Advertisement

ತಂಬಾಕು ಮಂಡಳಿ ವಿಧಿಸಿರುವ ದಂಡ ಹಿಂಪಡೆಯಲು ರೈತ ಸಂಘದಿಂದ ಆಗ್ರಹ

05:24 PM Apr 19, 2023 | Team Udayavani |

ಹುಣಸೂರು: ಅತಿವೃಷ್ಠಿ ಸೇರಿದಂತೆ ವಿವಿಧ ಕಾರಣಗಳಿಂದ ತಂಬಾಕು ಬೆಳೆ ಬೆಳೆಯಲಾಗದ ಬೆಳೆಗಾರರಿಗೆ ತಂಬಾಕು ಮಂಡಳಿ ಅವೈಜ್ಞಾನಿಕವಾಗಿ ವಿಧಿಸಿರುವ ದಂಡವನ್ನು ಹಿಂಪಡೆಯುವಂತೆ ರಾಜ್ಯ ರೈತ ಸಂಘ ಹಾಗೂ ತಂಬಾಕು ಬೆಳೆಗಾರರ ಕ್ಷೇಮಾಭಿವೃದ್ದಿ ಸಂಘ ಒತ್ತಾಯಿಸಿದೆ.

Advertisement

ಈ ಬಗ್ಗೆ ಸುದ್ದಿಗೋಷ್ಟಿಯಲ್ಲಿ ರಾಜ್ಯ ರೈತ ಸಂಘದ ಜಿಲ್ಲಾಧ್ಯಕ್ಷ ಹಾಗೂ ಕ್ರಾಪ್ ಕಮಿಟಿ ಅಧ್ಯಕ್ಷರಾದ ಹೊಸೂರುಕುಮಾರ್ ಮಾತನಾಡಿ, ಕಳೆದ ಸಾಲಿನಲ್ಲಿ ಅತಿಯಾದ ಮಳೆ, ಅತಿವೃಷ್ಠಿಯಿಂದಾಗಿ ಸಾಕಷ್ಟು ಮಂದಿ ಬೆಳೆಗಾರರ ತಂಬಾಕು ನಾಶವಾಗಿದ್ದು, ಮಾರುಕಟ್ಟೆಗೆ ನಿಗದಿತ ತಂಬಾಕನ್ನು ಬಿಡದ ಪರಿಣಾಮ ತಂಬಾಕು ಮಂಡಳಿಯು ಶೇ.100 ರಷ್ಟು ಹೊಗೆಸೊಪ್ಪು ಮಾರಾಟ ಮಾಡದ ರೈತರಿಗೆ 15,854 ರೂ, ಶೇ.50ರಷ್ಟು ತಂಬಾಕು ಬಿಟ್ಟಿರುವವರಿಗೆ 3 ಸಾವಿರ ಹಾಗೂ ಶೇ.25 ರಷ್ಟು ತಂಬಾಕು ಮಾರಾಟ ಮಾಡಿದ್ದ ಬೆಳೆಗಾಗರಿಗೆ 5 ಸಾವಿರ ರೂ ದಂಡ ವಿಧಿಸಿದೆ.

ಅತಿಯಾದ ಮಳೆಯಿಂದ ತಂಬಾಕು ಬೆಳೆಯದೆ ಮಾರುಕಟ್ಟೆಗೆ ಪೂರೈಸಲಾಗದಿರುವುದು ತಿಳಿದಿದ್ದರೂ ದಂಡ ವಿಧಿಸಿರುವುದು ಅವೈಜ್ಞಾನಿಕ ತೀರ್ಮಾನವಾಗಿದೆ. ಮೊದಲೇ ನಷ್ಟ ಹೊಂದಿರುವ ಬೆಳೆಗಾರರು ಸಂಕಷ್ಟದಲ್ಲಿದ್ದು, ಇದು ಗಾಯದ ಮೇಲೆ ಬರೆ ಎಳೆದಂತಾಗಿದ್ದು, ದಂಡ ಹಿಂಪಡೆಯಬೇಕೆಂದು ವಾಣಿಜ್ಯ ಮಂತ್ರಾಲಯ ಹಾಗೂ ಮಂಡಳಿ ನಿರ್ದೇಶಕರಿಗೆ ಪತ್ರಬರೆಯಲಾಗಿದೆ ಎಂದರು.

ಇದನ್ನೂ ಓದಿ: Mysuru: ಪಟಾಕಿ ಗೋದಾಮಿನಲ್ಲಿ ಭಾರಿ ಅಗ್ನಿ ಅವಘಡ; ಲಕ್ಷಾಂತರ ರೂ.ನಷ್ಟ

Advertisement

4703 ಮಂದಿಗೆ ದಂಡ:
ತಂಬಾಕು ಬೆಳೆಗಾರರ ಕ್ಷೇಮಾಭಿವೃದ್ದಿ ಸಂಘದ ಅಧ್ಯಕ್ಷ ಶಿವಣ್ಣೇಗೌಡ, ಗೌರವಾಧ್ಯಕ್ಷ ಚಂದ್ರೇಗೌಡ ಮಾತನಾಡಿ ಪ್ರಾದೇಶಿಕ ತಂಬಾಕು ಮಂಡಳಿಯ ಮೈಸೂರು ಮತ್ತು ಪಿರಿಯಾಪಟ್ಟಣ ವ್ಯಾಪ್ತಿಯಲ್ಲಿ 4703 ಮಂದಿ ಮಾರುಕಟ್ಟೆಗೆ ಶೇ.100 ರಷ್ಟು ತಂಬಾಕು ಮಾರಾಟ ಮಾಡಿಲ್ಲವೆಂದು ಮಂಡಳಿ ಪ್ರಕಟಣೆ ಹೊರಡಿಸಿದೆ. ತಂಬಾಕು ಮಂಡಳಿಯು ಉಪಾಧ್ಯಕ್ಷರು ಹಾಗೂ ಸದಸ್ಯರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಲದೆ ಏಕ ಪಕ್ಷೀಯವಾಗಿ ದಂಡ ವಿಧಿಸಿರುವುದು ಖಂಡನೀಯ. ಈ ಬಗ್ಗೆ ಸಂಸದ ಪ್ರತಾಪಸಿಂಹ ಸೇರಿದಂತೆ ಯಾವೊಬ್ಬ ಸಂಸದರೂ ಚಕಾರವೆತ್ತಿಲ್ಲ. ಹೊಗೆಸೊಪ್ಪು ಬೆಳೆಗಾರರು ಈ ಬಾರಿ ಸಾಕಷ್ಟು ಸಮಸ್ಯೆಗೆ ಸಿಲುಕಿದ್ದರೂ ಸರಕಾರವಾಗಲಿ, ನಮ್ಮ ಪ್ರತಿನಿಧಿಗಳಾಗಲಿ ನೆರವಿಗೆ ಬಾರದಿರುವುದು ಖಂಡನೀಯವೆಂದರು.

ಎ.25 ರಿಂದ ರಸಗೊಬ್ಬರ ವಿತರಣೆ:
ಈಗಾಗಲೇ ಎಲ್ಲಾ ಹರಾಜು ಮಾರುಕಟ್ಟೆಗಳಲ್ಲಿ ತಂಬಾಕಿಗೆ ಅಗತ್ಯವಾದ ರಸಗೊಬ್ಬರ ದಾಸ್ತಾನು ಮಾಡಲಾಗಿದ್ದು, ಏ.25 ರಿಂದ ಬೆಳೆಗಾರರಿಗೆ ವಿತರಿಸಲಾಗುವುದು. ಕಳೆದ ಸಾಲಿನಲ್ಲಿ ಗೊಬ್ಬರಕ್ಕಾಗಿ 21 ಸಾವಿರ ಮಂದಿ ರೈತರು ಮುಂಗಡ ಹಣ ಪಾವತಿಸಿದ್ದರೆ. ಈ ಬಾರಿ 25ಸಾವಿರ ಮಂದಿ ಮುಂಗಡ ಹಣ ಪಾವತಿಸಿದ್ದಾರೆಂದು ಕ್ರಾಫ್ ಕಮಿಟಿ ಅಧ್ಯಕ್ಷ ಹೊಸೂರುಕುಮಾರ್ ತಿಳಿಸಿದರು.

ಸುದ್ದಿಗೋಷ್ಟಿಯಲ್ಲಿ ಕ್ಷೇಮಾಭಿವೃದ್ದಿ ಸಂಘದ ಪ್ರಧಾನಕಾರ್ಯದರ್ಶಿ ನಿಲುವಾಗಿಲು ಪ್ರಭಾಕರ್, ರೈತಸಂಘದ ಧನಂಜಯ ಹಾಗೂ ಕಣಗಾಲುಮಹೇಶ್ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next