Advertisement

ಕೌಟುಂಬಿಕ ದೌರ್ಜನ್ಯ ಕರ್ನಾಟಕದಲೇ ಅಧಿಕ

09:48 AM May 09, 2022 | Team Udayavani |

ಬೆಂಗಳೂರು: ದೇಶದ ಇತರೆ ರಾಜ್ಯಗಳಿಗೆ ಹೋಲಿಸಿದರೆ ಮಹಿಳೆಯರ ಮೇಲಿನ ಕೌಟುಂಬಿಕ ದೌರ್ಜನ್ಯ ಕರ್ನಾಟಕ ದಲ್ಲೇ ಹೆಚ್ಚು ಎಂಬ ಆಘಾತಕಾರಿ ಮಾಹಿತಿ ಹೊರಬಿದ್ದಿದೆ.

Advertisement

ಕೇಂದ್ರ ಸರ್ಕಾರವು 2019-21ರ ಅವಧಿಯಲ್ಲಿ ನಡೆಸಿರುವ ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆಯ ಪ್ರಕಾರ, ರಾಜ್ಯದ ಶೇ.48ರಷ್ಟು ವಿವಾಹಿತ ಮಹಿಳೆ ಯರು(18-49ರ ವಯೋಮಾನ) ತಮ್ಮ ಮೇಲೆ ಪತಿ ಯಿಂದ ದೈಹಿಕ, ಭಾವನಾತ್ಮಕ ಹಾಗೂ ಲೈಂಗಿಕ ದೌರ್ಜನ್ಯಗಳು ನಡೆಯುತ್ತಿವೆ ಎಂದು ಹೇಳಿಕೊಂಡಿದ್ದಾರೆ.

ಪತಿಯಿಂದ ಕಿರುಕುಳ, ಹಿಂಸಾಚಾರ ಅನುಭವಿಸುತ್ತಿರುವುದಾಗಿ ಹೇಳಿರುವವವರ ಪೈಕಿ ಕರ್ನಾಟದ ಮಹಿಳೆಯರೇ(ಶೇ.48) ಹೆಚ್ಚಿದ್ದರೆ, ಬಿಹಾರವು(ಶೇ.43) ಎರಡನೇ ಸ್ಥಾನದಲ್ಲಿದೆ. ನಂತರದ ಸ್ಥಾನಗಳಲ್ಲಿ ತೆಲಂಗಾಣ (ಶೇ.41), ಮಣಿಪುರ(ಶೇ.40), ತಮಿಳು ನಾಡು (ಶೇ.40), ಉತ್ತರಪ್ರದೇಶ(ಶೇ.39)ಗಳಿವೆ. ವಿಶೇಷವೆಂದರೆ, ಬಹುತೇಕ ಮಂದಿ ಮದುವೆಯಾದ ಮೊದಲ 2 ವರ್ಷದೊಳಗೇ ಪತಿಯಿಂದ ಹಿಂಸೆಗೆ ಒಳಗಾಗುತ್ತಿರುವುದಾಗಿ ಹೇಳಿದ್ದಾರೆ.

ದೂರುಗಳ ಸಂಖ್ಯೆ ಹೆಚ್ಚಳ

ಈ ವರದಿಗೆ ಪುಷ್ಟಿ ನೀಡುವಂತೆ ರಾಜ್ಯ ಮಹಿಳಾ ಆಯೋಗಕ್ಕೆ ಸಲ್ಲಿಕೆಯಾದ ದೂರುಗಳು ಪೈಕಿಯೂ ಕೌಟುಂಬಿಕ ದೌರ್ಜನ್ಯದ ಆರೋಪಗಳೇ ಹೆಚ್ಚಿರುವುದು ಸ್ಪಷ್ಟವಾಗಿದೆ.

Advertisement

2020ರ ಮಾರ್ಚ್‌ನಿಂದ 22ರ ಏಪ್ರಿಲ್‌ವರೆಗೆ 1,107 ಕೌಟುಂಬಿಕ ದೌರ್ಜನ್ಯ ದೂರುಗಳು ಬಂದಿವೆ. ಈ ವರ್ಷದ ಏಪ್ರಿಲ್‌ವೊಂದರಲ್ಲೇ 35 ಮಂದಿ ಇಂಥ ದೂರುಗಳನ್ನು ನೀಡಿದ್ದಾರೆಂದು ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಪ್ರಮೀಳಾ ನಾಯ್ಡು ತಿಳಿಸಿದ್ದಾರೆ.

ಈ ಹಿಂದೆ, 2018ರಲ್ಲಿ ಆಗಿನ ಸರ್ಕಾರ ಮಹಿಳಾ ಮತ್ತು ಮಕ್ಕಳ ಸುರಕ್ಷತೆ ಸಂಬಂಧ ನೇಮಕ ಮಾಡಿದ್ದ ಕಾಂಗ್ರೆಸ್‌ ನಾಯಕ ವಿ.ಎಸ್‌.ಉಗ್ರಪ್ಪ ನೇತೃತ್ವದ ಸಮಿತಿಯು, 6 ಸಾವಿರ ಪುಟಗಳ ವರದಿ ಸಲ್ಲಿಸಿತ್ತು. ಮಹಿಳಾ ದೌರ್ಜನ್ಯ ತಡೆಗೆ ತುರ್ತಾಗಿ ರಾಷ್ಟ್ರೀಯ ನೀತಿ ರೂಪಿಸುವಂತೆ ಶಿಫಾರಸು ಮಾಡಿತ್ತು. ಈಗ ಹೊರಬಿದ್ದಿರುವ ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆ ಕುರಿತು ಪ್ರತಿಕ್ರಿಯಿಸಿರುವ ಉಗ್ರಪ್ಪ ಅವರು, “ತ್ವರಿತಗತಿ ತೀರ್ಪು, ಸರ್ಕಾರಗಳು, ಸಂಘ- ಸಂಸ್ಥೆಗಳು, ಮಠಾಧೀಶರು, ವಿಚಾರವಂತರಿಂದ ಜನಜಾಗೃತಿಯಂಥ ಕ್ರಮ ಕೈಗೊಂಡರಷ್ಟೇ ಇಂಥ ಸಮಸ್ಯೆಗಳಿಗೆ ಪರಿಹಾರ ಸಾಧ್ಯ’ ಎಂದಿದ್ದಾರೆ.

ಇದನ್ನೂ ಓದಿ:ಪಿಎಸ್‌ಐ ನೇಮಕ ಪ್ರಕರಣ: ಸ್ಟ್ರಾಂಗ್‌ರೂಮ್‌ ಉಸ್ತುವಾರಿಯಲ್ಲೇ ಅಕ್ರಮ

ರಕ್ತಸಂಬಂಧದ ವಿವಾಹ: ರಾಜ್ಯಕ್ಕೆ 2ನೇ ಸ್ಥಾನ

ಭಾರತ ದಲ್ಲಿ ಶೇ.11ರಷ್ಟು ಮಂದಿ ರಕ್ತಸಂಬಂಧಿಗಳನ್ನೇ ವಿವಾಹವಾಗುತ್ತಿದ್ದಾರೆ ಎಂದು ಸಮೀಕ್ಷಾ ವರದಿ ಹೇಳಿದೆ. ಈ ವಿಚಾರದಲ್ಲಿ ಕರ್ನಾಟಕವು ದೇಶದಲ್ಲೇ 2ನೇ ಸ್ಥಾನದಲ್ಲಿದೆ. ಇಲ್ಲಿ ಶೇ.27ರಷ್ಟು ಮಂದಿ ತೀರಾ ಹತ್ತಿರದ ಸಂಬಂಧಿಕರನ್ನೇ ಮದುವೆಯಾಗಿದ್ದಾರೆ. ಈ ಪಟ್ಟಿಯಲ್ಲಿ ಮೊದಲ ಸ್ಥಾನವನ್ನು ತಮಿಳುನಾಡು (ಶೇ.28) ಪಡೆದಿದೆ.

ಮದ್ಯದಾಸರು ಹಳಿಗಳಲ್ಲೇ ಹೆಚ್ಚು ಮದ್ಯಪಾನ ಮಾಡುವುದರಲ್ಲಿ (15 ವರ್ಷ ಮೇಲ್ಪಟ್ಟವರು) ನಗರ ಪ್ರದೇಶಗಳ ಬದಲಿಗೆ ಹಳ್ಳಿಗರೇ ಮುಂದು ಎಂದಿದೆ ಈ ಸಮೀಕ್ಷೆ. ರಾಜ್ಯದಲ್ಲಿ ಸರಾಸರಿ ಶೇ.16.6ರಷ್ಟು ಮಂದಿ ಮದ್ಯದಾಸರಾಗಿದ್ದಾರೆ. ನಗರಪ್ರದೇಶಗಳ ಶೇ.15.4ರಷ್ಟು ಪುರುಷರು ಮದ್ಯಪಾನ ಮಾಡುವವರಾಗಿದ್ದರೆ, ಮಹಿಳೆಯರ ಪ್ರಮಾಣ ಶೇ.0.9 ಆಗಿದೆ. ಆದರೆ, ಗ್ರಾಮೀಣ ಪ್ರದೇಶಗಳಲ್ಲಿ ಶೇ.17.4ರಷ್ಟು ಪುರುಷರು, ಶೇ.1ರಷ್ಟು ಮಹಿಳೆಯರು ಮದ್ಯದಾಸರು ಎಂಬ ವಿಚಾರ ಬೆಳಕಿಗೆ ಬಂದಿದೆ.

ಇಂದಿನ ಜೀವನ ಶೈಲಿ, ವೃತ್ತಿ ಒತ್ತಡದಿಂದಾಗಿ ಸಣ್ಣಪುಟ್ಟ ಮನಸ್ತಾಪಗಳೇ ದೊಡ್ಡದಾಗಿ ಪತಿ-ಪತ್ನಿ ನಡುವೆ ಬಿರುಕು ಮೂಡಿಸುತ್ತಿವೆ. ಅಹಂ ಬಿಟ್ಟು ಪರಸ್ಪರ ಕುಳಿತು ಮಾತುಕತೆ ನಡೆಸಿ ಕೌಟುಂಬಿಕ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬೇಕು. ಪ್ರಮೀಳಾ ನಾಯ್ಡು, ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ

-ಹಲೀಮತ್ಸಅದಿಯಾ

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next