ಕುಷ್ಟಗಿ: ಕಳೆದ ವರ್ಷ ತೊಗರಿ ಬೆಳೆದು ಕೇಂದ್ರ ಸರ್ಕಾರದ ಬೆಂಬಲ ಬೆಲೆ ಸಿಗದೇ ಸಂಕಷ್ಟ ಅನುಭವಿಸಿದ ರೈತರು ಪ್ರಸಕ್ತ ಮುಂಗಾರಿನಲ್ಲಿ ಪುನಃ ತೊಗರಿ ಬೆಳೆಯುವುದಕ್ಕೆ ಮುಂದಾಗಿದ್ದಾರೆ.
ಈ ಎಲ್ಲ ಬೆಳವಣಿಗೆ ನಂತರ ಇನ್ಮುಂದೆ ತೊಗರಿ ಬೆಳೆಯ ಬಾರದು ಎಂದು ಅಂದುಕೊಂಡಿದ್ದರು. ಆದರೆ ಇದೀಗ ಮುಂಗಾರು ಮಳೆ ವಿಳಂಬವಾಗಿದ್ದು, ಕೃತ್ತಿಕಾ ಮಳೆ ಸಹ ಆಗಿಲ್ಲ. ತಾಲೂಕಿನಲ್ಲಿ ಕೆಲವೆಡೆ ಮಳೆಯಾಗಿ ನಂತರ ಬಿಸಿಲಿನ ತಾಪಮಾನದಲ್ಲಿ ಏರಿಕೆಯ ಅರೆಝಳದಿಂದ ಬೀಜ ಮೊಳಕೆ ಹಂತದಲ್ಲಿ ಕಮರಿದೆ. ಇಂತಹ ಪರಿಸ್ಥಿತಿಯಲ್ಲೂ ರೈತರು ಮೆಕ್ಕೆಜೋಳ, ಸಜ್ಜೆ, ಸೂರ್ಯಕಾಂತಿ ಬೆಳೆಯಲು ಮನಸ್ಸು ಮಾಡದೇ ಪುನಃ ತೊಗರಿ ಬಿತ್ತನೆಗೆ ಒಲವು ತೋರಿಸುತ್ತಿದ್ದಾರೆ. ಸದ್ಯ ರೈತ ಸಂಪರ್ಕ ಕೇಂದ್ರದಲ್ಲಿ ಟಿಎಸ್-3ಆರ್ ಸುಧಾರಿತ ತಳಿ ಕುಷ್ಟಗಿ ರೈತ ಸಂಪರ್ಕ ಕೇಂದ್ರದಲ್ಲಿ 24 ಕ್ವಿಂಟಲ್, ತಾವರಗೇರಾದಲ್ಲಿ 24 ಕ್ವಿಂಟಲ್, ಹನುಮಸಾಗರ 9 ಕ್ವಿಂಟಲ್ ಹನುಮನಾಳದಲ್ಲಿ 5 ಕ್ವಿಂಟಲ್ ದಾಸ್ತಾನಿದ್ದು, ರೈತರ ಬೇಡಿಕೆಗೆ ಅನುಗುಣವಾಗಿ ತೊಗರಿ ಬಿತ್ತನೆಗೆ ಬೀಜ ಪೂರೈಸಲು ಸಿದ್ಧತೆ ಮಾಡಿಕೊಂಡಿದೆ. ಜೂನ್ ತಿಂಗಳಲ್ಲಿ ಉತ್ತಮ ಮಳೆಯಾದರೆ ತೊಗರಿ ಬಿತ್ತನೆಗಾಗಿ ರೈತರು ತಯಾರಿ ಮಾಡಿಕೊಂಡಿದ್ದಾರೆ.
ಈ ಕುರಿತು ಕೃಷಿ ಇಲಾಖೆಯ ತಾಂತ್ರಿಕ ಸಹಾಯಕ ಶೇಖರಯ್ಯ ಹಿರೇಮಠ ಪ್ರತಿಕ್ರಿಯಿಸಿ, ತೊಗರಿ ಬರ ನಿರೋಧಕ ಬೆಳೆಯಾಗಿದೆ. ಮಳೆ ಅಭಾವದಲ್ಲೂ ರೈತರ ಭರವಸೆಯ ಬೆಳೆಯಾಗಿದೆ. ಸಜ್ಜೆ, ಮೆಕ್ಕೆಜೋಳ ಬೆಳೆ ಮಾರುಕಟ್ಟೆಯಲ್ಲಿ ಉತ್ತಮ ಬೆಲೆ ಸಿಗುವುದು ಖಾತ್ರಿ ಇಲ್ಲದ ಹಿನ್ನೆಲೆಯಲ್ಲಿ ತೊಗರಿ ಬೆಳೆ, ನಿರ್ವಹಣೆ ಕಡಿಮೆ, ಬರ ತಡೆದುಕೊಳ್ಳುವ ಶಕ್ತಿ, ಅಲ್ಪ ತೇವಾಂಶದಲ್ಲೂ ಬೆಳೆಯಬಲ್ಲದು. ಬೆಳೆದ ಎಲೆಗಳು ಉದುರಿ ಫಲವತ್ತತೆ ಹೆಚ್ಚಲಿದ್ದು, ತೊಗರಿ ಉರುವಲು ಹಾಗೂ ಜಾನುವಾರುಗಳಿಗೆ ಹೊಟ್ಟು ಮೇವಾಗಿ ಬಳಕೆಯಾಗಲಿದೆ. ಅಲ್ಲದೇ ಕುಷ್ಟಗಿ ತಾಲೂಕಿನ ವಾತವರಣಕ್ಕೂ ಹೊಂದಿಕೊಳ್ಳುವ ಬೆಳೆಯಾಗಿದೆ. ಪ್ರತಿ ಕ್ವಿಂಟಲ್ಗೆ 3 ಸಾವಿರ ರೂ. ಖಾತ್ರಿ ಎನ್ನುವ ಕಾರಣದಿಂದ ಸದ್ಯ ರೈತರು ತೊಗರಿ ಬೆಳೆಯನ್ನು ಬೆಳೆಯಲು ಒಲವು ತೋರಿಸಿದ್ದಾರೆ ಎಂದು ವಿವರಿಸಿದರು.
Advertisement
2016-17ರಲ್ಲಿ ರಾಜ್ಯ ಸರ್ಕಾರ ತೊಗರಿ ಬೆಳೆ ಬೆಳೆಯಲು ಈ ಭಾಗದ ರೈತರಿಗೆ ಉತ್ತೇಜನ ನೀಡುವ ಉದ್ದೇಶದಿಂದ ದ್ವಿದಳ ಧಾನ್ಯಗಳ ವರ್ಷ ಎಂದು ತೊಗರಿ ಬೆಳೆಗೆ ಪ್ರೋತ್ಸಾಹಿಸಿತು. ಆರಂಭಿಕ ವರ್ಷದಲ್ಲಿ ಉತ್ತಮ ಮಳೆಯಾಗಿದ್ದರಿಂದ ಉತ್ತಮ ಬೆಳೆ ಇಳುವರಿ ಬಂದಿತ್ತು. ಆಗ ಮಾರುಕಟ್ಟೆಯಲ್ಲಿ ಬೆಲೆ ಕುಸಿತದ ಪರಿಣಾಮ ಬೆಂಬಲ ಬೆಲೆಗೆ ಆನ್‌ಲೈನ್‌ನಲ್ಲಿ ನೋಂದಣಿ ಮಾಡಿಸಿದ್ದರು. ಕೆಲವರಿಗೆ ಬೆಂಬಲ ಬೆಲೆ ದಕ್ಕಿದರೂ ಆ ಬೆಲೆ ಸಿಗಲಿಲ್ಲ. ಪ್ರಸಕ್ತ ವರ್ಷದಲ್ಲಿ ಮಳೆ ಅಭಾವದ ಮಧ್ಯೆಯೂ ತೊಗರಿ ಬೆಳೆ ಬೆಳೆದಿದ್ದರೂ, ಇಳುವರಿ ಕಡಿಮೆಯಾಗಿತ್ತು. ಆದರೆ ಎಫ್‌ಎಕ್ಯೂ ಗುಣಮಟ್ಟದಲ್ಲಿ ಎಫ್‌ಸಿಐ ಗುಣಮಟ್ಟದ ನೆಪದಲ್ಲಿ ಪ್ರತಿ ಕ್ವಿಂಟಲ್ ಗೆ 6,100 ರೂ.ಗೆ ತೊಗರಿ ಖರೀದಿಸಲಿಲ್ಲ. ಹೀಗಾಗಿ ಬಹುತೇಕ ರೈತರು 3,500 ರೂ. ದಿಂದ 4 ಸಾವಿರ ರೂ.ಗೆ ತೊಗರಿ ಮಾರಾಟ ಮಾಡಿ ಕೈ ತೊಳೆದುಕೊಂಡರು.
ಮುಂಗಾರು ಹಂಗಾಮಿನ ಮಳೆ ವಿಳಂಬವಾಗಿದ್ದು, ರೈತ ಸಂಪರ್ಕ ಕೇಂದ್ರಗಳಲ್ಲಿ ಹೆಸರು, ತೊಗರಿ ದಾಸ್ತಾನು ಇದೆ. ಹೆಸರಿಗೆ ಬಿತ್ತನೆ ಅವಧಿ ಮುಗಿದಿದ್ದು, ಸದ್ಯ ತೊಗರಿ ಬೇಡಿಕೆಯಲ್ಲಿದೆ. ಟಿಎಸ್-3ಆರ್ ಸುಧಾರಿತ ತಳಿ ಬೀಜ ದಾಸ್ತಾನು ಇದ್ದು, 5 ಕೆ.ಜಿ.ಗೆ 275 ರೂ. ರಿಯಾಯ್ತಿ ದರವಿದೆ.•ವೀರಣ್ಣ ಕಮತರ, ಸಹಾಯಕ ಕೃಷಿ ನಿರ್ದೇಶಕ,ಕುಷ್ಟಗಿ.
ರೈತರು ಬೆಂಬಲ ಬೆಲೆ ನೋಡಿ ತೊಗರಿ ಬೆಳೆ ಬೆಳೆಯುತ್ತಿಲ್ಲ. ಮಳೆಯ ಏರು ಪೇರು ಗಮನಿಸಿ ಕನಿಷ್ಠ ಪರಿಸ್ಥಿತಿಯಲ್ಲಿ ಬೆಳೆದರೂ ಯೋಗ್ಯ ಬೆಲೆ ಸಿಗುತ್ತಿಲ್ಲ. 2017-18ರಲ್ಲಿ ತೊಗರಿ ಬೆಂಬಲ ಬೆಲೆ ಪ್ರತಿ ಕ್ವಿಂಟಲ್ಗೆ 6 ಸಾವಿರ ರೂ. 2018-19ರಲ್ಲಿ ಪ್ರತಿ ಕ್ವಿಂಟಲ್ಗೆ 6,100 ರೂ. ಇದ್ದರೂ ಬೆಂಬಲ ಬೆಲೆ ಸಿಗದಿರುವುದು ಶೋಚನೀಯ.•ಅಬ್ದುಲ್ ನಜೀರಸಾಬ್ ಮೂಲಿಮನಿ, ರೈತ ಸಂಘ ಜಿಲ್ಲಾಧ್ಯಕ್ಷ