Advertisement
ಮಂಗಳೂರು -ಮೂಡುಬಿದ್ರೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಬರುವ ಕುಲಶೇಖರದಲ್ಲಿ ಗಜಾನನ ರೆಸ್ಟೋರೆಂಟ್ ಇದೆ. ಇದು ಕೊಗ್ಗರ ಹೋಟೆಲ್ ಎಂದೇ ಫೇಮಸ್ಸು. ಈ ಭಾಗದಲ್ಲಿ ಯಾವುದೇ ಹೇಳಿಕೊಳ್ಳುವಂಥ ಹೋಟೆಲ್ ಇರಲಿಲ್ಲ. ಅಂತಹ ಸಮಯದಲ್ಲಿ 1953ರಲ್ಲಿ ಕೊಗ್ಗ ಪ್ರಭು ಅವರು ಚಿಕ್ಕದಾಗಿ ಹೋಟೆಲ್ ಪ್ರಾರಂಭಿಸಿ, ಈ ಭಾಗದ ಜನರ ಹಸಿವನ್ನು ನೀಗಿಸಿದ್ದಾರೆ. ಕೊಗ್ಗ ಪ್ರಭು ತೀರಿಕೊಂಡ ನಂತರ ಅವರ ಸಹೋದರ ಪುಂಡಲೀಕ ಪ್ರಭು ಹೋಟೆಲನ್ನು ಮುನ್ನಡೆಸಿದರು. ಈಗ ಅವರ ಮಕ್ಕಳಾದ ಪ್ರಕಾಶ್ ಪ್ರಭು ಹಾಗೂ ಮೋಹನ್ ಪ್ರಭು ಅವರು ತಮ್ಮ ದೊಡ್ಡಪ್ಪ ಕಟ್ಟಿಕೊಟ್ಟ ಹೋಟೆಲ್‌ಅನ್ನು ಯಶಸ್ವಿಯಾಗಿ ಮುನ್ನಡೆಸುತ್ತಿದ್ದಾರೆ.
ಬೆಳಗ್ಗೆ 6.15ಕ್ಕೆ ಹೋಟೆಲ್ ಆರಂಭವಾದ್ರೆ, ರಾತ್ರಿ 7.30ರವರೆಗೆ ತೆರೆದಿರುತ್ತದೆ.
Related Articles
ಕೊಗ್ಗ ಪ್ರಭು ಅವರ ಕಾಲದಿಂದಲೂ ಗ್ರಾಹಕರ ಸ್ನೇಹಿಯಾಗಿರುವ ಈ ಹೋಟೆಲ್‌ನಲ್ಲಿ ದರ ಯಾವಾಗಲೂ ಕಡಿಮೆಯೇ. ಇಲ್ಲಿ ಕರಾವಳಿ ಜನರ ಪ್ರಿಯವಾದ ಸಜ್ಜಿಗೆ ಬಜಿಲ್, ಗೋಳಿಬಜೆ, ಪುರಿ ಬಾಜಿ, ಅಂಬೊಡೆ, ಬನ್ಸ್, ಇಡ್ಲಿ ಸಾಂಬಾರ್ ಮುಂತಾದ ತಿಂಡಿ ಸಿಗುತ್ತದೆ. ಯಾವುದೇ ತಿಂಡಿ ತೆಗೆದುಕೊಂಡ್ರೂ ದರ ಮಾತ್ರ 10 ರೂಪಾಯಿ. ಈ ಹೋಟೆಲ್‌ನ ಗೋಲಿ ಬಜೆಯನ್ನು ಜನ ಹೆಚ್ಚು ಇಷ್ಟಪಡುತ್ತಾರೆ.
Advertisement
ಊಟ, ದೋಸೆಗೆ, 20 ರೂ.: ಇಲ್ಲಿ ಒಂದು ಊಟಕ್ಕೆ ಅನ್ನ, ಸಾಂಬಾರು, ಮಜ್ಜಿಗೆ, ಗಸಿ, ಕಚ್ಚಂಬರ್, ಉಪ್ಪಿನಕಾಯಿ ಕೊಡ್ತಾರೆ. ಇನ್ನು ಮಸಾಲೆ ದೋಸೆ, ಈರುಳ್ಳಿ ದೋಸೆ ಯಾವುದೇ ತೆಗೆದುಕೊಂಡ್ರೂ 20 ರೂ., ಗರಿ ಗರಿಯಾಗಿ ಮಾಡುವ ಮಸಾಲೆ ದೋಸೆ ಗ್ರಾಹಕರಿಗೆ ಅಚ್ಚುಮೆಚ್ಚು.
ಮಂಗಳೂರಿನ ಬಸ್ ನಿಲ್ದಾಣದಲ್ಲಿ ಮೂಡುಬಿದ್ರೆ ಕಡೆ ಬರುವ ಬಸ್ ಹತ್ತಿ, ಕುಲಶೇಖರದಲ್ಲಿರುವ ಕೊಗ್ಗರ ಹೋಟೆಲ್ ಬಳಿ ನಿಲ್ಲಿಸಿ ಎಂದರೆ ಹೋಟೆಲ್ ಬಳಿಯೇ ಬಸ್ ನಿಲ್ಲಿಸುತ್ತಾರೆ. ಇದು ತುಂಬಾ ವರ್ಷಗಳಿಂದ ಇರುವ ಕಾರಣ ಎಲ್ಲಾ ಬಸ್ ಕಂಡಕ್ಟರ್, ಚಾಲಕರಿಗೂ ಈ ಹೋಟೆಲ್ ಗೊತ್ತು. ರಾಜಕಾರಣಿಗಳು ಬರ್ತಾರೆ:
ಗಜಾನನ ರೆಸ್ಟೋರೆಂಟ್‌ಗೆ ಮೇಯರ್ ಭಾಸ್ಕರ್ ಮುಂತಾದ ಸ್ಥಳೀಯ ಜನಪ್ರತಿನಿಧಿಗಳು ಬರುತ್ತಾರೆ. ಮಾಜಿ ಶಾಸಕ ಶ್ರೀಧರ್ ಕುಂಬ್ಳೆ ಈ ಹೋಟೆಲ್‌ನ ಗ್ರಾಹಕರಾಗಿದ್ದರು. ಈ ದುಬಾರಿ ದಿನಗಳಲ್ಲೂ ಕಡಿಮೆ ಬೆಲೆಗೆ ತಿಂಡಿ ನೀಡಲು ಕಾರಣವೇನು ಎಂದು ಹೋಟೆಲ್ ಮಾಲೀಕರಾದ ಮೋಹನ್ ಪ್ರಭು ಅವರನ್ನು ಕೇಳಿದ್ರೆ, ಹಿಂದಿನಿಂದಲೂ ಜನಸೇವೆಯೇ ಮುಖ್ಯ ಧ್ಯೇಯವಾಗಿದೆ. ಮನೆಯವರೇ ಹೋಟೆಲ್ ನೋಡಿಕೊಳ್ಳುವುದರಿಂದ ಖರ್ಚು ಕಡಿಮೆ. ಜನರಿಗೆ ಹೊಟ್ಟೆ ತುಂಬಾ ಊಟ ಹಾಕಬೇಕು ಅನ್ನುವುದು ನಮ್ಮ ಆಸೆ. ಅವರು ಹೊಟ್ಟೆ ತುಂಬಾ ಊಟ ಮಾಡಿ ಖುಷಿಪಟ್ಟರೆ ಆಷ್ಟೇ ಸಾಕು. ಅದೇ ನಮಗೆ ತೃಪ್ತಿ ಎನ್ನುತ್ತಾರೆ.
– ಹೊಟ್ಟೆ ತುಂಬಾ ಊಟ ಹಾಕಿ, ಖುಷಿ ಪಡಿಸೋದೇ ತಮ್ಮ ಉದ್ದೇಶ *ಭೋಗೇಶ್ ಮೇಲುಕುಂಟೆ