ ತರಿಸಿಕೊಳ್ಳಲಾಗಿದೆ. ಬೀಜಗಳಿಗಾಗಿಯೂ ರೈತರು ಪರದಾಡುವಂತಿಲ್ಲ. ಒಣ ಬೇಸಾಯಗಾರರು ಮಳೆಯ ನಿರೀಕ್ಷೆಯಲ್ಲಿದ್ದರೆ, ಮಸಾರಿ ಭೂಮಿಯ ರೈತರು ಸ್ಪಿಂಕ್ಲರ್‌ ಅಳವಡಿಸಿ ಈಗಾಗಲೇ ಬೇಸಾಯ ಶುರು ಮಾಡಿದ್ದಾರೆ. -ಸತೀಶಕುಮಾರ ಪವಾರ, ಕೃಷಿ ಅಧಿಕಾರಿ, ರೈತ ಸಂಪರ್ಕ ಕೇಂದ್ರ, ನಾಲವಾರ

-ಮಡಿವಾಳಪ್ಪ ಹೇರೂರ

Advertisement

Udayavani is now on Telegram. Click here to join our channel and stay updated with the latest news.

Next