Advertisement

ಕೃಷಿ  ಜಮೀನು ಗುತ್ತಿಗೆ ಕಾಯಿದೆ ನಳನಳಿಸೀತೆ ಹಸಿರು?

03:45 AM Feb 22, 2017 | Team Udayavani |

ಸರಕಾರ ಇದೀಗ  ರಾಜ್ಯದಲ್ಲಿ  ಜಾರಿಯಲ್ಲಿರುವ  ಭೂಸುಧಾರಣಾ ಕಾಯಿದೆಗೆ  ತಿದ್ದುಪಡಿಗೆ ಚಿಂತನೆ ನಡೆಸಿದೆ. ರಾಜ್ಯ  ಸರಕಾರದ  ಚಿಂತನೆ  ಕಾರ್ಯರೂಪಕ್ಕೆ  ಬಂದದ್ದೇ ಆದಲ್ಲಿ  ರಾಜ್ಯದಲ್ಲಿ ಪಾಳು ಬಿದ್ದಿರುವ ಕೃಷಿ ಭೂಮಿ  ಮತ್ತೆ  ಹಸಿರಿನಿಂದ  ನಳನಳಿಸಲಿದೆ. 

Advertisement

ಇದೀಗ ಭಾರತ ಕೈಗಾರಿಕಾ ಕ್ಷೇತ್ರದಲ್ಲಿ ದಾಪುಗಾಲಿಡುತ್ತಿದ್ದರೂ ತನ್ನ ಆರ್ಥಿಕತೆಯ ಬೆನ್ನೆಲುಬಾಗಿರುವ ಕೃಷಿ ಕ್ಷೇತ್ರದಲ್ಲಿನ  ಪಾರಮ್ಯವನ್ನು  ಇನ್ನೂ  ಬಿಟ್ಟುಕೊಟ್ಟಿಲ್ಲ.  ಕೃಷಿ ಉತ್ಪಾದನೆಯಲ್ಲಿ ವಿಶ್ವದ ಮುಂಚೂಣಿಯ ದೇಶಗಳಲ್ಲಿ  ಒಂದಾಗಿರುವ  ಭಾರತದಲ್ಲಿ  ಕಳೆದ  ಕೆಲ  ದಶಕಗಳಿಂದೀಚೆಗೆ  ಕೃಷ್ಯುತ್ಪನ್ನಗಳ  ಉತ್ಪಾದನೆ ಪ್ರಮಾಣ  ಹೆಚ್ಚಿದೆಯಾದರೂ  ದೇಶದಲ್ಲಿನ ಕೃಷಿ  ಭೂಮಿಯ ಪ್ರಮಾಣಕ್ಕೆ  ಹೋಲಿಸಿದಲ್ಲಿ  ಇದು ತೀರಾ ಕಡಿಮೆಯಾಗಿದೆ. ದೇಶದ  ಕೃಷಿ ರಂಗ ಇಂದಿಗೂ ಮುಂಗಾರನ್ನೇ  ಅವಲಂಬಿಸಿರುವುದರಿಂದ ಪ್ರತೀ ವರ್ಷವೂ  ಬೇಸಾಯದ  ಮೇಲೆ  ಮಳೆ ನೇರ ಪರಿಣಾಮವನ್ನುಂಟು ಮಾಡುತ್ತಲೇ ಬಂದಿದೆ.  ಎಲ್ಲ  ಎಡರುತೊಡರುಗಳ  ನಡುವೆ ಕೃಷಿ ವಲಯದಲ್ಲಿ   ತಂತ್ರಜ್ಞಾನದ  ಬಳಕೆ  ಹೆಚ್ಚಿರುವುದರಿಂದ  ಮತ್ತು  ನೀರಾವರಿ  ವ್ಯವಸ್ಥೆಗಳು ಉತ್ತಮಗೊಂಡಿರುವುದರಿಂದ  ದೇಶದ  ಒಟ್ಟಾರೆ  ಕೃಷಿ ಉತ್ಪಾದನೆ  ಏರುಗತಿಯಲ್ಲಿ  ಇದೆಯಾದರೂ  ಕೃಷಿಕರಿಗೆ  ಇದರ ನೈಜ ಲಾಭ ಲಭಿಸುತ್ತಿಲ್ಲ  ಎಂಬುದು  ಮಾತ್ರ  ಬೇಸರದ ವಿಚಾರ. 

ಒಂದೆಡೆಯಿಂದ ಹೆಕ್ಟೇರ್‌ಗಟ್ಟಲೆ ಕೃಷಿ ಜಮೀನನ್ನು  ಹೊಂದಿರುವ  ಭೂ ಮಾಲಕರು  ಕೃಷಿಯಿಂದ ರೋಸಿ  ಹೋಗಿ  ಜಮೀನನ್ನು  ಪಾಳು  ಬಿಡುತ್ತಿದ್ದರೆ  ಮತ್ತೂಂದೆಡೆಯಿಂದ  ಸಣ್ಣ ರೈತರು  ಜಮೀನಿನ ಕೊರತೆಯಿಂದಾಗಿ ಹೆಚ್ಚಿನ ಪ್ರಮಾಣದಲ್ಲಿ  ಬೆಳೆ ಬೆಳೆಯಲು ಸಾಧ್ಯವಾಗದೇ ಪರಿತಪಿಸುತ್ತಿದ್ದಾರೆ.  ಕೃಷಿ ಭೂಮಿಯನ್ನು  ಲೀಸ್‌ಗೆ  ಅಥವಾ ಗೇಣಿಗೆ  ನೀಡುವ ಸಂಬಂಧ ದೇಶದ ವಿವಿಧ ರಾಜ್ಯಗಳಲ್ಲಿ  ಬೇರೆಬೇರೆ ತೆರನಾದ  ಕಾಯಿದೆಗಳಿದ್ದು  ಇದು  ಭೂಮಾಲಕರು  ಮತ್ತು  ಲೀಸ್‌ದಾರರು ಅಥವಾ  ಗೇಣಿದಾರರ  ಪಾಲಿಗೆ  ಬಲುದೊಡ್ಡ  ತಡೆಯಾಗಿ  ಪರಿಣಮಿಸಿದೆ. ನಿರ್ಬಂಧಗಳಿಂದಾಗಿ  ಅಪಾರ ಪ್ರಮಾಣದ ಕೃಷಿ ಭೂಮಿ  ಪ್ರತೀ ವರ್ಷ  ಪಾಳು ಬೀಳುವಂತಾಗಿದೆ.  ಇದರಿಂದ ಒಟ್ಟಾರೆಯಾಗಿ  ದೇಶದ  ಕೃಷಿ ಉತ್ಪಾದನೆಯ ಮೇಲೆ  ಪರಿಣಾಮ ಬೀಳುತ್ತಿದೆ ಮಾತ್ರವಲ್ಲದೆ  ಭಾರೀ  ಪ್ರಮಾಣದ ಫ‌ಲವತ್ತಿನಿಂದ  ಕೂಡಿದ  ಕೃಷಿ  ಭೂಮಿ  ಬರಡಾಗುತ್ತಿದೆ. 

ಇವೆಲ್ಲದರ ಹಿನ್ನೆಲೆಯಲ್ಲಿ  ನೀತಿ  ಆಯೋಗ  ವರ್ಷದ ಹಿಂದೆಯೇ  “ಮಾದರಿ ಗುತ್ತಿಗೆ ಕಾಯಿದೆ’ ರಚನೆಯ  ಪ್ರಸ್ತಾವವನ್ನು  ರಾಜ್ಯ ಸರಕಾರಗಳ  ಮುಂದಿಟ್ಟಿತ್ತು. ಕಾಯಿದೆಯನ್ನು  ರೂಪಿಸುವ  ಸಂಬಂಧ  ಕೃಷಿ ವೆಚ್ಚ ಮತ್ತು  ಬೆಲೆಗಳ  ಆಯೋಗದ  ಮಾಜಿ  ಮುಖ್ಯಸ್ಥರಾಗಿರುವ  ಟಿ. ಹಕ್‌ ನೇತೃತ್ವದಲ್ಲಿ  ತಜ್ಞರ  ಸಮಿತಿಯೊಂದನ್ನು  ನೀತಿ ಆಯೋಗ ರಚಿಸಿತ್ತು. ಈ ಸಮಿತಿ  ಗೇಣಿದಾರ ಅಥವಾ ಲೀಸ್‌ದಾರ  ರೈತರನ್ನು  ಅಧಿಕೃತವಾಗಿ  ಪರಿಗಣಿಸಿ  ಅವರಿಗೆ  ಕೃಷಿ ಸಾಲ ಮತ್ತು  ವಿಮಾ ಸೌಲಭ್ಯವನ್ನು  ಒದಗಿಸುವ ಸಲಹೆಯನ್ನು  ನೀಡಿದೆಯಲ್ಲದೆ ರೈತರು ಬೆಳೆದ ಬೆಳೆಗಳಿಗೆ  ನೀಡಲಾಗುತ್ತಿರುವ ಬೆಂಬಲ ಬೆಲೆಯನ್ನು  ನೀಡಲೂ  ಶಿಫಾರಸು ಮಾಡಿದೆ. ಕೃಷಿ  ಜಮೀನನ್ನು  ಲೀಸ್‌ಗೆ ನೀಡುವ  ಭೂ ಮಾಲಕರಿಗೂ  ಜಮೀನಿನ ಮಾಲಕತ್ವವನ್ನು  ಕಳೆದುಕೊಳ್ಳುವ ಭೀತಿ ಕಾಡದಂತೆ  ಕೃಷಿ ಜಮೀನನ್ನು  ಲೀಸ್‌ಗೆ ನೀಡುವ ಸಂದರ್ಭ ಸೂಕ್ತ  ಒಪ್ಪಂದವನ್ನು  ಮಾಡಿಕೊಳ್ಳುವುದನ್ನು  ಕಡ್ಡಾಯಗೊಳಿಸುವಂತೆಯೂ  ತಜ್ಞರ  ಸಮಿತಿ  ಶಿಫಾರಸು ಮಾಡಿದೆ. ಅದರಂತೆ  ಕರ್ನಾಟಕ  ಸರಕಾರ ಇದೀಗ  ರಾಜ್ಯದಲ್ಲಿ  ಜಾರಿಯಲ್ಲಿರುವ  ಭೂಸುಧಾರಣಾ ಕಾಯಿದೆಗೆ  ತಿದ್ದುಪಡಿ  ತರಲು ಚಿಂತನೆ ನಡೆಸಿದ್ದು,  ಈ ಸಂಬಂಧ  ಕೃಷಿ ತಜ್ಞರು ಮತ್ತು  ರೈತರೊಂದಿಗೆ  ಚರ್ಚೆ ನಡೆಸಿ  ಸಲಹೆ ಪಡೆಯಲು ತೀರ್ಮಾನಿಸಿದೆ. ರಾಜ್ಯ  ಸರಕಾರದ  ಚಿಂತನೆ  ಕಾರ್ಯರೂಪಕ್ಕೆ  ಬಂದದ್ದೇ ಆದಲ್ಲಿ  ರಾಜ್ಯದಲ್ಲಿ ಪಾಳು ಬಿದ್ದಿರುವ ಕೃಷಿ ಭೂಮಿ  ಮತ್ತೆ  ಹಸಿರಿನಿಂದ  ನಳನಳಿಸಲಿದೆ. ಆದರೆ ರೈತರು ಬೆಳೆದ ಬೆಳೆಗಳಿಗೆ ಸೂಕ್ತ  ದಾಸ್ತಾನು  ವ್ಯವಸ್ಥೆ ಮತ್ತು  ಸೂಕ್ತ ಬೆಲೆ ಒದಗಿಸಿ ಕೊಡುವ  ಮಹತ್ತರ ಜವಾಬ್ದಾರಿ  ಸರಕಾರದ್ದಾಗಿದೆ.

ರೈತರು  ತಮ್ಮ  ಜಮೀನಿನಲ್ಲಿ  ಬೆಳೆ ಬೆಳೆಯುವಂತೆ  ಪ್ರೋತ್ಸಾಹಿಸುವಲ್ಲಿ  ಸರಕಾರ  ತೋರುತ್ತಿರುವ  ಕಾಳಜಿ  ಅವರು ಬೆಳೆದ ಬೆಳೆಗಳಿಗೆ  ಸೂಕ್ತ ಮಾರುಕಟ್ಟೆಯನ್ನು  ದೊರಕಿಸಿಕೊಡುವತ್ತಲೂ  ತೋರಿಸಬೇಕಿದೆ. ಕೃಷಿ ಉತ್ಪಾದನೆಯ  ಹೆಚ್ಚಳದ  ಜತೆಜತೆಯಲ್ಲಿ  ರೈತರ ಆದಾಯವನ್ನು  ವೃದ್ಧಿಸಲೂ  ಸರಕಾರ ಮುಂದಾಗಬೇಕಿದ್ದು,  ಹಾಗಾದಾಗ  ಮಾತ್ರ  ದೇಶದ  ಕೃಷಿ  ವಲಯ  ಮತ್ತೆ  ತನ್ನ  ಉಚ್ಛಾ†ಯ ಸ್ಥಿತಿಯನ್ನು  ಕಾಣಲು ಸಾಧ್ಯ.

Advertisement
Advertisement

Udayavani is now on Telegram. Click here to join our channel and stay updated with the latest news.

Next