Advertisement

ಪ್ರಧಾನಿ ಮೋದಿಗೆ ಚುನಾವಣೆ ಸೋಲಿನ ಭೀತಿ

12:36 PM Nov 21, 2021 | Team Udayavani |

ದಾವಣಗೆರೆ: ಪಂಚರಾಜ್ಯಗಳ ಚುನಾವಣಾ ಸೋಲಿನ ಭೀತಿಯಲ್ಲಿ ಪ್ರಧಾನಿ ಮೋದಿ ಅವರು ಕೃಷಿ ಕಾಯ್ದೆಗಳನ್ನು ಹಿಂಪಡೆದಿದ್ದಾರೆಯೇ ವಿನಃ ರೈತರ ಮೇಲಿನ ಗೌರವದಿಂದಲ್ಲ ಎಂದು ಕೆಪಿಸಿಸಿ ವಕ್ತಾರ ಡಿ.ಬಸವರಾಜ್‌ ಅಭಿಪ್ರಾಯಿಸಿದರು.

Advertisement

ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರೈತರು, ಬಡವರು, ಕಾರ್ಮಿಕರು, ಹಿಂದುಳಿದವರ ಬಗ್ಗೆ ಪ್ರಧಾನಿ ಮೋದಿ ಹಾಗೂ ಬಿಜೆಪಿಗೆ ಕನಿಷ್ಟ ಕಾಳಜಿಯೂ ಇಲ್ಲ. ಇತ್ತೀಚೆಗೆ ನಡೆದ ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಗೆ ಆದ ಸೋಲು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಿಗೆ ಭಾರಿ ಆಘಾತ ನೀಡಿದೆ. ಕೃಷಿ ಕಾಯ್ದೆಗಳು ಹಿಂದಿ ಭಾಷಿಕರ ರಾಜ್ಯಗಳ ಚುನಾವಣೆಯ ಮೇಲೆ ಪರಿಣಾಮ ಬೀರುವ ಸಾಧ್ಯತೆಯನ್ನು ಗುಪ್ತಚರ ಇಲಾಖೆಗಳ ವರದಿಯಿಂದ ಮನಗಂಡು ನಂತರ ಇದೀಗ ಕೃಷಿ ಕಾಯ್ದೆಗಳನ್ನು ಕೈಬಿಡುವ ನಿರ್ಧಾರ ಪ್ರಕಟಿಸಿದ್ದಾರೆ ಎಂದರು.

ಚಳವಳಿಯಲ್ಲಿ 700ಕ್ಕೂ ಅಧಿಕ ರೈತರು ಹುತಾತ್ಮರಾಗಿದ್ದಾರೆ. ರೈತರ ಬಲಿದಾನದ ಹೊಣೆಯನ್ನು ಮೋದಿ ಸರ್ಕಾರವೇ ಹೊರಬೇಕು. ರೈತ ಕುಟುಂಬಗಳಿಗೆ ಕನಿಷ್ಟ ತಲಾ 25ಲಕ್ಷ ರೂ. ಪರಿಹಾರ ನೀಡಬೇಕು. ಮೃತ ರೈತರ ಕುಟುಂಬಗಳ ಕ್ಷಮೆಯಾಚಿಸಬೇಕು ಎಂದು ಆಗ್ರಹಿಸಿದರು.

ರೈತರ ಬೆಳೆಗಳಿಗೆ ಕನಿಷ್ಟ ಬೆಂಬಲ ಬೆಲೆಯನ್ನು ವೈಜ್ಞಾನಿಕವಾಗಿ ನಿಗದಿಪಡಿಸುವ ಶಾಶ್ವತ ಆಯೋಗ ಸರ್ಕಾರ ರಚಿಸಬೇಕು. ಆ ಆಯೋಗದಲ್ಲಿ ರೈತರ ಪ್ರತಿನಿಧಿಗಳು, ಕೃಷಿ ವಿಜ್ಞಾನಿಗಳು, ಕೃಷಿ ಆರ್ಥಿಕ ತಜ್ಞರನ್ನು ಕೃಷಿ ಆಯೋಗದ ಸದಸ್ಯರನ್ನಾಗಿ ನೇಮಿಸಬೇಕು. ಕೃಷಿ ಹಂಗಾಮಿನಲ್ಲಿ ರೈತರ ಬೆಳೆಗಳು ಕಟಾವಿಗೆ ಬರುವ ಮುನ್ನ ಕನಿಷ್ಟ ಬೆಂಬಲ ಬೆಲೆಯನ್ನು ಎಲ್ಲ ರೀತಿಯ ಬೆಳೆಗಳಿಗೆ ದೇಶಾದ್ಯಂತ ಘೋಷಿಸಬೇಕು. ಎಣ್ಣೆ ಕಾಳುಗಳು, ಆಹಾರ ಧಾನ್ಯಗಳು, ಹಣ್ಣು ತರಕಾರಿ, ಕಬ್ಬು, ಭತ್ತ, ತೋಟಗಾರಿಕಾ ಬೆಳೆಗಳು, ಪ್ಲಾಟೇಷನ್‌ ಬೆಳೆಗಳಾದ ಕಾಫಿ, ಯಾಲಕ್ಕಿ, ಸಾಂಬಾರು ಪದಾರ್ಥ ಸೇರಿದಂತೆ ಎಲ್ಲ ಬೆಳೆಗಳನ್ನು ಕನಿಷ್ಟ ಬೆಂಬಲ ಬೆಲೆಯ ಆಯೋಗದ ವ್ಯಾಪ್ತಿಗೆ ತರಬೇಕು. ಶೀಘ್ರವಾಗಿ ಹಾಳಾಗುವ ಹಣ್ಣು, ಟೊಮೊಟೊ, ತರಕಾರಿ ಬೆಳೆಗಳ ಸಂಸ್ಕರಣ ಘಟಕ ಆರಂಭಿಸಿ ಕೃಷಿಕರ ನೆರವಿಗೆ ಬರಬೇಕು. ಇಂತಹ ವೈಜ್ಞಾನಿಕ ಕ್ರಮ ಕೈಗೊಳ್ಳದೇ ಚುನಾವಣಾ ಉದ್ದೇಶದಿಂದ ಗಿಮಿಕ್‌ಗಳ ಮೂಲಕ ಮತದಾರರನ್ನು ಮರಳು ಮಾಡಲು ಹೊರಟರೇ ಬಿಜೆಪಿಯು ಮನೆಗೆ ಹೊಗುವ ಕಾಲ ದೂರವಿಲ್ಲ ಎಂದು ಹೇಳಿದರು.

ಮಹಾನಗರ ಪಾಲಿಕೆ ಹಿರಿಯ ಸದಸ್ಯ ಕೆ. ಚಮನಸಾಬ್‌ ಮಾತನಾಡಿ, ಮೋದಿ ಮಿತ್ರರಾದ ಅಂಬಾನಿ, ಆದಾನಿ ತರಹದ ಉದ್ಯಮಿಗಳ ಹಿತಾಸಕ್ತಿಯನ್ನು ಕಾಪಾಡಲು ದೇಶ ವಾಸಿಗಳನ್ನು ಬೆಲೆ ಏರಿಕೆ ಸುಳಿಗೆ ಸಿಲುಕಿಸಿದ್ದ ಮೋದಿ ಅವರಿಗೆ ಚುನಾವಣಾ ಸೋಲಿನ ಭಯ ಕಾಡುತ್ತಿದೆ. ಆದ್ದರಿಂದಲೇ ಕೃಷಿ ಕಾಯ್ದೆಗಳನ್ನು ಹಿಂಪಡೆಯುವ ನಾಟಕ ಆಡುತ್ತಿದ್ದಾರೆ ಎಂದು ಟೀಕಿಸಿದರು.

Advertisement

ಮಹಾನಗರ ಪಾಲಿಕೆ ಸದಸ್ಯ ಗಡಿಗುಡಾಳ್‌ ಮಂಜುನಾಥ ಮಾತನಾಡಿ, ಕಳೆದ ಏಳು ವರ್ಷಗಳಲ್ಲಿ ಮೋದಿ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ನೋಟ್‌ ಅಮಾನ್ಯಿàಕರಣ, ಜಿಎಸ್‌ಟಿ, ಕೃಷಿ ಕಾಯ್ದೆಗಳು ಮತ್ತು ಕಾರ್ಮಿಕ ಕಾಯ್ದೆಗಳು ಸೇರಿದಂತೆ ಜಾರಿಗೆ ತಂದ ಎಲ್ಲ ಕಾಯ್ದೆಗಳು ಜನವಿರೋಧಿ ಕಾಯ್ದೆಗಳಾಗಿವೆ. ದೇಶದ ಜನತೆ ಮೋದಿ ಅವರನ್ನು ಅಧಿಕಾರದಿಂದ ಇಳಿಸಿದಾಗ ಮಾತ್ರ ಭಾರತ ದೇಶ ಉದ್ಧಾರವಾಗುತ್ತದೆ ಎಂದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next