ಹರಿಯಾಣ: ಪೊಲೀಸ್ ಒಬ್ಬ ವ್ಯಕ್ತಿಯಿಂದ ಹಣ ಪಡೆಯುವಾಗ ರೆಡ್ ಹ್ಯಾಂಡ್ ಆಗಿ ಜಾಗೃತ ದಳದ ಅಧಿಕಾರಿಗಳ ಕೈಗೆ ಸಿಕ್ಕಿಬಿದ್ದಿರುವ ಘಟನೆ ಹರಿಯಾಣದ ಫರೀದಾಬಾದ್ ನಲ್ಲಿ ನಡೆದಿದೆ.
ಎಸ್ ಐ ಮಹೇಂದ್ರ ಉಲಾ ಜಾಗೃತ ದಳದ ಅಧಿಕಾರಿಗಳ ಕೈಗೆ ಸಿಕ್ಕಿಬಿದ್ದ ಪೊಲೀಸ್ ಅಧಿಕಾರಿ.
ಶಂಭುನಾಥ್ ಎಂಬ ವ್ಯಕ್ತಿ ತನ್ನ ಎಮ್ಮೆ ಕಳೆದು ಹೋಗಿದೆ. ಕದ್ದವರನ್ನು ಪತ್ತೆ ಹಚ್ಚಿ ಎಂದು ಮಹೇಂದ್ರ ಅವರ ಬಳಿ ಹೋಗಿದ್ದರು. ಮಹೇಂದ್ರ ಆರೋಪಿಗಳನ್ನು ಪತ್ತೆ ಹಚ್ಚಲು 10 ಸಾವಿರ ರೂ. ಬೇಡಿಕೆಯಿಟ್ಟಿದ್ದರು. ಮೊದಲಿಗೆ ಹಂತ ಹಂತವಾಗಿ ಶಂಭುನಾಥ್ 400 ರೂ.ವನ್ನು ಮಹೇಂದ್ರ ಅವರಿಗೆ ನೀಡಿದ್ದಾರೆ. ಬಳಿಕ ಶಂಭುನಾಥ್ ಅವರು ಜಾಗೃತ ದಳದ ವಿಭಾಗಕ್ಕೆ ಈ ಬಗ್ಗೆ ದೂರು ಕೊಟ್ಟಿದ್ದಾರೆ.
ಇದನ್ನೂ ಓದಿ:ಬಂಟ್ವಾಳ: ಅಜಿಲಮೊಗರಿನಲ್ಲಿ ಮಕ್ಕಳ ಕಿಡ್ನ್ಯಾಪ್ ಯತ್ನ.?
ಜಾಗೃತ ದಳ ಅಧಿಕಾರಿಗಳಿಗೆ ದೂರು ಕೊಟ್ಟು ಶಂಭುನಾಥ್ ಅವರು ಮಹೇಂದ್ರರಿಗೆ ಉಳಿದ ಹಣವನ್ನು ನೀಡಲು ಹೋಗಿದ್ದಾರೆ. ಈ ವೇಳೆ ದೂರದಲ್ಲಿ ನಿಂತುಕೊಂಡಿದ್ದ ಜಾಗೃತ ದಳದ ಅಧಿಕಾರಿಗಳು ಮಹೇಂದ್ರ ಅವರು ಹಣ ತೆಗೆದುಕೊಳ್ಳುತ್ತಿರುವಾಗಲೇ ದಾಳಿ ನಡೆಸಿದ್ದಾರೆ.
ಕೂಡಲೇ ಇದನ್ನು ಗಮನಿಸಿದ ಮಹೇಂದ್ರ ಹಣ ನೋಟುಗಳನ್ನು ಬಾಯಿಯೊಳಗೆ ಹಾಕಿಕೊಂಡಿದ್ದಾರೆ. ಸಾಕ್ಷ್ಯ ನಾಶಕ್ಕಾಗಿ ನೋಟಿನ ಕಂತುಗಳನ್ನು ಬಾಯಿಯೊಳಗಡೆ ತುರುಕಿಗೊಂಡ ಮಹೇಂದ್ರ ಅವರ ಕೈಯನ್ನು ಹಿಡಿದು, ಹರಸಾಹಸ ಪಟ್ಟು ಬಾಯಿಯೊಳಗಡೆಯಿದ್ದ ಹಣವನ್ನು ಹೊರಗೆ ತೆಗೆದಿದ್ದಾರೆ.
ಪೊಲೀಸ್ ಅಧಿಕಾರಿಗಳು ಮಹೇಂದ್ರ ಅವರನ್ನು ವಶಕ್ಕೆ ಪಡೆದುಕೊಂಡು ವಿಚಾರಣೆ ನಡೆಸುತ್ತಿದ್ದಾರೆ. ಇಡೀ ಘಟನೆಯ ವಿಡಿಯೋ ಸೆರೆಯಾಗಿದ್ದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.