Advertisement

ಕೌಟುಂಬಿಕ ದೌರ್ಜನ್ಯ ತಡೆ ಕಾಯ್ದೆಗೆ ಬೇಕಿದೆ “ರಕ್ಷಣೆ

02:08 AM May 16, 2022 | Team Udayavani |

ಬೆಂಗಳೂರು: ಮಹಿಳೆಯರನ್ನು ಕೌಟುಂಬಿಕ ದೌರ್ಜನ್ಯಗಳಿಂದ ರಕ್ಷಣೆ ನೀಡಬೇಕಾದ ಕಾಯ್ದೆಗೆ ರಾಜ್ಯದಲ್ಲಿ “ರಕ್ಷಣೆ’ ಬೇಕಾಗಿದೆ .

Advertisement

ಹೌದು, ಈ ಕಾಯ್ದೆಯನ್ನು ಪರಿಣಾಮಕಾರಿಯಾಗಿ ಜಾರಿ ಗೊಳಿಸುವ ಜವಾಬ್ದಾರಿ ಹೊಂದಿರುವ “ರಕ್ಷಣ ಅಧಿಕಾರಿ’ಗಳ ಕೊರತೆ ಇದ್ದು, ಇದರಿಂದ ಪ್ರತಿವಾದಿಗಳಿಗೆ ನೋಟಿಸ್‌ ಜಾರಿಗೊಳಿಸುವ, ಕೌಟುಂಬಿಕ ದೌರ್ಜನ್ಯಗಳ ಪ್ರಕರಣಗಳ ವರದಿ ಸಲ್ಲಿಕೆ ಸೇರಿದಂತೆ ಕಾಯ್ದೆ ಇನ್ನಿತರ ಕಾರ್ಯಗಳಲ್ಲಿ ವಿಳಂಬವಾಗುತ್ತಿದೆ. ಮುಖ್ಯವಾಗಿ ಇದು ಬಾಕಿ ಪ್ರಕರಣಗಳ ಸಂಖ್ಯೆ ಹೆಚ್ಚಳಕ್ಕೆ ಕಾರಣವಾಗುತ್ತಿದೆ.

ರಕ್ಷಣಾಧಿಕಾರಿಗಳೇ ಇಲ್ಲ!
ರಾಜ್ಯದಲ್ಲಿ ಒಟ್ಟು 47 ರಕ್ಷಣ ಅಧಿಕಾರಿಗಳ ಹುದ್ದೆಗಳು ಮಂಜೂರಾಗಿದ್ದು, ಇದರಲ್ಲಿ 18 ಮಂದಿ ಮಾತ್ರ ಕಾರ್ಯನಿರ್ವಹಿಸುತ್ತಿದ್ದು, 29 ಹುದ್ದೆಗಳು ಖಾಲಿ ಇದ್ದಾವೆ. 12 ಜಿಲ್ಲೆಗಳಲ್ಲಿ ರಕ್ಷಣ ಅಧಿಕಾರಿಗಳು ಮಂಜೂರು ಆಗಿಲ್ಲ. ಈ ಜಿಲ್ಲೆಗಳಲ್ಲಿ ಕೌಟುಂಬಿಕ ದೌರ್ಜನ್ಯ ತಡೆ ಕಾಯ್ದೆಯಡಿ ಹೆಚ್ಚು ಪ್ರಕರಣಗಳು ಬಾಕಿ ಉಳಿದಿವೆ.

ಸರಕಾರಕ್ಕೆ ಕೋರ್ಟ್‌ ನಿರ್ದೇಶನ
ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿರುವ ಹೈಕೋರ್ಟ್‌ ನಿವೃತ್ತ ನ್ಯಾಯಮೂರ್ತಿ ಎ.ಎನ್‌. ವೇಣುಗೋಪಾಲ ಗೌಡ ನೇತೃತ್ವದ ರಾಜ್ಯ ಕಾನೂನು ಸೇವಾ ಪ್ರಾಧಿಕಾರದ “ಲಿಂಗ ನ್ಯಾಯ’ (ಜೆಂಡರ್‌ ಜಸ್ಟಿಸ್‌) ಸಮಿತಿಯು ಕಾಯ್ದೆ ಪರಿಣಾಮಕಾರಿ ಅನುಷ್ಠಾನಕ್ಕೆ ಸಂಬಂಧಿಸಿ ಸರಕಾರಕ್ಕೆ ಹಲವು ನಿರ್ದೇಶನಗಳನ್ನು ನೀಡಿ, ಆ ಸಂಬಂಧ ಅಗತ್ಯ ಆದೇಶಗಳನ್ನುಹೊರಡಿಸುವಂತೆ ಸೂಚನೆ ನೀಡಿದೆ. ಆದರೆ ಈ ಬಗ್ಗೆ ನಿರ್ದೇಶನ ಪಾಲನೆಯಾದಂತಿಲ್ಲ.

ಅನುಪಾಲನ ವರದಿಗೆ ಸೂಚನೆ
ಲಿಂಗ ನ್ಯಾಯದ ಕಲ್ಪನೆ ಮತ್ತು ಸಂವೇದನಶೀಲತೆಯ ಬಗ್ಗೆ ಅಪರ್ಣಾ ಭಟ್‌ ವರ್ಸಸ್‌ ಮಧ್ಯಪ್ರದೇಶ ರಾಜ್ಯದ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್‌ ಒತ್ತು ನೀಡಿರುವ ಹಿನ್ನೆಲೆಯಲ್ಲಿ ಲಿಂಗ ಸೂಕ್ಷ್ಮತೆ ಕುರಿತು ತಿಳುವಳಿಕೆ ಮೂಡಿಸುವ ನಿಟ್ಟಿನಲ್ಲಿ ರಾಜ್ಯ ಕಾನೂನು ಸೇವಾ ಪ್ರಾಧಿಕಾರವು ನ್ಯಾ| ವೇಣುಗೋಪಾಲ ಗೌಡ ನೇತೃತ್ವದಲ್ಲಿ ಲಿಂಗ ನ್ಯಾಯ ಸಮಿತಿ ರಚಿಸಿತ್ತು.

Advertisement

ಸಮಿತಿ ಸಭೆಗಳನ್ನು ನಡೆಸಿ ಕೌಟುಂಬಿಕ ದೌರ್ಜನ್ಯ ತಡೆ ಕಾಯ್ದೆ ಬಗ್ಗೆ ಪರಾಮರ್ಶೆ ನಡೆಸಿ ಸರಕಾರಕ್ಕೆ ನಿರ್ದೇಶನಗಳನ್ನು ನೀಡಿದೆ. ಅದರಂತೆ, ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಎಚ್‌. ಶಶಿಧರ ಶೆಟ್ಟಿಯವರು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಗೆ ಸುತ್ತೋಲೆ ಹೊರಡಿಸಿ ಅನುಪಾಲನ ವರದಿ ಸಲ್ಲಿಸುವಂತೆ ಸೂಚನೆ ನೀಡಿದ್ದಾರೆ.

ಸಮಿತಿ ಹೇಳಿದ್ದೇನು?
-ತತ್‌ಕ್ಷಣ ಖಾಲಿ ಇರುವ 29 ರಕ್ಷಣ ಅಧಿಕಾರಿಗಳ ಹುದ್ದೆಗಳನ್ನು ಭರ್ತಿ ಮಾಡಬೇಕು.
– 12 ಜಿಲ್ಲೆಗಳಿಗೆ ರಕ್ಷಣ ಅಧಿಕಾರಿಗಳ ಹುದ್ದೆಗಳನ್ನು ತತ್‌ಕ್ಷಣ ಮಂಜೂರು ಮಾಡಬೇಕು.
-ವಿಳಂಬ ತಪ್ಪಿಸಲು ವಾಟ್ಸ್‌ ಆ್ಯಪ್‌ ಅಥವಾ ಇತರ ಡಿಜಿಟಲ್‌ವಿಧಾನದ ಮೂಲಕ ನೋಟಿಸ್‌ ಜಾರಿಗೊಳಿಸಬೇಕು.
– ಕೌಟುಂಬಿಕ ದೌರ್ಜನ್ಯ ಪ್ರಕರಣ ವರದಿ ಸಲ್ಲಿಸಲು ರಕ್ಷಣ ಅಧಿಕಾರಿಗಳಿಗೆ ಅಗತ್ಯ ತರಬೇತಿ ನೀಡಬೇಕು.

11 ಸಾವಿರ ಕೇಸ್‌ ಬಾಕಿ

ಕೌಟುಂಬಿಕ ದೌರ್ಜನ್ಯದಿಂದ ಹೆಣ್ಣು ಮಕ್ಕಳ ರಕ್ಷಣೆ ಕಾಯ್ದೆ-2005ರಡಿ ರಾಜ್ಯ ದಲ್ಲಿ ಸದ್ಯ 11,576 ಪ್ರಕರಣಗಳು ಬಾಕಿ ಇವೆ. ಇದರಲ್ಲಿ ಬೆಂಗಳೂರಿನಲ್ಲಿ ಅತಿ ಹೆಚ್ಚು ಪ್ರಕರಣಗಳು ಇವೆ.

ಜಿಲ್ಲೆ ಬಾಕಿ ಪ್ರಕರಣ
ಬೆಂಗಳೂರು 3,889
ಬಾಗಲಕೋಟೆ 236
ಬೆಳಗಾವಿ 506
ಬಳ್ಳಾರಿ 120
ಬೆಂಗಳೂರು ಗ್ರಾ 87
ಬೀದರ್‌ 429
ಚಾಮರಾಜನಗರ 70
ಚಿಕ್ಕಬಳ್ಳಾಪುರ 139
ಚಿಕ್ಕಮಗಳೂರು 455
ಚಿತ್ರದುರ್ಗ 289
ದಕ್ಷಿಣ ಕನ್ನಡ 869
ಉಡುಪಿ 157
ದಾವಣಗೆರೆ 400
ಧಾರವಾಡ 171
ಗದಗ 58
ಹಾಸನ 397
ಹಾವೇರಿ 157
ಕಲಬುರಗಿ 94
ಕೊಡಗು 194
ಕೋಲಾರ 190
ಕೊಪ್ಪಳ 96
ಮಂಡ್ಯ 300
ಮೈಸೂರು 749
ರಾಯಚೂರು 18
ರಾಮನಗರ 126
ಶಿವಮೊಗ್ಗ 384
ತುಮಕೂರು 294
ಉತ್ತರ ಕನ್ನಡ 117
ವಿಜಯಪುರ 513
ಯಾದಗಿರಿ 72

– ರಫೀಕ್‌ ಅಹ್ಮದ್‌

Advertisement

Udayavani is now on Telegram. Click here to join our channel and stay updated with the latest news.

Next